ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು ಅಂಕಣ: ಹಿಂಸೆಯಿಂದ ಮಕ್ಕಳಿಗೆ ಶಿಸ್ತನ್ನು ಕಲಿಸಬಹುದೇ?

ನಡಹಳ್ಳಿ ವಸಂತ್ ಅವರ ಅಂಕಣ
Published 4 ಆಗಸ್ಟ್ 2023, 22:08 IST
Last Updated 4 ಆಗಸ್ಟ್ 2023, 22:08 IST
ಅಕ್ಷರ ಗಾತ್ರ

ನನ್ನ ಅಕ್ಕನ ಮಗನಿಗೆ 9 ವರ್ಷ.ಚಿಕ್ಕವನಾಗಿದ್ದಾಗ ಶುರುವಾದ ಫಿಟ್ಸ್‌ ಕಾಯಿಲೆಗೆ ಔಷಧಿ ಕೊಡುತ್ತಿದ್ದೇವೆ. ಶಾಲೆಗೆ ಮೊದಲ ವಾರ ಹಠ ಮಾಡದೆ ಹೋಗುತ್ತಿದ್ದ. ಆದರೆ ಕ್ರಮೇಣ ಶಾಲೆಗೆ ಹೋಗಲು, ಬರೆಯಲು ಓದಲು ಹಿಂದೇಟು ಹಾಕಿದ. ಅವನ ಅನಾರೋಗ್ಯದ ಕಾರಣದಿಂದ, ಏನಾಗುತ್ತದೋ ಎಂಬ ಭಯಕ್ಕೆ ಮನೆಯಲ್ಲಿ ಯಾರು ಹೊಡೆಯುತ್ತಿರಲಿಲ್ಲ. ಒಳ್ಳೆಯ ಮಾತಿನಲ್ಲಿ ಆತ್ಮೀಯವಾಗಿ ಹೇಳಿದರೂ ಓದುವ ಬರೆಯುವುದಕ್ಕೂ ಆಸಕ್ತಿ ತೋರಿಸುತ್ತಿರಲಿಲ್ಲ. ಆದರೆ ಆಟ ಆಡುವುದು, ಸೈಕಲ್‌ ಓಡಿಸುವುದು, ಮುಂತಾದ ದೈಹಿಕ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ. ನಂತರ ತಂದೆ ತಾಯಿಯ ಜಗಳದ ಕಾರಣಕ್ಕಾಗಿ ಮಗುವನ್ನು ಹಳ್ಳಿಗೆ ಕರೆದುಕೊಂಡು ಹೋದರು. ಅಲ್ಲಿ ದೈಹಿಕವಾಗಿ ಸಾಕಷ್ಟು ಬಳಲಿ ಹೋಗಿದ್ದ. ಜೊತೆಗೆ ಅಜ್ಜ, ’ಇವನು ಓದುವುದಿಲ್ಲ’ ಎಂದು ಕಂಬಕ್ಕೆ ಕಟ್ಟಿ ಹೊಡೆದು ಓದಿಸುವ ಪ್ರಯತ್ನ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಬದಲಾಗಿ ಕೆಟ್ಟ ಪದಗಳಲ್ಲಿ ಅವರ ಅಜ್ಜನನ್ನು ಬೈಯುತ್ತಾನೆ. ಮತ್ತೆ ತುಂಬಾ ಹಟ ಮಾಡುತ್ತಾನೆ. ಏನಾದರೂ ಕೊಡಿಸದೆ ಇದ್ದರೆ, ಬೈದರೆ ಕೋಣೆಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಾನೆ. ‘ಹೊಡಿರಿ‘ ಎಂದು ತಿರುಗಿ ನಿಲ್ಲುತ್ತಾನೆ. ನೇಣು ಹಾಕಿಕೊಳ್ಳುತ್ತಿನಿ ಎಂದು ಹೆದರಿಸುತ್ತಾನೆ. ನಾವು ಬೆಳೆಸಿದ ವಾತಾವರಣ ಇದಕ್ಕೆ ಕಾರಣ ಎನ್ನುವುದಾದರೆ ಅವನ ತಂಗಿಯ ಸ್ವಭಾವ ಸಂಪೂರ್ಣ ಭಿನ್ನವಾಗಿದೆ. ಅವನನ್ನು ಹೇಗೆ ಸರಿ ಮಾಡುವುದು ಎಂಬುದೇ ಅರ್ಥವಾಗುತ್ತಿಲ್ಲ. ಹಾಸ್ಟೆಲ್‌ಗೆ ಹಾಕಬೇಕು ಎಂದುಕೊಂಡಿದ್ದೇನೆ. ಶಿಕ್ಷಕರು ಅವನನ್ನು ಸರಿ ಮಾಡಲು ಸಾಧ್ಯವೇ ಇಲ್ಲ ಎನ್ನುತ್ತಾರೆ. ಅವನ ವಿಷಯದಲ್ಲಿ ನನಗೆ ಆತಂಕ ಬೇಜಾರು ಆಗುತ್ತಿದೆ. ಇದಕ್ಕೆ ಪರಿಹಾರ ತಿಳಿಸಿ.

ಹೆಸರು ಊರು ತಿಳಿಸಿಲ್ಲ.

ದೀರ್ಘವಾದ ಪತ್ರದಲ್ಲಿ ನಿಮ್ಮ ನೋವು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದೀರಿ. ಮಕ್ಕಳು ಕೌಟುಂಬಿಕ ವಾತಾವರಣವನ್ನು ಪ್ರತಿಫಲಿಸುವ ಕನ್ನಡಿ ಮಾತ್ರ ಎನ್ನುವದರ ಕುರಿತು 8ನೇ ಜುಲೈ 2023ರಂದು ಇದೇ ಅಂಕಣದಲ್ಲಿ ಬರೆಯಲಾಗಿತ್ತು. ದಯವಿಟ್ಟು ಅದನ್ನು ಗಮನಿಸಿ. ಫಿಟ್ಸ್‌ ಕಾಯಿಲೆಗೂ ಮಗುವಿನ ಸಮಸ್ಯೆಗಳಿಗೂ ಸಂಬಂಧವಿಲ್ಲ.

ಒಂದು ಘಟನೆ ಅಥವಾ ಕೌಟುಂಬಿಕ ಪರಿಸ್ಥಿತಿ ಎಲ್ಲಾ ಮಕ್ಕಳ ಮೇಲೆ ಒಂದೇ ರೀತಿಯ ಪರಿಣಾಮ ಬೀರುವುದು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಮಗಳ ವರ್ತನೆಯ ಆಧಾರದ ಮೇಲೆ ಮಗನನನ್ನು ದೂಷಿಸುವುದು ಹೆಚ್ಚಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಕ್ಕಳ ಮಾತು ವರ್ತನೆಗಳು ಅವರ ಮನಸ್ಥಿತಿಯ ಸೂಚನೆ ಮಾತ್ರ. ಮನಸ್ಥಿತಿ ಬದಲಾಗದಿದ್ದರೆ ವರ್ತನೆಗಳನ್ನು ಮಾತ್ರ ಹೊಡೆದು, ಬೈದು, ಬುದ್ಧಿಹೇಳಿ ಮಕ್ಕಳನ್ನು ಶಿಸ್ತಿಗೆ ಒಳಪಡಿಸುವುದು ಸಾಧ್ಯವಿಲ್ಲ. ಶಿಕ್ಷೆ ಬೆದರಿಕೆಗಳು ತಾತ್ಕಾಲಿಕವಾಗಿ ಬದಲಾವಣೆ ತಂದಿರಬಹುದು. ಆದರೆ ನಿಧಾನವಾಗಿ ಅವು ನಿಷ್ಪ್ರಯೋಜಕವಾಗಿರುತ್ತವೆ ಎಂದು ನಿಮ್ಮ ಅನುಭವಕ್ಕೂ ಬಂದಿರಬೇಕಲ್ಲವೇ? ಬೈಗುಳ ಹಿಂಸೆಗಳು ಪೋಷಕರ ಹತಾಶೆ ಅಸಹಾಯಕತೆಗಳ ಸೂಚನೆ ಮಾತ್ರ. ಇದರಿಂದ ಮಕ್ಕಳು ಬದಲಾಗುವುದಿಲ್ಲ.

ಮಕ್ಕಳ ಮಿದುಳು ನರಮಂಡಲಗಳ ಸಮಗ್ರವಾದ ಬೆಳವಣಿಗೆಗೆ ಅಗತ್ಯವಾಗಿರುವುದು ಪೋಷಕರು ಕೊಡುವ ಭದ್ರತೆ ಬೆಂಬಲ ಮತ್ತು ಪ್ರೀತಿ. ಮಕ್ಕಳಿಗೆ ಶಿಸ್ತು ಮತ್ತು ಜೀವನಪಾಠಗಳನ್ನು ಇವುಗಳ ಮೂಲಕವೇ ಕಲಿಸಬೇಕಾಗುತ್ತದೆ. ಯಾವುದೇ ಕಾರಣಕ್ಕಾಗಿ ಆಗಲಿ ಇವುಗಳ ಕೊರತೆಯಾದರೆ ಮಕ್ಕಳು ಕಲಿಕೆ, ಸ್ವಯಂ ನಿಯಂತ್ರಣ ಮತ್ತು ಸಾಮಾಜಿಕ ನಡವಳಿಕೆಗಳಲ್ಲಿ ಹಿಂದೆ ಉಳಿಯುತ್ತಾರೆ.

ಈ ಹಿನ್ನೆಲೆಯಲ್ಲಿ ನಿಮ್ಮ ಮಗುವಿನ ಮನಸ್ಥಿತಿ ಹೇಗಿರಬಹುದು? ಪೋಷಕರ ನಡುವೆ ಭಿನ್ನಾಭಿಪ್ರಾಯಗಳಿ ರುವಾಗ ಮಕ್ಕಳಿಗೆ ಅಗತ್ಯವಿರುವ ಬೆಂಬಲ ಪ್ರೀತಿ ಭದ್ರತೆ ದೊರಕುವುದು ಸಾಧ್ಯವಾಗಿರುವುದಿಲ್ಲ. ಪೋಷಕರಾಗಿ ನಿರ್ವಹಿಸಬೇಕಾಗಿದ್ದ ಜವಾಬ್ದಾರಿಯನ್ನು ಬೇರೆಯವರಿಗೆ (ಅವರು ಅಜ್ಜನೇ ಇರಬಹುದು) ವಹಿಸಿದಾಗ ಮಗುವಿನ ಮನಸ್ಸಿನ ಮೇಲೆ ಎಂತಹಾ ಪರಿಣಾಮಗಳಾಗಿರಬಹುದು ಎಂದು ಯೋಚಿಸಬೇಕಲ್ಲವೇ? ಜೊತೆಗೆ ಬೈಗುಳ ದೈಹಿಕ ಹಿಂಸೆಗಳಿಂದಾಗಿ ಮಗು ಎಲ್ಲರ ಬಗೆಗೂ ನಂಬಿಕೆ ಕಳೆದುಕೊಂಡಿದೆ. ಈಗ ಯಾರ ಒಡನಾಟವೂ ಅವನಿಗೆ ಸುರಕ್ಷಿತ ಅನ್ನಿಸುತ್ತಿಲ್ಲ. ಅಗತ್ಯಗಳನ್ನು ಪೂರೈಸಿಕೊಳ್ಳಲು ಬೆದರಿಕೆ ಪ್ರತಿಹಿಂಸೆಗಳು ಮಾತ್ರ ತನಗಿರುವ ದಾರಿ ಎಂದು ಅವನಿಗೆ ಮನವರಿಕೆಯಾಗಿದೆ. ಇಲ್ಲಿಯವರೆಗೆ ನೀವೆಲ್ಲರು ಬಳಸಿದ್ದೂ ಇದೇ ತಂತ್ರಗಳನ್ನಲ್ಲವೇ? ಮಗು ತೋರಿಸುತ್ತಿರುವ ಎಲ್ಲಾ ವರ್ತನೆಗಳ ಹಿಂದೆ ನಿಮ್ಮೆಲ್ಲರ ಮನಸ್ಥಿತಿಯ ಪ್ರತಿಬಿಂಬ ಕಾಣುತ್ತಿಲ್ಲವೇ?

ಇದಕ್ಕೆ ತಕ್ಷಣದ ಪರಿಹಾರಗಳಿಲ್ಲ. ಮಗುವಿನ ವರ್ತನೆಯನ್ನು ಸರಿಮಾಡುವ ಮೊದಲು ಅವನಿಗೆ ಅಗತ್ಯವಾದ ಬೆಂಬಲ ಭದ್ರತೆ ಮತ್ತು ಪ್ರೀತಿಯನ್ನು ತೋರಿಸುವ ಅಗತ್ಯವಿದೆ. ಇದಕ್ಕೆ ಪೋಷಕರ ಮನಸ್ಥಿತಿ ಬದಲಾಗಬೇಕು. ಕುಟುಂಬದವರೆಲ್ಲರೂ ಒಟ್ಟಾಗಿ ಮನೋಚಿಕಿತ್ಸೆ ಪಡೆದುಕೊಂಡರೆ ನಿಧಾನವಾಗಿ ಬದಲಾವಣೆ ಸಾಧ್ಯವಾಗ ಬಹುದು. ಹಾಸ್ಟೆಲ್‌ಗೆ ಕಳಿಸಿದರೆ ಅವನ ಸಮಸ್ಯೆಗಳು ಹೆಚ್ಚಾಗುವ ಅಪಾಯಗಳಿವೆ.

(ಜುಲೈ 8ರ ಅಂಕಣದ ಸಂಚಿಕೆಗಾಗಿ, ಈ ಲಿಂಕ್ ನೋಡಿ:  https://www.prajavani.net/health/children-are-the-mirror-of-family-environment-2373053)

ಏನಾದ್ರೂ ಕೇಳ್ಬೋದು:
ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಅವರು ಉತ್ತರಿಸಲಿದ್ದಾರೆ.
ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT