ಮಂಗಳವಾರ, ಏಪ್ರಿಲ್ 13, 2021
23 °C

ಸಿಹಿ ಸೇವನೆಗಿರಲಿ ಕಡಿವಾಣ

ಮನಸ್ವಿ Updated:

ಅಕ್ಷರ ಗಾತ್ರ : | |

Prajavani

ಬಾಯಲ್ಲಿ ನೀರೂರಿಸುವ ಜಿಲೇಬಿ, ರಸಗುಲ್ಲಾದಂತಹ ಸಿಹಿ ತಿನಿಸುಗಳನ್ನು ಕಂಡರೆ ಯಾರು ತಾನೇ ಸುಮ್ಮನಿರಲು ಸಾಧ್ಯ! ಆದರೆ ಇತ್ತೀಚೆಗೆ ಬದಲಾದ ಜೀವನಶೈಲಿಯ ಕಾರಣದಿಂದ ಸಿಹಿ ತಿನ್ನಲು ಭಯ ಪಡುವಂತಾಗಿದೆ. ‘ಅತಿಯಾದ ಸಿಹಿ ಪದಾರ್ಥಗಳ ಸೇವನೆಯಿಂದ ಮಧುಮೇಹ, ಬೊಜ್ಜು ಹಾಗೂ ಹೃದಯ ಸಂಬಂಧಿ ಕಾಯಿಲೆಗಳೂ ಹೆಚ್ಚುತ್ತಿವೆ. ಅದರಲ್ಲೂ ಮಧುಮೇಹ ಎನ್ನುವುದು ಸಾರ್ವತ್ರಿಕ ಕಾಯಿಲೆ ಎನ್ನುವಷ್ಟರ ಮಟ್ಟಿಗೆ ಸಣ್ಣ ವಯಸ್ಸಿನವರನ್ನೂ ಕಾಡುತ್ತಿದೆ. ಆ ಕಾರಣಕ್ಕೆ ಸಿಹಿ ಸೇವೆನೆಗೆ ಕಡಿವಾಣ ಹಾಕುವುದು ಅಗತ್ಯ’ ಎನ್ನುತ್ತಾರೆ ವೈದ್ಯರಾದ ಡಾ. ಅನುರಾಧಾ ದಿನೇಶ್‌. ಹಾಗಂತ ಸಿಹಿ ಅಂಶ ಸೇವಿಸದೇ ಇರುವುದು ಸರಿಯಲ್ಲ. ಹಾಗಾಗಿ ಕೆಲವೊಂದು ಮಾರ್ಗಗಳನ್ನು ಅನುಸರಿಸುವ ಮೂಲಕ ಅತಿಯಾದ ಸಿಹಿ ಸೇವನೆಗೆ ಕಡಿವಾಣ ಹಾಕಬಹುದು. ಸಿಹಿ ಸೇವನೆ ನಿಯಂತ್ರಣಕ್ಕೆ ಇಲ್ಲಿವೆ ಕೆಲವು ಮಾರ್ಗಗಳು.

ನೈಸರ್ಗಿಕ, ನೈಸರ್ಗಿಕವಲ್ಲದ ಸಿಹಿ ತಿಂಡಿಗಳ ವ್ಯತ್ಯಾಸ ಅರಿಯಿರಿ

ತಜ್ಞರ ಪ್ರಕಾರ ಒಬ್ಬಳು ಮಹಿಳೆ ದಿನಕ್ಕೆ 25 ಗ್ರಾಂ ನೈಸರ್ಗಿಕವಲ್ಲದ ಸಿಹಿ ಪದಾರ್ಥವನ್ನು ಸೇವಿಸಬಹುದು ಹಾಗೂ ಪುರುಷ 36 ಗ್ರಾಂ ನೈಸರ್ಗಿಕ ಸಿಹಿಯಲ್ಲದ ಪದಾರ್ಥ ಸೇವಿಸಬಹುದು.

ದೈನಂದಿನ ಆಹಾರಕ್ರಮದಲ್ಲಿ ನಾವು ಬಳಸುವ ಹಣ್ಣು, ತರಕಾರಿ, ಮೊಸರು ಮುಂತಾದ ವಸ್ತುಗಳಲ್ಲಿ ನೈಸರ್ಗಿಕವಾದ ಸಿಹಿ ಅಂಶವಿದೆ. ಅವುಗಳನ್ನು ಹೆಚ್ಚು ಹೆಚ್ಚು ಬಳಸುವುದು ಸಂಪೂರ್ಣ ದೈಹಿಕ ಆರೋಗ್ಯಕ್ಕೆ ಉತ್ತಮ. ಉದಾಹರಣೆಗೆ ಕಿತ್ತಳೆ ಹಣ್ಣಿನಲ್ಲಿ ನೈಸರ್ಗಿಕ ಸಿಹಿ ಅಂಶದೊಂದಿಗೆ ನಾರಿನಾಂಶವೂ ಇದೆ. ಇದರ ಸೇವನೆಯಿಂದ ಹಸಿವು ನೀಗುವ ಜೊತೆಗೆ ದೇಹಕ್ಕೆ ಬೇಕಾಗುವ ಸಿಹಿ ಅಂಶವೂ ಲಭ್ಯವಾಗುತ್ತದೆ. 

ಸಂಗ್ರಹಿತ, ಪ್ಯಾಕೆಟ್‌, ರೆಡಿ ಟು ಈಟ್‌ ಆಹಾರ ಹಾಗೂ ತಂಪು ಪಾನೀಯಗಳಲ್ಲಿ ನೈಸರ್ಗಿಕವಲ್ಲದ ಸಿಹಿ ಅಂಶವನ್ನು ಹೆಚ್ಚು ಸೇರಿಸುತ್ತಾರೆ. ಅವುಗಳನ್ನು ಸೇವಿಸುವಾಗ ಬಾಯಿಗೆ ಹಿತ ಎನ್ನಿಸಿದರೂ ಆರೋಗ್ಯದ ದೃಷ್ಟಿಯಿಂದ ಅಷ್ಟು ಒಳ್ಳೆಯದಲ್ಲ. ಇವು ನಮ್ಮ ಡಯೆಟ್ ಹಾಗೂ ಆರೋಗ್ಯಕ್ರಮದ ಮೇಲೆ ಯಾವೆಲ್ಲಾ ರೀತಿಯ ಪರಿಣಾಮಗಳನ್ನು ಬೀರುತ್ತವೆ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡಿಬೇಕು.

ಪೂರ್ಣ ಆಹಾರಕ್ಕೆ ಒತ್ತು ನೀಡಿ

ದೇಹಕ್ಕೆ ಸಕ್ಕರೆ ಅಂಶ ಸೇರುವುದನ್ನು ಕಡಿಮೆ ಮಾಡಲು ಪೂರ್ಣ ಪ್ರಮಾಣದ ಆಹಾರ ಸೇವಿಸುವುದು ಮುಖ್ಯ. ಸಾಮಾನ್ಯವಾಗಿ ಹಲವರು ಬೆಳಗಿನ ಉಪಾಹಾರ ಸೇವಿಸುವುದಿಲ್ಲ. ಹಸಿವಾದಾಗ ಬ್ರೆಡ್‌, ಬಿಸ್ಕತ್‌ನಂತಹ ತಿನಿಸುಗಳಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ಅರ್ಧಂಬರ್ಧ ಊಟ ಮಾಡುತ್ತಾರೆ. ಆ ಕಾರಣಕ್ಕೆ ಊಟ ಮಾಡಿದ ಸ್ವಲ್ಪ ಹೊತ್ತಿಗೆ ಹೊಟ್ಟೆ ಹಸಿಯಲು ಆರಂಭವಾಗುತ್ತದೆ. ಆಗಲೂ ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ತಂಪು ಪಾನೀಯ ಕುಡಿಯುವುದೋ, ಸಂಜೆ ಹೊತ್ತಿಗೆ ಫಾಸ್ಟ್‌ಪುಡ್‌ ತಿನ್ನವುದೋ ಮಾಡುತ್ತೇವೆ. ಹಾಗಾಗಿ ಒಂದೇ ಹೊತ್ತು ಊಟ ಮಾಡಿದರೂ ಪ‍ರಿಪೂರ್ಣವಾಗಿ ಹೊಟ್ಟೆ ತುಂಬುವಷ್ಟು ಊಟ ಮಾಡಬೇಕು. ಜೊತೆಗೆ ಹಸಿವಾದಾಗ ತರಕಾರಿ ಸಲಾಡ್ ಅಥವಾ ಹಣ್ಣುಗಳ ಸೇವನೆಯನ್ನು ಅಭ್ಯಾಸ ಮಾಡಬೇಕು.

ನಿಮ್ಮ ದೇಹಕ್ಕೆ ಸೇರುವ ಸಕ್ಕರೆಯ ಮೂಲ ಗುರುತಿಸಿ

ಕೆಲವೊಮ್ಮೆ ನಮ್ಮ ದೇಹಕ್ಕೆ ಯಾವ ರೂಪದಲ್ಲಿ ಸಕ್ಕರೆ ಅಂಶ ಸೇರುತ್ತದೆ ಎಂಬುದು ನಮಗೇ ಅರಿವಿರುವುದಿಲ್ಲ. ಆ ಕಾರಣಕ್ಕೆ ಪ್ರತಿನಿತ್ಯ ಸೇವಿಸುವ ಆಹಾರದ ಮೌಲ್ಯಮಾಪನ ಮಾಡಿಕೊಳ್ಳಬೇಕು. ಕೇವಲ ಆಹಾರ ಮಾತ್ರವಲ್ಲ, ನಾವು ಸೇವಿಸುವ ಕಾಫಿ,
ಟೀಯಂತಹ ಪಾನೀಯಗಳ ಮೇಲೂ ನಿಗಾ ಇರಿಸಬೇಕು. ಸಕ್ಕರೆ ರಹಿತ ಸಿಟ್ರಸ್ ಅಂಶ ಇರುವ ಪಾನೀಯ ಗಳು, ಹಣ್ಣಿನ ಜ್ಯೂಸ್‌ಗಳು, ಹಣ್ಣಿನ ತುಂಡುಗಳನ್ನು ಸೇವಿಸುವ ಮೂಲಕ ಬಾಯಾರಿಕೆ ಹಾಗೂ ಹಸಿವನ್ನು ತಡೆಯಬಹುದು. ಜೊತೆಗೆ ನೈಸರ್ಗಿಕ ಸಿಹಿ ಅಂಶ ದೇಹಕ್ಕೆ ಒದಗಿಸಲು ಸಾಧ್ಯವಾಗುತ್ತದೆ.

ಸಮತೋಲಿತ ಆಹಾರ ಸೇವನೆ

ಪ್ರತಿನಿತ್ಯ ಸರಿಯಾದ ಸಮಯಕ್ಕೆ ಸಮತೋಲಿತ ಆಹಾರ, ಸಮರ್ಪಕ ರೀತಿಯಲ್ಲಿ ಊಟ ಹಾಗೂ ತಿಂಡಿ ಸೇವಿಸುವುದು ಅಗತ್ಯ. ಇದರಿಂದ ಸಿಹಿ ತಿನ್ನುವ ಚಪಲಕ್ಕೆ ಕಡಿವಾಣ ಹಾಕಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು