ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ಕರುಳಿನಲ್ಲಿರುವ ಬ್ಯಾಕ್ಟೀರಿಯಾಗೂ ಧಕ್ಕೆ

Last Updated 14 ಜನವರಿ 2021, 19:31 IST
ಅಕ್ಷರ ಗಾತ್ರ

ಕೋವಿಡ್‌–19ನಿಂದ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಕೆಲವು ಅಪಾಯಕಾರಿ ಅಂಶಗಳ ಬಗ್ಗೆ ಈಗಾಗಲೇ ಮಾಹಿತಿ ಲಭ್ಯವಾಗಿದೆ. ವಯಸ್ಸು, ಮಧುಮೇಹ, ಬೊಜ್ಜು.. ಹೀಗೆ ಹಲವು ಕಾರಣಗಳನ್ನು ವಿಜ್ಞಾನಿಗಳು, ವೈದ್ಯರು ಕಂಡುಕೊಂಡಿದ್ದಾರೆ. ಕೋವಿಡ್‌ ಎಂಬುದು ಪ್ರಾಥಮಿಕವಾಗಿ ಉಸಿರಾಟದ ಸಮಸ್ಯೆ ಉಂಟು ಮಾಡುವುದಾದರೂ ದೇಹದ ಇತರ ಅಂಗಾಂಗಗಳ ಮೇಲೆಯೂ ಪರಿಣಾಮ ಬೀರುತ್ತದೆ ಎಂಬುದಂತೂ ಈಗಾಗಲೇ ತಿಳಿದಿದೆ. ಈಗ ಹೊಸದೊಂದು ಅಧ್ಯಯನದಿಂದ ಕರುಳಿನಲ್ಲಿರುವ ವಿವಿಧ ಬಗೆಯ ಬ್ಯಾಕ್ಟೀರಿಯ ಸೇರಿದಂತೆ ಸೂಕ್ಷ್ಮಜೀವಿಗಳು (ಮೈಕ್ರೊಬಯೋಮ್‌) ಕೋವಿಡ್‌ ಸಮಸ್ಯೆ ತೀವ್ರವಾಗಲು ಹಾಗೂ ರೋಗ ನಿರೋಧಕ ಶಕ್ತಿ ಕುಸಿಯಲು ಕಾರಣ ಎಂಬುದು ತಿಳಿದು ಬಂದಿದೆ.

ನಮ್ಮ ದೇಹದಲ್ಲಿ ಕರುಳು, ರೋಗನಿರೋಧಕ ಶಕ್ತಿಗೆ ಸಂಬಂಧಪಟ್ಟ ಅತ್ಯಂತ ದೊಡ್ಡದಾದ ಅಂಗ. ಇದು ಇಡೀ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿಯಂತ್ರಿಸುವ ಬಹು ಮುಖ್ಯವಾದ ಅಂಗಗಳಲ್ಲಿ ಒಂದು ಎಂಬುದನ್ನು ಈ ಹಿಂದಿನ ಅಧ್ಯಯನಗಳು ಸಾಬೀತುಪಡಿಸಿವೆ. ಇತ್ತೀಚೆಗೆ ನಡೆದಿರುವ ಅಧ್ಯಯನದಲ್ಲಿ ಕರುಳಿನಲ್ಲಿರುವ ಸೂಕ್ಷ್ಮಜೀವಿಗಳು ಕೊರೊನಾ ಸೋಂಕಿಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದರ ಮೇಲೆ ಬೆಳಕು ಚೆಲ್ಲಲಾಗಿದೆ.

ಈ ಅಧ್ಯಯನದ ವರದಿಯನ್ನು ‘ಗಟ್‌’ ಆನ್‌ಲೈನ್‌ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನದಲ್ಲಿ ಪಾಲ್ಗೊಂಡ ಇಂಗ್ಲೆಂಡ್‌ನ ತಜ್ಞೆ ಡಾ. ಜೆನ್ನಾ ಮ್ಯಾಕಿಯೋಚಿ ‘ಕೋವಿಡ್‌ ಬಂದವರ ಕರುಳಿನಲ್ಲಿ ಈ ಬ್ಯಾಕ್ಟೀರಿಯ ಅಥವಾ ಇನ್ನಿತರ ಸೂಕ್ಷ್ಮಜೀವಿಗಳ ಸಂಖ್ಯೆ ಗಣನೀಯವಾಗಿ ಏರುಪೇರಾಗಿರುವುದು ಅಧ್ಯಯನದ ಸಂದರ್ಭದಲ್ಲಿ ಕಂಡು ಬಂದಿದೆ’ ಎಂದು ಹೇಳಿದ್ದಾರೆ.

ಇದಲ್ಲದೇ ಅಧ್ಯಯನ ಸಂದರ್ಭದಲ್ಲಿ ಕರುಳಿನಲ್ಲಿ ಬ್ಯಾಕ್ಟೀರಿಯ ಸಂಖ್ಯೆ ಕಡಿಮೆಯಾಗಿರುವ ಕೋವಿಡ್‌ ರೋಗಿಗಳಿಂದ ಪಡೆಯಲಾದ ರಕ್ತದ ಮಾದರಿಯಲ್ಲಿ ಉರಿಯೂತಕ್ಕೆ ಕಾರಣವಾಗುವ ಸೈಟೊಕೈನ್ಸ್‌ ಮಟ್ಟ ಹೆಚ್ಚಿರುವುದು ಕಂಡು ಬಂದಿದೆ. ಹಾಗೆಯೇ ಜೀವಕೋಶಗಳಿಗೆ ಧಕ್ಕೆಯುಂಟು ಮಾಡುವ ಅಂಶಗಳು ಕೂಡ ಹೆಚ್ಚಾಗಿರುವುದು ಪತ್ತೆಯಾಗಿದೆ.

ಕೊರೊನಾ ಸೋಂಕು ಉಂಟಾದಾಗ ಕರುಳಿನಲ್ಲಿರುವ ಈ ಸೂಕ್ಷ್ಮಾಣುಗಳು ಹೇಗೆ ಪ್ರತಿಕ್ರಿಯಿಸುತ್ತವೆ ಹಾಗೂ ರೋಗ ನಿರೋಧಕ ಶಕ್ತಿ ಕುಸಿಯಲು ಹೇಗೆ ಕಾರಣವಾಗುತ್ತವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದ್ದು ಮಾತ್ರವಲ್ಲ, ಇದು ಕೋವಿಡ್‌ನ ದೀರ್ಘಾವಧಿ ಸಮಸ್ಯೆಗಳಿಗೂ ಕಾರಣ ಎಂಬುದು ಕೂಡ ಗೊತ್ತಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕೋವಿಡ್‌ನಿಂದ ಗುಣಮುಖರಾದ ಕೆಲವರಲ್ಲಿ ತೀವ್ರ ಬಳಲಿಕೆ, ಉಸಿರಾಟದ ತೊಂದರೆ, ಸಂಧಿ ನೋವು ಮೊದಲಾದವುಗಳು ದೀರ್ಘಕಾಲ ಕಾಣಿಸಿಕೊಂಡಂತೆ, ಕರುಳಿನಲ್ಲಿರುವ ಸೂಕ್ಷ್ಮಜೀವಿಗಳ ಮಟ್ಟದಲ್ಲಾಗುವ ಏರುಪೇರು ರೋಗ ನಿರೋಧಕ ಶಕ್ತಿ ಕುಸಿತದಿಂದ ಉಂಟಾಗುವ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗೆಯೇ ಉರಿಯೂತದಿಂದ ಉಂಟಾಗುವ ಕರುಳಿನ ಕಾಯಿಲೆಗಳಿಗೂ ಕಾರಣವಾಗಬಹುದು. ಹೀಗಾಗಿ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ. ನಾರಿನಂಶವಿರುವ ತರಕಾರಿ ಹಾಗೂ ಹುದುಗು ಬರಿಸಿದ ಆಹಾರವನ್ನು ತಿನ್ನುವುದು ಸೂಕ್ತ. ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗೆ ಧಕ್ಕೆ ಉಂಟು ಮಾಡುವ ಆ್ಯಂಟಿಬಯೋಟಿಕ್‌ ಸೇವನೆ ಕಡಿಮೆ ಮಾಡಿ, ಒತ್ತಡ ಕಡಿಮೆ ಮಾಡಿಕೊಳ್ಳಿ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT