ತಾಮ್ರದ ಹೊಳಪಿಗೆ ಮಾರುಹೋಗುವ ಮುನ್ನ...

7

ತಾಮ್ರದ ಹೊಳಪಿಗೆ ಮಾರುಹೋಗುವ ಮುನ್ನ...

Published:
Updated:
Deccan Herald

ಇತ್ತೀಚೆಗೆ ತಾಮ್ರದ ನೀರಿನ ಬಾಟಲಿಗೆ ಜನಸಾಮಾನ್ಯರು ಮಾರುಹೋಗಿರುವುದು ಮಾರುಕಟ್ಟೆ ಗಮನಿಸಿದರೆ ತಿಳಿಯುತ್ತದೆ. ತಾಮ್ರದ ನೀರಿನ ಬಾಟಲಿಯ ಮೇಲೆ ಅದರ ಪ್ರಯೋಜನವನ್ನು ಹೀಗೆ ಉಲ್ಲೇಖಿಸಲಾಗಿದೆ: ಮೆದುಳಿನ ಕಾರ್ಯವೈಖರಿಯನ್ನು ಹೆಚ್ಚಿಸುತ್ತದೆ; ರೋಗಾಣುಗಳನ್ನು ಕೊಲ್ಲುತ್ತದೆ; ಮೂಳೆಯ ಗಂಟುನೋವನ್ನು ಕಡಿಮೆ ಮಾಡುತ್ತದೆ; ಥೈರಾಯ್ಡ್ ಗ್ರಂಥಿಯನ್ನು ಹತೋಟಿಯಲ್ಲಿಡುತ್ತದೆ; ಚರ್ಮದ ಕಾಂತಿಯನ್ನು ವೃದ್ಧಿಸುತ್ತದೆ; ಗಾಯಗಳನ್ನು ಬೇಗ ವಾಸಿ ಮಾಡುತ್ತದೆ; ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ; ಕೆಟ್ಟ ಕೊಲೆಸ್ಟ್ರಾಲ್‍ ಅನ್ನು ಕಡಿಮೆ ಮಾಡುತ್ತದೆ; ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ; ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ; ವಯಸ್ಸಾಗುವುದನ್ನು ನಿಧಾನಗೊಳಿಸುತ್ತದೆ.

ಇದನ್ನು ಗಮನಿಸಿದರೆ ಹಳೆಯ ಲ್ಯಾಟಿನ್ ಮಾತೊಂದು ನೆನಪಿಗೆ ಬರುತ್ತದೆ: ‘ಸಂದೇಹವೇನೂ ಇಲ್ಲ. ಆದರೆ ತಪ್ಪುಗಳು ದುಪ್ಪಟ್ಟು’ (often wrong, never in doubt). ತಾಮ್ರದಲ್ಲಿ ರಾತ್ರಿ ನೀರಿಟ್ಟು ಬೆಳಗಿನ ಜಾವದಲ್ಲಿ ನೀರನ್ನು ಪರೀಕ್ಷಿಸಿದಾಗ, ತಾಮ್ರದ ಅಂಶ 0.01 ಮಿಲಿ ಗ್ರಾಂನಿಂದ 0.4 ಮಿಲಿ ಗ್ರಾಂಗೆ ಹೆಚ್ಚಾಗಿದ್ದು ಕಂಡುಬಂತು. ಅಂದರೆ, 40 ಬಾರಿ ಹೆಚ್ಚಾಯಿತು; ಶೇಕಡಾವಾರು ಗಮನಿಸಿದರೆ, ಶೇ 4000ರಷ್ಟು ಹೆಚ್ಚಾದಂತಾಯಿತು. ಈ ತಾಮ್ರದ ನೀರಿನ ಬಾಟಲಿಗೆ ಯಾವುದೇ ಕಲಾಯಿ ಹಾಕಿಲ್ಲದ್ದಾಗಿತ್ತು. ಈಗ ಮಾರುಕಟ್ಟೆಯಲ್ಲಿ ಹೆಚ್ಚಿನ ತಾಮ್ರದ ಬಾಟಲಿಗಳು ಶುದ್ಧ ತಾಮ್ರದ್ದೇ ಆಗಿದೆ. ವೈಜ್ಞಾನಿಕವಾಗಿ, ಅದು ‘ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್‌ ಅಥಾರಿಟಿ’ ಇರಬಹುದು ಅಥವಾ ‘ಪರಿಸರ ಸಂರಕ್ಷಣಾ ಸಂಸ್ಥೆ’ ಇರಬಹುದು – ಈ ಸಂಸ್ಥೆಗಳು ತಾಮ್ರವನ್ನು ಲಘು ಪೋಷಕಾಂಶ, ಹಾಗೆಯೇ ವಿಷಕಾರಿ ಎಂದು ಪರಿಗಣಿಸುತ್ತವೆ.

ನಮ್ಮ ಊಟದ ಮೂಲಕವೇ ನಮ್ಮ ದೇಹಕ್ಕೆ ಬೇಕಾದ ಸುಮಾರು 1.5ಮಿಲಿ ಗ್ರಾಂ ತಾಮ್ರ ಸಿಗುತ್ತದೆ. ತಾಮ್ರದ ಕೊರತೆಯಿರುವವರನ್ನು ಜಗತ್ತಿನಲ್ಲಿ ಕಾಣುವುದು ಅತ್ಯಂತ ವಿರಳ. ವೈದ್ಯಕೀಯ ಚಿಕಿತ್ಸೆಯಿಂದ, ಅದರಲ್ಲೂ ಹೊಟ್ಟೆಯ ಶಸ್ತ್ರಚಿಕಿತ್ಸೆಗೆ ಒಳಗಾದ ಕೆಲವರಲ್ಲಿ ತಾಮ್ರದ ಕೊರತೆ ಕಂಡುಬಂದಿದೆ. ಹೀಗಾಗಿ ನಮ್ಮ ಕುಡಿಯುವ ನೀರಿನಲ್ಲಿ ತಾಮ್ರದ ಗರಿಷ್ಠ ಪ್ರಮಾಣ ಶೇ 0.05 ಎಂದು ಸರ್ಕಾರ ನಿಗದಿ ಮಾಡಿದೆ. ಹೀಗಿದ್ದಾಗ, ನಾವು ಮೇಲಿನ ತಾಮ್ರದ ಹೆಗ್ಗಳಿಕೆಯನ್ನು ನೋಡಿ, ತಾಮ್ರದ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ದಿನಕ್ಕೆ ದೇಹಕ್ಕೆ ಬೇಕಾದ ತಾಮ್ರ ದುಪ್ಪಟ್ಟಾಗಿ ವಿಷಕಾರಿಯಾಗಬಹುದು.

ಸುಮಾರು ಎರಡೂವರೆ ಲೀಟರ್ ನೀರು ಕುಡಿದಾಗ, 1ಮಿಲಿ ಗ್ರಾಂ ಕನಿಷ್ಠ ನೀರಿನಿಂದಲೇ ಸೇರುವುದರಿಂದ ಇದು ದೇಹದ ಅವಶ್ಯಕತೆಯನ್ನು ಮೀರಿ ಪೋಷಕಾಂಶದಿಂದ ವಿಷಾಂಶವಾಗಿ ಪರಿವರ್ತನೆಯಾಗಬಹುದು. ‘The dose makes the poison’ ಎನ್ನುವ ಮಾತು ಇದಕ್ಕೆ ಅನ್ವಯಿಸುತ್ತದೆ. ತಾಮ್ರದ ಪಾತ್ರೆಗಳ ಬಳಕೆಯಿಂದ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಲಿವರ್ ಸಿರೋಸಿಸ್ ಕಾಯಿಲೆಯನ್ನು ಭಾರತದ ವಿಶೇಷ ಕಾಯಿಲೆಯೆಂದು ಪ್ರಸಿದ್ಧ ವೈದ್ಯಕೀಯ ಪತ್ರಿಕೆ ‘ಮರ್ಕ್’ ಹೇಳುತ್ತದೆ. ತಾಮ್ರವು ವಿಷಕಾರಿಯಾದಾಗ ಯಕೃತ್ತು, ಮೂತ್ರಪಿಂಡ ಮತ್ತು ಗರ್ಭಪಾತವಾಗುವ ಸಾಧ್ಯತೆಗಳು ವೈಜ್ಞಾನಿಕವಾಗಿ ನಿರೂಪಿತವಾಗಿದೆ. ಅದರಲ್ಲೂ ಮುಖ್ಯವಾಗಿ ಲಿವರ್‌ನ ಸಮಸ್ಯೆ ಹೆಚ್ಚು.

ಅಬ್ಬರದ ಅವೈಜ್ಞಾನಿಕ ಪ್ರಚಾರದಿಂದ ಜನರು ಸುಲಭವಾಗಿ ಕೆಲವು ವಸ್ತುಗಳ ಕಡೆಗೆ ವಾಲುತ್ತಾರೆ. ಆರೋಗ್ಯದ ಬಗ್ಗೆ ಸಹಜ ಕಾಳಜಿಯಿಂದ ಶೀಘ್ರ ಸಾಧನಗಳನ್ನು ಕೊಳ್ಳಲು, ಅವನ್ನು ಬಳಸಲು ಮುಗಿಬೀಳುತ್ತಾರೆ.ನಮ್ಮ ಆಹಾರ–ಅಭ್ಯಾಸಗಳು ಮತ್ತು ನಿತ್ಯಬಳಕೆಯ ಸಾಧನಗಳು ಅನಾರೋಗ್ಯಕ್ಕೆ ಹೇಗೆ ಕಾರಣವಾಗುತ್ತಿವೆ ಎಂಬುದರ ಬಗ್ಗೆ ಅಧ್ಯಯನಗಳು ನಡೆಯುತ್ತಿಲ್ಲ. ಅಭಿವೃದ್ಧಿ ಮತ್ತು ನಾಗರಿಕತೆಯ ಜೊತೆಜೊತೆಗೆ ರೋಗರುಜಿನಗಳು ಹೊಸಹೊಸ ಅವತಾರಗಳಲ್ಲಿ ಪ್ರಕಟವಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇಂತಹ ಸಂದರ್ಭಗಳಲ್ಲಿ ತಾಮ್ರದ ಬಳಕೆಯ ಬಗ್ಗೆ ಬರಿ ಹೆಗ್ಗಳಿಕೆಯ ಮಾತುಗಳನ್ನಾಡಿ, ಹುರಿದುಂಬಿಸುವುದರ ಬದಲು ಇನ್ನೂ ಹೆಚ್ಚು ವೈಜ್ಞಾನಿಕ ಅಧ್ಯಯನ ಅಗತ್ಯವಿದೆ. ವೈದ್ಯಕೀಯಶಾಸ್ತ್ರದಲ್ಲಿ ‘ಎಪಿಡಿಮಿಯಲಾಜಿ’ ಎಂದರೆ, ರೋಗರುಜಿನಗಳ ಹುಟ್ಟು ಮತ್ತು ಅವನ್ನು ತಡೆಗಟ್ಟುವತ್ತ ಅಧ್ಯಯನ – ಎಂಬ ಪ್ರತ್ಯೇಕ  ಶಾಖೆಯಿದೆ. ಜ್ಞಾನದ ವೃದ್ಧಿಗೆ ಮಾಡಿದ್ದನ್ನೇ ಮಾಡಿ, ಹೇಳಿದ್ದನ್ನೇ ಹೇಳಿದರೆ ಪ್ರಯೋಜನವಿಲ್ಲ. ನಮ್ಮ ನಡುವೆ ನಿತ್ಯ ಬದುಕಿನಲ್ಲಿ ಆಗುತ್ತಿರುವ ದೋಷಗಳನ್ನು ಗುರುತಿಸುವುದರ ಮೂಲಕ ಕಾಯಿಲೆಗಳನ್ನು ತಡೆಗಟ್ಟಬಹುದು. ನೀರಿಗೆ ಸದ್ಯಕ್ಕೆ ಹೇಳುವುದಾದರೆ, ಸ್ಟೈನ್‍ಲೆಸ್ ಸ್ಟೀಲ್ ಉತ್ತಮವೆನಿಸುತ್ತದೆ. ಸೆನೆಕಾ ಹೇಳಿದಂತೆ, ‘People don’t die, they kill themselves with fork and spoon.’ Maybe now, copper bottle to boot.

*

–ರಘು ಕೆ.ಸಿ.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !