ಶನಿವಾರ, ಡಿಸೆಂಬರ್ 4, 2021
26 °C

ವಿಚ್ಛೇದನ ದಂಪತಿಗೆ ಮಾತ್ರ ಮಕ್ಕಳ ಕ್ಷೇಮದಲ್ಲಿದೆ ಇಬ್ಬರದೂ ಪಾತ್ರ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ಮನರಂಜನಾ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಸುನಿಧಿ ಚಾವ್ಲಾ ಹಾಗೂ ಆಶ್ರಯ್‌ ಕಾಮತ್‌ ದಂ‍ಪತಿ ಹದಿನೈದು ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಹತ್ತು ವರ್ಷದ ಇಬ್ಬರು ಮುದ್ದಾದ ಅವಳಿ ಮಕ್ಕಳಿದ್ದಾರೆ. ಈ ಜೋಡಿಯ ಅನ್ಯೋನ್ಯತೆ ಕಂಡು ಅಸೂಯೆಪಟ್ಟವರೇ ಹೆಚ್ಚು, ಅಷ್ಟು ಸುಂದರವಾಗಿತ್ತು ಅವರ ಸಂಸಾರ ಬಂಧನ. ಆದರೆ ಕಳೆದ ಕೆಲವು ತಿಂಗಳ ಹಿಂದೆ ಈ ಇಬ್ಬರು ಪರಸ್ಪರ ಸಹಮತದೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದರು. ವಿಚ್ಛೇದನಕ್ಕೆ ಕಾರಣ ಮಾತ್ರ ವೈಯಕ್ತಿಕವಾಗಿತ್ತು. ಕಾನೂನಾತ್ಮಕವಾಗಿ ವಿಚ್ಛೇದನ ಪಡೆದು ಬೇರೆ ಬೇರೆ ವಾಸಿಸಲು ಆರಂಭಿಸಿದ ಮೇಲೂ ಈ ಜೋಡಿ ಆಗಾಗ ಮಕ್ಕಳೊಂದಿಗೆ ಪ್ರವಾಸಕ್ಕೆ ಹೋಗುವುದು, ಶಾಪಿಂಗ್, ಸಿನಿಮಾ ಎಂದು ಸುತ್ತಾಟ ಮಾಡುತ್ತಲೇ ಇದ್ದಾರೆ. ಇದರಿಂದ ಮಕ್ಕಳೂ ಸಂತೋಷವಾಗಿದ್ದಾರೆ.

ಇತ್ತೀಚೆಗೆ ಇಂಥದ್ದೊಂದು ಟ್ರೆಂಡ್ ಹೆಚ್ಚು ಸದ್ದು ಮಾಡುತ್ತಿದೆ. ಅನ್ಯೋನ್ಯವಾಗಿದ್ದ ದಂಪತಿ ಇದ್ದಕ್ಕಿದ್ದ ಹಾಗೇ ಕಾನೂನಿನ ಮೂಲಕವೇ ದೂರವಾಗಿ ಬೇರೆ ಬೇರೆಯಾಗಿ ವಾಸಿಸುತ್ತಿರುತ್ತಾರೆ. ಆದರೆ ಸಮಯ ಸಿಕ್ಕಾಗಲೆಲ್ಲಾ ಕುಟುಂಬದವರೊಂದಿಗೆ, ಮಕ್ಕಳೊಂದಿಗೆ ಒಂದಾಗಿ ಹೊರ ಹೋಗುವುದು, ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ಮಾಡುತ್ತಾರೆ. ತಮ್ಮ ಮಕ್ಕಳ ಕಾರಣದಿಂದ ವಿಚ್ಛೇದನದ ಬಳಿಕವೂ ಪೋಷಕರು ಭೇಟಿಯಾಗುವುದನ್ನು ಹಲವು ಸೆಲೆಬ್ರೆಟಿಗಳಲ್ಲೂ ನೋಡಬಹುದು.

ಬಾಲಿವುಡ್‌ನ ಅಮೀರ್‌ ಖಾನ್‌–ಕಿರಣ್ ರಾವ್‌, ಹೃತಿಕ್ ರೋಷನ್‌–ಸುಸಾನೆ ಖಾನ್‌ ದಂಪತಿ ಕೂಡ ಇದೇ ರೀತಿ ವಿಚ್ಛೇದನ ಪಡೆದ ನಂತರವೂ ಮಕ್ಕಳಿಗಾಗಿ ಆಗಾಗ ಭೇಟಿಯಾಗುತ್ತಿರುತ್ತಾರೆ. ಈ ರೀತಿ ಭೇಟಿಯಾಗುವ ಮೂಲಕ ಮಕ್ಕಳಿಗೆ ತಂದೆ–ತಾಯಿ ಇಬ್ಬರ ಒಡನಾಟವೂ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ಈ ಭೇಟಿಯಿಂದ ಮಕ್ಕಳ ಮನಸ್ಸಿನ ಮೇಲೆ ತಮ್ಮ ವಿಚ್ಛೇದನದ ಪರಿಣಾಮವಾಗದಂತೆ ನೋಡಿಕೊಳ್ಳುತ್ತಿದ್ದಾರೆ. 

ವಿಚ್ಛೇದನಕ್ಕೂ ಮುನ್ನ...

* ಪೋಷಕರು ಮಕ್ಕಳಿಗೆ ತಮ್ಮ ವಿಚ್ಛೇದನದ ಕುರಿತು ಮೊದಲೇ ತಿಳಿಸಬೇಕು. ತಾವು ದೂರವಾಗುತ್ತಿರುವ ಕಾರಣವನ್ನೂ ವಿವರಿಸಿ ಅರ್ಥವಾಗುವಂತೆ ಹೇಳಬೇಕು. ಸಾಧ್ಯವಾದರೆ ಅವರ ಒಪ್ಪಿಗೆ ಪ‍ಡೆದೇ ವಿಚ್ಛೇದನದಲ್ಲಿ ಮುಂದುವರಿಯುವುದು ಉತ್ತಮ.

* ವಿಚ್ಛೇದನದ ನಂತರ ಮಕ್ಕಳು ಸಂಪೂರ್ಣ ಜವಾಬ್ದಾರಿ ಯಾರದ್ದು ಎಂಬುದನ್ನು ಮೊದಲೇ ನಿರ್ಧರಿಸಬೇಕು. ಮಕ್ಕಳು ಯಾರ ಜೊತೆ ಇರಲು ಮಾನಸಿಕವಾಗಿ ಒಪ್ಪಿಕೊಂಡಿದ್ದಾರೆ ಎಂಬುದನ್ನು ಅವರ ಜೊತೆಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. 12 ವರ್ಷದ ನಂತರದ ನ್ಯಾಯಾಲಯವು ಮಕ್ಕಳ ಬಳಿ ‘ಪೋಷಕರಲ್ಲಿ ಯಾರ ಜೊತೆ ಇರಲು ಇಷ್ಟ?’ ಎಂದು ಕೇಳಿ ನಿರ್ಧಾರ ತೆಗೆದುಕೊಳ್ಳುತ್ತದೆ. ಆದರೂ ಪೋಷಕರೂ ಕೂಡ ಈ ಬಗ್ಗೆ ಮೊದಲೇ ತಿಳಿದುಕೊಂಡಿರುವುದು ಉತ್ತಮ.

ವಿಚ್ಛೇದನದ ನಂತರದ ಭೇಟಿ

* ವಿಚ್ಛೇದನ ಪಡೆದುಕೊಂಡ ನಂತರವೂ ದಂಪತಿ ಆಗಾಗ ಮಕ್ಕಳೊಂದಿಗೆ ಭೇಟಿಯಾಗುವುದು ಮಕ್ಕಳ ಮಾನಸಿಕ ಹಿತಾಸಕ್ತಿಯ ದೃಷ್ಟಿಯಿಂದ ಉತ್ತಮ.

* ತಾವು ಹುಟ್ಟಿದಾಗಿನಿಂದ ಜೊತೆಯಾಗಿಯೇ ಇದ್ದ ಪೋಷಕರು ಇದ್ದಕ್ಕಿದ್ದಂತೆ ದೂರವಾಗಿ ಇರುವುದನ್ನು ಒಪ್ಪಿಕೊಳ್ಳಲು ಮಕ್ಕಳು ಮಾನಸಿಕವಾಗಿ ಸಿದ್ಧರಿರುವುದಿಲ್ಲ. ಪೋಷಕರ ವಿಚ್ಛೇದನ ಎನ್ನುವುದು ಅವರಲ್ಲಿ ಖಿನ್ನತೆ, ಆತಂಕ, ಭವಿಷ್ಯದ ಭದ್ರತೆಯ ಬಗ್ಗೆ ಚಿಂತೆ ಮುಂತಾದ ವಿಷಯಗಳನ್ನು ಮನಸ್ಸಿನಲ್ಲಿ ಹುಟ್ಟುಹಾಕುವಂತೆ ಮಾಡುತ್ತದೆ. ಇದರಿಂದ ಅವರು ಮಾನಸಿಕವಾಗಿ ಬಳಲಬಹುದು. ಆ ಕಾರಣಕ್ಕೆ ಪೋಷಕರು ಆಗಾಗ ಭೇಟಿ ಮಾಡುವುದು ಸೂಕ್ತ ಎನ್ನುತ್ತಾರೆ ಆಪ್ತಸಮಾಲೋಚಕಿ ಜಾಹ್ನವಿ.

* ಕಾನೂನಾತ್ಮಕವಾಗಿ ಮಗುವಿನ ಸಂಪೂರ್ಣ ಜವಾಬ್ದಾರಿ ಪೋಷಕರಲ್ಲಿ ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರದ್ದೇ ಆಗಿರುತ್ತದೆ. ಕೆಲವೊಮ್ಮೆ ಜಂಟಿಯಾಗಿ ಜವಾಬ್ದಾರಿ ನಿರ್ವಹಿಸುವಂತೆ ನ್ಯಾಯಾಲಯ ಆದೇಶ ನೀಡಿರುತ್ತದೆ. ನ್ಯಾಯಾಲಯದ ಆದೇಶ ಏನೇ ಇದ್ದರೂ ಮಕ್ಕಳ ಹಿತಾಸಕ್ತಿಯಿಂದ ಪೋಷಕರಿಬ್ಬರೂ ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುವುದು ಉತ್ತಮ.

* ವಿಚ್ಛೇದಿತ ದಂಪತಿಯ ಮಕ್ಕಳು ಸಾಮಾಜಿಕವಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಮಕ್ಕಳಲ್ಲಿ ಇಂತಹ ಸಮಸ್ಯೆ ಎದುರಾಗುವುದನ್ನು ತಡೆಯಲೂ ಕೂಡ ಪೋಷಕರಿಬ್ಬರೂ ಮಕ್ಕಳೊಂದಿಗೆ ಆಗಾಗ ಭೇಟಿ ಮಾಡುತ್ತಿರಬೇಕು. ಇದರಿಂದ ಮಕ್ಕಳಿಗೆ ತಮ್ಮ ತಂದೆ–ತಾಯಿ ದೂರವಾಗಿದ್ದಾರೆ ಎಂಬ ಭಾವನೆ ಮೂಡುವುದಿಲ್ಲ.

* ಪೋಷಕರ ನಡುವೆ ಯಾವುದೇ ಭಾವನೆ ಇರಲಿ, ಇಲ್ಲದಿರಲಿ ಮಕ್ಕಳು ಮಾತ್ರ ಇವರು ತಮ್ಮ ತಂದೆ–ತಾಯಿ ಎಂದುಕೊಂಡು ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಹಚ್ಚಿಕೊಂಡಿರುತ್ತಾರೆ. ಆ ಭಾವನೆಯನ್ನು ಅವರಿಂದ ಕಸಿಯವುದು ಒಳ್ಳೆಯದಲ್ಲ. ಆ ಕಾರಣಕ್ಕೂ ಭೇಟಿ ಅಗತ್ಯ.

* ಮಕ್ಕಳಲ್ಲಿ ಸುರಕ್ಷತೆ ಭಾವನೆ ಮೂಡಿಸಲು ಕೂಡ ಸಹಕಾರ ಅವಶ್ಯ. ಮಕ್ಕಳಿಗೆ ತಂದೆ–ತಾಯಿ ಇಬ್ಬರ ಪ್ರೀತಿ, ವಿಶ್ವಾಸ ದೊರೆತಾಗ ಅವರಲ್ಲಿ ಸುರಕ್ಷತೆಯ ಭಾವನೆ ಮೂಡುವ ಜೊತೆಗೆ ಆತ್ಮವಿಶ್ವಾಸವೂ ಹೆಚ್ಚುತ್ತದೆ.

* ವಿಚ್ಛೇದನದ ನಂತರದ ಪೋಷಕರ ಭೇಟಿಯಿಂದಾಗಿ ಮಕ್ಕಳಲ್ಲಿ ಒಂದೇ ರೀತಿಯ ನೀತಿ–ನಿಯಮ, ಶಿಸ್ತು ರೂಢಿಸಿಕೊಳ್ಳಲು ನೆರವಾಗುತ್ತದೆ. ಇಬ್ಬರ ನಿರೀಕ್ಷೆಯಂತೆಯೇ ಮಗು ಕೂಡ ಬೆಳೆಯಲು ಸಹಕಾರಿ.

* ಪೋಷಕರಿಬ್ಬರೂ ವಿಚ್ಛೇದನದ ನಂತರವೂ ಚೆನ್ನಾಗಿದ್ದರೆ ಮಕ್ಕಳಲ್ಲಿ ಸಮಸ್ಯೆಯನ್ನು ಎದುರಿಸುವ ಗುಣ ಬೆಳೆಯುತ್ತದೆ. ಮಕ್ಕಳಲ್ಲಿ ಧೈರ್ಯವೂ ಹೆಚ್ಚುತ್ತದೆ.

* ಸಂಬಂಧದಲ್ಲಿನ ಬಾಂಧವ್ಯದ ಬಗ್ಗೆ ತಿಳಿದುಕೊಳ್ಳಲು ಕೂಡ ಮಕ್ಕಳಿಗೆ ಇದೊಂದು ದಾರಿಯಿದ್ದಂತೆ. ಹಾಗಾಗಿ ಪೋಷಕರು ಖುಷಿಯಿಂದ ಭೇಟಿಯಾಗುವುದು ಬಾಂಧವ್ಯ ವೃದ್ಧಿಗೂ ಕಾರಣವಾಗುತ್ತದೆ. ಕೌಟುಂಬಿಕ ಸೌಹಾರ್ದತೆಯ ಬಗ್ಗೆ ತಿಳಿದುಕೊಳ್ಳಲು ಇದರಿಂದ ಸಾಧ್ಯ.

ಹೀಗೆ ಮಾಡದಿರಿ

* ಮಕ್ಕಳಿಗೆ ಬೇಸರವಾಗುತ್ತದೆ ಎಂಬ ಕಾರಣಕ್ಕೆ ನೆಪ ಮಾತ್ರದ ಭೇಟಿ ಬೇಡ. ಮಕ್ಕಳು ಎದುರಿಗೆ ಆದಷ್ಟು ಸಹಜವಾಗಿಯೇ ಇರಿ.

* ಮಕ್ಕಳನ್ನು ನಿಮ್ಮ ನಡುವಿನ ಸಂವಹನಕ್ಕೆ ಸಂಪರ್ಕಕೊಂಡಿಯನ್ನಾಗಿ ಮಾಡಿಕೊಳ್ಳಬೇಡಿ.

* ವಿಚ್ಛೇದನದ ನಂತರದ ಭೇಟಿ ಸ್ನೇಹಿತರ ಭೇಟಿಯಂತಿರಲಿ. ಅಲ್ಲಿ ಜಗಳ, ಮನಸ್ತಾಪವಾಗದಂತೆ ನೋಡಿಕೊಳ್ಳಿ.

* ‘ಕೇವಲ ನಿನಗಾಗಿ ಅವರನ್ನು ಭೇಟಿ ಮಾಡಿದೆ’ ಎಂದು ಮಗುವಿನ ಮನಸ್ಸಿನಲ್ಲಿ ಬರುವಂತೆ ಮಾಡಬೇಡಿ.

ಪೋಷಕರ ವಿಚ್ಛೇದನ ಎನ್ನುವುದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರದೇ ಇರದು. ಪೋಷಕರ ನಡುವಿನ ದೀರ್ಘಕಾಲದ ಸಂಘರ್ಷವು ವಿಚ್ಛೇದನದಲ್ಲಿ ಅಂತ್ಯಗೊಳ್ಳಬಹುದು. ಆದರೆ ಈ ಅಂತ್ಯವು ಮಕ್ಕಳ ಮಾನಸಿಕ ವೇದನೆಯ ಆರಂಭವಾಗಬಾರದು. ಆ ಕಾರಣಕ್ಕೆ ವಿಚ್ಛೇದನದ ನಂತರವೂ ದಂಪತಿ ಜೊತೆಯಾಗಿ ಭೇಟಿ ಮಾಡುವುದು, ಹಬ್ಬ–ಹರಿದಿನಗಳನ್ನು ಒಂದಾಗಿ ಆಚರಿಸುವುದು, ಹುಟ್ಟುಹಬ್ಬವನ್ನು ಒಟ್ಟಾಗಿ ಆಚರಣೆ ಮಾಡುವುದು, ಶಾಪಿಂಗ್ ಹೋಗುವುದು ಮುಂತಾ‌ದುವನ್ನು ಮಾಡಬೇಕು. ಇದರಿಂದ ಮಕ್ಕಳು ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಸೃದಢರಾಗುತ್ತಾರೆ

- ಜಾಹ್ನವಿ ಪಿ., ಆಪ್ತಸಮಾಲೋಚಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು