ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತನ ಕ್ಯಾನ್ಸರ್‌ ರೋಗಿಗಳಿಗೆ 'ಸ್ತನ ಪ್ರೋಸ್ಥೆಸಿಸ್‌ʼ ವರದಾನ!

Last Updated 19 ನವೆಂಬರ್ 2021, 9:39 IST
ಅಕ್ಷರ ಗಾತ್ರ

ವಿಶ್ವದಾದ್ಯಂತ ಅದೆಷ್ಟೋ ಮಹಿಳೆಯರು ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ. ಸದ್ಯ ಅತ್ಯಂತ ಪ್ರಚಲಿತದಲ್ಲಿರುವ ಕ್ಯಾನ್ಸರ್ ಇದಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯಂತೆ ಕಳೆದ 5 ವರ್ಷಗಳಲ್ಲಿ 7.8 ಮಿಲಿಯನ್‌ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇದರಿಂದ ಕೆಲವು ಬಾರಿ ಸ್ತನವನ್ನೇ ತೆಗೆಯುವ ಪರಿಸ್ಥಿತಿ ಬರುತ್ತದೆ. ಆದರೆ, ಹೆಣ್ತನದೊಂದಿಗೆ ಸಮೀಕರಿಸಲ್ಪಟ್ಟಿರುವ ಸ್ತನ ಇಲ್ಲ ಎಂದಾಗ ಮಹಿಳೆಯರು ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಅಧಿಕ. ಇದಕ್ಕೆ ಪರಿಹಾರ ಎಂಬಂತೆ ‘ಸ್ತನ ಪ್ರೋಸ್ಥೆಸಿಸ್ʼ ಬಂದಿದೆ.

‘ಸ್ತನ ಪ್ರೋಸ್ಥೆಸಿಸ್ʼ ಎನ್ನುವುದು ಕೃತಕ ಸ್ತನ ರೂಪ. ಅದು ಸ್ತನ ಛೇದನದ ಭಾಗದ ಆಕಾರವನ್ನು ಬದಲಿಸುತ್ತದೆ. ಇದು ಬ್ರಾ ಕಪ್‌ ಜೊತೆಗೆ ಅಥವಾ ಬ್ರಾ ಪಾಕೆಟ್ ಇಲ್ಲದೆಯೂ ಧರಿಸಬಹುದಾಗಿದೆ. ಮಾರುಕಟ್ಟೆಯಲ್ಲಿ ಅನೇಕ ವಿಧದ ‘ಸ್ತನ ಪ್ರೋಸ್ಥೆಸಿಸ್ʼ ಲಭ್ಯವಿದೆ. ಸಾಮಾನ್ಯವಾಗಿ ಸಿಲಿಕೋನ್ ಪ್ರೊಸ್ಥೆಸಿಸ್ ಅನ್ನು ಬಳಸಲಾಗುತ್ತದೆ. ಮಹಿಳೆಯ ಸ್ತನದ ನೈಸರ್ಗಿಕ ಆಕಾರ ಅಥವಾ ಎದೆಯ ಭಾಗ ಹೋಲುವಂತೆ ತೆಳುವಾದ ಫಿಲ್ಮ್‌ನಲ್ಲಿ ಸುತ್ತುವರಿದ ಮೃದುವಾದ ಸಿಲಿಕೋನ್ ಜೆಲ್‌ನಿಂದ ಇದನ್ನು ತಯಾರಿಸಲಾಗುತ್ತದೆ.

ಸ್ತನ ಛೇದನಕ್ಕೆ (ಸ್ತನ ತೆಗೆಯುವ ಶಸ್ತ್ರಚಿಕಿತ್ಸೆ) ಒಳಗಾಗುವ ರೋಗಿಗಳಿಗೆ ಅಸ್ವಸ್ಥತೆಯ ಭಾವನೆ ಕಾಡುತ್ತದೆ. ಅದಲ್ಲದೇ ಸ್ತನದ ಅನುಪಸ್ಥಿತಿಯಿಂದ ದೈಹಿಕ ಅಸಮತೋಲನವನ್ನು ಕೂಡ ರೋಗಿ ಅನುಭವಿಸುವ ಸಾಧ್ಯತೆ ಇರುತ್ತದೆ. ಇದು ಅವರ ಜೀವನದ ಗುಣಮಟ್ಟ ಮತ್ತು ಭಾವನಾತ್ಮಕ ಕುಸಿತಕ್ಕೂ ಕಾರಣವಾಗವಹುದು.

ಅನೇಕ ಸಂಸ್ಕೃತಿಗಳಲ್ಲಿ ಸ್ತನವು ಹೆಣ್ತನದೊಂದಿಗೆ ಸಂಬಂಧ ಹೊಂದಿದೆ. ಆದ್ದರಿಂದ ಸ್ತನದ ನಷ್ಟ ಮಾನಸಿಕ ಹಾಗೂ ಭಾವನಾತ್ಮಕವಾಗಿ ಪರಿಣಾಮ ಬೀರಬಹುದು. ಈ ಹಿನ್ನೆಲೆಯಲ್ಲಿ ಸ್ತನ ಕ್ಯಾನ್ಸರ್‌ ರೋಗಿಗಳು ತಮ್ಮ ದೇಹದ ಸೌಂದರ್ಯ, ಮಾನಸಿಕ ಯೋಗ-ಕ್ಷೇಮ ಮತ್ತು ಹೆಣ್ತನವನ್ನು ಮರಳಿ ಪಡೆಯಲು ʼಸ್ತನ ಪ್ರೋಸ್ಥೆಸಿಸ್ʼ ಸಹಾಯ ಮಾಡುತ್ತದೆ. ‘ಸ್ತನ ಪ್ರೋಸ್ಥೆಸಿಸ್ʼನಿಂದ ರೋಗಿಯ ಬಾಹ್ಯ ಸೌಂದರ್ಯ ಸುಧಾರಿಸುವುದರ ಜೊತೆಗೆ ಆತ್ಮ ವಿಶ್ವಾಸವನ್ನು ಕೂಡ ಹೆಚ್ಚಿಸುತ್ತದೆ.

ಸ್ತನ ಪ್ರೋಸ್ಥೆಸಿಸ್
ಸ್ತನ ಪ್ರೋಸ್ಥೆಸಿಸ್

ಇನ್ನು ವಯಸ್ಸು, ಸಾಕ್ಷರತೆಯ ಮಟ್ಟ, ಆರ್ಥಿಕ ಸ್ಥಿತಿ ಮತ್ತು ಇನ್ನೂ ಅನೇಕ ಅಂಶಗಳ ಕಾರಣದಿಂದ ಸ್ತನ ಕ್ಯಾನ್ಸರ್‌ ರೋಗಿಯ ಮಾನಸಿಕ ಸ್ಥಿತಿ ಬದಲಾಗಬಹುದು. ಸ್ತನ ಛೇದನಕ್ಕೆ ಒಳಗಾಗುವ ರೋಗಿಗಳು ತಮ್ಮ ಪುನಶ್ಚೈತನ್ಯ ಸಮಯದಲ್ಲಿ ದೈಹಿಕ ಅಂಗವೈಕಲ್ಯ, ಅನಾರೋಗ್ಯ, ಕೌಟುಂಬಿಕ ಜೀವನ ಹಾಗೂ ಸಾಮಾಜಿಕವಾಗಿ ಅನೇಕ ಬದಲಾವಣೆಗಳನ್ನು ಅನುಭವಿಸುವ ಸಾಧ್ಯತೆ ಇದೆ.

ʼಸ್ತನ ಪ್ರೋಸ್ಥೆಸಿಸ್ʼ ರೋಗಿಯ ಮಾನಸಿಕ ಯೋಗ-ಕ್ಷೇಮಕ್ಕೆ ಕಾರಣವಾಗುವುದಲ್ಲದೇ, ದೇಹದ ದೀರ್ಘಕಾಲದ ಅಸಮತೋಲನದಿಂದ ಉಂಟಾಗುವ ಬೆನ್ನುಮೂಳೆಯ ವಕ್ರತೆಯನ್ನು (ಸ್ಕೋಲಿಯೋಸಿಸ್) ಕೂಡ ತಡೆಯುತ್ತದೆ.

ಸ್ತನ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆ ಮಾಡಿಸಲು ಸಾಧ್ಯವಾಗದ ಅಥವಾ ಈ ಶಸ್ತ್ರಚಿಕಿತ್ಸೆ ಇಷ್ಟವಿಲ್ಲದ ಸ್ತನ ಕ್ಯಾನ್ಸರ್‌ ರೋಗಿಗಳಿಗೆ ಸ್ತನ ಪ್ರೋಸ್ಥೆಸಿಸ್‌ ಉತ್ತಮ ಆಯ್ಕೆಯಾಗಿದೆ. ಸ್ತನ ಪ್ರೋಸ್ಥೆಸಸ್‌ನಿಂದ ಕೇವಲ ದೈಹಿಕ ಅಂಗವೈಕಲ್ಯ ಸರಿಯಾಗುವುದಿಲ್ಲ. ಬದಲಾಗಿ ಗಾಯದ ಸ್ಥಳಕ್ಕೆ ರಕ್ಷಣೆ ನೀಡುವುದರ ಜೊತೆಗೆ ಮತ್ತು ಎದೆ ನೋವಿನಿಂದಲೂ ರಕ್ಷಣೆ ಒದಗಿಸುತ್ತದೆ.

(ಲೇಖಕಿ: ವೈದ್ಯೆ, ಶ್ರೀ ಶಂಕರ ಕ್ಯಾನ್ಸರ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT