ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ತಿನ್ನುತ್ತಿದ್ದೀರಾ? ಮನೋವ್ಯಾಕುಲತೆ ಇರಬಹುದು!

Last Updated 11 ಜೂನ್ 2021, 16:15 IST
ಅಕ್ಷರ ಗಾತ್ರ

ಜಾನಕಿ ಗೃಹಿಣಿ. ಲಾಕ್‌ಡೌನ್ ಆರಂಭವಾದಾಗಿನಿಂದ ಅವಳ ಬದುಕಿನ ಶೈಲಿಯೇ ಬದಲಾಗಿ ಬಿಟ್ಟಿದೆ. ಮೊದಲಿನ ದಿನಗಳ ಬೆಳಗಿನ ವಾಕಿಂಗ್, ಸಂಜೆಯ ಶಟ್ಲ್ ಕಾಕ್ ಎಲ್ಲದಕ್ಕೂ ವಿರಾಮ ಬಿದ್ದಿದೆ. ಆ ಸಮಯದಲ್ಲಿ ಮನಸ್ಸನ್ನು ಹಗುರವಾಗಿಸುತ್ತಿದ್ದ ಗೆಳತಿಯರೊಡನೆಯ ಮಾತು-ನಗು ಕೂಡ ಇಲ್ಲದಂತಾಗಿದೆ. ಇಡೀ ದಿನ ಮನೆಯಲ್ಲಿಯೇ ಇರುವ ಪತಿ ಮತ್ತು ಮಕ್ಕಳ ಬೇಕು-ಬೇಡಗಳನ್ನು ಗಮನಿಸುವುದಷ್ಟೇ ಆಕೆಯ ಕೆಲಸ ಈಗ. ದೇಹಕ್ಕೆ ಯಾವ ವ್ಯಾಯಾಮವೂ ಇಲ್ಲದಂತಾಗಿದೆ. ನಿಧಾನವಾಗಿ ಹೆಚ್ಚುತ್ತಿರುವ ಸೊಂಟದ ಸುತ್ತಲಿನ ಕೊಬ್ಬು ಅವಳ ಆತಂಕವನ್ನು ಹೆಚ್ಚಿಸಿದೆ. ಆತಂಕ ಹೆಚ್ಚಾಗುತ್ತಲೂ ಜಾನಕಿಯ ಚಿತ್ತ ಅಡುಗೆಯ ಮನೆಯತ್ತ ಹೊರಳುತ್ತದೆ. ಕೈಗಳು ಅಡುಗೆ ಮನೆಯ ತಿಂಡಿ ಡಬ್ಬಿಗಳನ್ನು ತಡಕುತ್ತವೆ.

***

ಶೃತಿ ಶಿಕ್ಷಕಿ. ಲಾಕ್‌ಡೌನ್ ಶುರುವಾದಾಗಿನಿಂದ ಮನೆಯಿಂದಲೇ ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ. ಬಿಡುವು ಮಾಡಿಕೊಂಡು ಮಕ್ಕಳು-ಯಜಮಾನರಿಗೆ ಮಾಡಿ ಬಡಿಸುವ ಎಲ್ಲ ಹೆಚ್ಚುವರಿ ತಿಂಡಿಗಳು ಬೇಡವೆಂದರೂ ಅವಳ ಹೊಟ್ಟೆಯನ್ನು ಸೇರುತ್ತಿವೆ. ಮನೆಯಲ್ಲಿಯೇ ಇರುವುದರಿಂದ ಮಕ್ಕಳಿಗೆಂದು ತಂದಿರಿಸಿದ ಬೇಕರಿಯ ತಿಂಡಿ-ತಿನಿಸುಗಳೂ ಅವಳನ್ನು ಪದೇ ಪದೇ ಸೆಳೆಯುತ್ತವೆ. ಪರಿಣಾಮ, ದೇಹದ ತೂಕ ಮೂರು ಕೆಜಿಯಷ್ಟು ಹೆಚ್ಚಾಗಿದೆ. ಇದು ಮನಸ್ಸಿಗೆ ಸಾಕಷ್ಟು ಬೇಸರವನ್ನುಂಟು ಮಾಡಿದೆ. ದುಗುಡ ಹೆಚ್ಚಾಗುತ್ತಲೂ ಅವಳ ಕಾಲುಗಳು ಅಡುಗೆ ಮನೆಯತ್ತ ಹೋಗುತ್ತವೆ. ಕೈಗೆ ಸಿಕ್ಕಿದ್ದನ್ನು ತಿನ್ನತೊಡಗುತ್ತಾಳೆ.

ಇದು ಭಾವನಾತ್ಮಕ ಆಹಾರ ಸೇವನೆ (ಎಮೋಷನಲ್ ಈಟಿಂಗ್). ಹಸಿವು ಎನಿಸದಿದ್ದಾಗಲೂ ಹಿಂದು ಮುಂದು ಯೋಚಿಸದೆಯೇ ಸಿಕ್ಕಿದ್ದನ್ನೆಲ್ಲ ತಿನ್ನುವುದು ಮನಸ್ಸಿನ ಭಾವನೆಗಳ ಏರಿಳಿತದ ಒಂದು ಲಕ್ಷಣ. ಇದು ಮಹಿಳೆಯರಲ್ಲಿ ಹೆಚ್ಚು. ಮನಸ್ಸಿನ ಒತ್ತಡ, ದುಗುಡ, ಚಿಂತೆ, ಆತಂಕ ಹೆಚ್ಚಾದಾಗ ಅದರಿಂದ ಹೊರಬರಲು ಆಕೆ ಹೆಚ್ಚು ತಿನ್ನುವುದನ್ನು ರೂಢಿ ಮಾಡಿಕೊಳ್ಳುತ್ತಾಳೆ. ಆ ಕ್ಷಣದ ಆಹಾರ ಸೇವನೆ ಅವಳ ಮನೋವ್ಯಾಕುಲತೆಯನ್ನು ಕೊಂಚ ಕಡಿಮೆ ಮಾಡುತ್ತದೆ ಮತ್ತು ತಾತ್ಕಾಲಿಕ ನೆಮ್ಮದಿಯನ್ನು ಕೊಡುತ್ತದೆ.

ಕೋವಿಡ್ ನಿರ್ಬಂಧದಿಂದ ಮೊದಲಿನ ವಾಕಿಂಗ್, ಯೋಗ ತರಗತಿಗಳೂ ಮಹಿಳೆಯರಿಗೆ ಇಲ್ಲವಾಗಿದೆ. ಇದರಿಂದಾಗಿ ದೇಹ ಮತ್ತು ಮನಸ್ಸು, ಕ್ರಿಯಾಶೀಲತೆ ಮತ್ತು ಲವಲವಿಕೆಯನ್ನು ಕಳೆದುಕೊಂಡಿವೆ. ಇದರ ಜೊತೆಯಲ್ಲಿಯೇ ಕೊರೊನಾದಿಂದ ಮನೆಯಲ್ಲಿ ಉದ್ಭವಿಸಿರಬಹುದಾದ ಇತರ ಸಂಕಷ್ಟಗಳಿಂದಲೂ ಮನಸ್ಸು ಮುದುಡಿ ಹೋಗುತ್ತದೆ. ಮನಸ್ಸಿನ ತುಮುಲ ಹೆಚ್ಚಾಗುತ್ತಲೂ ಆಕೆ ಹೆಚ್ಚು ಹೆಚ್ಚು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾಳೆ. ತಿನ್ನುವುದು ಹೆಚ್ಚಾದಾಗ ದೇಹದ ತೂಕ ಏರುತ್ತದೆ. ಇದು ಪುನಃ ಆಕೆಯ ಅಸಮಾಧಾನಕ್ಕೆ ಕಾರಣವಾಗುತ್ತದೆ. ಒಟ್ಟಿನಲ್ಲಿ ಒಂದು ವೃತ್ತಾಕಾರದ ಸರಪಳಿಯಂತೆ ಇವು ಆಕೆಯನ್ನು ಬಂಧಿಸುತ್ತವೆ. ದೇಹದ ಕ್ರಿಯಾಶೀಲತೆ, ಮನಸ್ಸಿನ ಪ್ರಫುಲ್ಲತೆ ಮತ್ತು ಆಹಾರ ಸೇವನೆ ಇವು ಮೂರೂ ಒಂದಕ್ಕೊಂದು ಸರಪಳಿಯಂತೆ ಅಂಟಿಕೊಂಡಿವೆ. ಅವು ಮೂರಕ್ಕೂ ಪರಸ್ಪರ ಸಂಬಂಧವಿದೆ. ದೇಹ ಕ್ರಿಯಾಶೀಲವಾಗಿದ್ದರೆ ಮನಸ್ಸೂ ಸಮಸ್ಥಿತಿಯಲ್ಲಿರುತ್ತದೆ. ಮನಸ್ಸು ಸಮಸ್ಥಿತಿಯಲ್ಲಿದ್ದರೆ ಆಹಾರ ಕ್ರಮವೂ ಸದಾ ಎಚ್ಚರಿಕೆಯಿಂದ ಕೂಡಿದ್ದು ನಮ್ಮ ನಿಯಂತ್ರಣಲ್ಲಿರುತ್ತದೆ.

ಆ ವರ್ತುಲದಿಂದ ಹೊರ ಬರಲು ಹೀಗೆ ಮಾಡಿ..

* ದೈನಂದಿನ ನಿಯಮಿತವಾದ ಸರಳ ವ್ಯಾಯಾಮವೇ ಈ ಎಲ್ಲ ಸಮಸ್ಯೆಗಳಿಗೂ ದಿವ್ಯೌಷಧ. ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿಡುವ ಶಕ್ತಿ ವ್ಯಾಯಾಮಕ್ಕಿದೆ.

* ಕಡ್ಡಾಯವಾಗಿ ಬೆಳಗಿನ ಕನಿಷ್ಠ ಮೂವತ್ತು ನಿಮಿಷ ವ್ಯಾಯಾಮಕ್ಕಾಗಿ ಮೀಸಲಿಡಿ.

* ಒಂದೇ ಸ್ಥಳದಲ್ಲಿ ಮೂವತ್ತು ನಿಮಿಷಗಳಿಗೂ ಹೆಚ್ಚುಕಾಲ ಕುಳಿತಿರಬೇಡಿ. ಮನೆಯಲ್ಲಿಯೇ ಓಡಾಡಿ. ಮೆಟ್ಟಿಲುಗಳನ್ನು ಹತ್ತಿ ಇಳಿಯುವುದನ್ನು ಮಾಡಿ. ತಾರಸಿ ಇದ್ದರೆ ಅಲ್ಲಿ ಸ್ವಲ್ಪ ಕಾಲ ವಾಕ್ ಮಾಡಿ.

* ಪದೇ ಪದೇ ಅಡುಗೆ ಮನೆಗೆ ಹೋಗಿ ಕೈಗೆ ಸಿಕ್ಕಿದ್ದನ್ನು ತಿನ್ನುವ ಅಭ್ಯಾಸ ಬಿಡಿ.

* ಬೆಳಗಿನ ಉಪಾಹಾರದ ಮತ್ತು ಮಧ್ಯಾಹ್ನದ ಊಟದ ನಡುವೆ ಏನೂ ತಿನ್ನದಿರಿ.

* ಹಸಿವು ಎನಿಸಿದಾಗ ನೀರು ಕುಡಿಯಿರಿ ಅಥವಾ ಯಾವುದಾದರೂ ಹಣ್ಣು, ಮೊಳಕೆ ಬರಿಸಿದ ಕಾಳುಗಳು ಅಥವಾ ತರಕಾರಿಯ ಪದಾರ್ಥಗಳನ್ನು ಸೇವಿಸಿ.

* ಸಿಹಿ ತಿಂಡಿಗಳು, ಎಣ್ಣೆಯಲ್ಲಿ ಕರಿದ, ಹುರಿದ ಪದಾರ್ಥಗಳು, ಬೇಕರಿ ತಿಂಡಿಗಳ ಸೇವನೆಯನ್ನು ಸಂಪೂರ್ಣ ಮಿತಿಯಲ್ಲಿಡಿ.

* ನಿಜವಾದ ಹಸಿವಿನ ಅನುಭವವಾಗದ ಹೊರತು ಊಟ-ತಿಂಡಿಗೆ ಏಳಬೇಡಿ.

* ನಿಮ್ಮ ಹವ್ಯಾಸಗಳನ್ನು ಪೋಷಿಸಿಕೊಳ್ಳಲು ಈ ಸುಸಮಯವನ್ನು ವಿನಿಯೋಗಿಸಿಕೊಳ್ಳಿರಿ. ಓದು, ಬರವಣಿಗೆ, ಸಂಗೀತ, ಹೂದೋಟದ ಆರೈಕೆ ಮೊದಲಾದ ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಒತ್ತಡದಿಂದ ಹೊರಬನ್ನಿ. ಮನೆಯಲ್ಲಿಯೇ ಹೊಸದೇನಾದರೂ ಕಲಿಯಲು ಪ್ರಯತ್ನಿಸಿ.

* ಸಕಾರಾತ್ಮಕ ಚಿಂತನೆಯನ್ನು ಮಾಡಿ, ಸಮಚಿತ್ತತೆಯನ್ನು ಕಾಪಾಡಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT