ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಕೋರ್ಮೈಕೋಸಿಸ್ ತಗುಲಿದಾಗ ಏನು ಮಾಡಬೇಕು? ಪತ್ತೆ ಹಚ್ಚುವುದು ಹೇಗೆ?

Last Updated 13 ಮೇ 2021, 7:08 IST
ಅಕ್ಷರ ಗಾತ್ರ

ಕೋವಿಡ್ ಸೋಂಕಿತರಲ್ಲಿ ಶಿಲೀಂಧ್ರ ಸೋಂಕು (ಮ್ಯೂಕೋರ್ಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್) ಎಂಬ ಅಪರೂಪದ ಕಾಯಿಲೆ ಕಾಣಿಸಿಕೊಳ್ಳುವುದು ಆತಂಕಕ್ಕೆ ಕಾರಣವಾಗಿದೆ. ಕೋವಿಡ್‌ನಿಂದ ಚೇತರಿಸಿಕೊಂಡವರು, ರೋಗನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಅತ್ಯಂತ ಅಪಾಯಕಾರಿ ಶಿಲೀಂಧ್ರ ಸೋಂಕು ಕಾಡುವ ಸಂಭವವಿದೆ.

ಕೋವಿಡ್-19 ರೋಗಿಗಳಲ್ಲಿ ಕಂಡುಬರುವ ಶಿಲೀಂಧ್ರ ಸೋಂಕಿನಲ್ಲಿ ಗಣನೀಯ ವರ್ಧನೆ ಕಂಡುಬಂದಿದೆ. ಮ್ಯೂಕೋರ್ಮೈಸೆಟ್ಸ್ ಎಂಬ ಫಂಗಸ್‌ಗಳಿಂದ ಉಂಟಾಗುವ ಗಂಭೀರ ಸೋಂಕು ಇದಾಗಿದೆ. ಇದು ಸಾಮಾನ್ಯವಾಗಿ ಮೂಗಿನ ಒಳಭಾಗ ಹಾಗೂ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ.

ಈ ಫಂಗಸ್ ಸಾಮಾನ್ಯವಾಗಿ ಮೂಗಿನ ಲೋಳೆಪೊರೆಯಲ್ಲಿ ಕಂಡುಬರುತ್ತದೆ. ಮಧುಮೇಹ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ರೋಗಿಗಳಲ್ಲಿ ಮೂಗು, ಕಣ್ಣು ಮತ್ತು ಮೆದುಳಿಗೆ ಹರಡಿಕೊಂಡು ಜೀವಕ್ಕೆ ಅಪಾಯಯಾರಿಯಾಗಬಲ್ಲದು. ಮೂಗಿನಿಂದ ರೈನೋಸೆರೆಬ್ರಲ್ ಮ್ಯೂಕೋರ್ಮೈಕೋಸಿಸ್ ಎಂಬ ಸೋಂಕು, ಮೆದುಳಿಗೆ ಹರಡುತ್ತದೆ. ಅನಿಯಂತ್ರಿತ ಮಧುಮೇಹ ಹಾಗೂ ಮೂತ್ರಪಿಂಡ ಕಸಿ ಮಾಡಿದ ರೋಗಿಗಳಲ್ಲಿ ಇದು ಸಾಮಾನ್ಯವಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿರುವ ಜನರಲ್ಲಿ ಶ್ವಾಸಕೋಶ ಸಮಸ್ಯೆ ಮತ್ತು ದೃಷ್ಟಿ ಹೀನತೆಗೆ ಕಾರಣವಾಗುತ್ತದೆ.

ಚುಚ್ಚು ಮದ್ದು, ಬ್ಯಾಂಡೇಜ್, ನೀರಿನ ಸೋರಿಕೆ, ಸಂಸ್ಕರಿಸದ ಉಪಕರಣಗಳು ಮತ್ತು ತೆರೆದ ಗಾಯದ ಮೂಲಕವು ಇದು ಹರಡುವ ಸಾಧ್ಯತೆಯಿದೆ.

ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಸೋಂಕಿತರು ಹಾಗೂ ಕೋವಿಡ್‌ನಿಂದ ಚೇತರಿಕೆಗೊಂಡವರಲ್ಲಿ ಮ್ಯೂಕೋರ್ಮೈಕೋಸಿಸ್ ಗಮನಾರ್ಹ ಏರಿಕೆ ಕಂಡುಬಂದಿದೆ. ಚಿಕಿತ್ಸೆಯಲ್ಲಿ ಸ್ಟೆರಾಯ್ಡ್‌ ಬಳಕೆ ಹೆಚ್ಚಳ, ರಕ್ತದಲ್ಲಿರುವ ಸಕ್ಕರೆ ಅಂಶದಲ್ಲಿನ ಅಸಮತೋಲನ, ಬದಲಾದ ರೋಗನಿರೋಧಕ ಶಕ್ತಿ, ಹೆಪ್ಪುಗಟ್ಟುವಿಕೆ ಇತ್ಯಾದಿಗಳಿಂದ ಫಂಗಸ್ ತಗುಲಬಹುದು. ಇವೆಲ್ಲದರಿಂದ ಮ್ಯೂಕೋರ್ಮೈಕೋಸಿಸ್ ಅನ್ನು ಗಂಭೀರವಾಗಿ ಪರಿಗಣಿಸಬೇಕಾಗಿದ್ದು, ರೋಗಿಗಳು ಮತ್ತು ಶುಶ್ರೂಷೆ ಮಾಡುವವರು ಸ್ಪಷ್ಟ ತಿಳುವಳಿಕೆಯನ್ನು ಹೊಂದಿರಬೇಕು.

ಆರಂಭಿಕ ಹಂತದಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣಗಳು:

* ಮೂಗುಕಟ್ಟುವುದು ಮತ್ತು ತಲೆನೋವು
*ಮುಖದಲ್ಲಿ ನೋವು
*ಮೂಗಿನಿಂದ ರಕ್ತಸ್ರಾವ
*ದೃಷ್ಟಿ ಮಸುಕಾಗುವುದು
*ಹಲ್ಲು ನೋವು, ಹಲ್ಲುಗಳು ಸಡಿಲವಾಗುವುದು

ಮುಂದಿನ ಹಂತದಲ್ಲಿ ಕಂಡುಬರುವ ಲಕ್ಷಣಗಳು:

*ಮುಖದಲ್ಲಿ ಚರ್ಮದ ಬಣ್ಣ ಬದಲಾವಣೆ
*ಕಣ್ಣಿನ ಸುತ್ತ ಕಪ್ಪು
*ಕಣ್ಣಿನ ರೆಪ್ಪಿಗಳು ಜೋತು ಬಿದ್ದಂತಾಗುವುದು
*ಕಣ್ಣಿನಲ್ಲಿ ಊತ
*ಕಣ್ಣು ಅಲುಗಾಡಿಸಲು ಸಾಧ್ಯವಾಗದಿರುವುದು
*ಮೂಗಿನಿಂದ ಕಂದು ಬಣ್ಣದ ದ್ರವ ಹೊರಬೀಳುವುದು

ರೋಗಲಕ್ಷಣವನ್ನು ಮೊದಲೇ ಗುರುತಿಸುವುದು ರೋಗವನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ.

ವೈದ್ಯಕೀಯ ಪರೀಕ್ಷೆ, ಚಿಕಿತ್ಸೆ:
*ಸಂಪೂರ್ಣ ರಕ್ತದ ಅಂಶದ ಪರೀಕ್ಷೆ
*ರಕ್ತದಲ್ಲಿ ಸಕ್ಕರೆಯ ಅಂಶದ ಪರೀಕ್ಷೆ
*ಮೂತ್ರಪಿಂಡದ ಕಾರ್ಯಾಚರಣೆ ಪರೀಕ್ಷೆ
*ಮೂಗಿನಿಂದ ದ್ರವ ಮಾದರಿ ಸಂಗ್ರಹಿಸುವ ಮೂಲಕ ಫಂಗಸ್‌ ಸೋಂಕಿನ ಪರೀಕ್ಷೆ ನಡೆಸುವುದು
*ಮೂಗಿನ ಎಂಡೋಸ್ಕೋಪಿ ಮತ್ತು ಬಯಾಪ್ಸಿ
*ಮೆದುಳಿನ ಎಂಆರ್‌ಐ
*ಸಿಟಿ ಸ್ಕ್ಯಾನ್, ಪಿಎನ್‌ಎಸ್ ಸ್ಕ್ಯಾನ್

ವೈದ್ಯಕೀಯ ಚಿಕಿತ್ಸೆಯು ರಕ್ತದಲ್ಲಿನ ಸಕ್ಕರೆಯ ಅಂಶದ ನಿಯಂತ್ರಣ ಹಾಗೂ ಶಿಲೀಂಧ್ರ ನಿರೋಧಕ ಔಷಧಿಯನ್ನು ಒಳಗೊಂಡಿರುತ್ತದೆ. ಶಿಲೀಂಧ್ರ ಸೋಂಕು ತಡೆಗಾಗಿ ಬಳಸುವ 'ಆಂಫೊಟೆರಿಸಿನ್‌ ಬಿ' (Amphotericin B) ಔಷಧಿ ಮತ್ತು ಶಸ್ತ್ರ ಚಿಕಿತ್ಸೆಯ ಮೂಲಕ ಸೋಂಕಿನ ಪದರ ತೆಗೆಯಲಾಗುತ್ತದೆ.

ಮ್ಯೂಕೋರ್ಮೈಕೋಸಿಸ್ ತಡೆಗಟ್ಟುವುದು ಹೇಗೆ?

* ಧೂಳು ಇರುವ ಸ್ಥಳಗಳಿಂದ ರೋಗಿಯನ್ನು ದೂರವಾಗಿಸಿ.
* ಮಾಸ್ಕ್ ಕಡ್ಡಾಯವಾಗಿ ಧರಿಸಿ.
* ರೋಗಿಯ ಶುಚಿತ್ವವನ್ನು ಕಾಪಾಡಿಕೊಳ್ಳಿ. ಯಾಕೆಂದರೆ ಕೆಮ್ಮಿನ ಮೂಲಕವೂ ಹರಡಬಹುದು.
* ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರದಲ್ಲಿಡಿ. ಕೋವಿಡ್-19 ಚಿಕಿತ್ಸೆಗಾಗಿ ಬಳಸುವ ಸ್ಟೆರಾಯ್ಡ್‌ ದೇಹದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಇದು ಶಿಲೀಂಧ್ರ ಬೆಳೆಯಲು ಕಾರಣವಾಗುತ್ತದೆ.
* ಮನೆಯಲ್ಲಿ ಕ್ವಾರಂಟೈನ್‌ನಲ್ಲಿರುವವರು ಸ್ಟೆರಾಯ್ಡ್‌ ಬಳಸಬೇಡಿ.
* ಮೂಗಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.
* ಆಮ್ಲಜನಕಕ್ಕಾಗಿ ಬಳಸುವ ಸಲಕರಣೆಯ ನೈರ್ಮಲ್ಯವನ್ನು ಕಾಪಾಡಿ.
* ಲೆನಿನ್ ಬಟ್ಟೆಗಳನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು.
* ಕಣ್ಣಿನ ಆರಂಭಿಕ ರೋಗ ಲಕ್ಷಣಗಳನ್ನು ಗಮನಿಸಿ ತಕ್ಷಣ ಇಎನ್‌ಟಿ ತಜ್ಞರನ್ನು ಭೇಡಿ ಮಾಡಿ.

ಆರಂಭಿಕ ಹಂತದಲ್ಲಿ ರೋಗಲಕ್ಷಣಗಳನ್ನು ನಿರ್ಲಕ್ಷಿಸಿದರೆ ಅಥವಾ ರೋಗ ನಿರ್ಣಯ ಮಾಡದಿದ್ದಲ್ಲಿ ಅಡ್ಡ ಪರಿಣಾಮಗಳು ತುಂಬಾ ಗಂಭೀರವಾಗಬಲ್ಲದು. ಇದು ಸೈನಸ್ ಮೂಳೆಗಳ ಮೇಲೆ ಪರಿಣಾಮ ಬೀರಬಲ್ಲದು, ಕಣ್ಣಿಗೆ ಪ್ರವೇಶಿಸಿ ದೃಷ್ಟಿ ಹೀನತೆಗೆ ಕಾರಣವಾಗಬಲ್ಲದು ಮತ್ತು ಮೆದುಳಿಗೆ ಬಾಧಿಸಿ ಜೀವಕ್ಕೆ ಅಪಾಯಕಾರಿಯಾಗಬಲ್ಲದು.

ಇವನ್ನೂ ಓದಿ:









ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT