ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ, ಭಯ ಮತ್ತು ವ್ಯಾಪಾರ

Last Updated 21 ಮಾರ್ಚ್ 2020, 19:30 IST
ಅಕ್ಷರ ಗಾತ್ರ

‘ಪ್ರೀತಿಯಿಂದ ಆಳಲಾಗದಿದ್ದರೆ ಭೀತಿ ಉಂಟು ಮಾಡಿ ಆಳಬೇಕು’ ಎಂದಿದ್ದ ರಾಜಕೀಯ ತಂತ್ರಗಾರಿಕೆಯ ಪಿತಾಮಹ ಮೇಕಿಯಾವಿಲ್ಲಿ. ಶತ್ರು ದೇಶ, ಅನ್ಯ ಜನರು, ನುಸುಳುಕೋರರು, ಬೇಲಿ ಬೇಕು ಎಂದೆಲ್ಲಾ ಭೀತಿಯುಂಟು ಮಾಡಿ ಪದೇ ಪದೇ ಚುನಾವಣೆಗಳನ್ನು ಗೆಲ್ಲಬಹುದು, ಒಂದಷ್ಟು ವರ್ಷ ಆಳಲೂಬಹುದು ಎನ್ನುವುದು ಈಗಾಗಲೇ ಶ್ರುತಪಟ್ಟಿದೆ.

ಬಗೆ ಬಗೆಯ ಭೀತಿ ಹುಟ್ಟಿಸಿ ಅವುಗಳಿಂದ ರಕ್ಷಿಸಿಕೊಳ್ಳಲು ನೆರವಾಗಬಲ್ಲ ಸಾಧನಗಳನ್ನು ಮಾರಾಟ ಮಾಡುವುದಂತೂ ಅತ್ಯಂತ ಸಾಮಾನ್ಯ; ಅಮೆರಿಕದಲ್ಲಂತೂ ಸ್ವರಕ್ಷಣೆಗೆಂದು ಬಂದೂಕುಗಳನ್ನೇ ಮಾರಲಾಗುತ್ತದೆ. ಊರಿನ ನೀರು ಕೆಟ್ಟಿದೆಯೆಂದು ಬಾಟಲಿ ನೀರು, ಮಾಂಸಾಹಾರ ಸರಿಯಿಲ್ಲವೆಂದು ಪೊಟ್ಟಣಗಳಲ್ಲಿ ಸಕ್ಕರೆ ಭರಿತ ಸಂಸ್ಕರಿತ ಆಹಾರ, ಪ್ರಾಣಿಜನ್ಯ ಕೊಬ್ಬು ಕೆಟ್ಟದ್ದೆಂದು ಸಂಸ್ಕರಿತ ಖಾದ್ಯ ತೈಲ, ಕರಿದು ತಿನ್ನಬಾರದೆಂದು ವಿಶೇಷ ಅಡುಗೆ ಉಪಕರಣಗಳು –ಹೆದರಿಸಿ ಮಾರುವ ವಸ್ತುಗಳ ಪಟ್ಟಿ ಬಲು ದೊಡ್ಡದು.

ಅತಿ ಸಂಕೀರ್ಣವಾಗಿರುವ, ಹಲವು ತರಹದ ಅನಿಶ್ಚಿತತೆಗಳಿರುವ ವೈದ್ಯಕೀಯ ಕ್ಷೇತ್ರದಲ್ಲಂತೂ ಭಯ ಹುಟ್ಟುವುದು, ಹುಟ್ಟಿಸುವುದು ತೀರಾ ಸಾಮಾನ್ಯವಾಗಿದೆ. ಈಗಿನ ತಾಜಾ ಉದಾಹರಣೆಯೆಂದರೆ ಹೊಸ ಕೊರೊನಾ ವೈರಸ್ ಸೋಂಕಿನ ಮಹಾಭೀತಿ. ಈ ವೈರಸ್ಸಿನ ಸೋಂಕು ಅಷ್ಟೇನೂ ಭೀಕರವಲ್ಲದಿದ್ದರೂ, ಅದರ ಹೆಸರಲ್ಲಿ ಹುಟ್ಟಿಸಿರುವ ಭಯವು ಅತಿ ಭೀಕರವಾದುದು. ದೇಶ -ದೇಶಗಳಲ್ಲಿ ಮಾರುಕಟ್ಟೆಗಳನ್ನೂ, ಶಾಲೆ -ಕಾಲೇಜು -ಕಚೇರಿಗಳನ್ನೂ ಮುಚ್ಚಿಸಿ, ವಿಶ್ವದ ಆರ್ಥಿಕತೆಯನ್ನೇ ಮುಳುಗಿಸುವಷ್ಟು ಭೀಕರವಾದ ಭೀತಿಯದು.

ಚೀನಾದಲ್ಲಿ ಕೊರೊನಾ ವೈರಸ್‌ನ ಹೊಸ ವಿಧವೊಂದನ್ನು ಗುರುತಿಸಿ ಮೂರು ತಿಂಗಳಾಗಿವೆ. ಅಲ್ಲಿ ಸೋಂಕಿತರಾದ 80 ಸಾವಿರದಷ್ಟು ಪ್ರಕರಣಗಳಲ್ಲಿ ಶೇಕಡ 91ರಷ್ಟು ಮಂದಿ 30 ವರ್ಷಕ್ಕೆ ಮೇಲ್ಪಟ್ಟವರು. ಅವರಲ್ಲಿ ಶೇಕಡ 98ರಷ್ಟು ರೋಗಿಗಳು ಗುಣಮುಖರಾಗಿದ್ದಾರೆ. ಸೋಂಕು ಉಲ್ಬಣಿಸಿ ಮೃತರಾದವರಲ್ಲಿ ಶೇಕಡ 81ರಷ್ಟು 60 ವರ್ಷಕ್ಕೆ ಮೇಲ್ಪಟ್ಟವರು; ಶೇಕಡ 13ರಷ್ಟು ಮಂದಿ 50-59 ವರ್ಷದವರು. ಅಂದರೆ, ಈ ಹೊಸ ಕೊರೊನಾ ಸೋಂಕು 50 ವರ್ಷಗಳಿಗಿಂತ ಹೆಚ್ಚು ವಯಸ್ಸಾದವರಲ್ಲಷ್ಟೇ ಸಮಸ್ಯೆ ಉಂಟು ಮಾಡುತ್ತಿದೆ. ಅವರಲ್ಲೂ ಶೇಕಡ 93ರಷ್ಟು ಸೋಂಕಿತರು ಯಾವುದೇ ಸಮಸ್ಯೆಗಳಿಲ್ಲದೆ ಗುಣಮುಖರಾಗುತ್ತಾರೆ. ಹಾಗಿದ್ದರೂ ಈ ಸೋಂಕಿನ ಬಗ್ಗೆ ಭಯ ಹುಟ್ಟಿಸಿ ಇಡೀ ವಿಶ್ವವನ್ನೇ ಬಂಧಿಸಿ ಇಡುತ್ತಿರುವುದೇಕೆ? ಇದರ ಹಿಂದೆ ಯಾವುದಾದರೂ ಹುನ್ನಾರವಿದೆಯೇ? ಇದೆ ಎಂದಾದರೆ, ಆರೋಗ್ಯ ಸೇವೆ, ಅರ್ಥ ವ್ಯವಸ್ಥೆ ಮೇಲೆ ಹೀಗೆ ಅಪಾರವಾದ ಒತ್ತಡವುಂಟು ಮಾಡುವುದರಿಂದ ಸಾಧಿಸುವುದೇನು?

ಈ ಪ್ರಶ್ನೆಗಳಿಗೆ ಸುಲಭವಾದ ಉತ್ತರಗಳಿಲ್ಲ. ಈಗಷ್ಟೇ ಗುರುತಿಸಲ್ಪಟ್ಟ ಕೊರೊನಾ ವೈರಸಿನ ಹೊಸ ವಿಧವು ಹೇಗೆ ವರ್ತಿಸಬಹುದೆನ್ನುವ ಬಗ್ಗೆ ಖಚಿತವಾಗಿ ಏನನ್ನೂ ಅಂದಾಜಿಸಲಾಗದ ನೈಜ ಆತಂಕವೇ ಈ ಮಟ್ಟದ ಎಚ್ಚರಿಕೆಗಳನ್ನು ವಿಧಿಸಲು ಕಾರಣವಾಗಿರಬಹುದು. ಅಂತಹ ಆರಂಭಿಕ ಕ್ರಮಗಳು ಅತಿಯಾದ ಪ್ರಚಾರ ಪಡೆದು, ಊರೂರುಗಳ ‘ಒಗ್ಗರಣೆ ತಜ್ಞ’ರ ಅತಿ ವಿಶೇಷ ಸಲಹೆಗಳೂ ಅವುಗಳೊಡನೆ ಸೇರಿಕೊಂಡು, ಬೆರಳೊತ್ತಿ ಸಂದೇಶ ರವಾನಿಸುವ ಹೊಸ ಮಾಧ್ಯಮಗಳಲ್ಲಿ ಎಗ್ಗಿಲ್ಲದೆ ಹರಡಿರಬಹುದು. ಹೀಗೆ ಭೀತಿ ಹಬ್ಬಿದಾಗ ಎಲ್ಲರ ಮೇಲೂ ಒತ್ತಡ ಇನ್ನಷ್ಟು ಹೆಚ್ಚುತ್ತದೆ, ಗೊಂದಲಗಳೂ ಹೆಚ್ಚುತ್ತವೆ. ಅನಗತ್ಯವಾದ ವಿಪರೀತ ಕ್ರಮಗಳಿಗೆ ಕಾರಣವಾಗುತ್ತದೆ.

ಹೀಗೆ ಆರೋಗ್ಯದ ಕುರಿತು ಭೀತಿ ಹರಡಿದಾಗ ಅದರಲ್ಲಿ ತಮ್ಮ ಲಾಭ ಮಾಡಲು ಹೊರಡುವವರು ಎಲ್ಲ ಕಾಲದಲ್ಲೂ ಇದ್ದೇ ಇರುತ್ತಾರೆ. ಈಗ ಕೊರೊನಾ ಮಹಾಭೀತಿಯ ಸನ್ನಿವೇಶವನ್ನು ನೋಡಿದರೆ ಮುಖಕವಚ, ಸೋಪು, ಕ್ರಿಮಿನಾಶಕ ಇತ್ಯಾದಿ ಮಾಡುವವರು, ಮಾರುವವರು; ಆಯುರ್ವೇದದ ಬಳ್ಳಿ-ಕಷಾಯ ಕುಡಿಸುವವರು; ಹೋಮಿಯೊಪತಿಯ ಗುಳಿಗೆಯವರು; ಗೋಮೂತ್ರ- ಸಗಣಿಗಳ ವಕ್ತಾರರು ಈ ಮಾರಾಟದ ಸಂತೆಯಲ್ಲಿ ಸೇರಿಕೊಂಡಿದ್ದಾರೆ. ನಮಸ್ತೇ ಭಕ್ತರು, ಕೈ-ಕಾಲು ತೊಳೆಯುವುದರ ಆರಾಧಕರು, ಬುರ್ಖಾ ಪ್ರೇಮಿಗಳು ಕೂಡ ಒಂದಷ್ಟು ಪ್ರಚಾರ ಪಡೆಯುವುದಕ್ಕೆ ಜೊತೆಗೂಡಿದ್ದಾರೆ.

ಲಸಿಕೆ ತಯಾರಿಸುವ ಕಂಪನಿಗಳವರು ಧ್ವನಿಗೂಡಿಸಿ, ಒಂದೆರಡು ವಾರಗಳಲ್ಲೇ, ಯಾವುದೇ ಲಸಿಕೆಯನ್ನು ತಯಾರಿಸದೆಯೂ, ತಮ್ಮ ಕಂಪನಿಗಳ ಪಾಲು ಪತ್ರದ ಮೌಲ್ಯ ದುಪ್ಪಟ್ಟಾಗುವಂತೆ ನೋಡಿಕೊಂಡಿದ್ದಾರೆ. ಇನ್ನು ಕೆಲವು ಕಂಪನಿಗಳವರು ಯಾವುದೋ ಉರಿಯೂತ ತಡೆಯಲೆಂದು ತಯಾರಿಸಿ ಮೂಲೆ ಸೇರಿದ್ದ ಹೊಚ್ಚ ಹೊಸ ಬಗೆಯ ಔಷಧಿಗಳನ್ನು ಈ ರೋಗಿಗಳಲ್ಲಿ ಬಳಸಲು ನೀಡಿ, ಅವನ್ನು ಪರೀಕ್ಷಿಸಿಕೊಳ್ಳುವುದಷ್ಟೇ ಅಲ್ಲ, ಅದಕ್ಕೆ ಪ್ರಚಾರವನ್ನೂ ಕೊಟ್ಟು, ತಮ್ಮ ಕಂಪನಿಯ ವರ್ಚಸ್ಸಿಗೆ ಹೊಳಪು ನೀಡಿಕೊಂಡಿದ್ದಾರೆ. ತಮ್ಮ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಕೊರೊನಾ ಸೋಂಕಿಗೆ ಇಷ್ಟೊಂದು ಅಬ್ಬರದ ಪ್ರಚಾರ ದೊರೆತಿರುವುದರಿಂದ ಅದರ ಪತ್ತೆಗೆ ಪರೀಕ್ಷಾ ಸಾಧನಗಳನ್ನು ತಯಾರಿಸುವವರಿಗೆ ಇನ್ನು ಎಂದೆಂದಿಗೂ ಒಳ್ಳೆಯ ವಹಿವಾಟು ಮುಂದುವರಿಯಲಿದೆ.

