ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್: ಮುಂದೆ ನೆಗಡಿಗೆ ಸೀಮಿತ: ಸೈನ್ಸ್‌ ನಿಯತಕಾಲಿಕದಲ್ಲಿ ವರದಿ

Last Updated 13 ಜನವರಿ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19ಕ್ಕೆ ಕಾರಣವಾಗುವ ಸಾರ್ಸ್‌–ಕೋವ್‌–2 ವೈರಾಣವು ಸಾಮಾನ್ಯ ನೆಗಡಿಗೆ ಕಾರಣವಾಗುವ ವೈರಾಣುವಾಗಿಯಷ್ಟೇ ಭವಿಷ್ಯದಲ್ಲಿ ಉಳಿಯಬಹುದು. ಈಗ ಮನುಷ್ಯರಲ್ಲಿ ವ್ಯಾಪಕವಾಗಿ ಮತ್ತು ವೇಗವಾಗಿ ಹರಡುತ್ತಿರುವ ಈ ವೈರಾಣುವಿಗೆ ಸಣ್ಣ ಮಕ್ಕಳು ತೆರೆದುಕೊಂಡರೆ ವೈರಾಣುವಿನ ರೋಗಕಾರಕ ಸಾಮರ್ಥ್ಯ ನೆಗಡಿಗೆ ಸೀಮಿತವಾಗಬಹುದು ಎಂದು ‘ಸೈನ್ಸ್‌’ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಸಾಮಾನ್ಯ ನೆಗಡಿಗೆ ಕಾರಣವಾಗುವ ನಾಲ್ಕು ಕೊರೊನಾ ವೈರಾಣುಗಳು ಮತ್ತು ಸಾರ್ಸ್‌–ಕೋವ್‌–1 ವೈರಾಣುಗಳ ಅಧ್ಯಯನ ನಡೆಸಿ, ಈ ನಿರ್ಧಾರಕ್ಕೆ ಬರಲಾಗಿದೆ.

ಈ ಎಲ್ಲ ವೈರಾಣುಗಳಿಗೆ ಸಂಬಂಧಿಸಿದ ರೋಗನಿರೋಧಕತೆ ಹಾಗೂ ಸಾಂಕ್ರಾಮಿಕತೆಯ ದತ್ತಾಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅದರ ಆಧಾರದಲ್ಲಿ ಸಾರ್ಸ್‌–ಕೋವ್‌–2 ವೈರಾಣುವಿನ ಮುಂದಿನ ಪ್ರಯಾಣ ಹೇಗಿರಬಹುದು ಎಂಬುದನ್ನು ತಿಳಿಯುವ ಮಾದರಿಯನ್ನು ಸಿದ್ಧಪಡಿಸಲಾಗಿದೆ.

ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾದ ನಾಲ್ಕೂ ಕೊರೊನಾ ವೈರಾಣುಗಳು ಸಾಮಾನ್ಯ ನೆಗಡಿಗೆ ಕಾರಣವಾಗುತ್ತವೆ ಮತ್ತು ದೀರ್ಘ ಕಾಲದಿಂದ ಮನುಷ್ಯನ ನಡುವೆ ಹರಡುತ್ತಿವೆ. ಈ ನಾಲ್ಕೂ ವೈರಾಣುಗಳು ಬಹುತೇಕ ಎಲ್ಲರಿಗೂ ಸಣ್ಣ ವಯಸ್ಸಿನಲ್ಲಿಯೇ ತಗಲಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಬಾಲ್ಯದಲ್ಲಿನ ಸಹಜ ಸೋಂಕು ಜನರಿಗೆ ರೋಗನಿರೋಧಕ ಶಕ್ತಿ ಕೊಡುತ್ತದೆ ಮತ್ತು ಅದು ನಂತರದ ಹಂತದಲ್ಲಿ ಸೋಂಕು ಗಂಭೀರ ರೋಗವಾಗುವುದನ್ನು ತಡೆಯುತ್ತದೆ. ಆದರೆ, ಋತುಮಾನಕ್ಕೆ ಅನುಗುಣವಾಗಿ ಬರುವ ಮರುಸೋಂಕನ್ನು ಇದು ತಡೆಯುವುದಿಲ್ಲ. ಈ ಸೋಂಕು ಗಂಭೀರ ಸ್ವರೂಪವನ್ನೂ ತಾಳುವುದಿಲ್ಲ ಎಂದು ಅಧ್ಯಯನ ವರದಿಯ ಲೇಖಕಿ ಜೆನ್ನಿ ಲವೀನ್‌ ಹೇಳಿದ್ದಾರೆ.

ಸಾರ್ವ್‌ ಕೋವ್‌–2 ವೈರಾಣುವಿನಿಂದ ಬರುವ ರೋಗವು ಆರಂಭಿಕ ಬಾಲ್ಯದ ರೋಗವಾಗಿ ಪರಿವರ್ತನೆ ಆಗಬಹುದು. ಹಾಗಾದರೆ, ಮೂರರಿಂದ ಐದು ವರ್ಷದೊಳಗೆ ಮಕ್ಕಳಿಗೆ ಈ ಸೋಂಕು ತಗಲುತ್ತದೆ. ಮಕ್ಕಳಲ್ಲಿ ಈ ಸೋಂಕು ಅತ್ಯಂತ ಸೌಮ್ಯವಾಗಿಯೇ ಇರುತ್ತದೆ ಎಂದು ಅಧ್ಯಯನವು ಹೇಳಿದೆ.

ಈ ಪರಿವರ್ತನೆಗೆ ಎಷ್ಟು ಸಮಯ ಬೇಕಾಗಬಹುದು ಎಂಬುದು ವೈರಸ್‌ ಎಷ್ಟು ವೇಗವಾಗಿ ಹರಡುತ್ತದೆ ಮತ್ತು ಈ ವೈರಾಣುವು ಜನರಲ್ಲಿ ಯಾವ ರೀತಿಯ ರೋಗನಿರೋಧಕತೆಯನ್ನು ಸೃಷ್ಟಿಸುತ್ತದೆ ಎಂಬುದರ ಅಮೇಲೆ ಅವಲಂಬಿತವಾಗಿದೆ.

ಈ ಅಧ್ಯಯನದ ಪ್ರಕಾರ, ಮನುಷ್ಯರಿಗೆ ತಗಲುವ ಇತರ ಕೊರೊನಾ ವೈರಾಣುವಿನ ರೀತಿಯಲ್ಲಿಯೇ ಸಾರ್ಸ್‌ ಕೋವ್‌–2 ಕೂಡ ರೋಗ ನಿರೋಧಕ ಶಕ್ತಿಯನ್ನು ಸೃಷ್ಟಿಸುತ್ತದೆ. ವಯಸ್ಕ ವ್ಯಕ್ತಿಗೆ ಮೊತ್ತ ಮೊದಲ ಬಾರಿಗೆ ಬೇರೆ ಕೊರೊನಾ ವೈರಾಣು (ಕೋವಿಡ್‌ಗೆ ಕಾರಣವಾಗುವ ವೈರಸ್‌ ಅಲ್ಲ) ಸೋಂಕು ಉಂಟಾದರೆ ಅದರ ಪರಿಣಾಮ ಹೇಗಿರುತ್ತದೆ ಎಂಬುದು ತಿಳಿದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಾರ್ಸ್‌–ಕೋವ್‌–2 ಸೋಂಕು ಸಾಮಾನ್ಯ ಎನಿಸಿಬಿಟ್ಟರೆ, ಅದರ ಪರಿಣಾಮ ಮತ್ತು ಸಾವಿನ ಪ್ರಮಾಣವು ಸಾಮಾನ್ಯ ಸೋಂಕು ಜ್ವರದ ಸಾವು ನೋವಿಗಿಂತ (ಶೇ 0.1ರಷ್ಟು) ಕಡಿಮೆ ಇರಲಿದೆ ಎಂದೂ ಈ ಅಧ್ಯಯನವು ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT