ಮಂಗಳವಾರ, ಜನವರಿ 25, 2022
24 °C

ಕ್ಷೇಮ ಕುಶಲ: ಹವಾಮಾನಕ್ಕೆ ಮಂಕಾಗದಿರಿ

ಡಾ. ಶಿವಾನಂದ ಬಿ. ಹಿರೇಮಠ. Updated:

ಅಕ್ಷರ ಗಾತ್ರ : | |

Prajavani

ಬೇಸಿಗೆ ಕಳೆದು ಮಳೆಗಾಲ ಶುರುವಾದರೆ ಏನೋ ಕೊಂಚ ನಿರಾಳ. ಬಿರುಬಿಸಿಲಿನಲ್ಲಿ ನಲುಗಿ, ಸೆಕೆಯಿಂದ ಬಳಲಿರುವ ದೇಹ-ಮನಸ್ಸುಗಳು ಮಳೆಗಾಲದ ತಂಪಾದ ವಾತಾವರಣಕ್ಕೆ ಖುಷಿಪಡುತ್ತವೆ. ಇನ್ನು ಚಳಿಗಾಲ ಶುರುವಾದರೆ ಸಾಕು, ಮುಂಜಾವಿನ ಮಂಜು ಮುಸುಕಿದ ವಾತಾವರಣ, ಚುಮು ಚುಮು ಚಳಿ, ಬೆಚ್ಚಗೆ ಹೊದ್ದು ಮಲಗಬೇಕೆಂಬ ಬಯಕೆ, ಒಂದು ಲೋಟ ಕಾಫಿ... ಆಹಾ! ಚಳಿಗಾಲದ ವರ್ಣನೆಯೇ ಬೇರೆ. ಬಹುಶಃ ಇದೇ ಕಾರಣಕ್ಕೋ ಏನೋ ಕವಿಗಳು ಮಳೆಗಾಲ ಹಾಗೂ ಚಳಿಗಾಲಕ್ಕೆ ತಮ್ಮ ಸಾಹಿತ್ಯದಲ್ಲಿ ನೀಡಿದಷ್ಟು ಪ್ರಾಧಾನ್ಯವನ್ನು ಬೇಸಿಗೆಗೆ ನೀಡಿಲ್ಲ!

ಮಳೆಗಾಲದ ಆರಂಭದಲ್ಲಿ ಮಳೆ, ಮೋಡ, ತಂಪು ನೀಡುತ್ತಿದ್ದ ಮುದ, ಅದೇ ಮಳೆಯು ಸತತವಾಗಿ ಧಾರಾಕಾರವಾಗಿ ಸುರಿಯತೊಡಗಿದರೆ ಏಕತಾನತೆಯು ಮನಸ್ಸನ್ನು ಆವರಿಸಿಕೊಳ್ಳತೊಡಗುತ್ತದೆ. ಉತ್ಸಾಹ, ಉಲ್ಲಾಸಗಳು ಕಡಿಮೆಯಾಗಿ, ನಿರಾಸಕ್ತಿ ಹೆಚ್ಚತೊಡಗುತ್ತದೆ. ಮಳೆಯ ಕಾರಣ ಸಾಮಾಜಿಕ ಕಾರ್ಯಕ್ರಮಗಳೂ ಕಡಿಮೆ, ಹೊರ ಓಡಾಟವೂ ಕಡಿಮೆ. ಒಟ್ಟಿನಲ್ಲಿ ಮಂಕು ಕವಿದಿರುತ್ತದೆ. ಯಾವಾಗ ಸೂರ್ಯನ ದರ್ಶನವಾದೀತೋ ಎಂದು ಹಪಾಹಪಿಸುತ್ತೇವೆ.

ಇದು ನಮ್ಮೆಲ್ಲರ ಸಾಮಾನ್ಯ ಅನುಭವ. ಹಾಗಾದರೆ ನಮ್ಮ ಮನಃಸ್ಥಿತಿಗೂ ಹೊರ ವಾತಾವರಣಕ್ಕೂ ಸಂಬಂಧವಿದೆಯೇ? ಇದ್ದರೆ ಅದಕ್ಕೆ ಕಾರಣಗಳೇನು? ಮಂಕಾದ ವಾತಾವರಣವು ನಮ್ಮ ಮೇಲೆ ಪ್ರಭಾವ ಬೀರದಂತೆ ಮಾಡಲು ಏನು ಮಾಡಬಹುದು?

ಅನಾದಿ ಕಾಲದಿಂದಲೂ ಮನುಷ್ಯ ತನ್ನಲ್ಲಾಗುವ ಬದಲಾವಣೆಗಳಿಗೂ ಹಾಗೂ ನಿಸರ್ಗಕ್ಕೂ ಸಂಬಂಧ ಹುಡುಕುತ್ತ ಬಂದಿದ್ದಾನೆ. ಉದಾಹರಣೆಗೆ, ನಮ್ಮ ಮನಸ್ಸು ಪ್ರಫುಲ್ಲವಾಗಿದ್ದರೆ, ಉತ್ಸಾಹದಿಂದ ಕೂಡಿದ್ದರೆ ನಮ್ಮ ಮನಸ್ಸಿಗೆ ಬರುವುದು ಪ್ರಖರವಾದ ಬಣ್ಣಗಳು, ಬೆಳಕು, ಸೂರ್ಯ, ಹಗಲು, ಆಕಾಶ ಇತ್ಯಾದಿ. ಅದೇ ನಮ್ಮ ಮನಃಸ್ಥಿತಿ ಕೆಟ್ಟಿದ್ದು, ಬೇಜಾರಲ್ಲಿದ್ದರೆ ನೆನಪಿಗೆ ಬರುವುದು, ಮಂಕಾದ ವಾತಾವರಣ, ಮೋಡ, ಕತ್ತಲು, ಮಳೆ ಇತ್ಯಾದಿ (ಕೆಲವೊಂದು ಅಪವಾದಗಳೂ ಇರಬಹುದು). ಇದು ನಮ್ಮ ಐತಿಹಾಸಿಕ, ಸಾಹಿತ್ಯಿಕ ನಂಬಿಕೆ ಇರಬಹುದು. ಇಲ್ಲವೇ ಹವಾಮಾನ ಪಕ್ಷಪಾತವೂ (weather bias) ಇರಬಹುದು.

ಇತ್ತೀಚಿನ ದಿನಗಳಲ್ಲಿ, ಹವಾಮಾನ ವೈಪರೀತ್ಯದಿಂದಾಗಿ ಪದೇ ಪದೇ ವಾರಗಟ್ಟಲೇ ಮೋಡ ಕವಿದ ವಾತಾವರಣ ಹಾಗೂ ಮಳೆ ಸುರಿಯುತ್ತಿದೆ. ಇದರಿಂದ, ವಾರಗಟ್ಟಲೇ ಚಳಿ, ಮೋಡ, ಕತ್ತಲೆ ಕವಿದ ವಾತಾವರಣವಿದ್ದು ದೀರ್ಘಕಾಲದವರೆಗೆ ಸೂರ್ಯನ ದರ್ಶನವೇ ಇರುವುದಿಲ್ಲ. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ನಮ್ಮ ಮನಃಸ್ಥಿತಿಯಲ್ಲಿ ಏರುಪೇರಾಗುತ್ತಿರುತ್ತದೆ. ಸಮಾಜದ ಚೈತನ್ಯವಾಹಿನಿಯಾದ ಯುವಜನತೆ ಇಂತಹ ವಾತಾವರಣದಿಂದ ಪ್ರಭಾವಕ್ಕೊಳಗಾಗುತ್ತಾರೆ. ಅವರಲ್ಲಿ ಈ ಕೆಲವೊಂದು ಚಿಹ್ನೆಗಳು ಕಾಣಿಸಬಹುದು:
ಬೇಜಾರು, ನಿರಾಸಕ್ತಿ, ನಿರುತ್ಸಾಹ,
ಕಿರಿಕಿರಿ, ಹತಾಶೆ, ಸುಸ್ತು, ನಿದ್ರಾಹೀನತೆ; ಇಲ್ಲವೇ ಅತಿಯಾದ ನಿದ್ದೆ,
ಹಸಿವಾಗದೇ ಇರುವುದು,
ಕುಂದಿದ ಆತ್ಮವಿಶ್ವಾಸ,
ಉತ್ಪಾದಕತೆ ಕಡಿಮೆಯಾಗುವುದು.

ಈ ಚಿಹ್ನೆಗಳು ದೀರ್ಘಕಾಲದವರೆಗೆ ಉಳಿದುಕೊಂಡರೆ, ಖಿನ್ನತೆಯೂ ಉಂಟಾಗಬಹುದು.

ಅತಿ ಚಳಿಯ ಪ್ರದೇಶಗಳಲ್ಲಿ (ಸೈಬಿರಿಯಾ, ಆರ್ಕಟಿಕ್ ಸರ್ಕಲ್, ಅಲಾಸ್ಕ, ಅಂಟಾರ್ಟಿಕ) ವಾಸಿಸುವ ಜನರಲ್ಲಿ ‘ಚಳಿಗಾಲದ ಖಿನ್ನತೆ’ (seasonal affective disorder) ಎಂಬ ಮನೋರೋಗ ಕಾಣಿಸುತ್ತದೆ. ಚಳಿಗಾಲದಲ್ಲಿ ಇಂತಹ ಪ್ರದೇಶಗಳಲ್ಲಿ ಸೂರ್ಯನ ಬೆಳಕೇ ಇರುವುದಿಲ್ಲ. ಕತ್ತಲೆಯಲ್ಲಿಯೇ ದೈನಂದಿನ ಬದುಕು ಸಾಗುತ್ತದೆ. ಈ ಚಳಿಗಾಲದ ಖಿನ್ನತೆಯು ಮಹಿಳೆ ಹಾಗೂ ಯುವಜನರಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ನಮ್ಮ ದೇಶದಲ್ಲಿ ತಾಪಮಾನದಲ್ಲಿ ವೈಪರೀತ್ಯ ದೀರ್ಘಕಾಲ ಕಂಡುಬರುವುದಿಲ್ಲವಾದ್ದರಿಂದ ಈ ಕಾಯಿಲೆ ಸಾಮಾನ್ಯವಾಗಿ ಕಂಡುಬರುವುದಿಲ್ಲ.

ಹವಾಮಾನದಿಂದಾಗಿ ಮನಃಸ್ಥಿತಿಯಲ್ಲಾಗುವ ಬದಲಾವಣೆಗೆ ಕಾರಣಗಳೇನು?

ಸೂರ್ಯನ ಬೆಳಕು ಕಡಿಮೆ ಪ್ರಮಾಣದಲ್ಲಿ ಲಭ್ಯವಿರುವುದರಿಂದ, ನಮ್ಮ ದೇಹದ ಜೈವಿಕ ಗಡಿಯಾರದಲ್ಲಿ ಏರುಪೇರಾಗುತ್ತದೆ. ಇದರಿಂದ ನಮ್ಮ ನಿದ್ದೆಯ ಗುಣಮಟ್ಟ ಹಾಗೂ ಅವಧಿಯಲ್ಲಿ ವ್ಯತ್ಯಯವಾಗಿ, ಮನಸ್ಸಿನ ಮೇಲೆ ಪರಿಣಾಮ ಉಂಟಾಗುತ್ತದೆ.

ಮನುಷ್ಯ ದೇಹದ ಸಹಜ ಕ್ರಿಯೆಗಳು ಸರಿಯಾಗಿ ನಡೆಯಲು ಜೀವಸತ್ವ–ಡಿ ಸಹಾಯ ಮಾಡುತ್ತದೆ. ಇದರೆ ಕೊರತೆಯುಂಟಾದರೆ ಎಲುಬು, ಮೆದುಳು, ನರಮಂಡಲಗಳ ಮನಸ್ಸಿನ ಮೇಲೆ ದುಶ್ಪರಿಣಾಮವುಂಟು ಮಾಡುತ್ತದೆ. ಸೂರ್ಯನ ಬೆಳಕು ಜೀವಸತ್ವ–ಡಿಯ ನೈಸರ್ಗಿಕ ಮೂಲ. ಸೂರ್ಯನ ಬೆಳಕಿನ ಕೊರತೆಯಾದರೆ ಜೀವಸತ್ವ–ಡಿಯ ಕೊರತೆಯುಂಟಾಗುತ್ತದೆ.

ಮೆದುಳಿನಲ್ಲಿ ನರವಾಹಕ ಸೆರೊಟೊನಿನ್‌ನ ಕೊರತೆಯುಂಟಾಗುತ್ತದೆ. ಸಾಮಾನ್ಯವಾಗಿ ಸೆರೊಟೊನಿನ್ ಖುಷಿಯ ಭಾವನೆಗಳಿಗೆ ಕಾರಣವಾಗಿದೆ. ಸೂರ್ಯನ ಬೆಳಕಿನ ಕೊರತೆ ಹಾಗೂ ವಿಟಮಿನ್–ಡಿ ಕೊರತೆಯಿಂದಾಗಿ ಸೆರೊಟೊನಿನ್ ಕೊರತೆ ಉಂಟಾಗುತ್ತದೆ.

ಮೆಲಾಟೊನಿನ್ ಎಂಬ ಹಾರ್ಮೋನು ದೇಹದಲ್ಲಿ ಸ್ವಾಭಾವಿಕವಾಗಿ ಕತ್ತಲಿನಲ್ಲಿ ಶ್ರವಿಸುತ್ತದೆ ಹಾಗೂ ನಮ್ಮ ರಾತ್ರಿ ನಿದ್ದೆಯನ್ನು ನಿಯಂತ್ರಿಸುತ್ತದೆ. ಸೂರ್ಯನ ಬೆಳಕಿನ ಅಭಾವವಿದ್ದಲ್ಲಿ, ಮೆಲಾಟೊನಿನ್ ಹೆಚ್ಚಿಗೆ ಶ್ರವಿಸಿ ನಿದ್ದೆ ಮಂಪರು ಹೆಚ್ಚುತ್ತದೆ.

ಹವಾಮಾನ ವೈಪರೀತ್ಯ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರದಿರಲು ಏನು ಮಾಡಬಹುದು?

ದೈನಂದಿನ ದಿನಚರಿ ಕಟ್ಟುನಿಟ್ಟಾಗಿರಲಿ.

 ಪ್ರತಿನಿತ್ಯ ಏಳುವ ಹಾಗೂ ಮಲಗುವ ಸಮಯ ನಿಗದಿತವಾಗಿರಲಿ. ಹಗಲು ಮಲಗುವುದು ನಿಲ್ಲಿಸಿ.

 ನಿಯಮಿತ ದೈಹಿಕ ವ್ಯಾಯಾಮ, ಪರಿಶ್ರಮ, ವಾಕಿಂಗ್ ಮಾಡಬೇಕು

 ಅವಕಾಶವಿದ್ದಾಗಲೆಲ್ಲ, ಸೂರ್ಯನ ಬೆಳಕಿಗೆ ಮೈಯೊಡ್ಡಿ. ಹೊರಾಂಗಣ ಕ್ರೀಡೆ ಸಹಕಾರಿ.

 ವಾತಾವರಣ ಕಡಿಮೆ ಬೆಳಕಿನಿಂದ ಕೂಡಿದ್ದರೆ, ಕೃತಕ ಬೆಳಕಿನಿಂದ ಕೋಣೆಯ ಬೆಳಕನ್ನು ಹೆಚ್ಚಿಸಿಕೊಳ್ಳಿ.

 ಸ್ಕ್ರೀನ್ ಟೈಮ್‌ ಅನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ಬದಲಿಗೆ ಒಳ್ಳೆಯ ಪುಸ್ತಕಗಳನ್ನು ಓದಿ.

ಅತಿಯಾಗಿ ಉತ್ತೇಜಕಗಳಾದ ಕೆಫೀನ್ ಭರಿತ ಪೇಯಗಳನ್ನು ಸೇವಿಸಬೇಡಿ.

ಕುಟುಂಬದೊಂದಿಗೆ ಕಾಲ ಕಳೆಯಿರಿ, ಹಳೆಯ ಗೆಳೆಯರನ್ನು ಸಂಪರ್ಕಿಸಿ. ಒಳ್ಳೆಯ ಹವ್ಯಾಸಗಳನ್ನು ಮರು ಆರಂಭಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು