ಶುಕ್ರವಾರ, ಜನವರಿ 22, 2021
27 °C
ಕೊರೊನಾ ಒಂದಿಷ್ಟು ತಿಳಿಯೋಣ

ಕೋವಿಡ್‌-19 ಲಸಿಕೆ: ಮಧುಮೇಹಿಗಳಿಗೇಕೆ ಆದ್ಯತೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ಬಂದ ನಂತರ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಕಷ್ಟ. ಕೋವಿಡ್‌ ಜೊತೆಗೆ ದೀರ್ಘಕಾಲಿನ ಕಾಯಿಲೆಯೂ ಇದ್ದರೆ ಇನ್ನೂ ತ್ರಾಸು. ವಿಶೇಷವಾಗಿ ಮಧುಮೇಹವಿದ್ದವರು ತೀವ್ರವಾದ ತೊಂದರೆ ಅನುಭವಿಸುವ ಸಾಧ್ಯತೆ ಜಾಸ್ತಿ ಎಂಬುದು ಈಗಾಗಲೇ ಸಾಬೀತಾಗಿದೆ. ಹೀಗಾಗಿ ಮಧುಮೇಹಿಗಳು ಕೋವಿಡ್‌–19 ಲಸಿಕೆ ಹಾಕಿಸಿಕೊಳ್ಳಿ ಎಂದು ತಜ್ಞರು ಮೇಲಿಂದ ಮೇಲೆ ಹೇಳುತ್ತಿದ್ದಾರೆ.

ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಸುತ್ತೋಲೆ ಹೊರಡಿಸಿದ್ದು, ರಕ್ತದಲ್ಲಿ ಗ್ಲುಕೋಸ್‌ ಮಟ್ಟ ಅಧಿಕವಿದ್ದರೆ ಇದು ದೀರ್ಘಕಾಲೀನ ಉರಿಯೂತಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದೆ. ಹೀಗಾಗಿ ಟೈಪ್‌–2 ಮಧುಮೇಹವಿರುವವರಲ್ಲಿ ಕೋವಿಡ್‌–19 ತೀವ್ರ ತೊಂದರೆ ಉಂಟು ಮಾಡುತ್ತದೆ. ಹಾಗೆಯೇ ಟೈಪ್‌–1 ಮಧುಮೇಹಿಗಳಲ್ಲಿಯೂ ಈ ಸಮಸ್ಯೆ ಇದ್ದೇ ಇರುತ್ತದೆ. ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ನಿರಂತರ ನಿಗಾ ಬೇಕಾಗುತ್ತದೆ. ಆದರೆ ಇದು ಬಹುತೇಕರಲ್ಲಿ ಕಷ್ಟಸಾಧ್ಯ. ವ್ಯಾಯಾಮ, ಪಥ್ಯದ ಮೂಲಕ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸಬೇಕಾಗುತ್ತದೆ. ಇದು ಕೋವಿಡ್ ಕಾಲದಲ್ಲಿ ಬಹಳ ಮುಖ್ಯ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದಲ್ಲದೆ ಟೈಪ್‌–2 ಮಧುಮೇಹಿಗಳಲ್ಲಿ ಹೃದ್ರೋಗ ಸಮಸ್ಯೆ, ಅಧಿಕ ರಕ್ತದೊತ್ತಡ ಅಥವಾ ಕಿಡ್ನಿ ವೈಫಲ್ಯ ಜಾಸ್ತಿ. ಇದರಿಂದ ಕೊರೊನಾ ಸೋಂಕು ತಗಲುವ ಸಾಧ್ಯತೆ ಅಧಿಕ. ಕೋವಿಡ್‌ನಿಂದ ನ್ಯುಮೋನಿಯ, ರಕ್ತ ಗರಣೆಗಟ್ಟುವುದು ಅಥವಾ ಉಸಿರಾಟದ ವೈಫಲ್ಯ ಉಂಟಾಗಬಹುದು. ಸಿಡಿಸಿ (ಸೆಂಟರ್ಸ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಶನ್‌) ಪ್ರಕಾರ ಅಂಥವರಿಗೆ ಕೃತಕ ಉಸಿರಾಟ ವ್ಯವಸ್ಥೆ ಮಾಡಬೇಕಾಗುತ್ತದೆ. ಜೊತೆಗೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇಡಬೇಕಾಗುತ್ತದೆ. ಒಂದು ಅಧ್ಯಯನದ ಪ್ರಕಾರ ರಕ್ತದಲ್ಲಿ ಅಧಿಕ ಗ್ಲುಕೋಸ್‌ ಮಟ್ಟ (ಹೈಪರ್‌ಗ್ಲೈಸೆಮಿಯ) ಇದ್ದವರಿಗೆ ಕೋವಿಡ್‌ ಬಂದರೆ ಸಾವಿನ ಸಾಧ್ಯತೆ ಇತರರಿಗಿಂತ ನಾಲ್ಕು ಪಟ್ಟು ಹೆಚ್ಚು.

ಹೀಗಾಗಿ ಕೋವಿಡ್‌–19 ಲಸಿಕೆಯನ್ನು ಮಧುಮೇಹ ಇರುವವರಿಗೆ ಆದ್ಯತೆಯ ಮೇಲೆ ನೀಡಬೇಕು. ಹಾಗೆಯೇ ಮಧುಮೇಹಿಗಳೂ ಲಸಿಕೆಯ ಬಗ್ಗೆ ಅನುಮಾನ ಇಟ್ಟುಕೊಳ್ಳುವುದು ಬೇಡ.

ಇನ್ಸುಲಿನ್‌ ಚುಚ್ಚುಮದ್ದನ್ನು ತೋಳಿಗೆ ತೆಗೆದುಕೊಳ್ಳುವವರು ಇನ್ನೊಂದು ತೋಳಿಗೆ ಕೋವಿಡ್‌ ಲಸಿಕೆ ಪಡೆಯಬೇಕಾಗುತ್ತದೆ. ಇನ್ಸುಲಿನ್‌ ಚುಚ್ಚುಮದ್ದಿನಿಂದಾದ ಗಾಯಗಳು ತೊಂದರೆ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಈ ಮುನ್ನೆಚ್ಚರಿಕೆ ಎಂದು ಸಿಡಿಸಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು