ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಧಾನವಾಗಿ ತಿನ್ನಿ, ಚೆನ್ನಾಗಿ ಅಗಿದು ತಿನ್ನಿ..

Last Updated 23 ಡಿಸೆಂಬರ್ 2020, 1:47 IST
ಅಕ್ಷರ ಗಾತ್ರ

ಚಿಕ್ಕವರಿದ್ದಾಗ ಕೆಲವರಾದರೂ ಅಮ್ಮನಿಂದ ಹೇಳಿಸಿಕೊಂಡಿರಬಹುದು, ‘ಏನವಸರ ನಿಂಗೆ? ಎಲ್ಲಿಗೆ ಓಡೋಗ್ಬೇಕಾಗಿದೆ? ನಿಧಾನಕ್ಕೆ ತಿನ್ನು. ಗಬಗಬನೆ ತಿಂದರೆ ಹೊಟ್ಟೆ ತುಂಬಿದ್ದೇ ಗೊತ್ತಾಗಲ್ಲ. ಚೆನ್ನಾಗಿ ಅಗಿದು ತಿಂದ್ರೆ ಸರಿಯಾಗಿ ಜೀರ್ಣವಾಗುತ್ತೆ. ಗಂಟಲಿನವರೆಗೆ ಬರುವವರೆಗೂ ತಿಂತಾ ಇರ್ಬೇಡ. ಹೊಟ್ಟೆ ತುಂಬಲು ಇನ್ನೂ ಸ್ವಲ್ಪ ಬೇಕು ಎನಿಸುವಾಗಲೇ ಎದ್ದು ಬಿಡಬೇಕು ’.

ಅಮ್ಮಂದಿರ ಈ ಅನುಭವದ ಮಾತನ್ನೇ ಈಗ ತಜ್ಞರು ಪದೇ ಪದೇ ಹೇಳುವುದು– ನಿಧಾನವಾಗಿ, ತೃಪ್ತಿಯಾಗುವಂತೆ ತಿನ್ನಿ. ಆಹಾರ ಸೇವಿಸುವಾಗ ಮನಸ್ಸು ಅದರತ್ತಲೇ ಇರಲಿ. ಹಾಗೆಯೇ ಏನನ್ನು ತಿನ್ನುತ್ತೇವೋ ಅದರ ರುಚಿ, ಪೌಷ್ಟಿಕಾಂಶದ ಕಡೆ ಗಮನವಿರಲಿ. ಹೊಟ್ಟೆ ತುಂಬಲು ಇನ್ನೂ ಸ್ವಲ್ಪ ಬೇಕು ಎನಿಸಿದಾಗಲೇ ಅಲ್ಲಿಗೇ ನಿಲ್ಲಿಸಿಬಿಡಿ.

ಹೌದು, ಸಂಶೋಧಕರ ಪ್ರಕಾರ, ನೀವು ಏನನ್ನು ಸೇವಿಸಿದರೂ ಹೊಟ್ಟೆ ತುಂಬಿದೆ ಎಂದು ಮೆದುಳಿಗೆ ಗೊತ್ತಾಗಲು 15–20 ನಿಮಿಷ ಬೇಕಂತೆ. ಹೀಗಾಗಿ ನಿಧಾನಕ್ಕೆ ತಿಂದರೆ ಹೊಟ್ಟೆ ತುಂಬಿರುವುದರ ಸಂಕೇತ ನಿಮಗೆ ಲಭಿಸುತ್ತದೆ. ಇಲ್ಲದಿದ್ದರೆ ತುಂಬಿದ ಮೇಲೆಯೂ ಇನ್ನೊಂದಿಷ್ಟು ಆಹಾರ ಹೊಟ್ಟೆ ಸೇರುವುದು ಖಚಿತ. ಅಂದರೆ ಶೇ 80ರಷ್ಟು ಹೊಟ್ಟೆ ತುಂಬಿದೆ ಎಂದು ನೀವು ಅಂದುಕೊಂಡರೂ ಶೇ 100ರಷ್ಟು ತುಂಬಿರುತ್ತದೆ. ಹೀಗಾಗಿ ಅಗತ್ಯಕ್ಕಿಂತ ಹೆಚ್ಚು ಕ್ಯಾಲರಿ ದೇಹಕ್ಕೆ ಸೇರಿಕೊಳ್ಳುವುದು ಸಹಜ.

ಇನ್ನೊಂದು ನಮ್ಮ ಪ್ಲೇಟ್‌ನಲ್ಲಿರುವ ಆಹಾರದ ಪ್ರಮಾಣ. ಅಪರೂಪಕ್ಕೆ ಹೆಚ್ಚು ಕೊಬ್ಬಿರುವ ಮಾಂಸವನ್ನು ಸೇವಿಸಿದರೂ ಅದರ ಪ್ರಮಾಣ ಕೊಂಚವೇ ಇದ್ದರೆ ತೊಂದರೆಯಾಗದು ಎನ್ನುತ್ತಾರೆ ತಜ್ಞರು.

ಕ್ಯಾಲರಿ ಪ್ರಮಾಣ ಅಥವಾ ತೂಕ ಇಳಿಸುವ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಆದರೆ ಯಾವುದನ್ನೂ ತೀರಾ ಹೆಚ್ಚು ಅಥವಾ ಅತ್ಯಂತ ಕಡಿಮೆ ಎಂಬ ಗೋಜಿಗೆ ಹೋಗದೇ ಮಧ್ಯಮ ಪ್ರಮಾಣದಲ್ಲಿ ತಿನ್ನಿ. ಆದರೆ ನಮ್ಮ ದೇಹದ ಪ್ರತಿಕ್ರಿಯೆಗೆ ಗಮನ ಕೊಟ್ಟು ಎಚ್ಚರಿಕೆಯಿಂದ ತಿನ್ನಿ.

ನಿಧಾನವಾಗಿ ತಿಂದರೆ ಎಷ್ಟು ಬೇಕೋ ಅಷ್ಟೇ ತಿನ್ನಬಹುದು. ಹೊಟ್ಟೆ ತುಂಬಿದೆ ಎಂದು ನಮಗೇ ಗೊತ್ತಾಗುತ್ತದೆ. ಅವಸರದಲ್ಲಿ ತಿಂದರೆ ಜಾಸ್ತಿ ಆಹಾರ ಸೇವಿಸುವುದು ಖಚಿತ.

ತಿನ್ನುವಾಗ ಊಟ– ತಿಂಡಿಯ ಮೇಲೆ ಗಮನವಿರಲಿ. ಟಿವಿ, ಮೊಬೈಲ್‌ ಮತ್ತಿತರ ಗ್ಯಾಜೆಟ್‌ಗಳನ್ನು ದೂರವಿಡಿ. ಹೀಗಾಗಿ ನಿಮಗೆ ಅಗತ್ಯವಿರುವಷ್ಟು ತಿನ್ನುವುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಬಹುದು.

ಚಿಕ್ಕ ಪ್ಲೇಟ್‌ ಬಳಸಿದರೆ ಸೇವಿಸುವ ಆಹಾರದ ಪ್ರಮಾಣವೂ ಕಡಿಮೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT