ಸೋಮವಾರ, ನವೆಂಬರ್ 30, 2020
21 °C
ಕೊರೊನಾ ಒಂದಷ್ಟು ತಿಳಿಯೋಣ

ಕೋವಿಡ್‌ ಕಾರಣದ ಆಸ್ಪತ್ರೆ ವಾಸಕ್ಕೆ ಅಗತ್ಯ ವಸ್ತುಗಳ ಮರೆಯದಿರಿ: ಡಾ. ಲಕ್ಷ್ಮೀಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಪೀಡಿತರಿಗೆ ಆಸ್ಪತ್ರೆಗಳಲ್ಲಿ ಊಟ–ತಿಂಡಿಯ ಜತೆಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಅಷ್ಟಾಗಿಯೂ ಆಸ್ಪತ್ರೆಗೆ ಬರುವಾಗ ದಿನಬಳಕೆಯ ಅಗತ್ಯ ವಸ್ತುಗಳನ್ನು ರೋಗಿಗಳು ತಂದುಕೊಂಡಲ್ಲಿ ಅವರಿಗೇ ಅನುಕೂಲ ಆಗಲಿದೆ ಎನ್ನುತ್ತಾರೆ ವೈದ್ಯರು.

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಏರುಗತಿ ಪಡೆದ ಬಳಿಕ ಸೋಂಕಿತರಿಗೆ ಮನೆ ಆರೈಕೆಗೆ ಕೂಡ ಅವಕಾಶ ನೀಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಅಸ್ವಸ್ಥರಾದವರು ಹಾಗೂ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸಿದವರಿಗೆ ಆಸ್ಪತ್ರೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳಿಗೆ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅವಕಾಶವನ್ನು ನೀಡಲಾಗಿದೆ. ರೋಗಿಗಳು ಬಿಬಿಎಂಪಿ ಅಥವಾ ಜಿಲ್ಲಾಡಳಿತ ನೀಡುವ ಸಂಖ್ಯೆಯನ್ನು ಆಸ್ಪತ್ರೆಗೆ ದಾಖಲಾಗುವಾಗ ನೀಡಬೇಕಾಗುತ್ತದೆ. ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುವವರು ಆರೋಗ್ಯ ವಿಮೆ ಮಾಡಿಸಿದ್ದಲ್ಲಿ ಅದರ ಸೌಲಭ್ಯ ಪಡೆದುಕೊಳ್ಳಲು ಸಂಬಂಧಪಟ್ಟ ದಾಖಲಾತಿಯನ್ನು ಕೊಂಡೊಯ್ಯಬೇಕಾಗುತ್ತದೆ. 

‘ಕೋವಿಡ್ ಪರೀಕ್ಷೆಯ ಬಳಿಕ ಸೋಂಕು ದೃಢಪಟ್ಟಲ್ಲಿ ಬಿಬಿಎಂಪಿ ಅಥವಾ ಜಿಲ್ಲಾಡಳಿತ ನೀಡುವ ಸಂಖ್ಯೆಯು ವ್ಯಕ್ತಿಯ ದೂರವಾಣಿ ಸಂಖ್ಯೆಗೆ ಬರಲಿದೆ. ಆಸ್ಪತ್ರೆಗೆ ದಾಖಲಾಗುವಾಗ ಅದನ್ನು ತೋರಿಸಿದರೆ ಸಾಕಾಗುತ್ತದೆ. ಆಧಾರ್ ಕಾರ್ಡ್‌ನ ಪ್ರತಿ ಇಟ್ಟುಕೊಳ್ಳುವುದು ಒಳಿತು. ಕೋವಿಡ್ ಚಿಕಿತ್ಸೆಗೆ ಎಪಿಎಲ್, ಬಿಪಿಎಲ್‌ ಕಾರ್ಡ್‌ಗಳು ಎಂದು ವಿಂಗಡಿಸಿಲ್ಲ. ಹಾಗಾಗಿ ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಒದಗಿಸಿದ ಬಳಿಕ ಅದರ ಪ್ರಕ್ರಿಯೆಯನ್ನು ಆಸ್ಪತ್ರೆಯವರೇ ನಡೆಸುತ್ತಾರೆ’ ಎಂದು ಕೆ.ಸಿ. ಜನರಲ್ ಅಸ್ಪತ್ರೆಯ ಕೋವಿಡ್‌ ನೋಡಲ್ ಅಧಿಕಾರಿ ಡಾ. ಲಕ್ಷ್ಮೀಪತಿ ತಿಳಿಸಿದರು.

‘ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆದುಕೊಳ್ಳುವವರು ಸ್ಥಳೀಯ ಆರೋಗ್ಯಾಧಿಕಾರಿಗಳು ಶಿಫಾರಸು ಮಾಡಿದ ಆಸ್ಪತ್ರೆಗಳಿಗೆ ದಾಖಲಾಗಬೇಕಾಗುತ್ತದೆ. ಅಲ್ಲಿ ಹಾಸಿಗೆಯು ಲಭ್ಯ ಇಲ್ಲದಿದ್ದಲ್ಲಿ ಬೇರೆ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ. ಆಸ್ಪತ್ರೆಯಲ್ಲಿ ದಾಖಲಾದವರಿಗೆ ಉಚಿತವಾಗಿ ಊಟ–ತಿಂಡಿಯನ್ನು ಒದಗಿಸಲಾಗುತ್ತದೆ. ಅಗತ್ಯ ಮಾತ್ರೆಗಳನ್ನು ನೀಡಿ ಆರೈಕೆ ಮಾಡುವ ಜತೆಗೆ ಹೊದಿಕೆ, ಕುಡಿಯುವ ನೀರು ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ’ ಎಂದರು.

‘ಅಸ್ವಸ್ಥರಾಗಿರುವ ಕಾರಣ ಹಾಗೂ ಬಾಯಿಯ ರುಚಿ ಇಲ್ಲದ ಪರಿಣಾಮ ಕೆಲವರಿಗೆ ಆಸ್ಪತ್ರೆಯ ಊಟ–ತಿಂಡಿ ಅಷ್ಟಾಗಿ ರುಚಿಸದಿರಬಹುದು. ಅಂತಹವರು ಮನೆಯಿಂದ ಊಟ–ತಿಂಡಿಯನ್ನು ತರಿಸಿಕೊಳ್ಳಲು ಅವಕಾಶ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ನಿಯಮದಲ್ಲಿ ಅವಕಾಶ ಇಲ್ಲದಿದ್ದರೂ ಅನಿವಾರ್ಯವಾಗಿ ಅವಕಾಶ ನೀಡಬೇಕಾಗುತ್ತಿದೆ. ಅದೇ ರೀತಿ, ಹಣ್ಣುಗಳು ಹಾಗೂ ಅಗತ್ಯ ವಸ್ತುಗಳನ್ನು ಒದಗಿಸಲು ಅನುಮತಿ ಕೊಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಆಸ್ಪತ್ರೆಗೆ ತೆರಳುವಾಗ ಏನೆಲ್ಲ ಅಗತ್ಯ?

l ನಿಮ್ಮ ಆಧಾರ್‌ ನೋಂದಣಿ ಸಂಖ್ಯೆ(ಕಾರ್ಡ್)

l ಗಟ್ಟಿಮುಟ್ಟಾದ ನೀರಿನ ಬಾಟಲ್, ಬಿಸಿನೀರು ಜತೆಗೆ ಚಹಾ, ಕಾಫಿ ಸೇವನೆಗೆ ಥರ್ಮಸ್

l ಕೆಲವು ಸಂದರ್ಭದಲ್ಲಿ ಆಸ್ಪತ್ರೆಯ ಆಹಾರವು ಸೇರದಿರಬಹುದು. ಹಾಗಾಗಿ ಹಣ್ಣುಗಳನ್ನು ಒಯ್ಯುವುದು ಉತ್ತಮ

l ರೋಗನಿರೋಧಕ ಶಕ್ತಿ ವೃದ್ಧಿಗೆ ಸಹಕಾರಿಯಾಗಿರುವ ಒಣ ಹಣ್ಣುಗಳನ್ನು ಕೊಂಡೊಯ್ಯಬಹುದಾಗಿದೆ

l ದಿನನಿತ್ಯ ಬೇಕಾಗುವ ಅಗತ್ಯ ಬಟ್ಟೆಗಳು, ಟವೆಲ್ ಹಾಗೂ ಕರವಸ್ತ್ರ

l ಸ್ನಾನಕ್ಕೆ ಅಗತ್ಯವಿರುವ ಸೋಪು, ಶಾಂಪು ಜತೆಗೆ ಹಲ್ಲುಜ್ಜಲು ಪೇಸ್ಟ್‌ ಹಾಗೂ ಬ್ರಶ್

l ಬೇರೆ ಅನಾರೋಗ್ಯ ಸಮಸ್ಯೆಗೆ ನಿಯಮಿತವಾಗಿ ಮಾತ್ರೆಗಳನ್ನು ಸೇವಿಸುತ್ತಿದ್ದರೆ ಅವುಗಳನ್ನು ಕೊಂಡೊಯ್ಯಬೇಕು

l ಮೊಬೈಲ್, ಚಾರ್ಜರ್ ಹಾಗೂ ಇಯರ್ ಫೋನ್

l ಹೆಚ್ಚಾಗಿ ಅಸ್ವಸ್ಥರಾಗಿರದ ರೋಗಿಗಳು ಸಮಯ ಕಳೆಯಲು ಪುಸ್ತಕಗಳನ್ನು ಕೊಂಡೊಯ್ಯಬಹುದು

l ಬರವಣಿಗೆಯ ಹವ್ಯಾಸ ಇರುವವರು ನೋಟ್‌ ಬುಕ್ ಹಾಗೂ ಪೆನ್ನು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು