ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭ ನಿರೋಧಕ ಮಾತ್ರೆ: ಭವಿಷ್ಯಕ್ಕೆ ತೊಂದರೆಯೆ?

Last Updated 11 ಮಾರ್ಚ್ 2022, 19:30 IST
ಅಕ್ಷರ ಗಾತ್ರ

*ನನಗೆ 32 ವರ್ಷ. 2017ರಲ್ಲಿ ಗಂಡು ಮಗು ಆಯ್ತು. ಕಳೆದ ಒಂದು ವರ್ಷದಿಂದ ವೈದ್ಯರ ಸಲಹೆಯಂತೆ ‘ಯಾಸ್ಮಿನ್’ ಎಂಬ ಗರ್ಭ ನಿರೋಧಕ ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದೇನೆ. ಈ ಮಾತ್ರೆಯ ನಿರಂತರ ಸೇವನೆಯಿಂದ ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆ ಕಾಡಬಹುದೇ?

ಹೆಸರು, ಊರು ಬೇಡ

ಪ್ರಸ್ತುತ ಲಭ್ಯವಿರುವ ಸಂತಾನ ನಿಯಂತ್ರಣ ಕ್ರಮಗಳಲ್ಲಿ ಸಂಯುಕ್ತ ಹಾರ್ಮೋನು ಭರಿತ ಮಾತ್ರೆಗಳ ಬಳಕೆ ಅತ್ಯಂತ ಪರಿಣಾಮಕಾರಿ ವಿಧಾನ. ನೀವು ಸೇವಿಸುತ್ತಿರುವ ‘ಯಾಸ್ಮಿನ್’ ಎಂಬ ಗರ್ಭನಿರೋಧಕ ಮಾತ್ರೆಯು ಈಸ್ಟ್ರೋಜನ್ ಮತ್ತು ಪ್ರೊಜೆಸ್ಟಿರಾನ್‌ಗಳನ್ನೂ ಕಡಿಮೆ ಪ್ರಮಾಣದಲ್ಲಿ ಹೊಂದಿರುವ ಸಂಯೋಜನೆಯ ಮಾತ್ರೆ. ಈ ಮಾತ್ರೆಯು ನಿಮ್ಮಲ್ಲಿ ಪ್ರತಿ ತಿಂಗಳು ಹಾರ್ಮೋನುಗಳ ಮಟ್ಟವನ್ನು ನಿಯಂತ್ರಿಸಿ ಅಂಡ ಬಿಡುಗಡೆಯಾಗದಂತೆ ತಡೆಯುತ್ತದೆ. ಆದರೆ ಇದನ್ನು ಒಂದು ದಿನವೂ ಬಿಡದೇ ತೆಗೆದುಕೊಳ್ಳಬೇಕು. ನಿಮ್ಮ ಮಗುವಿಗೆ ಈಗಾಗಲೇ 5 ವರ್ಷವಾಗಿರುವುದರಿಂದ ನಿಮಗೆ ಇನ್ನೊಂದು ಮಗು ಪಡೆಯುವ ಇಚ್ಛೆ ಇದ್ದಲ್ಲಿ ಈ ಮಾತ್ರೆಗಳನ್ನು ನಿಲ್ಲಿಸಿ ಎರಡು ತಿಂಗಳುಗಳ ಕಾಲ ಫೋಲಿಕ್ ಆಸಿಡ್ ಮಾತ್ರೆಗಳನ್ನು ತೆಗೆದುಕೊಂಡು ಇನ್ನೊಂದು ಮಗುವನ್ನು ಪಡೆಯಲು ಪ್ರಯತ್ನಿಸಬಹುದು. ಇಂತಹ ಹಾರ್ಮೋನು ಮಾತ್ರೆಗಳಿಂದ ಕೆಲವರಿಗೆ ವಾಂತಿ, ತಲೆಸುತ್ತು, ತಲೆನೋವು ಬರುವುದು, ಹೊಟ್ಟೆ ಉಬ್ಬರಿಸುವುದು, ಸ್ತನಗಳ ನೋವು, ಸ್ವಲ್ಪ ಪಾದಗಳ ಊತ ಮುಂತಾದ ಸಣ್ಣ ಪುಟ್ಟ ತೊಂದರೆಗಳಾಗುವುದು. ಆರಂಭದಲ್ಲಿ ಕಡಿಮೆ ರಕ್ತಸ್ರಾವ ಆಗಬಹುದು. ದೀರ್ಘಾವದಿ ಈ ಮಾತ್ರೆಗಳನ್ನು ತಿಂದರೆ ಸ್ವಲ್ಪಮಟ್ಟಿಗೆ ತೂಕ ಏರುವಿಕೆ ಉಂಟಾಗಬಹುದು. ಆದರೆ ಏರುರಕ್ತದೊತ್ತಡ ಇರುವವರಲ್ಲಿ, ಬೊಜ್ಜು ಇರುವವರಲ್ಲಿ, ಎದೆಯಲ್ಲಿ ಗಂಟು ಇರುವವರಿಗೂ, ಸ್ತನದ ಕ್ಯಾನ್ಸರ್‌ನ ಕೌಟುಂಬಿಕ ಹಿನ್ನೆಲೆ ಇರುವವರೂ ಬಳಸದೇ ಇರುವುದು ಒಳ್ಳೆಯದು. ದೀರ್ಘಾವಧಿ ಈ ಮಾತ್ರೆಯನ್ನು ಸೇವಿಸಿದರೆ ಕೆಲವರಲ್ಲಿ ರಕ್ತಹೆಪ್ಪುಗಟ್ಟುವುದು, ಪಾರ್ಶ್ವವಾಯು ಹಾಗೂ ಹೃದಯಾಘಾತದ ಸಂಭವ ಹೆಚ್ಚಾಗಬಹುದು. ಈ ಮಾತ್ರೆಯನ್ನು ನಿಲ್ಲಿಸಿ ಕೆಲವೇ ತಿಂಗಳಲ್ಲಿ ಫಲವತ್ತತೆ ಮರಳಿ ಬರುತ್ತದೆ. ಆದ್ದರಿಂದ ನೀವು ಇನ್ನೊಂದು ಮಗು ಬೇಕೆಂದರೆ ಈ ಮಾತ್ರೆಗಳನ್ನು ನಿಲ್ಲಿಸಿ ಮಗುವನ್ನು ಪಡೆಯಲು ಪ್ರಯತ್ನಿಸಿ.

2. ನನಗೆ 25 ವರ್ಷ, ನಾನು 47 ಕೆಜಿ ತೂಕವಿದ್ದೇನೆ. ಮುಟ್ಟು ಸರಿಯಾಗಿ ಆಗದೇ 2 ವರ್ಷಗಳಾಗುತ್ತಾ ಬಂತು. ಡಾಕ್ಟರಿಗೆ ತೋರಿಸಿದಾಗ ಸ್ಕ್ಯಾನ್‌ ಮಾಡಿ ಗರ್ಭಕೋಶ ಸಣ್ಣದಿದೆ ಎಂದರು ಹಾಗೂ 21 ದಿನ ಗರ್ಭನಿರೋಧಕ ಮಾತ್ರೆ ಕೊಟ್ಟರು. ಅದನ್ನು ತೆಗೆದುಕೊಂಡರೆ ಮಾತ್ರ ಮುಟ್ಟಾಗುತ್ತದೆ. ಇಲ್ಲದಿದ್ದರೆ ಆಗುವುದೇ ಇಲ್ಲ. ಥೈರಾಯಿಡ್ ರಿಪೋರ್ಟ್ ನಾರ್ಮಲ್ ಇದೆ. ಪರಿಹಾರ ತಿಳಿಸಿ.

ಹೆಸರು, ಊರು ಬೇಡ

ಪ್ರತಿ ಹೆಣ್ಣಿಗೂ ಸಂತಾನೋತ್ಪತ್ತಿ ವಯಸ್ಸಿನಲ್ಲಿ ಗರ್ಭಕೋಶವು 3 ಇಂಚು (7.5ಸೆಂ.ಮೀ) ಉದ್ದ, 2 (5ಸೆಂ.ಮೀ) ಇಂಚು ಅಗಲ ಹಾಗೂ 1 (2.5ಸೆಂ.ಮೀ) ಇಂಚು ದಪ್ಪ ಇರುತ್ತದೆ ಮತ್ತು ಕಿಬ್ಬೊಟ್ಟೆಯ ಕೆಳಭಾಗದಲ್ಲಿ ಬಾಗಿಕೊಂಡಂತೆ ಇದ್ದು ಅದರ ಮುಂದೆ ಮೂತ್ರಕೋಶವಿರುತ್ತದೆ ಹಾಗೂ ಹಿಂದೆ ರೆಕ್ಟಮ್ (ಮಲಕೋಶ) ಇರುತ್ತದೆ. ಈ ಸ್ಥಿತಿಯು ಹಾರ್ಮೋನುಗಳ ವ್ಯತ್ಯಾಸದಿಂದ ಉಂಟಾಗುತ್ತದೆ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ನಲ್ಲಿ ಇದು ಪತ್ತೆಯಾಗುತ್ತದೆ. ಗರ್ಭಕೋಶ 3 ರಿಂದ 5 ಸೆಂ.ಮೀ ಗಿಂತ ಚಿಕ್ಕದಿದ್ದರೆ ಅದನ್ನು ಹೈಪೋಪ್ಲಾಸ್ಟಿಕ್ (ಚಿಕ್ಕದಾದ) ಗರ್ಭಕೋಶ ಎನ್ನುತ್ತೇವೆ. ಈ ಸ್ಥಿತಿಯ ಜೊತೆ ಬೇರೇನಾದರೂ ವರ್ಣತಂತುಗಳ ತೊಂದರೆ ಇದೆಯೇ ಎಂಬುದನ್ನು ನೀವು ತಜ್ಞ ವೈದ್ಯರ ಹತ್ತಿರ ಪರೀಕ್ಷಿಸಿಕೊಳ್ಳಿ ಮತ್ತು ನಿಮಗೆ ಈಸ್ಟ್ರೋಜನ್ ಒಳಗೊಂಡಿರುವ ಹಾರ್ಮೋನುಗಳನ್ನು ಕೊಡುವುದರಿಂದ ಗರ್ಭಕೋಶದ ಗಾತ್ರ ಹೆಚ್ಚಾಗುತ್ತದೆ ಹಾಗೂ ಇಂತಹವರಲ್ಲಿ ಬೇರೇನೂ ತೊಂದರೆ ಇಲ್ಲದೆ ತಾಳ್ಮೆಯಿಂದ ಚಿಕಿತ್ಸೆ ತೆಗೆದುಕೊಂಡು ಕಾದಾಗ ಮಕ್ಕಳಾಗುವ ಸಂದರ್ಭಗಳು ಹೆಚ್ಚು. ಯಾವುದಕ್ಕೂ ತಜ್ಞವೈದ್ಯರ ಮೇಲ್ವಿಚಾರಣೆಯಲ್ಲಿ ಇರಿ. ಭಯಪಡುವ ಅಗತ್ಯವಿಲ್ಲ.

3. ನನ್ನ ವಯಸ್ಸು 30. ಮದುವೆಯಾಗಿ 3 ವರ್ಷ ಆಗಿದೆ. ಇನ್ನೂ ಮಕ್ಕಳಾಗಿಲ್ಲ. ನನಗೆ ಏನಾದರೂ ತೊಂದರೆ ಇರಬಹುದು ಎಂದುಕೊಂಡು ಆರೋಗ್ಯ ತಪಾಸಣೆ ಮಾಡಿಸಿದೆ. ಎಲ್ಲಾ ನಾರ್ಮಲ್ ಅಂತ ರಿಪೋರ್ಟ್ ಬಂದಿದೆ. ತಿಂಗಳಿಗೆ ಸರಿಯಾಗಿ ಮುಟ್ಟಾಗುತ್ತಿದೆ. ನನಗೆ ಮಗು ಪಡೆಯಲು ಸಲಹೆ ಕೊಡಿ ಮೇಡಂ.

ಶ್ವೇತ, ಊರು ಬೇಡ ‌

ಶ್ವೇತಾರವರೆ, ನಿಮಗೆ ಎಲ್ಲವೂ ಸಹಜವಾಗಿದೆ ಇದೆ ಎಂದು ರಿಪೋರ್ಟ್‌ ಬಂದಿದ್ದರೂ ನಿಮ್ಮ ಪತಿಯ ವೀರ್ಯಾಣುಗಳ ಸಂಖ್ಯೆ ಹಾಗೂ ಗುಣಮಟ್ಟ ಎಲ್ಲವೂ ಸರಿ ಇದೆಯೇ ಎಂದು ಪರೀಕ್ಷಿಸಿ. ಸೂಕ್ತ ತಜ್ಞವೈದ್ಯರ ಹತ್ತಿರ ಪರೀಕ್ಷಿಸಿಕೊಂಡು ಚಿಕಿತ್ಸೆಯನ್ನು ಮುಂದುವರೆಸಿ. ಮಕ್ಕಳಾಗಲಿಲ್ಲವೆಂದಾಗ ಕೇವಲ ಹೆಣ್ಣಿನಲ್ಲಿ ಮಾತ್ರ ತೊಂದರೆ ಇದೆ ಎಂದು ಅರ್ಥವಲ್ಲ. ಈ ಬಗ್ಗೆ ಹಿಂದಿನ ಅಂಕಣಗಳಲ್ಲಿ ಸಾಕಷ್ಟು ತಿಳಿಸಿದ್ದೇವೆ. ಋತುಫಲಪ್ರದ ದಿನಗಳು ಅಂದರೆ ಋತುಚಕ್ರದ ಆರಂಭದಿಂದ 8 ರಿಂದ 18 ದಿನಗಳವರೆಗೆ ನಿಮ್ಮಿಬ್ಬರಲ್ಲೂ ಲೈಂಗಿಕ ಸಂಪರ್ಕವಿರಲಿ. ನೀವು ನಿಮ್ಮ ಪತಿ ಇಬ್ಬರಲ್ಲೂ ಏನೂ ತೊಂದರೆ ಇಲ್ಲದಿದ್ದರೂ ಕೆಲವೊಮ್ಮೆ ಮಕ್ಕಳಾಗಲು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ಎಲ್ಲ ಪ್ರಯತ್ನ, ಚಿಕಿತ್ಸೆಗೂ ಮೀರಿ ಮಕ್ಕಳಾಗದಿದ್ದರೆ ಐವಿಎಫ್ ಚಿಕಿತ್ಸೆಗೆ ಮೊರೆ ಹೋಗಬಹುದು.

4. ನನಗೆ ಮದುವೆ ಆಗಿ 2 ವರ್ಷಗಳಾಗಿವೆ ಮತ್ತು ನಾವಿಬ್ಬರು ಗಂಡ–ಹೆಂಡತಿ ತುಂಬಾ ಸಂತೋಷವಾಗಿದ್ದೀವಿ. ಆದರೆ ನಮಗೆ ಮಕ್ಕಳಿಲ್ಲ. ತುಂಬಾ ಪ್ರಯತ್ನ ಮಾಡಿದ್ದೇವೆ. ನನ್ನ ಹೆಂಡತಿಯ ಋತುಚಕ್ರ ಸರಿಯಾಗಿದೆ. ಅಲ್ಲದೇ ಬೇರೆ ಯಾವುದೇ ತೊಂದರೆ ಇಲ್ಲ. ನನಗೆ penoscrotol Hypospodiasis ಇಂದ 3 ಬಾರಿ ಆಪರೇಷನ್ ಆಗಿದೆ ಮತ್ತು ನನ್ನ ಶಿಶ್ನದ ರಂಧ್ರ ಮುಚ್ಚಿಲ್ಲ, 2 ರಂಧ್ರ ಇದೆ. ಇದರಿಂದ ಮಕ್ಕಳಾಗುವುದೋ ಇಲ್ಲವೋ ಎಂಬ ಭಯವಿದೆ. ನನ್ನಲ್ಲಿ ಎರಡು ಪ್ರಶ್ನೆಗಳಿವೆ.

1. ನನ್ನ ತೊಂದರೆಯಿಂದಲೇ ನಮಗೆ ಮಕ್ಕಳು ಆಗುತ್ತಿಲ್ಲವೇ ಅಥವಾ ಬೇರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇದೆಯೇ?

2. ನನ್ನ ಹೆಂಡತಿಯ ಋತುಚಕ್ರದ ಆದಾರದ ಮೇಲೆ ನಾವು ಯಾವಾಗ ಸೇರಿದರೆ ಮಕ್ಕಳಾಗುವುದು?

ನಾಗರಾಜ್, ಊರು ಬೇಡ.

ನಿಮಗೆ ಜನ್ಮಜಾತವಾಗಿ ಸ್ವಲ್ಪ ಮಟ್ಟಿಗೆ ಹೊರಜನನಾಂಗದ ತೊಂದರೆ ಇದ್ದರೂ ಮಕ್ಕಳಾಗುವುದಕ್ಕೆ ಅಡ್ಡಿಯಾಗಬಹುದು ಎಂದೆನಿಸುತ್ತಿಲ್ಲ. ನಿಮಗೇನಾದರೂ ಲೈಂಗಿಕ ಸಂಪರ್ಕವಾಗುವಲ್ಲಿ ವಿಫಲತೆಯುಂಟಾಗಿ ವೀರ್ಯ ನಿಮ್ಮ ಪತ್ನಿಯ ದೇಹವನ್ನು ಪ್ರವೇಶಿಸಲು ಸಾಧ್ಯವಾಗದಿದ್ದಲ್ಲಿ ಆ ಕಾರಣಕ್ಕಾಗಿ ಮಕ್ಕಳಾಗದೇ ಇರುವ ಸಾಧ್ಯತೆ ಇದೆ. ಯಾವುದಕ್ಕೂ ನೀವು ಲೈಂಗಿಕ ತಜ್ಞರು ಅಥವಾ ಯುರಾಲಜಿಸ್ಟ್‌ ಹತ್ತಿರ ತಪ್ಪದೆ ತಪಾಸಣೆ ಮಾಡಿಸಿಕೊಂಡು ಅವರ ಸಲಹೆಯ ಮೇರೆಗೆ ಮುಂದುವರಿಯಬಹುದು. ಋತುಫಲಪ್ರದ ದಿನಗಳಲ್ಲಿ ನೀವು ಅಂದರೆ ನಿಮ್ಮ ಹೆಂಡತಿಗೆ 30 ದಿನಗಳಿಗೊಮ್ಮೆ ಮುಟ್ಟಾಗುತ್ತಿದ್ದರೆ 8 ರಿಂದ 18 ದಿನಗಳವರೆಗೆ ದಿನ ಬಿಟ್ಟು ದಿನವಾದರೂ ನೀವು ಲೈಂಗಿಕ ಸಂಪರ್ಕ ಮಾಡಿದರೆ ಒಳಿತು.

5. ನಾನು ಮದುವೆ ಆಗಿ ಒಂದೂವರೆ ವರ್ಷ ಆದರೂ ಸಹ ಮಕ್ಕಳಾಗುತ್ತಿಲ್ಲ. ನನಗೆ ಮೊದಲಿನಿಂದಲೂ 2 ಅಥವಾ 3 ತಿಂಗಳಿಗೊಮ್ಮೆ ಮುಟ್ಟಾಗುತ್ತದೆ. ವೈದ್ಯರ ಬಳಿ ತೋರಿಸಿದ್ದೇವೆ. ಮಕ್ಕಳು ಪಡೆಯಲು ಯಾವುದೇ ತೊಂದರೆ ಇಲ್ಲ ಎನ್ನುತ್ತಿದ್ದಾರೆ. ಆದರೂ ಸಹ ಮಕ್ಕಳಾಗುತ್ತಿಲ್ಲ. ಇದಕ್ಕೆ ನಿಮ್ಮ ಸಲಹೆ ತಿಳಿಸಿ

ನಿಮಗೆ ಪಿಸಿಓಡಿ ಸಮಸ್ಯೆ ಇರಬಹುದು. ಹಾಗಾಗಿ ನಿಮ್ಮ ವಯಸ್ಸು ಹಾಗೂ ಎತ್ತರಕ್ಕೆ ತಕ್ಕಂತೆ ಸಮತೂಕ ಹೊಂದಲು ಪ್ರಯತ್ನಿಸಿ. ಜೊತೆಗೆ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗಲೂ ಅತ್ಯುತ್ತಮ ಮಾತ್ರೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಹಿಂದಿನ ಅಂಕಣಗಳಲ್ಲಿ ತಿಳಿಸಿರುವಂತೆ ಉತ್ತಮ ಜೀವನಶೈಲಿಯನ್ನು ಅನುಸರಿಸಿ ಹಾಗೂ ಅದನ್ನು ತಜ್ಞವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ತೆಗೆದುಕೊಂಡು ಸಾಧ್ಯವಾದಷ್ಟು ಬೇಗನೆ ಮಗುವನ್ನು ಪಡೆಯಲು ಪ್ರಯತ್ನಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT