ಶುಕ್ರವಾರ, ಜೂನ್ 25, 2021
21 °C

ಚಾಕೊಲೇಟ್‌ ಎಂದರೆ ಬರಿ ಸಿಹಿಯಲ್ಲ..

ಸುಧಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಚಾಕೊಲೇಟ್‌ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ! ರುಚಿ ಮಾತ್ರವಲ್ಲ, ಸಿಹಿ ಕಡಿಮೆ ಇರುವ ಡಾರ್ಕ್‌ ಚಾಕೊಲೇಟ್‌ ಆರೋಗ್ಯಕ್ಕೂ ಉತ್ತಮ, ಆದರೆ ತಿನ್ನುವ ಪ್ರಮಾಣ ಮಿತಿಯಲ್ಲಿದ್ದರೆ ಮಾತ್ರ.

ಹದವಾಗಿ ಸಕ್ಕರೆ ಬೆರೆಸಿದ್ದಾದರೂ ತಿನ್ನಿ, ಸಿಹಿ– ಕಹಿ ಮಿಶ್ರಣವನ್ನಾದರೂ ಸವಿಯಿರಿ, ಬಿಳಿ– ಕಪ್ಪು ರಂಗಿನ ಸುಂದರಿಯನ್ನಾದರೂ ಇಷ್ಟಪಡಿ, ಘನರೂಪದ್ದನ್ನು ದವಡೆಗೆ ಒತ್ತರಿಸಿಕೊಂಡು ಚೂರು ಚೂರೇ ರಸವನ್ನು ಗಂಟಲಿಗಿಳಿಸಿ ಅಥವಾ ದ್ರವ ರೂಪದಲ್ಲಿರುವ ಬಿಸಿ ಪಾನೀಯವನ್ನು ಗುಟುಕು ಗುಟುಕಾಗಿ ಸೇವಿಸಿ.. ನಿಮ್ಮನ್ನು ಇನ್ನಿಲ್ಲದಂತೆ ದಾಸನನ್ನಾಗಿ ಮಾಡಿಕೊಳ್ಳುವ ಚಾಕೊಲೇಟ್‌ ಗುಣ ಒಂಚೂರೂ ಬದಲಾಗದು.

ಜಗತ್ತಿನಾದ್ಯಂತ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇಷ್ಟಪಟ್ಟು ಸೇವಿಸುವ, ನೆನೆದೊಡೆ ನಾಲಿಗೆಯಲ್ಲಿ ನೀರೂರಿಸುವ ಈ ಸಿಹಿಯ ಮೂಲವನ್ನು ಉಚ್ಛರಿಸಲು ನಾಲಿಗೆ ಸುಲಭವಾಗಿ ಹೊರಳದು– ಅದು ಕೊಕೊವ ಗಿಡದಲ್ಲಿ ಬಿಡುವ ಥೀಯೊಬ್ರೊಮಾ ಕಾಕಾವ ಹಣ್ಣಿನಲ್ಲಿರುವ ಬೀಜಗಳ ಪುಡಿ. ಅಂದರೆ ಗ್ರೀಕ್‌ನಲ್ಲಿ ‘ಫುಡ್‌ ಆಫ್‌ ದಿ ಗಾಡ್‌’ ಎಂದು ಅರ್ಥವಂತೆ. ತಿಂದರೆ ಮನಸ್ಸಿಗೆ ‘ಫೀಲ್‌ ಗುಡ್‌’ ಅನುಭವ ನೀಡುವ, ಹೃದಯಕ್ಕೆ, ಮೆದುಳಿಗೆ ಆರೋಗ್ಯದ ಅನುಸಂಧಾನ ಒದಗಿಸುವ ಈ ಕೊಕೊವಾ ಬೀನ್ಸ್‌ ಎಂಬ ಅದ್ಭುತವನ್ನು ಪ್ರಪಂಚದ ‘ಹೋಮೊ ಸೇಫಿಯನ್ಸ್‌’ ಆದ ನಾವು ವಾರ್ಷಿಕವಾಗಿ ಕಬಳಿಸುವ ಪ್ರಮಾಣ ಎಷ್ಟು ಗೊತ್ತೇ? ಬರೋಬ್ಬರಿ 3 ದಶಲಕ್ಷ ಟನ್‌.

ಪಪ್ಪಾಯಿ ಗಾತ್ರದ ಈ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ದೇಶಗಳೆಂದರೆ ಪಶ್ಚಿಮ ಆಫ್ರಿಕಾದ ಘಾನಾ, ನೈಜೀರಿಯ, ದಕ್ಷಿಣ ಅಮೆರಿಕಾದ ಬ್ರೆಜಿಲ್‌, ದಕ್ಷಿಣ ಹಾಗೂ ಆಗ್ನೇಯ ಏಷ್ಯಾದ ರಾಷ್ಟ್ರಗಳು. ಬೀಜವನ್ನು ಸಂಸ್ಕರಿಸಿ ದೊರೆಯುವ ದಪ್ಪನೆಯ ಪೇಸ್ಟ್‌ ‘ಚಾಕೊಲೇಟ್‌ ಲಿಕರ್‌’ (ಆಲ್ಕೋಹಾಲ್‌ ಅಲ್ಲ) ಅನ್ನು ವಿವಿಧ ಬಗೆಯ ಚಾಕೊಲೇಟ್‌ ತಯಾರಿಕೆಗೆ ಬಳಸುತ್ತಾರೆ. ಇದೇ ರೀತಿ ಬೆಣ್ಣೆಯನ್ನೂ ಕೂಡ. ಕಪ್ಪು ಚಾಕೊಲೇಟ್‌ (ಡಾರ್ಕ್‌), ಮಿಲ್ಕ್‌ ಮತ್ತು ವೈಟ್‌ ಎಂಬ ಮೂರು ವಿಧಗಳು ವಿವಿಧ ಸಂಯೋಜನೆಯೊಂದಿಗೆ ಚಾಕೊಲೇಟ್‌ ಪ್ರಿಯರ ರುಚಿಮೊಗ್ಗುಗಳನ್ನು ತಣಿಸುತ್ತಿವೆ.

ಆರೋಗ್ಯಕ್ಕೆ..
ಈ ರುಚಿಕರ ಚಾಕೊಲೇಟ್‌ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಬಹುತೇಕ ಅಧ್ಯಯನಗಳಿಂದ ದೃಢಪಟ್ಟಿದೆ. ಇದರಲ್ಲಿರುವ ಫೈಟೊನ್ಯೂಟ್ರಿಯೆಂಟ್ಸ್‌, ಕಬ್ಬಿಣ, ತಾಮ್ರ, ಮ್ಯಾಗ್ನೀಶಿಯಂ, ಸತು ಆರೋಗ್ಯ ಕಾಯ್ದುಕೊಳ್ಳಲು ನೆರವು ನೀಡುವ ಅಂಶಗಳು. ಆದರೆ ಒಂದು ಅಂಶ ನೆನಪಿಡಿ: ಸಕ್ಕರೆಯನ್ನು ತೀರಾ ಕಡಿಮೆ ಪ್ರಮಾಣದಲ್ಲಿ ಅಂದರೆ ಶೇ 1ಕ್ಕಿಂತ ಕಡಿಮೆ ಬೆರೆಸಿದ ಡಾರ್ಕ್‌ ಚಾಕೊಲೇಟ್‌ ತಿಂದರೆ ಮಾತ್ರ ಈ ಲಾಭಗಳು ನಿಮಗೆ ಲಭ್ಯ. ಮಿಲ್ಕ್‌ ಚಾಕೊಲೇಟ್‌ನಲ್ಲಿ ಕೊಕೊವ ಪ್ರಮಾಣ ಅತ್ಯಂತ ಕಡಿಮೆ ಮತ್ತು ಸಕ್ಕರೆ ಅಂಶ ಜಾಸ್ತಿ.

ವಾರಕ್ಕೆ ಮೂರು ಬಾರಿ ಈ ಡಾರ್ಕ್‌ ಚಾಕೊಲೇಟ್‌ ತಿಂದವರಲ್ಲಿ ಪಾರ್ಶ್ವವಾಯು ಸಂಭವನೀಯತೆ ಕಡಿಮೆಯಂತೆ. ಮಧುಮೇಹಿಗಳಿಗೂ ಇದು ಒಳ್ಳೆಯದು. ಹಾಗೆಯೇ ಕೊರೊನರಿ ಆರ್ಟರಿ ಕಾಯಿಲೆಯಾದ ಹೃದಯಾಘಾತದ ಪ್ರಮಾಣವೂ ಕಡಿಮೆ.

ಚಾಕೊಲೇಟ್‌ ನಿಮ್ಮ ಮೆದುಳಿನ ಕಾರ್ಯಕ್ಷಮತೆಗೆ ಒಳ್ಳೆಯದು. ನೆನಪಿನ ಶಕ್ತಿಯನ್ನು ಚುರುಕುಗೊಳಿಸುವುದು ಹಿರಿಯರ ಮೇಲೆ ನಡೆದ ಅಧ್ಯಯನವೂ ಸಾಬೀತುಪಡಿಸಿದೆ. ಇದರಲ್ಲಿರುವ ಕೆಲವು ಅಂಶಗಳು ಮಾದಕದ ದ್ರವ್ಯದ ತರಹ ಕೆಲಸ ಮಾಡುತ್ತವಂತೆ. ಅಂದರೆ ಭಾವನೆಗಳನ್ನು ಒಮ್ಮಿಂದೊಮ್ಮೆಲೇ ಚುರುಕುಗೊಳಿಸಿ, ‘ಫಿಲ್‌ ಗುಡ್‌’ ಹಾರ್ಮೋನ್‌ಗಳಾದ ಡೋಪೊಮೈನ್‌, ಸೆರೊಟೋನಿನ್‌ ಜಾಸ್ತಿಯಾಗುತ್ತವೆ.

ಮಿತಿ ಇರಲಿ
ಇತರ ಆಹಾರಗಳಂತೆ ಇದನ್ನೂ ನಿಗದಿತ ಪ್ರಮಾಣದಲ್ಲಿ ಸೇವಿಸಿದರೆ ಒಳ್ಳೆಯದು. ಇದರಲ್ಲಿರುವ ಸಕ್ಕರೆ, ಕೊಬ್ಬು ಜಾಸ್ತಿ ಕ್ಯಾಲೊರಿ ಇರುವಂತಹವು. ಇದು ಬೊಜ್ಜಿಗೆ ಕಾರಣವಾಗುತ್ತದೆ.

2000 ವರ್ಷಗಳದ್ದು ಈ ಚಾಕೊಲೇಟ್‌ ಇತಿಹಾಸ. ಮಧ್ಯ ಅಮೆರಿಕಾದಲ್ಲಿ ಕೊಕೊವ ಬೀಜದಿಂದ ತಯಾರಿಸಿದ ಕಹಿ ಪಾನೀಯ ಕುಡಿಯುವ ರೂಢಿ ಇತ್ತು. ಮಾಯನ್ನರು ಈ ಪಾನೀಯಕ್ಕೆ ದೈವತ್ವದ ಪಟ್ಟ ನೀಡಿದ್ದರು. ಆದರೆ ಸ್ಪೇನಿನ ಜನ ಅಲ್ಲಿಗೆ ಕಾಲಿಟ್ಟು ಸಿಹಿ ಬೆರೆಸಿ ಕುಡಿಯುವ ಪರಿಪಾಠ ಶುರು ಮಾಡಿದರು. ಇದೀಗ ಇದು ದೊಡ್ಡ ಕೈಗಾರಿಕೆಯಾಗಿ ಕೋಟ್ಯಂತರ ಡಾಲರ್‌ ಮಾರುಕಟ್ಟೆಯಾಗಿ ರೂಪುಗೊಂಡಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು