ಮಂಗಳವಾರ, ಮೇ 18, 2021
24 °C

ಖಿನ್ನತೆ ಗುರುತಿಸುವುದೇ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಮೊದಲ ಮಗುವಿಗೆ ಜನನ ನೀಡಿದ ಬಳಿಕ ಬಹುತೇಕ ತಾಯಂದಿರು ಖಿನ್ನತೆಯಿಂದ ಬಳಲುತ್ತಾರೆ. ಬೆಂಗಳೂರಿನಲ್ಲಿ 100ಕ್ಕೆ 10 ತಾಯಂದಿರಲ್ಲಿ ಖಿನ್ನತೆ ಕಂಡುಬರುತ್ತಿದೆ. ಅದನ್ನು ಗುರುತಿಸಿ ಚಿಕಿತ್ಸೆ ನೀಡುವುದು ವೈದ್ಯರಿಗೆ ಸವಾಲೇ ಸರಿ’ ಎಂದು ಸೀತಾ ಭತೇಜಾ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಸಂಗೀತಾ ರಾವ್‌ ಹೇಳಿದರು.

‘ಮನೆಯಲ್ಲಿ ಉತ್ತಮ ವಾತಾವರಣ ಇಲ್ಲದಿದ್ದರೆ ಖಿನ್ನತೆ ಪ್ರಮಾಣ ದೊಡ್ಡ ಮಟ್ಟದಲ್ಲಿ ಇರುತ್ತದೆ. ಹೊಡೆಯುವುದು, ಹಿಂಸೆ ಕೊಡುವುದು, ಹತ್ತಾರು ವರ್ಷಗಳ ಬಳಿಕ ಮಗುವಾಗುತ್ತಿರುವುದು ಈ ರೀತಿಯ ವೈಯಕ್ತಿಕ ಕಾರಣಗಳಿದ್ದರೆ ಖಿನ್ನತೆಯನ್ನು ಗುರುತಿಸುವುದು ಸುಲಭ. ಆದರೆ ಕಚೇರಿಯ ಒತ್ತಡಗಳ ನಡುವೆ ಕೆಲಸ ಮಾಡಿದ ಗರ್ಭಿಣಿ ತನ್ನೊಳಗೇ ಒಂದು ರೀತಿಯ ಖಿನ್ನತೆಯನ್ನು ಬೆಳೆಸಿಕೊಂಡಿರುತ್ತಾಳೆ. ಹಾಲು ಬರದಿದ್ದರೂ ಕಣ್ಣೀರು ಹಾಕುತ್ತಾಳೆ. ಈ ರೀತಿಯ ಸೂಕ್ಷ್ಮವಾದ ಖಿನ್ನತೆಯನ್ನು ಕಂಡುಹಿಡಿಯುವುದು ಕಷ್ಟ’ ಎನ್ನುವುದು ಅವರ ಅನುಭವದ ಮಾತು.

‘ನಾನು ಸ್ತ್ರೀರೋಗ ತಜ್ಞೆ. ಮನೋರೋಗ ತಜ್ಞೆ ಅಲ್ಲ. ಆದರೂ ತಾಯಂದಿರ ಅಂತರಾಳವನ್ನು ನಾನು ಅರ್ಥಮಾಡಿಕೊಂಡು ಚಿಕಿತ್ಸೆ ನೀಡಬೇಕು. ಆರಂಭಿಕ ಖಿನ್ನತೆಗಳನ್ನು ಹೋಗಲಾಡಿಸುವ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳಬೇಕು. ಸಣ್ಣ ಸಮಸ್ಯೆಗಳಿಗೂ ಮನೋರೋಗಿಗಳನ್ನು ಕಾಣಲು ಹೇಳಿದರೆ, ರೋಗಿಗಳ ಮನಸ್ಥಿತಿ ಇನ್ನೂ ಕೆಡುತ್ತದೆ’ ಎಂದು ತಮ್ಮ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಮಾತನಾಡಿದರು.

‘ಪಶ್ಚಿಮ ಬಂಗಾಳದ ತಾಯಿಯೊಬ್ಬರು ಒಮ್ಮೆ ತಮ್ಮ ಮಗುವನ್ನು ಕಿಟಕಿಯಿಂದ ಬಿಸಾಡಲು ಹೋಗಿದ್ದರು. ಆಕೆಗೆ ಅದು ಮೂರನೇ ಹೆಣ್ಣುಮಗು ಆಗಿತ್ತು. ಮನೆಯಲ್ಲಿ ಗಂಡು ಮಗು ಬೇಕು ಎನ್ನುವ ಒತ್ತಡ ಹೆಚ್ಚಿತ್ತು. ಸಾಕಷ್ಟು ಕೌಟುಂಬಿಕ ದೌರ್ಜನ್ಯವನ್ನು ಆಕೆ ಸಹಿಸಿಕೊಂಡಿದ್ದಳು. ತನಗಾದ ಹಿಂಸೆ, ನೋವಿನಿಂದ ಖಿನ್ನತೆ ಅವಳನ್ನು ಆವರಿಸಿತ್ತು. ಆಕೆಯ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡ ನಾನು ಚಿಕಿತ್ಸೆ ನೀಡಿ, ಮಗುವಿನ ಮೇಲೆ ಪ್ರೀತಿ, ವಿಶ್ವಾಸ ಮೂಡುವಂತೆ ಮಾಡಲು ಪ್ರಯತ್ನಿಸಿದೆವು. ಆ ನಂತರ ಅವಳು ಸರಿಹೋದಳು.

ಇಂತಹ ಹೆಣ್ಣುಮಕ್ಕಳಿಗೆ ಬೇಕಾಗಿರುವುದು ಒಂದು ಹಿಡಿ ಪ್ರೀತಿ, ನೋವು ಹಂಚಿಕೊಳ್ಳುವ ಮನಸ್ಸು ಅಷ್ಟೇ. ಇಂತಹ ಆತ್ಮೀಯವಾದ ಕೆಲಸವನ್ನು ವೈದ್ಯರಿಂದ ಮಾತ್ರ ಮಾಡಲು ಸಾಧ್ಯ. ಈ ವೃತ್ತಿ ನನಗೆ ಸಾಕಷ್ಟು ನೆಮ್ಮದಿ, ಸಾಮಾಜಿಕ ಪ್ರಜ್ಞೆಯನ್ನು ಕೊಟ್ಟು ಬೆಳೆಸಿದೆ’ ಎಂದು ಅವರು ಭಾವನಾತ್ಮಕವಾಗಿ ತಮ್ಮ ವೃತ್ತಿಯ ಬಗ್ಗೆ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು