ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ: ರೋಗ ತಪಾಸಣೆಗೆ ಹಿಂಜರಿಕೆ ಬೇಡ

Published 15 ಮೇ 2023, 19:41 IST
Last Updated 15 ಮೇ 2023, 19:41 IST
ಅಕ್ಷರ ಗಾತ್ರ

ಡಾ. ಶ್ರೀನಿವಾಸ ಹರಪನಹಳ್ಳಿ

‘ಅವರ ಕಾಲಲ್ಲಿ ಕೀವು ತುಂಬಿ, ಡಾಕ್ಟ್ರ ಹತ್ರ ಹೋಗಿದ್ರಂತೆ. ಆವಾಗ್ಲೇ ಅವರಿಗೆ ಡೈಯಾಬಿಟಿಸ್ ಇರೋದು ಗೊತ್ತಾಯ್ತಂತೆ.’

‘ಬಚ್ಚಲಲ್ಲಿ ತಲೆತಿರುಗಿ ಬಿದ್ದರಂತೆ. ಹಾಸ್ಪಿಟಲನಲ್ಲಿ ತಪಾಸಣೆ ಮಾಡಿದಾಗ ಬಿಪಿ ಹೆಚ್ಚಾಗಿ ಸ್ಟ್ರೋಕ್ ಆಗಿದ್ದು ತಿಳಿದುಬಂತಂತೆ.’

ಈ ರೀತಿಯ ಸಂಭಾಷಣೆಗಳನ್ನು ನಾವು ಅವಾಗಾವಾಗ ಕೇಳುತ್ತಿರುತ್ತೇವೆ. ಆರೋಗ್ಯವಾಗಿದ್ದವರು ಒಮ್ಮೆಲೇ ಸೀರಿಯಸ್ ಆದಾಗ ಮನೆಮಂದಿಗೆಲ್ಲ ತುಂಬಾ ಗಾಬರಿಯಾಗುವುದು ಸಹಜವೇ. ಆದ್ದರಿಂದ ಈ ರೀತಿ ಆಗಲು ಕಾರಣಗಳೇನು, ಇವನ್ನು ತಪ್ಪಿಸಲು ಸಾಧ್ಯವೇ ಎಂದು ಕೊಂಚ ತಿಳಿದುಕೊಳ್ಳುವುದು ಉತ್ತಮ.

ಅನೇಕರು ಹುಟ್ಟಿನಿಂದ ಆರೋಗ್ಯದಿಂದಿದ್ದು, ಕ್ರಮೇಣ ವಯೋಸಹಜ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಕೆಲವರು ಜನ್ಮಜಾತ ಕಾಯಿಲೆಯಿಂದಲೋ ಅಥವಾ ಆನುವಂಶಿಕಕಾಗಿ ಬರುವ ಕಾಯಿಲೆಗಳಿಂದಲೋ ಬಳಲುತ್ತಾರೆ. ಕೆಲವೇ ಕೆಲವು ಅದೃಷ್ಟಶಾಲಿಗಳು ತಮ್ಮ ಜೀವಮಾನದ ಏಳೆಂಟು ದಶಕಗಳನ್ನು ಆರೋಗ್ಯಪೂರ್ಣರಾಗಿಯೇ ಕಳೆಯುತ್ತಾರೆ. ಇದರ ಜೊತೆ ಇಂದಿನ ಕಲುಷಿತ ವಾತಾವರಣ, ಧಾವಂತದ ಜೀವನಶೈಲಿ ಮತ್ತು ಸಂಸ್ಕರಿತ ಆಹಾರಪದಾರ್ಥಗಳ ಸೇವನೆ ಅರೋಗ್ಯ-ಅನಾರೋಗ್ಯದ ನಡುವಿನ ಅಂತರವನ್ನು ಕಡಿಮೆ ಮಾಡಿಬಿಟ್ಟಿವೆ.

ಅನೇಕರಲ್ಲಿ ಕಾಯಿಲೆಗಳು ಯಾವುದೋ ಒಂದು ಹಂತದಲ್ಲಿ ದೇಹದಲ್ಲಿ ಬೀಡುಬಿಡುತ್ತವೆ. ಕ್ರಮೇಣ ಮುಂದಿನ ಹಂತಕ್ಕೆ ಬೆಳೆಯುತ್ತವೆ. ಪ್ರಾಥಮಿಕ ಹಂತದಲ್ಲಿ ಈ ಕಾಯಿಲೆಗಳು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಹಾಗಾಗಿ ಇವುಗಳ ಪತ್ತೆಯು ಕಷ್ಟ. ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾದಾಗ ಕೂಡ ಕೆಲವರು ವೈದ್ಯರ ಬಳಿ ಹೋಗಲು ಮೀನಾಮೇಷ ಎಣಿಸುತ್ತಾರೆ. ತೊಂದರೆ ಎದುರಾಗುವುದು ಇಲ್ಲಿಯೇ! ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ ಕಾಯಿಲೆಗಳನ್ನು ಪತ್ತೆಮಾಡಿ ಸೂಕ್ತಚಿಕಿತ್ಸೆ ನೀಡಿ ಗುಣಪಡಿಸುವಂತಿದ್ದರೆ ಎಷ್ಟು ಚೆನ್ನವಲ್ಲವೇ?

ಹಿಂದೆ ಕಾಡುತ್ತಿದ್ದ ಟಿಬಿ, ಕುಷ್ಠರೋಗ, ಕಾಲರಾ ಮತ್ತು ಅಯೋಡಿನ್ ಕೊರತೆಯಂತಹ ರೋಗಗಳು ವಿರಳವಾಗಿರುವುದರಿಂದ ಜೀವನಶೈಲಿ ಸಂಬಂಧಿತ ರೋಗಗಳು ಈಗ ಮುಂಚೂಣಿಗೆ ಬಂದಿವೆ. ಬಿಪಿ, ಮಧುಮೇಹ, ಬೊಜ್ಜು, ಕ್ಯಾನ್ಸರ್ ಮತ್ತು ಅಸ್ತಮಾದಂತಹ ಕಾಯಿಲೆಗಳು ಈಗ ಜನರನ್ನು ಹೆಚ್ಚು ಕಾಡುತ್ತಿವೆ. ಇವುಗಳಲ್ಲಿ ಬಹುತೇಕ ಕಾಯಿಲೆಗಳು ತಲೆಮಾರಿನಿಂದ ತಲೆಮಾರಿಗೆ ದಾಟಿಬರುತ್ತವೆ. ನಾವು ಕೆಲವೊಂದು ತಪಾಸಣೆಗಳನ್ನು ಮಾಡಿಸುವ ಮೂಲಕ ಈ ಕಾಯಿಲೆಗಳನ್ನು ಪ್ರಾಥಮಿಕ ಹಂತದಲ್ಲೇ ಪತ್ತೆಮಾಡಿ ಚಿಕಿತ್ಸೆ ನೀಡಬಹುದು. ಆಹಾರ, ವ್ಯಾಯಾಮ, ಜೀವನಶೈಲಿ ಬದಲಾವಣೆ ಅಥವಾ ಕೆಲವೇ ಮಾತ್ರೆಗಳಿಂದ ರೋಗವನ್ನು ಗುಣಪಡಿಸಬಹುದು ಅಥವಾ ಹದ್ದುಬಸ್ತಿನಲ್ಲಿಡಬಹುದು. ಅನೇಕ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆಗೆಂದೇ ವಿವಿಧ ಪ್ಯಾಕೇಜುಗಳು ಇರುತ್ತವೆ. 

ಈ ಮುಂಜಾಗೃತಾ ತಪಾಸಣೆಗಳನ್ನು ಎರಡು ರೀತಿ ವರ್ಗೀಕರಿಸಬಹುದು. ಕುಟುಂಬದಲ್ಲಿ ಯಾವುದೇ ಆರೋಗ್ಯಸಮಸ್ಯೆ ಇಲ್ಲದಿರುವರಿಗಾಗಿ ಮತ್ತು ಕುಟುಂಬದಲ್ಲಿ ಈಗಾಗಲೇ ಕೆಲವೊಂದು ಆರೋಗ್ಯಸಮಸ್ಯೆಗಳಿಂದ ಬಳಲುತ್ತಿರುವವರಿಗಾಗಿ. ಮೊದಲನೇ ವರ್ಗದ ಆರೋಗ್ಯವಂತ ಜನರು ಸುಮಾರು 40 ವರ್ಷದ ವರೆಗೆ ಯಾವುದೇ ಮುಂಜಾಗೃತಾ ತಪಾಸಣೆಗಳನ್ನು ಮಾಡಿಸಿಕೊಳ್ಳುವ ಅವಶ್ಯಕತೆಯಿಲ್ಲ. 40 ವರ್ಷದ ನಂತರ ವರ್ಷಕ್ಕೊಮ್ಮೆ ತೂಕ, ಬಿಪಿ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಂಡರೆ ಸಾಕು. ಸಂದರ್ಭನುಸಾರ ಕೆಲವೊಮ್ಮೆ ತಜ್ಞವೈದ್ಯರ ಸಲಹೆಯ ಪ್ರಕಾರ ಕಣ್ಣಿನ ಪರೀಕ್ಷೆ ಮತ್ತು ಇಸಿಜಿ ಬೇಕಾಗಬಹುದು. ಅದೇ ರೀತಿ ಸ್ತ್ರೀಯರು ಗರ್ಭಕೋಶದ ಕೊರಳಿನ ಕ್ಯಾನ್ಸರನ್ನು ತಡೆಗಟ್ಟಲು 3 ವರ್ಷಕ್ಕೊಮ್ಮೆ PAP ಪರೀಕ್ಷೆಯೊಂದನ್ನು ಮಾಡಿಸಿಕೊಳ್ಳಬೇಕು.

ಇನ್ನು ಎರಡನೆಯ ವರ್ಗಕ್ಕೆ ಬಂದರೆ ಇವರ ಸಂಖ್ಯೆಯೇ ಈಗ ಹೆಚ್ಚು. ಸಂಪೂರ್ಣ ಆರೋಗ್ಯವಂತ ತುಂಬುಕುಟುಂಬವನ್ನು ಹುಡುಕುವುದು ಸಾವಿಲ್ಲದ ಮನೆಯಿಂದ ಸಾಸಿವೆ ತಂದಂತೆಯೇ! ಇನ್ನೂ ಕಾಯಿಲೆಗೆ ಸಿಲುಕದ ಯುವಪೀಳಿಗೆಯನ್ನು ಸಂರಕ್ಷಿಸುವುದೇ ಈ ಮುಂಜಾಗೃತಾ ತಪಾಸಣೆಗಳನ್ನು ಮಾಡಿಸುವ ಮುಖ್ಯ ಉದ್ದೇಶ. ಇಲ್ಲಿಯೂ ಕೂಡ ಸುಮಾರು 30 ವರ್ಷದೊಳಗಿನ ಸಂಪೂರ್ಣ ಆರೋಗ್ಯವಂತ ಯುವಪೀಳಿಗೆ ಯಾವುದೇ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಆದರೆ ನಂತರದ ವರ್ಷಗಳಲ್ಲಿ ಅವರ ಕುಟುಂಬದಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಕಾಯಿಲೆಯ ಆಧಾರದ ಮೇಲೆ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ಹಿರಿಯರಲ್ಲಿ ಬಿಪಿ ಅಥವಾ ಹೃದಯಸಂಬಂಧಿ ಕಾಯಿಲೆ ಇದ್ದಲ್ಲಿ ಅವರ ಮಕ್ಕಳು ಕೂಡ ಮೇಲೆ ತಿಳಿಸಿದಂತೆ ಕಾಲಕಾಲಕ್ಕೆ ತೂಕ, ಬಿಪಿ ಮತ್ತು ಕೆಲವೊಮ್ಮೆ ಇಸಿಜಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಕಾನ್ಸರ್ ಪೀಡಿತರ ಮಕ್ಕಳಿಗೂ ಮುಂಜಾಗ್ರತೆಯಾಗಿ ಕೆಲವು ತಪಾಸಣೆಗಳನ್ನು ಮಾಡಿಸಬಹುದು. ಪಾಶ್ಚಾತ್ಯ ದೇಶಗಳಲ್ಲಿ ‘ಜೀನೋಮ್ ಸೀಕ್ವೆನ್ಸಿಂಗ್’ ಎಂಬ ಪರೀಕ್ಷೆಯನ್ನು ಮಕ್ಕಳಲ್ಲಿ ಮಾಡಿ, ಅವರ ಆಯುಸ್ಸು ಮತ್ತು ಅವರಿಗೆ ಮುಂದೆ ಬರಬಹುದಾದ ಕೆಲವು ಕಾಯಿಲೆಗಳನ್ನು ಅಂದಾಜಿಸಿ, ಅವುಗಳನ್ನು ತಡೆಗಟ್ಟುವ ಜೀವನಶೈಲಿಯನ್ನು ಕಲಿಸುತ್ತಾರೆ.

ರೋಗಗಳು ಬರದಂತೆ ತಡೆಗಟ್ಟುವಲ್ಲಿ ಆಹಾರ, ವ್ಯಾಯಾಮ ಮತ್ತು ಸಕ್ರಿಯ ಜೀವನಶೈಲಿಯ ಮಹತ್ವವನ್ನು ಯಾರೂ ಅಲ್ಲಗೆಳೆಯಲಾರರು. ಹೀಗಿದ್ದರೂ ಈ ಮುಂಜಾಗ್ರತಾ ಪರೀಕ್ಷೆಗಳು ನಮ್ಮನ್ನು ರೋಗಪತ್ತೆಯಲ್ಲಿ ಒಂದು ಹೆಜ್ಜೆ ಮುಂದಿರುವಂತೆ ನೋಡಿಕೊಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT