ಶುಕ್ರವಾರ, ನವೆಂಬರ್ 15, 2019
26 °C

ಗ್ಲುಟೆನ್‌ ಅಲರ್ಜಿಗೆ ಕಪ್ಪು ಅಕ್ಕಿ ಬಳಸುವುದು ಸೂಕ್ತ

Published:
Updated:
Prajavani

ಆರೋಗ್ಯದ ವಿಷಯ ಬಂದಾಗ ಔಷಧಿಗಳ ಮೊರೆ ಹೋಗುವುದು ಹಾಗೂ ವಿವಿಧ ಬಗೆಯ ತರಕಾರಿ, ಹಣ್ಣುಗಳನ್ನು ಸೇವಿಸುವುದು ಸಹಜ. 

ಆದರೆ, ದಿನನಿತ್ಯ ಸೇವಿಸುವ ಆಹಾರದ ವಿಷಯಕ್ಕೆ ಬಂದರೆ, ಹಲವರು ಆರೋಗ್ಯಕ್ಕೆ ಇದು ಸೂಕ್ತವೇ ಎಂದು ಆಲೋಚನೆ ಕೂಡ ಮಾಡದೆ ಪಾಲಿಶ್‌ ಮಾಡಿದ ಅಕ್ಕಿಯನ್ನೇ ಆಯ್ಕೆ ಮಾಡುತ್ತಾರೆ. ಕಪ್ಪು ಅಕ್ಕಿ ಎಂದರೆ ಮೂಗು ಮುರಿಯುವವರೇ ಹೆಚ್ಚು, ಆದರೆ ಅದರಲ್ಲಿರುವ ಪೌಷ್ಟಿಕಾಂಶದ ಕುರಿತು ಯಾರಿಗೂ ಸರಿಯಾದ ಮಾಹಿತಿ ಇಲ್ಲ, ಮಾಹಿತಿ ಇದ್ದರೂ ಕೆಲವರು ಬಣ್ಣದ ಕಾರಣದಿಂದ ಅದನ್ನು ಸೇವಿಸಲು ಹಿಂದೇಟು ಹಾಕುತ್ತಾರೆ. 

ಆರೋಗ್ಯಕರ ಆಹಾರವಾಗಿ ಅನೇಕ ಪ್ರಯೋಜನಗಳನ್ನು ನೀಡುವ ಈ ಕಪ್ಪುಅಕ್ಕಿ ಸೂಪರ್‌ ಫುಡ್‌ ಎಂದು ಸಾಬೀತಾಗಿದೆ. ಈ ಅಕ್ಕಿಯು ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿದೆ. ಹಿಂದೆ ಚೀನಾದಲ್ಲಿ ಅಲ್ಲಿಯ ದೊರೆಗಳು ಮಾತ್ರ ಈ ಆಹಾರವನ್ನು ಸೇವಿಸುತ್ತಿದ್ದರು. ಈ ಆಹಾರದಲ್ಲಿ ಹೆಚ್ಚು ಪೋಷಕಾಂಶವಿರುವ ಕಾರಣ ಚಕ್ರವರ್ತಿಗಳು ಮಾತ್ರ ಸೇವಿಸಬೇಕು, ಸಾಮಾನ್ಯ ಜನರು ಸೇವಿಸಬಾರದು ಎಂದು ನಿರ್ಬಂಧ ವಿಧಿಸಲಾಗಿತ್ತು. ಅಂತಹ ಗುಣಮಟ್ಟವನ್ನು ಈ ಕಪ್ಪು ಅಕ್ಕಿ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಈ ಅಕ್ಕಿಯೇ ಹೆಚ್ಚು ಜನಪ್ರಿಯವಾಗುತ್ತಿದೆ.

ಪ್ರಯೋಜನಗಳು

ಕಪ್ಪು ಅಕ್ಕಿಯಲ್ಲಿನ ಗಾಢವಾದ ಕಪ್ಪು ಹಾಗೂ ನೇರಳೆ ಬಣ್ಣವು ರೋಗ ನಿರೋಧಕ ಅಂಶದ ಪ್ರತೀಕ. ಕಪ್ಪು ಅಕ್ಕಿಯಲ್ಲಿ ಆಂಥೋಸಯಾನಿನ್ ಎಂಬ ನಿರೋಧಕ ಅಂಶವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಕ್ವಿನ್‌ವಾ, ಕಂದು ಅಕ್ಕಿ, ಕೆಂಪು ಅಕ್ಕಿ ಮತ್ತು ಇತರ ಧಾನ್ಯಗಳಿಗಿಂತ ಹೆಚ್ಚು ಉಪಯುಕ್ತ. 

ಮಧುಮೇಹಿಗಳಿಗೆ ಸೂಕ್ತ

ಬಿಳಿ ಅಕ್ಕಿಯಲ್ಲಿ ಸರಾಸರಿ ಗ್ಲೈಸೆಮಿಕ್ ಸೂಚ್ಯಂಕ (ಜಿಐ) 89ರಷ್ಟು ಜಿಐ ಇದ್ದರೆ, ಕಪ್ಪು ಅಕ್ಕಿ ಕೇವಲ 42.3 ಜಿಐ ಹೊಂದಿರುತ್ತದೆ. ಕಡಿಮೆ ಜಿಐ ಹೊಂದಿರುವ ಕಾರಣ ಇದು ಮಧುಮೇಹಿಗಳಿಗೆ ಸೂಕ್ತವೆಂದು ಪರಿಗಣಿಸಲಾಗಿದೆ. ಇದಲ್ಲದೆ, ಕಪ್ಪುಅಕ್ಕಿಯಲ್ಲಿರುವ ಪೋಷಕಾಂಶಗಳು ರಕ್ತಪ್ರವಾಹದಲ್ಲಿನ ಸಕ್ಕರೆಯನ್ನು ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಇದು ಮಧುಮೇಹ ನಿರ್ವಹಣೆಗೆ ಸೂಕ್ತವಾಗಿದೆ ಎಂಬುದು ತಜ್ಞರ ಅಭಿಪ್ರಾಯ.

ಕಪ್ಪು ಅಕ್ಕಿ ದೇಹವನ್ನು ವಿಷ ಮುಕ್ತವಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್‌ ಹಾಗೂ ರೋಗ ನಿರೋಧಕ ಅಂಶವು ಟ್ರೈಗ್ಲಿಸರೈಡ್ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಪಿತ್ತಜನಕಾಂಗದ ಕಾಯಿಲೆಯ ಅಪಾಯವನ್ನು ಶಮನಗೊಳಿಸುತ್ತದೆ. ಇದರಲ್ಲಿ ನಾರಿನ ಅಂಶವಿರುವ ಕಾರಣ ಕರುಳಿನ ಚಲನೆಗೆ ನಿಯಮಿತವಾಗಿ ಸಹಕರಿಸುವುದರ ಜತೆಗೆ ಕರುಳನ್ನು ಸ್ವಚ್ಛವಾಗಿರುವಂತೆ ಮಾಡುತ್ತದೆ.

ನಾರಿನಾಂಶ ಹೆಚ್ಚು 

ಕಪ್ಪು ಅಕ್ಕಿಯು ಹೆಚ್ಚು ನಾರಿನಾಂಶ ಹೊಂದಿದೆ. ಅರ್ಧ ಕಪ್‌ ಅಕ್ಕಿಯಲ್ಲಿ 160ರಷ್ಟು ಕ್ಯಾಲೊರಿ ಹಾಗೂ 1.5 ಗ್ರಾಂ ಕೊಬ್ಬಿನಾಂಶವಿರುತ್ತದೆ. ಹೀಗಾಗಿ ಈ ಅಕ್ಕಿಯನ್ನು ಸೂಪರ್‌ ಫುಡ್‌ ಪಟ್ಟಿಗೆ ಸೇರಿಸಲಾಗಿದೆ. ಇದು ನಾರಿನ ಅಂಶವನ್ನು ಹೆಚ್ಚಾಗಿ ಹೊಂದಿರುವುದರಿಂದ ಆರೋಗ್ಯಕ್ಕೆ ಸೂಕ್ತ ಕೂಡ.

ಉರಿಯೂತಕ್ಕೆ  ಚಿಕಿತ್ಸೆ 

ಕಪ್ಪು ಅಕ್ಕಿಯಲ್ಲಿರುವ ಅನೇಕ ಚಿಕಿತ್ಸಕ ಅಂಶವು ಕಾಯಿಲೆಗಳಿಗೆ ಪರಿಹಾರ ನೀಡುವ ಸೂಕ್ತ ಔಷಧಿಯಾಗಿದೆ. ಉರಿಯೂತಕ್ಕೆ ದೀರ್ಘಕಾಲದ ಚಿಕಿತ್ಸೆ ನೀಡುವ ಮೂಲಕ ಅದನ್ನು ತಡೆಗಟ್ಟುತ್ತದೆ. ಜೊತೆಗೆ ದೇಹದಲ್ಲಿರುವ ಹಾನಿಕಾರಕ ಅಂಶಗಳನ್ನು ಶುದ್ಧೀಕರಿಸಲು ಸಹಕಾರಿ ಕೂಡ.

ಇದನ್ನೂ ಓದಿ: ಸಮತೋಲಿತ ಆಹಾರವೇ ಆರೋಗ್ಯದ ಗುಟ್ಟು

ನೈಸರ್ಗಿಕವಾದದ್ದು

ಕಪ್ಪುಅಕ್ಕಿಯು ನೈಸರ್ಗಿಕವಾದದ್ದು ಹಾಗಾಗಿ ಇದು ಗ್ಲುಟೆನ್ ಅಂಶ ಹೊಂದಿರುವುದಿಲ್ಲ. ನಾವು ದಿನನಿತ್ಯ ಬಳಸುವ ಅಕ್ಕಿಯಿಂದ ಮಾಡಿದ ಅನ್ನವನ್ನು ಎಂಟು ಗಂಟೆಗಳ ಕಾಲ ಹಾಳಾಗದಂತೆ ಕಾಪಾಡಿಕೊಳ್ಳುವುದು ಕಷ್ಟ. ಆದರೆ ಕಪ್ಪು ಅಕ್ಕಿಯ ಅನ್ನ ಸಾಮಾನ್ಯವಾಗಿ 24 ರಿಂದ 36 ಗಂಟೆಗಳ ಕಾಲ ಕೆಡದಂತೆ ಇರುತ್ತದೆ. 

ಗ್ಲುಟೆನ್ ಅಲರ್ಜಿ ಮತ್ತು ಸೆಲಿಯಾಕ್‌ನಂತಹ ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಇದು ವರದಾನವಾಗಿದೆ. ಗ್ಲುಟೆನ್ ಅಲರ್ಜಿ ಮತ್ತು ಉದರದ ಕಾಯಿಲೆಗಳ ಸಾಮಾನ್ಯ ಲಕ್ಷಣಗಳೆಂದರೆ ಹೊಟ್ಟೆಯುಬ್ಬರ, ಮಲಬದ್ಧತೆ, ಅತಿಸಾರ ಮತ್ತು ಪೌಷ್ಟಿಕಾಂಶದ ಕೊರತೆ. ಇಂತಹ ಕಾಯಿಲೆಗಳಿಗೆ ಕಪ್ಪು ಅಕ್ಕಿಯೇ ಮದ್ದು. 

ಎರಡು– ಮೂರು ಬಾರಿ ಪಾಲಿಶ್‌ ಮಾಡಲಾದ ಧಾನ್ಯ ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತದೆ. ಅಂತಹ ಆಹಾರ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆ ಕೂಡ ಶಕ್ತಿಹೀನವಾಗಲು ಕಾರಣ. ಹೀಗಾಗಿ ಈ ಸಮಸ್ಯೆಯನ್ನು ಕಪ್ಪುಅಕ್ಕಿ ಸೇವನೆಯಿಂದ ಸುಧಾರಿಸಬಹುದು ಎಂಬುದು ಕೂಡ ಸಾಬೀತಾಗಿದೆ.  

ಈ ಅಕ್ಕಿಯಿಂದ ಗಂಜಿ, ದೋಸೆಯಲ್ಲದೇ ಇತರ ಖಾದ್ಯಗಳನ್ನು ಕೂಡ ಮಾಡಬಹುದು. ನೀವು ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ಬಯಸಿದರೆ ಅಥವಾ ಗ್ಲುಟೆನ್ ಅಲರ್ಜಿ ಹೊಂದಿದ್ದರೆ, ಅವುಗಳಿಗೆ ಸೂಕ್ತ ಪರಿಹಾರ ಕಪ್ಪು ಅಕ್ಕಿ. 

(ಪೂರಕ ಮಾಹಿತಿ: ಡಾ. ಟಿ. ಎಸ್‌. ತೇಜಸ್‌)

ಪ್ರತಿಕ್ರಿಯಿಸಿ (+)