‘ಇವೆಲ್ಲವೂ ಸುಯೋಜಿತವಾದ ಕುಟಿಲ ತಂತ್ರದ ಭಾಗಗಳೇ ಆಗಿವೆ’ ಎಂದು ಸಾರಾಸಗಟಾಗಿ ಹೇಳುವುದು ಸರಿಯಲ್ಲ. ಭೀತಿ ಹುಟ್ಟುವುದು ಅನಿಶ್ಚಿತತೆಗಳ ಸಹಜ ಪರಿಣಾಮ ಇರಲೂಬಹುದು. ಆ ಸಣ್ಣ ಬೆಂಕಿಗೆ ತರಗೆಲೆ, ಕಟ್ಟಿಗೆ, ಎಣ್ಣೆ, ತುಪ್ಪ ಹಾಕಿ ದೊಡ್ಡದಾಗಿಸಿ ಹಬ್ಬಿಸುವುದು ಸಮೂಹ ಮಾಧ್ಯಮಗಳು; ಆ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವುದು ಲಾಭಬಡುಕ ಕಂಪನಿಗಳು. ಇವನ್ನೆಲ್ಲ ಸೂಕ್ಷ್ಮವಾಗಿ ವಿವೇಚಿಸಿ ನಿಯಂತ್ರಿಸಬೇಕಾದ ಸರ್ಕಾರಗಳೂ, ಜವಾಬ್ದಾರಿಯುತ ಸಂಸ್ಥೆಗಳೂ ಈ ಬೆಂಕಿಯಲ್ಲಿ ಬಿದ್ದುಬಿಟ್ಟರೆ ಅಥವಾ ಈ ಕಂಪನಿಗಳ ಪಾಶಕ್ಕೆ ಸಿಕ್ಕಿಕೊಂಡರೆ ಜನಸಾಮಾನ್ಯರು ಏನು ಮಾಡಲಾದೀತು?

ಇಂತಹ ಭೀತಿ ಮತ್ತು ಅದರಿಂದ ಜನಸಾಮಾನ್ಯರಿಗೆ ಆಗುವ ತೊಂದರೆ, ಗೊಂದಲಗಳು ಕೊರೊನಾದಂತಹ ಹೊಸ ಸಮಸ್ಯೆಗಳಿಗಷ್ಟೇ ಸೀಮಿತವಾಗಿಲ್ಲ. ಹತ್ತು ವರ್ಷಗಳ ಹಿಂದೆ ಎಚ್1ಎನ್1 ಫ್ಲೂ ಕಂಡುಬಂದಾಗಲೂ ಇದೇ ರೀತಿ ಭಯ ಹುಟ್ಟಿಸಿ ಫ್ಲೂ ನಿರೋಧಕ ಟಾಮಿಫ್ಲು ಔಷಧಿಯ ವಹಿವಾಟು ಮೂರು ತಿಂಗಳಲ್ಲಿ 10-12 ಪಟ್ಟು ಹೆಚ್ಚಿ ಸುಮಾರು 300 ಕೋಟಿ ಡಾಲರ್‌ಗಳಷ್ಟಾಗಿತ್ತು. ಫ್ಲೂ ಲಸಿಕೆಯ ವಹಿವಾಟು 100 ಕೋಟಿ ಡಾಲರ್‌ಗಳಷ್ಟಾಗಿತ್ತು. ಅಷ್ಟೆಲ್ಲ ಆಗಿ 9-10 ತಿಂಗಳ ಬಳಿಕ ಅಷ್ಟೊಂದು ಭೀತಿ ಹುಟ್ಟಿಸಿದ್ದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೇ ಕ್ಷಮೆಯಾಚಿಸಿತು!

ಐವತ್ತರ ದಶಕದಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದ್ರೋಗ ಇತ್ಯಾದಿ ಸೋಂಕಲ್ಲದ ಕಾಯಿಲೆಗಳು ಏರತೊಡಗಿದವು. ಇವಕ್ಕೆ ಕಾರಣಗಳ ಬಗ್ಗೆ ಚರ್ಚೆಗಳಾಗುತ್ತಿದ್ದಂತೆಯೇ ಕೊಬ್ಬು ಸೇವನೆ ಕಾರಣವೆಂದವರ ಬೆನ್ನಿಗೆ ಸಂಸ್ಕರಿತ ಆಹಾರದ ಉತ್ಪಾದಕರು ನಿಂತು, ಅದನ್ನೇ ನಿಜವೆಂದು ಬಿಂಬಿಸಲಾಯಿತು. ಸಕ್ಕರೆ ಕಾರಣ ಎಂದವರನ್ನು ಹೊರದಬ್ಬಲಾಯಿತು. ಅಲ್ಲಿಂದೀಚೆಗೆ ಈ ಏಳು ದಶಕಗಳಲ್ಲಿ ಕಡಿಮೆ ಕೊಬ್ಬಿನ, ಹೆಚ್ಚು ಸಕ್ಕರೆಯ ಆಹಾರಗಳನ್ನು ತಯಾರಿಸಿ ಮಾರುವ ಉದ್ಯಮವು ವರ್ಷಕ್ಕೆ ನಾಲ್ಕೈದು ಕೋಟಿಯ ವಹಿವಾಟು ನಡೆಸುವಷ್ಟು ಬೆಳೆದಿದೆ. ಈ ಕಡಿಮೆ ಕೊಬ್ಬು- ಹೆಚ್ಚು ಸಕ್ಕರೆಯ ತಿನಿಸುಗಳನ್ನು ತಿಂದು ತಿಂದು ಬೊಜ್ಜು, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದ್ರೋಗ, ಪಾರ್ಶ್ವವಾಯು, ವಿವಿಧ ಕ್ಯಾನ್ಸರ್‌ಗಳು ಈಗ ಹಲವು ಪಟ್ಟು ಹೆಚ್ಚಿವೆ.

ಕಾಯಿಲೆಗಳನ್ನು ಹೆಚ್ಚಿಸುವ ವಹಿವಾಟು ಬೆಳೆದಂತೆ ಈ ಕಾಯಿಲೆಗಳ ಪತ್ತೆ ಹಾಗೂ ಚಿಕಿತ್ಸೆಯ ವಹಿವಾಟು ಕೂಡ ಬೆಳೆಯುತ್ತಲೇ ಸಾಗಿದೆ. ಸಕ್ಕರೆ ಕಾಯಿಲೆಯ ಪತ್ತೆಯ ಸಾಧನಗಳ ವಹಿವಾಟು ಈಗ ವರ್ಷಕ್ಕೆ 2,300 ಕೋಟಿ ಡಾಲರ್‌ಗಳಷ್ಟಿದ್ದರೆ, ಚಿಕಿತ್ಸೆಗೆ ಬಳಸುವ ಔಷಧಿಗಳ ವಹಿವಾಟು 4,300 ಕೋಟಿ ಡಾಲರ್‌ಗಳಷ್ಟಿದೆ. ರಕ್ತದೊತ್ತಡವನ್ನು ನಿಯಂತ್ರಿಸುವ ಔಷಧಿಗಳು ವರ್ಷಕ್ಕೆ 2400 ಕೋಟಿ ಡಾಲರ್‌ಗಳಷ್ಟು ಮಾರಾಟವಾಗುತ್ತಿದ್ದರೆ, ಹೃದ್ರೋಗದ ಚಿಕಿತ್ಸೆಯ ವ್ಯಾಪಾರವು 2,300 ಕೋಟಿ ಡಾಲರ್‌ಗಳಷ್ಟಿದೆ. ಕಾಯಿಲೆಗಳನ್ನು ಹುಡುಕುವ ಹೆಸರಲ್ಲಿ ಫುಲ್ ಬಾಡಿ ಟೆಸ್ಟ್, ಎಕ್ಸಿಕ್ಯೂಟಿವ್ ಟೆಸ್ಟ್, ವಿಟಮಿನ್ ಡಿ ಪರೀಕ್ಷೆ, ಯಾವುದೇ ರೋಗಲಕ್ಷಣಗಳು ಇಲ್ಲದವರಿಗೂ ಎಕ್ಸ್ ರೇ, ಸ್ಕಾನಿಂಗ್, ಇಸಿಜಿ ಇತ್ಯಾದಿ ಪರೀಕ್ಷೆಗಳನ್ನು ನಡೆಸುವುದು ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾಗುತ್ತಿವೆ. ಈ ಕಾಯಿಲೆಗಳನ್ನು ತಡೆಯುವ ಹೆಸರಲ್ಲಿ ಬಗೆಬಗೆಯ ವ್ಯಾಯಾಮಗಳನ್ನು, ಯೋಗದ ಹೆಸರಲ್ಲಿ ಇನ್ನೊಂದಷ್ಟು ವ್ಯಾಯಾಮಗಳನ್ನು ಮಾರಾಟ ಮಾಡಲಾಗುತ್ತಿದೆ. ಇಂತಹ ಜೀವನಶೈಲಿ ಇತ್ಯಾದಿಗಳನ್ನು ಕಲಿಸುವ ತಥಾಕಥಿತ ‘ಶಾಲೆಗಳು’, ‘ಧಾಮಗಳು’ ಕೂಡ ವರ್ಷಕ್ಕೆ 9,500 ಕೋಟಿ ಡಾಲರ್ ವಹಿವಾಟು ನಡೆಸುತ್ತಿವೆ.

ಅನಗತ್ಯವಾದ ಪರೀಕ್ಷೆಗಳು, ಅತಿಯಾದ ಅಥವಾ ಅನಗತ್ಯವಾದ ಔಷಧಗಳ ಬಳಕೆ, ಅನಗತ್ಯವಾದ ಚಿಕಿತ್ಸಾಕ್ರಮಗಳು ಹಾಗೂ ಶಸ್ತ್ರಕ್ರಿಯೆಗಳು ಬೇರೆ ಬೇರೆ ದೇಶಗಳಲ್ಲಿ, ಬೇರೆ ಬೇರೆ ರೋಗಗಳ ಹೆಸರಲ್ಲಿ ಶೇಕಡ 10ರಿಂದ 80ರಷ್ಟು ಪ್ರಮಾಣದಲ್ಲಿ ನಡೆಯುತ್ತವೆ ಎಂದು ಅಂದಾಜಿಸಲಾಗಿದೆ. ಆರೋಗ್ಯ ಸೇವೆಗಳಿಗೆ ಅತಿಹೆಚ್ಚು ವ್ಯಯಿಸುವ ಅಮೆರಿಕದಲ್ಲಿ ಇಂಥ ಅನಗತ್ಯವಾದ, ಅತಿಯಾದ ಬಳಕೆಗೆ ವರ್ಷಕ್ಕೆ 30,000 ಕೋಟಿ ಡಾಲರ್ ವೆಚ್ಚವಾಗುತ್ತಿದೆ ಎಂದೂ, ಅವುಗಳ ಅಡ್ಡ ಪರಿಣಾಮಗಳಿಂದ ಸುಮಾರು 30,000 ಸಾವುಗಳಾಗುತ್ತಿವೆ ಎಂದೂ ಇತ್ತೀಚಿನ ವರದಿಯೊಂದು ಅಂದಾಜಿಸಿದೆ.

ಇವೆಲ್ಲವೂ ಕೇವಲ ವ್ಯಾಪಾರವನ್ನು ಹೆಚ್ಚಿಸುವ ಕಾರಣಕ್ಕಷ್ಟೇ ನಡೆಯುತ್ತಿವೆ ಎಂದು ಸಾರಾಸಗಟಾಗಿ ಹೇಳಲಾಗದು. ಆದರೆ, ಕಾಯಿಲೆಗಳು ಉಂಟಾಗುವುದಕ್ಕೆ ಕಾರಣಗಳ ಬಗ್ಗೆ ಹೊಸ ಅರಿವು ದೊರೆತಾಗ ಅದನ್ನು ಅದುಮಿಟ್ಟು ಲಾಭದಾಯಕವಾದ ಹಳೆಯ ಸಿದ್ಧಾಂತಗಳನ್ನೇ ಮುಂದುವರಿಸುವುದು; ಹೊಸ ಹೊಸ ಔಷಧಿಗಳನ್ನು, ಪರೀಕ್ಷೆಗಳನ್ನು ಕಂಡುಹಿಡಿದ ಕೂಡಲೇ ಅವು ಅಗತ್ಯವಿಲ್ಲದಿದ್ದರೂ ಅವನ್ನೇ ಮುಂದೊತ್ತುವುದು; ಸುಲಭದಲ್ಲಿ ಪತ್ತೆ ಹಚ್ಚಬಹುದಾದ, ಚಿಕಿತ್ಸೆ ನೀಡಬಹುದಾದ ಸಮಸ್ಯೆಗಳಿಗೆ ವಿಪರೀತ ವೆಚ್ಚದ ಪರೀಕ್ಷೆಗಳನ್ನೂ, ಚಿಕಿತ್ಸೆಗಳನ್ನೂ ನಡೆಸುವುದು ಸಂಶಯಗಳಿಗೆ ಕಾರಣವಾಗುತ್ತದೆ.

ಕೆಲವು ಸಲ ವೈದ್ಯರೊಳಗಿರುವ ಅನಿಶ್ಚಿತತೆ, ಆತಂಕ, ಗೊಂದಲ, ಭಯಗಳು ಕೂಡ ಅನಗತ್ಯವಾದ ಪರೀಕ್ಷೆ ಹಾಗೂ ಚಿಕಿತ್ಸೆಗಳಿಗೆ ಕಾರಣವಾಗುತ್ತವೆ. ಇಂಥವನ್ನು ಕೆಲವೊಮ್ಮೆ ರೋಗಿಯ ಹಿತಾಸಕ್ತಿಯನ್ನು ಕಾಯುವುದಕ್ಕೆಂದು ನಡೆಸಿರುವ ಸಾಧ್ಯತೆಗಳೂ ಇರುತ್ತವೆ. ಕೆಲಸ ಮಾಡುತ್ತಿದ್ದಂತೆ ಎದೆನೋವು ಬಳಲಿಕೆ ಇದ್ದವರಿಗೆ ಇಸಿಜಿ ಮಾಡಿ, ನಂತರ ಆಂಜಿಯೋಗ್ರಾಂ ಮಾಡಿಸಲು ಸಲಹೆ ನೀಡುವುದು ಇದಕ್ಕೊಂದು ಉದಾಹರಣೆ. ಅಂಥವರಲ್ಲಿ ಹೃದ್ರೋಗಕ್ಕೆ ಪರೀಕ್ಷೆ ನಡೆಸದೆ ಬಿಟ್ಟು ಹೃದಯಾಘಾತವಾದರೆ ವೈದ್ಯರು ನಿರ್ಲಕ್ಷಿಸಿದರೆಂಬ ಆರೋಪ, ಪರೀಕ್ಷೆ ನಡೆಸಿ ಎಲ್ಲವೂ ಸರಿಯಿದೆಯೆಂದು ಕಂಡುಬಂದರೆ ಸುಮ್ಮಸುಮ್ಮನೇ ಪರೀಕ್ಷೆ ನಡೆಸಿದರೆಂಬ ಆರೋಪ – ಇವೆರಡರ ಸಂದಿಗ್ಧತೆಯಲ್ಲಿ ವೈದ್ಯರು ತಮ್ಮ ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ. ವೈದ್ಯರು ಇಂತಹ ಹಲವು ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ.

ಮನುಷ್ಯನ ದೇಹ ಮತ್ತು ಅದಕ್ಕೆ ತಗಲುವ ರೋಗಗಳು ಅತಿ ಸಂಕೀರ್ಣವಾಗಿರುವುದರಿಂದ ವೈದ್ಯಕೀಯ ನಿರ್ಣಯಗಳು ಸಂಶಯಗಳನ್ನೂ, ಗೊಂದಲಗಳನ್ನೂ, ಭಯವನ್ನೂ ಮೂಡಿಸುವುದು ಸಹಜವೇ ಆಗಿದೆ. ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ಖಾಸಗೀಕರಣ ಹಾಗೂ ವ್ಯಾಪಾರೀಕರಣಗಳು ವೈದ್ಯಕೀಯ ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತಿರುವುದರಿಂದ ಜನಸಾಮಾನ್ಯರು ವೈದ್ಯರ ಮೇಲಿಟ್ಟಿರುವ ವಿಶ್ವಾಸಕ್ಕೆ ಧಕ್ಕೆಯಾಗಿದೆ. ಆದ್ದರಿಂದ ಎಲ್ಲರೂ ತಮ್ಮ ವಿವೇಚನೆಯನ್ನು ಬಳಸಿ ಜಾಗರೂಕರಾಗಿದ್ದರೆ ಮೋಸ ಹೋಗುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು.

ತಾವಾಗಿ ಪರೀಕ್ಷಾಲಯಗಳಲ್ಲಿ ‘ಫುಲ್ ಬಾಡಿ ಟೆಸ್ಟ್’ ಇತ್ಯಾದಿಯನ್ನು ಮಾಡಿಸುವ ಬದಲು, ತಮ್ಮ ದೇಹದಲ್ಲಿ ಕಂಡುಬರುವ ಬದಲಾವಣೆಗಳನ್ನು, ರೋಗಲಕ್ಷಣಗಳನ್ನು ಸೂಕ್ಷ್ಮವಾಗಿ ಗುರುತಿಸಿಕೊಂಡು, ತಜ್ಞ ವೈದ್ಯರಲ್ಲಿ ಪರೀಕ್ಷಿಸಿಕೊಂಡು ಅವರು ಸೂಚಿಸುವ ಪರೀಕ್ಷೆಗಳನ್ನಷ್ಟೇ ಮಾಡಿಸಿಕೊಳ್ಳುವುದು ಒಳ್ಳೆಯದು. ವೈದ್ಯರು ಸೂಚಿಸಿದ ಪರೀಕ್ಷೆಗಳಾಗಲೀ, ಚಿಕಿತ್ಸೆಗಳಾಗಲೀ ಅತಿ ದುಬಾರಿಯೆಂದೆನಿಸಿದರೆ, ಇನ್ನೋರ್ವ ತಜ್ಞ ವೈದ್ಯರ ಅಭಿಪ್ರಾಯ ಕೇಳಬಹುದು. ಮೂರನೇ ಸ್ತರದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯರಿರುವ ತಜ್ಞರನ್ನೂ ಕಾಣಬಹುದು. ಇನ್ನೂ ವಿಶೇಷ ತಜ್ಞರ ಅಗತ್ಯವಿದ್ದರೆ ನಿಮ್ಹಾನ್ಸ್, ಜಯದೇವ ಆಸ್ಪತ್ರೆಗಳಂತಹ ಅತ್ಯುನ್ನತ ಸರ್ಕಾರಿ ಆಸ್ಪತ್ರೆಗಳ ಸೇವೆಯನ್ನು ಪಡೆಯಬಹುದು. ಹೃದಯಾಘಾತ, ರಸ್ತೆ ಅಪಘಾತಗಳಂತಹ ಸಂದರ್ಭಗಳಲ್ಲಿ ಜೀವಕ್ಕೆ ಅಪಾಯ ಒದಗುವಂತಿದ್ದರೆ ಹತ್ತಿರದ ಸುಸಜ್ಜಿತ ಆಧುನಿಕ ಆಸ್ಪತ್ರೆಗೆ ಹೋಗಬೇಕು. ಅತ್ತಿಂದಿತ್ತ ಹುಡುಕುವಲ್ಲಿ ಸಮಯ ಕಳೆಯಬಾರದು.

ಆಧುನಿಕ ವೈದ್ಯ ವಿಜ್ಞಾನವು ಗುರುತಿಸುವ ಯಾವುದೇ ಕಾಯಿಲೆಗೆ ನಕಲಿ ಚಿಕಿತ್ಸಕರಿಂದ ಚಿಕಿತ್ಸೆಯನ್ನಾಗಲೀ, ಸಲಹೆಯನ್ನಾಗಲೀ ಪಡೆಯುವುದರಿಂದ ಪ್ರಯೋಜನವಾಗದು. ಗೂಗಲ್, ವಾಟ್ಸ್‌ಆ್ಯಪ್, ಟಿ.ವಿ, ಪತ್ರಿಕೆಗಳು ಮತ್ತು ಅವರಿವರು ಒದಗಿಸುವ ಮಾಹಿತಿಯನ್ನು ಕಡೆಗಣಿಸುವುದೇ ಒಳ್ಳೆಯದು. ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಸದಾಕಾಲಕ್ಕೂ ಜತನದಿಂದ ರಕ್ಷಿಸಿಟ್ಟುಕೊಂಡರೆ ಪದೇ ಪದೇ ಪರೀಕ್ಷೆಗಳನ್ನು ಮಾಡುವುದನ್ನು, ಅವಕ್ಕೆ ಖರ್ಚು ಮಾಡುವುದನ್ನು ತಪ್ಪಿಸಬಹುದು. ಒಂದಷ್ಟು ಧೈರ್ಯ, ಸಾಮಾನ್ಯ ಪ್ರಜ್ಞೆ, ವೈಚಾರಿಕ-ವೈಜ್ಞಾನಿಕ ಮನೋವೃತ್ತಿ ಇದ್ದರೆ ದೈಹಿಕ- ಮಾನಸಿಕ- ಆರ್ಥಿಕ ಆರೋಗ್ಯಗಳನ್ನು ಕ್ವಚಿತ್ತಾಗಿ ಕಾಪಾಡಿಕೊಳ್ಳಲು ಸಾಧ್ಯವಿದೆ. ಮುಖ್ಯವಾಗಿ ‘ಭಯದ ವ್ಯಾಪಾರಿ’ಗಳಿಂದ ದೂರವಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT