ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಕುಡಿಯಲು ನೀರಸ ಬೇಡ

Last Updated 23 ಆಗಸ್ಟ್ 2021, 20:45 IST
ಅಕ್ಷರ ಗಾತ್ರ

‘ಹಸಿದಾಗ ಉಣ್ಣು, ಬಾಯಾರಿದಾಗ ಕುಡಿ’ - ಶರೀರಧರ್ಮವನ್ನು ಅರಿಯುವ ವಿಜ್ಞಾನದ ಹೇಳಿಕೆಯಿದು. ಹಸಿವು-ಬಾಯಾರಿಕೆಗಳು ಶಾರೀರಿಕ ಕರೆಗಳು. ಒಟ್ಟೊಟ್ಟಿಗೆ ಬರುತ್ತಿದ್ದರೆ ಅದು ‘ಸ್ವಾಸ್ಥ್ಯ’ಲಕ್ಷಣ. ಅದೆಂತಹ ಸ್ವಾಸ್ಥ್ಯವೆಂದರೆ, ಶಾರೀರಿಕಕ್ರಿಯೆಗಳೆಲ್ಲಾ ಶಾರೀರಿಕ ರಚನೆಗಳ ಸ್ವಭಾವಕ್ಕನುಗುಣವಾಗಿ ಸಕಾಲಕ್ಕೆ ಜರುಗುತ್ತಿದ್ದು, ಮನಸ್ಸು-ಇಂದ್ರಿಯಗಳನ್ನೂ ಅನುಸರಿಸಿಕೊಂಡು ಜೀವಿಸುತ್ತಿರುವ ಸಂತುಲಿತಸ್ಥಿತಿ!

ಬಾಯಾರಿಕೆ: ಶಾರೀರಿಕ ಸಹಜ ಕರೆ!

ದೇಹಕ್ಕೆ ದ್ರವಾಹಾರದ ಅಗತ್ಯವಿದ್ದಾಗ ಇದೇ ಜೈವಿಕ ಸಹಜ ಸೂಚನೆ. ನವಜಾತಶಿಶುವಿನಿಂದಲೇ ಇದು ಸ್ವಗ್ರಹಿಕೆಗೆ ಸಾಧ್ಯ. ಬಾಯಾರಿಕೆ-ಹಸಿವಿಗೆ ಶಿಶುವು ಅತ್ತು ಸೂಚಿಸುತ್ತದೆ, ಬಾಯಿ ಚಪ್ಪರಿಸಿ ಅಮ್ಮನ ಹಾಲಿಗೆ ನಾಲಿಗೆ ಹೊರಳಿಸುತ್ತದೆ. ಎಳೆಹಸುಳೆಗೂ ಸೃಷ್ಟಿಯಿಂದಲೇ ತನ್ನ ಆಹಾರಸೇವನೆಯ ಅಗತ್ಯದ ಅರಿವಿರುತ್ತದೆ. ಪ್ರೌಢರಾಗುತ್ತಿದ್ದಂತೆ ಸಹಜ ಜೈವಿಕ ಸೂಚನೆಗಳ ಬಗ್ಗೆ ನಿರ್ಲಕ್ಷ್ಯ ಮೈಗೂಡಬಹುದು. ಎಲ್ಲೆಂದರಲ್ಲಿ, ಯಾವಾಗಲೆಂದರೆ, ಯಾವ್ಯಾವುದನ್ನೋ ತಿನ್ನುವ/ಕುಡಿಯುವ ದುರಭ್ಯಾಸ ಮೈಗೂಡಿಸಿಕೊಂಡರೆ, ಇದೇ ಎಲ್ಲಾ ರೋಗಕ್ಕೆ ಮೂಲ. ಬಾಯಾರಿಕೆಯೇ ತಿಳಿಯದಿದ್ದರೆ, ಹಸಿವು ತಿಳಿಯುವುದಾದರೂ ಹೇಗೆ?

ಬೆವರಿಗೂ ಬಾಯಾರಿಕೆಗೂ ಸಂಬಂಧ

ಒಂದು ಹನಿಯೂ ಬೆವರು ಸುರಿಸದ ವ್ಯಕ್ತಿಗೆ ಆಗಾಗ ಬಾಯಾರುತ್ತಿದೆಯೆಂದರೆ, ಅದು ರೋಗವೊಂದರ ಮುನ್ಸೂಚನೆ ಅಥವಾ ರೋಗವೊಂದು ಅದಾಗಲೆ ಮನೆ ಮಾಡಿದೆ ಎಂದರ್ಥ. ಹನಿಯನ್ನೂ ಬೆವರಿಸದ ವ್ಯಕ್ತಿಗೆ ಗಮನಾರ್ಹ ಬಾಯಾರಿಕೆಯೇ ಆಗುವುದಿಲ್ಲ. ಬೆವರದ, ಬೆವರಿಸದ, ಬಾಯಾರಿಕೆಯಾಗದ ವ್ಯಕ್ತಿಯು, ಪದೇ-ಪದೇ ನೀರು/ದ್ರವ ಕುಡಿಯುತ್ತಿದ್ದರೆ ರೋಗವೊಂದಕ್ಕೆ ಆಹ್ವಾನ ನೀಡಿದಂತೆ.

ನೀರು ಕುಡಿಯದಿದ್ದರೆ ಅಪಾಯ

ನೀರು ಕೂಡ ಒಂದು ದ್ರವಾಹಾರ. ಇದು ಶರೀರಕ್ಕೆ ನೀಡುವ ಶಕ್ತಿ - ಶೂನ್ಯ ಕ್ಯಾಲೊರಿ. ಶಕ್ತಿದಾಯಕ ಆಹಾರವಲ್ಲದಿದ್ದರೂ ಘನಾಹಾರಗಳ ಪರಿಪೂರ್ಣಪಚನಕ್ಕೆ ದ್ರವಾಹಾರವು ಜೊತೆಗಿರಲೇಬೇಕು. ನೀರಿಲ್ಲದೆ ಅಕ್ಕಿಯು ಅನ್ನವಾಗಿ ಬೇಯಲು ಹೇಗೆ ಸಾಧ್ಯವಿಲ್ಲವೋ ಹಾಗೆ! ಸಕಾಲದಲ್ಲಿ ಬಾಯಾರಿಕೆಯಾಗುತ್ತಿದ್ದರೂ ನೀರನ್ನು ಸೇವಿಸದಿದ್ದರೆ ಬಾಯಿ-ಗಂಟಲು-ನಾಲಿಗೆ ಒಣಗಿ ಕಳೆಗುಂದುವುದು, ಕಿವಿಮಂದವಾಗುವುದು, ಸುಸ್ತು, ಬಹುಬೇಗನೆ ಆಯಾಸವಾಗುವುದು, ಎದೆಯಲ್ಲಿ ಅಸ್ವಸ್ಥತೆ, ಮೂರ್ಛೆಯೂ ತಪ್ಪಬಹುದು.

ಸಾವಕಾಶ ಆಹಾರಸೇವನೆ

ನಮ್ಮ ಜಠರದ ಸುಮಾರು ಒಂದು ಭಾಗದಷ್ಟು ಘನಾಹಾರಸೇವನೆ ಮಾಡಿದರೆ, ಮತ್ತೊಂದು ಭಾಗದಷ್ಟು ದ್ರವಾಹಾರವನ್ನು ಸೇವಿಸಬೇಕು. ಇನ್ನೊಂದು ಭಾಗವನ್ನು ಕರುಳು ಚಲಿಸಲು, ಜೀರ್ಣಕ್ರಿಯೆಯ ಸ್ರಾವಗಳಿಗೂ, ಪೋಷಣೆಗಳು ಹೀರಲ್ಪಡಲು ಅನುವಾಗುವಂತೆ ಅವಕಾಶ ಕಲ್ಪಿಸಬೇಕು. ಹಸಿವು-ಬಾಯಾರಿಕೆಗಳು ನೀಗಿ, ತೃಪ್ತಿಯಾಗಿ ತೇಗುಬಂದರೆ ‘ಸಾವಕಾಶ’ವಾಗಿ ಆಹಾರಸೇವನೆಯಾಗಿದೆ ಎಂದರ್ಥ! ಗಂಟಲಮಟ್ಟದವರೆಗೆ ತಿನ್ನದಿರಿ/ಕುಡಿಯದಿರಿ!

ತಣ್ಣೀರು ಉಪಕಾರಿ

ಮೂರ್ಛೆ ತಪ್ಪಿದಾಗ

ಬಿಸಿಲುಗಾಲದಲ್ಲಿ
ದೇಹದಲ್ಲಿ ಉರಿಯಿದ್ದಾಗ

ವಿಷ ಸೇವಿಸಿದ್ದಾಗ

ವಿಷಜಂತು ಕಡಿದಾಗ

ತಲೆಸುತ್ತುವಾಗ ಅಥವಾ ವಿಷವಸ್ತುಗಳು ದೇಹದಲ್ಲಿ ಇದ್ದಾಗ

ರಕ್ತ ಒಸರುವ ಕಾಯಿಲೆಯಲ್ಲಿ
ರಕ್ತದುಷ್ಟಿಯಿದ್ದಾಗ

ಮದ್ಯಪಾನದಿಂದಾದ ತೊಂದರೆಗಳಲ್ಲಿ

ಸ್ವಲ್ಪವೇ ಕೆಲಸದಿಂದಲೂ ಆಯಾಸವಾಗುವಾಗ

ಕಣ್ಣಿಗೆ ಕತ್ತಲೆ ಬಂದು ಎಚ್ಚರ ತಪ್ಪಿದಾಗ.

ತಣ್ಣೀರು ತೊಂದರೆದಾಯಕ

ಪಕ್ಕೆಲುಬುಗಳ ನೋವಿದ್ದಾಗ

ನೆಗಡಿಯಿದ್ದಾಗ

ನೋವು-ಸೆಳೆತ ಮೊದಲಾದ ವಾತರೋಗಗಳಿದ್ದಾಗ

ಗಂಟಲು ಕಟ್ಟಿದ್ದಾಗ

ಹೊಟ್ಟೆಯುಬ್ಬರವಿದ್ದಾಗ

ಅಜೀರ್ಣವಿದ್ದಾಗ

ದೇಹಶೋಧನಕ್ಕಾಗಿ ಆಯುರ್ವೇದದ ‘ಪಂಚಕರ್ಮಚಿಕಿತ್ಸೆ’ಗೆ ಒಳಪಟ್ಟಿದ್ದಾಗ,

ಜ್ವರಬಂದಾಗ

ಬಿಕ್ಕಳಿಕೆಯ ರೋಗವಿದ್ದಾಗ.

ಎಣ್ಣೆ, ತುಪ್ಪ, ಛರ್ಬಿ, ಮಜ್ಜೆ ಮೊದಲಾದ ಜಿಡ್ಡುಗಳನ್ನು ಆಹಾರದಲ್ಲಿ/ಚಿಕಿತ್ಸೆಗಾಗಿ ಸೇವಿಸಿದ್ದಾಗ ತಣ್ಣೀರಿನ ಸೇವನೆಯು ಹಿತವಲ್ಲ. ಬಿಸಿನೀರು/ಬೇರೆ ಸೂಕ್ತಪಾನೀಯಗಳು ಹಿತಕರ.

ಎಚ್ಚರಿಕೆ

ಬಾಯಿರುಚಿ ಕೆಟ್ಟಿದ್ದಾಗ

ನೆಗಡಿಯಿದ್ದಾಗ

ಬಾಯಿಯಲ್ಲಿ ಎಂಜಲು ತುಂಬಿಕೊಳ್ಳುತ್ತಿದ್ದಾಗ

ವಾಕರಿಕೆಯಿದ್ದಾಗ

ಬಾವು/ಊತದ ಕಾಯಿಲೆಯಲ್ಲಿ

ಸತತವಾಗಿ ತೂಕ ಇಳಿಯುತ್ತಿರುವಾಗ

ಹಸಿವೆಯೇ ಆಗದಿರುವ ವ್ಯಕ್ತಿಗಳಿಗೆ

ಉದರರೋಗದಲ್ಲಿ

ಚರ್ಮದ ಕಾಯಿಲೆಗಳಲ್ಲಿ

ಜ್ವರವಿದ್ದಾಗ

ಕಣ್ಣಿನ ರೋಗಗಳಿದ್ದಾಗ

ವ್ರಣಗಳಿದ್ದಾಗ.

ಮಧುಮೇಹವಿರುವವರು ಸಾಧ್ಯವಾದಷ್ಟೂ ಕಡಿಮೆ ನೀರನ್ನು ಕುಡಿಯುವುದು, ನೀರಿನ ಬದಲು ಸೂಕ್ತ ಪಾನೀಯ/ಸಂಸ್ಕರಿತ ನೀರನ್ನು ಕುಡಿಯುವುದು ಒಳ್ಳೆಯದು. ರೋಗವು ಉಲ್ಬಣಗೊಳ್ಳದಿರಲು, ಶೀಘ್ರವಾಗಿ ಗುಣವಾಗಲು ನೀರಿನ ಸೇವನೆಗೆ ಈ ಎಚ್ಚರಿಕೆ.

ನೀರು ಜೀವನೀಯ

ಸಾವಿನ ಕದ ತಟ್ಟುತ್ತಿರುವ ಜೀವಕ್ಕೆ, ಗುಟುಕು ನೀರು ಕ್ಷಣಕಾಲ ಪ್ರಾಣಧಾರಣೆಗೆ ಕಾರಣವಾಗಬಹುದು/ ಸಾವು ಸುಗಮವಾಗಬಹುದು. ಅಪಘಾತವಾಗಿ ಆಘಾತವಾಗಿದ್ದಾಗ‌ ನೀರಿನ ಹನಿಗಳು ದೇಹ-ಮನಸ್ಸಿಗೆ ಆಶ್ವಾಸನೆಯಾಗುವುದು. ಚೇತರಿಸಿಕೊಳ್ಳಲು ಆಧಾರವಾಗುವುದು. ಬಳಲಿದವರಿಗೆ, ಬಾಯಾರಿದವರಿಗೆ ನೀರು ತರುವಷ್ಟು ತೃಪ್ತಿ ಮತ್ತೊಂದು ಪಾನೀಯ ನೀಡದು. ಅಕಾಲದಲ್ಲಿ ನಿದ್ರೆಯ ಮಂಪರು, ತೂಕಡಿಕೆ, ಆಲಸ್ಯಗಳು, ಹನಿನೀರು ಸೇವಿಸಿದ ಕ್ಷಣಾರ್ಧದಲ್ಲಿ ದೂರವಾಗುವುದು. ಇಂದ್ರಿಯಗಳು ಎಚ್ಚೆತ್ತು ಉತ್ಸಾಹ ಮೂಡುವುದು. ಪ್ರಪಂಚದ ಯಾವುದೇ ಜನಾಂಗದ ಸಾಮಾನ್ಯ ಪಾನೀಯವು ನೀರು ಮತ್ತು ನೀರಿನ ಇತರ ತಯಾರಿಕೆಗಳಾಗಿವೆ.

(ಗ್ರಂಥಋಣ: ಚರಕಸಂಹಿತೆ, ಸುಶ್ರುತಸಂಹಿತೆ, ಅಷ್ಟಾಂಗಹೃದಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT