ಬುಧವಾರ, ಜೂನ್ 16, 2021
23 °C

ಕೊರೊನಾ ಸೋಂಕಿತ ಅಮ್ಮಂದಿರು ಮಗುವಿಗೆ ಹಾಲುಣಿಸಬಹುದೇ: ಇಲ್ಲಿದೆ ಉತ್ತರ

ಡಾ. ಸ್ಮಿತಾ ಜೆ.ಡಿ. Updated:

ಅಕ್ಷರ ಗಾತ್ರ : | |

ತಾಯಿಯ ಎದೆಹಾಲನ್ನು ಅಮೃತಕ್ಕೆ ಹೋಲಿಸಲಾಗುತ್ತದೆ. ತಾಯಿಯ ಎದೆ ಹಾಲಿನಲ್ಲಿ ಮಗುವಿನ ಬೆಳವಣಿಗೆ ಹಾಗೂ ಆಂತರಿಕ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಎಲ್ಲಾ ಅಂಶಗಳು ಸಮತೋಲನವಾಗಿ ಹೊಂದಿರುತ್ತದೆ. ತಾಯಿಯು ಎದೆ ಹಾಲನ್ನು ಉಣಿಸುವಾಗ ಕೊಡುವ ಬೆಚ್ಚನೆಯ ಅಪ್ಪುಗೆಯು ತಾಯಿ ಹಾಗೂ ಮಗುವಿನ ಜೀವಿತಾವಧಿಯ ಭಾವನಾತ್ಮಕ ಭಾಂಧವ್ಯಕ್ಕೆ ಕಾರಣವಾಗುತ್ತದೆ. ಇದನ್ನು 'ಕ್ಯಾಂಗರೂ ಪರಿಕಲ್ಪನೆ' ಅಂದರೆ ಕ್ಯಾಂಗರೋ ಪ್ರಾಣಿಯು ಹೇಗೆ ತನ್ನ ಮರಿಯನ್ನು ತನ್ನ ಶರೀರದಲ್ಲಿನ ಕವಚದಲ್ಲಿ ಬೆಚ್ಚಗೆ ಸಂರಕ್ಷಿಸುತ್ತದೆಯೋ ಹಾಗೆ ತಾಯಿಯು ಹಾಗೂ ಮಗುವಿನ ಭಾಂಧವ್ಯ ವೃದ್ಧಿಗೆ ಎದೆ ಹಾಲುಣಿಸುವುದು ಅಷ್ಟೇ ಮುಖ್ಯವಾಗುತ್ತದೆ. ಮಗುವು ಜನಿಸಿದಾಗಿನಿಂದ ಆರು ತಿಂಗಳವರೆಗೂ ವಿಶೇಷವಾಗಿ ತಾಯಿಯ ಹಾಲನ್ನು ಬಿಟ್ಟು ಬೇರೆ ಯಾವ ಆಹಾರದ ಅವಶ್ಯಕತೆ ಇರುವುದಿಲ್ಲ. ಅದರಲ್ಲಿನ ಅನನ್ಯ ಸೂತ್ರವು ಮಗುವಿಗೆ ಬೇಕಾದ ಎಲ್ಲಾ ಪೌಷ್ಟಿಕಾಂಶವನ್ನು ಒದಗಿಸಬಲ್ಲದ್ದಾಗಿದೆ. ಆದರೆ ಕೋವಿಡ್-19 ಸೋಂಕಿತ ತಾಯಂದಿರು ತಮ್ಮ ಎದೆ ಹಾಲನ್ನು ಮಗುವಿಗೆ ಉಣಿಸಬಹುದೇ? ಎಂಬ ಪ್ರಶ್ನೆಯು ಅನೇಕ ಸೋಂಕಿತ ತಾಯಂದಿರನ್ನು ಕಾಡುತ್ತಿದೆ.

ಕೋವಿಡ್-19 ಸೋಂಕಿತ ತಾಯಂದಿರು ಮಗುವಿಗೆ ಹಾಲುಣಿಸಬಹುದೇ ? 

*ಅಧ್ಯಯನಗಳ ಪ್ರಕಾರ ತಾಯಿಯ ಹಾಲಿನಿಂದ ಸೋಂಕು ಮಗುವಿಗೆ ಹರಡುವುದು ಎಂಬುದಕ್ಕೆ ಪುರಾವೆಗಳಿಲ್ಲ. 

*ತಾಯಿಯ ಹಾಲು ಮಗುವಿಗೆ ಅನೇಕ ತರಹದ ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ.

*ಕೋವಿಡ್-19 ಸೋಂಕಿತ ತಾಯಿಯು ಎದೆ ಹಾಲಿನ ಮೂಲಕ ಕಾಯಿಲೆಯನ್ನು ಮಗುವಿಗೆ ಹರಡುವ ಸಂಭವ ಅತಿ ವಿರಳ.

*ಪಾಶ್ಚರೀಕರಿಸಿದ ದಾನಿ ತಾಯಿಯ ಹಾಲನ್ನು ಅವಧಿ ಪೂರ್ವ ಜನಿಸಿದ ಮಗುವಿಗೆ ನೀಡಬಹುದಾಗಿದೆ.

*ಎದೆ ಹಾಲಿನ ಪಾಶ್ಚರೀಕರಣವು ಕೋವಿಡ್-19 ಸೋಂಕಿಗಿಂತ ಅನ್ಯ ಸಮಾನ ರೀತಿಯ ಸೋಂಕಿಗೆ ಕಾರಣವಾಗುವ ಸೂಕ್ಷ್ಮಜೀವಿಗಳನ್ನು ನಾಶ ಮಾಡಬಲ್ಲದ್ದಾಗಿದೆ.

ಕೋವಿಡ್-19 ಸೋಂಕಿತ ತಾಯಂದಿರು ಎದೆ ಹಾಲನ್ನು ಉಣಿಸಲು ಮಾಡಬಹುದಾದದ್ದೇನು ?

*ಸೋಂಕಿತ ತಾಯಿಯು ತನ್ನ ಮನೆಯವರೊಂದಿಗೆ ಹಾಗೂ ವೈದ್ಯರೊಂದಿಗೆ ಈ ವಿಷಯವಾಗಿ ಸಮಾಲೋಚಿಸುವುದು ಉತ್ತಮ.

*ಸಮಾಲೋಚನೆಯಲ್ಲಿ ತಾಯಿ ತೆಗೆದುಕೊಳ್ಳಬೇಕಾದ ಮುಂಜಾಗರೂಕ ಕ್ರಮಗಳ ಬಗ್ಗೆ ಪೂರ್ಣ ಮಾಹಿತಿಯನ್ನು ಪಡೆಯಬಹುದು.

*ಹಾಲುಣಿಸುವುದಕ್ಕಿಂತ ಮೊದಲು ಹಾಗೂ ಮಗುವನ್ನು ಮುಟ್ಟುವ ಮೊದಲು ತನ್ನ ಕೈಗಳನ್ನು ಸಾಬೂನು ಹಾಗೂ ನೀರಿನಿಂದ 30 ಸೆಕೆಂಡುಗಳ ಕಾಲ ಸ್ವಚ್ಛಗೊಳಿಸಬೇಕು.

*ಸೋಪು ಹಾಗೂ ನೀರು ಇಲ್ಲದಿದ್ದಲ್ಲಿ ಶೇ 60ಕ್ಕಿಂತ ಹೆಚ್ಚು ಆಲ್ಕೋಹಾಲ್ ಇರುವ ಹ್ಯಾಂಡ್ ಸ್ಯಾನಿಟೈಸರ್ ಬಳಸಬಹುದು.

*ಹಾಲುಣಿಸುವಾಗ ಮಾಸ್ಕ್ ಧಾರಣೆ ಅತ್ಯಗತ್ಯ.

*ನೇರವಾಗಿ ಎದೆ ಹಾಲನ್ನು ಉಣಿಸುವ ಸ್ಥಿತಿಯಲ್ಲಿ ಇಲ್ಲದಿದ್ದ ಪಕ್ಷದಲ್ಲಿ ಎದೆ ಹಾಲನ್ನು ಸಂಗ್ರಹಿಸಲು ಬಳಸುವ ಪಂಪನ್ನು ಬಳಸಬಹುದಾಗಿದೆ.

*ಬಳಸಲಾಗುವ ಪಂಪನ್ನು ಸೋಂಕುರಹಿತ ಮಾಡಿಕೊಳ್ಳುವುದು ಅತ್ಯವಶ್ಯಕ.

*ಸೋಂಕಿತ ತಾಯಿಯು ಹಾಲುಣ ಸುವ ಪರಿಸ್ಥಿತಿಯಲ್ಲಿಲ್ಲದಿದ್ದಾಗ ತಾಯಿಯ ಹಾಲನ್ನು ದಾನ ಮಾಡುವ ತಾಯಂದಿರಿಂದ ಹಾಲನ್ನು ಪಡೆದು ಮಗುವಿಗೆ ನೀಡಬಹುದಾಗಿದೆ.

*ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನಗಳ ಪ್ರಕಾರ ಕೋವಿಡ್-19 ಸೋಂಕು ತಾಯಿಯ ಎದೆ ಹಾಲಿನಿಂದ ಮಗುವಿಗೆ ಹರಡುವುದರ ಬಗ್ಗೆ ಖಚಿತ ಮಾಹಿತಿ ಇಲ್ಲ.

*ತಾಯಿಯ ಎದೆ ಹಾಲಿನಲ್ಲಿರುವ ಆಂಟಿಬಾಡಿಸ್‍ಗಳು ಅನೇಕ ಕಾಯಿಲೆಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಒದಗಿಸಬಲ್ಲದಾಗಿದ್ದರಿಂದ ತಾಯಿಯ ಎದೆ ಹಾಲು ಮಗುವಿಗೆ ಅತ್ಯವಶ್ಯಕ.

*ತಾಯಿಯ ಹಾಗೂ ಮಗುವಿನ ಭಾಂಧವ್ಯಕ್ಕೆ ತಾಯಿಯು ಮಗುವಿಗೆ ಎದೆ ಹಾಲುಣಿಸುವುದು ಅತಿ ಅವಶ್ಯಕ.

*ತಾಯಿಯು ಹಾಲುಣಿಸುವಾಗ ತಾಯಿ ಮಗುವಿನ ಅಪ್ಪುಗೆಯ ಪ್ರಚೋದನೆಯು ಹಾಲು ಸ್ರವಿಸುವುದಕ್ಕೆ ಪೂರಕವಾಗಿರುವುದರಿಂದ ತಾಯಿ ಹಾಗೂ ಮಗುವಿನ ಶಾರೀರಿಕ ಸಂಪರ್ಕ ಅವಶ್ಯಕ.

*ಮಗುವಿನಲ್ಲಿ ಕೋವಿಡ್-19 ಸೋಂಕಿನ ಅಪಾಯ ಅತ್ಯಂತ ಕಡಿಮೆ ಇದ್ದು ರೋಗಲಕ್ಷಣಗಳು ಸೌಮ್ಯವಾಗಿರುವುದರಿಂದ ಕೋವಿಡ್-19 ಸೋಂಕಿನಿಂದ ತಾಯಿಯ ಎದೆ ಹಾಲನ್ನು ಉಣಿಸದೇ ಆಗುವ ದುಷ್ಪರಿಣಾಮಗಳು ಹೆಚ್ಚುವುದರಿಂದ ಎದೆ ಹಾಲುಣಿಸುವುದು ಮುಖ್ಯ.

ಆದುದರಿಂದ ತಾಯಿಯ ಎದೆ ಹಾಲು ಮಗುವಿನ ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಅತ್ಯವಶ್ಯಕವಾಗಿದ್ದು ಸೋಂಕಿತ ತಾಯಂದಿರು ಅವಶ್ಯಕವಿರುವ ಮುಂಜಾಗರೂಕತಾ ಕ್ರಮಗಳೊಂದಿಗೆ ಹಾಲುಣಿಸುವುದು ಮುಖ್ಯ.

-ಲೇಖಕರು: ಡಾ. ಸ್ಮಿತಾ ಜೆ.ಡಿ., ಹಿರಿಯ ದಂತ ಆರೋಗ್ಯ ಅಧಿಕಾರಿ, ಗುಂಡ್ಲುಪೇಟೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು