ಶನಿವಾರ, ಡಿಸೆಂಬರ್ 7, 2019
22 °C
ಕಾಳಜಿ

ಮಕ್ಕಳಲ್ಲಿ ಕ್ಯಾನ್ಸರ್‌ಆರಂಭಿಕ ಪತ್ತೆಯೇ ಮುಖ್ಯ

Published:
Updated:

ಮಕ್ಕಳಲ್ಲಿ ಕಂಡುಬರುವ ಎಲ್ಲ ಕಾಯಿಲೆಗಳಿಗಿಂತ, ಸೋಂಕು ಹೆಚ್ಚು ಸಾಮಾನ್ಯ ಮತ್ತು ಇದು ಭಾರತದಲ್ಲಿ ಮಕ್ಕಳ ಸಾವಿಗೆ ಪ್ರಮುಖ ಕಾರಣವಾಗಿದೆ. ಅದೃಷ್ಟವಶಾತ್ ಮಕ್ಕಳಲ್ಲಿ ಕ್ಯಾನ್ಸರ್ ರೋಗವು ವಿರಳ ಎನ್ನಬಹುದು. ಪ್ರಪಂಚದಾದ್ಯಂತ ಪ್ರತಿ ವರ್ಷ ಸುಮಾರು ಮೂರು ಲಕ್ಷ ಮಕ್ಕಳು ಹಾಗೂ ಹದಿಹರೆಯದವರಲ್ಲಿ ಕ್ಯಾನ್ಸರ್ ಕಾಯಿಲೆ ಪತ್ತೆಯಾಗುತ್ತಿದೆ.

ಇವುಗಳಲ್ಲಿ ಮುಕ್ಕಾಲುಪಾಲು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಎಂಬುದು ಗಮನಾರ್ಹ. ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ರೋಗದ ಪ್ರಕರಣಗಳನ್ನು ತೆಗೆದುಕೊಂಡರೆ ಶೇ 20ಕ್ಕೂ ಹೆಚ್ಚು ಪ್ರಕರಣಗಳು ಭಾರತದಲ್ಲೇ ವರದಿಯಾಗುವುದರಿಂದ ಭಾರತವನ್ನು ಮಕ್ಕಳ ಕ್ಯಾನ್ಸರ್ ರಾಜಧಾನಿ ಎಂದೇ ಪರಿಗಣಿಸಲಾಗುತ್ತದೆ. ರಕ್ತದ ಕ್ಯಾನ್ಸರ್ ಹಾಗೂ ಮೆದುಳಿನ ಕ್ಯಾನ್ಸರ್ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ಕಾಯಿಲೆಯಾಗಿದೆ. ಇತರ ಕ್ಯಾನ್ಸರ್ ಪ್ರಕಾರಗಳಾದ ವಿಮ್ಸ್‌ ಟ್ಯೂಮರ್, ನ್ಯೂರೊಬ್ಲಾಸ್ಟೊಮಾ, ಸಾರ್ಕೋಮಾ ಮತ್ತು ಲಿಂಫೋಮಾಗಳು ಮಕ್ಕಳಲ್ಲಿ ಕಂಡು ಬರುವುದು ಅಪರೂಪ. ಮಕ್ಕಳಲ್ಲಿ ಕಂಡು ಬರುವ ಕ್ಯಾನ್ಸರ್‌ಗಳಿಗೆ ಕಿಮೋಥೆರಪಿ, ಶಸ್ತ್ರಚಿಕಿತ್ಸೆ ಮತ್ತು ರೇಡಿಯೋಥೆರಪಿ ಮುಖಾಂತರ ಚಿಕಿತ್ಸೆ ನೀಡಲಾಗುತ್ತದೆ.

ಸ್ಪಷ್ಟ ಲಕ್ಷಣಗಳ ಕೊರತೆ
ಮಕ್ಕಳಲ್ಲಿ ಕಂಡುಬರುವ ಹೆಚ್ಚಿನ ಕ್ಯಾನ್ಸರ್ ಪ್ರಕರಣಗಳಲ್ಲಿ ಯಾವುದೇ ರೀತಿಯ ಸ್ಪಷ್ಟವಾಗಿ ಗುರುತಿಸಬಹುದಾದಂತಹ ಅಪಾಯಕಾರಿ ಲಕ್ಷಣಗಳಿರುವುದಿಲ್ಲ. ಹೀಗಾಗಿ ಈ ಕ್ಯಾನ್ಸರ್‌ ಅನ್ನು ತಡೆಗಟ್ಟುವುದು ಅಸಾಧ್ಯ ಹಾಗೂ ವಯಸ್ಕರಲ್ಲಿ ಸಾಧ್ಯವಾಗಬಹುದಾದಂತಹ ಆರಂಭಿಕ ರೋಗ ಪತ್ತೆಹಚ್ಚುವಿಕೆ ಇಲ್ಲಿ ಅಸಾಧ್ಯ ಎನ್ನಬಹುದು. ಮಕ್ಕಳಲ್ಲಿ ಕಂಡುಬರುವ ಹಲವು ರೀತಿಯ ಕ್ಯಾನ್ಸರ್‌ಗಳು ಜ್ವರ ಹಾಗೂ ತೂಕ ಇಳಿಕೆಯಂತಹ ಸಾಮಾನ್ಯ ರೋಗ ಲಕ್ಷಣಗಳೊಂದಿಗೆ ಕಂಡುಬರುತ್ತವೆ. ಆದ್ದರಿಂದ ದೀರ್ಘಕಾಲದಿಂದ ಈ ರೋಗಲಕ್ಷಣಗಳನ್ನು ಹೊಂದಿರುವ ಯಾವುದೇ ಮಗುವಿನಲ್ಲಿ ಕ್ಯಾನ್ಸರ್ ರೋಗದ ಸಂಭವನೀಯತೆ ಬಗ್ಗೆ ಹೆಚ್ಚಿನ ಗಮನ ಕೊಡಬೇಕು.

ಪಾಶ್ಚಿಮಾತ್ಯ ದೇಶಗಳಲ್ಲಿ ಕ್ಯಾನ್ಸರ್‌ ಪತ್ತೆಯಾದ ಶೇ 80ಕ್ಕೂ ಹೆಚ್ಚು ಮಕ್ಕಳು ಆಧುನಿಕ ಚಿಕಿತ್ಸಾ ಪದ್ಧತಿಯಿಂದ ಗುಣಮುಖರಾಗಿದ್ದಾರೆ. ದುರದೃಷ್ಟವಶಾತ್ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪರಿಸ್ಥಿತಿಯು ಅಷ್ಟೊಂದು ಆಶಾದಾಯಕವಾಗಿಲ್ಲ.

ತಿಳಿವಳಿಕೆಯ ಕೊರತೆ
ನಮ್ಮ ದೇಶದಲ್ಲಿ ತಂದೆ– ತಾಯಿ ಹಾಗೂ ಅರೋಗ್ಯ ಕೇಂದ್ರಗಳಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಇರುವ ತಿಳಿವಳಿಕೆಯ ಕೊರತೆಯಿಂದಾಗಿ ರೋಗ ಪತ್ತೆ ಮಾಡುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ. ಮಕ್ಕಳ ಕ್ಯಾನ್ಸರ್ ತಜ್ಞರು, ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳು, ಕ್ಯಾನ್ಸರ್ ಶುಶ್ರೂಷಕರು, ರೇಡಿಯೊಥೆರಪಿ ಸೌಲಭ್ಯ, ಶಸ್ತ್ರಚಿಕಿತ್ಸಾ ತಜ್ಞರು ಹಾಗೂ ಇನ್ನಿತರ ಸೌಲಭ್ಯಗಳ ಕೊರತೆಯಿಂದಾಗಿ ಮಕ್ಕಳಿಗೆ ಸರಿಯಾದ ಚಿಕಿತ್ಸೆ ದೊರಕುತ್ತಿಲ್ಲ. ದೀರ್ಘಕಾಲದ ಚಿಕಿತ್ಸೆ ಹಾಗೂ ಹಣಕಾಸಿನ ಕೊರತೆಯಿಂದಾಗಿ ಅನೇಕ ಪೋಷಕರು ಮಕ್ಕಳ ಚಿಕಿತ್ಸೆಯನ್ನು ತಕ್ಷಣಕ್ಕೆ ಅರ್ಧಕ್ಕೆ ನಿಲ್ಲಿಸುತ್ತಾರೆ ಅಥವಾ ಪೂರ್ತಿಯಾಗಿ ಕೈಬಿಡುತ್ತಾರೆ (ಚಿಕಿತ್ಸೆ ನಿರಾಕರಣೆ ಹಾಗೂ ತ್ಯಜಿಸುವುದು). ಈ ರೀತಿಯ ಸವಾಲಿನ ಪರಿಸ್ಥಿತಿಗಳಲ್ಲಿ ಬಹುತೇಕ ಮಕ್ಕಳಿಗೆ ಸೂಕ್ತವಾದ ಚಿಕಿತ್ಸೆ ದೊರಕುವುದಿಲ್ಲ. ದುರದೃಷ್ಟವಶಾತ್ ಭಾರತದಲ್ಲಿ ಶೇ 50ಕ್ಕಿಂತಲೂ ಕಡಿಮೆ ಕ್ಯಾನ್ಸರ್ ರೋಗ ಪೀಡಿತ ಮಕ್ಕಳು ಮಾತ್ರವೇ ಗುಣಮುಖರಾಗುತ್ತಿದ್ದಾರೆ.

(ಲೇಖಕರು ಮಕ್ಕಳ ಕ್ಯಾನ್ಸರ್ ರೋಗ ತಜ್ಞರು, ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು)

**

ಮಕ್ಕಳ ತಜ್ಞರು ಮಕ್ಕಳಿಗೆ ಚಿಕಿತ್ಸೆ ನೀಡುವಾಗ ಈ ರೋಗ ಲಕ್ಷಣಗಳು ಕಂಡು ಬಂದರೆ ಕ್ಯಾನ್ಸರ್‌ ಸಾಧ್ಯತೆ ಬಗ್ಗೆ ಕಾಳಜಿ ವಹಿಸಬೇಕು.
* ಒಂದು ವಾರಕ್ಕೂ ಹೆಚ್ಚು ಕಾಲ ಜ್ವರ ಬಂದರೆ.
* ಎರಡು ವಾರಕ್ಕೂ ಹೆಚ್ಚು ಕಾಲ ಕುತ್ತಿಗೆ ಭಾಗದಲ್ಲಿ ಊತ ಕಂಡುಬಂದರೆ.
* ದೇಹದ ಯಾವುದೇ ಭಾಗದಲ್ಲಿ ಅನಿಯಂತ್ರಿತ ರಕ್ತಸ್ರಾವ ಅಥವಾ ದೇಹದಲ್ಲಿ ರಕ್ತಸ್ರಾವದ ಗುರುತುಗಳಿದ್ದರೆ.
* ಹೊಟ್ಟೆ ಅಥವಾ ದೇಹದ ಯಾವುದೇ ಭಾಗದಲ್ಲಿ ಗಡ್ಡೆ ಅಥವಾ ಊತವಿದ್ದರೆ.
* ಪದೇ ಪದೇ ವಾಂತಿ ಮತ್ತು ತಲೆನೋವು ಇದ್ದರೆ.
* ಬಿಳಿ ಮಚ್ಚೆಯ ಪ್ರತಿಫಲನ. ಮಗುವಿನ ಫೋಟೊ ತೆಗೆದಾಗ ಕಣ್ಣಿನ ಪಾಪೆಯಲ್ಲಿ ಪ್ರತಿಫಲಿತವಾಗುವ ಬಿಳಿ ಮಚ್ಚೆ.

ಪ್ರತಿಕ್ರಿಯಿಸಿ (+)