ಗುರುವಾರ , ಮೇ 19, 2022
23 °C

10 ವರ್ಷಗಳ ಬಳಿಕ ನಡೆದಾಡಲಾರಂಭಿಸಿದ ವೃದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಳೆದ 10 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಸುಡಾನ್‌ನ 75 ವರ್ಷದ ವೃದ್ಧರೊಬ್ಬರಿಗೆ ವೈಟ್ ಫೀಲ್ಡ್‌ನ ಮಣಿಪಾಲ್ ಆಸ್ಪತ್ರೆಯಲ್ಲಿ 3ಡಿ ತಂತ್ರಜ್ಞಾನದ ನೆರವಿನಿಂದ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರು ಈಗ ನಡೆದಾಡಲಾರಂಭಿಸಿದ್ದಾರೆ.

ಅಹಮದ್ ಆ್ಯಡಮ್ ಎಂಬುವರು ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಯಾಗಿದ್ದು, ಡಿಸೆಂಬರ್ 20ರಂದು ಆಸ್ಪತ್ರೆಗೆ ಭೇಟಿ ನೀಡಿದ್ದರು. 33 ವರ್ಷಗಳ ಹಿಂದೆ ಅವರು ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದೇ ಜಾಗದಲ್ಲಿ ನೋವು ಕಾಣಿಸಿಕೊಳ್ಳುವ ಜತೆಗೆ ದೇಹದ ಭಾರಕ್ಕೆ ಅವರಿಗೆ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಕಾಲುಗಳು 8 ಸೆಂ.ಮೀ. ಚಿಕ್ಕವಾಗಿದ್ದವು. ಎಕ್ಸ್‌ ರೇ ಮತ್ತು ಸಿಟಿ ಸ್ಕ್ಯಾನ್‌ನಲ್ಲಿ ಸೊಂಟದ ಭಾಗದ ಮೂಳೆಗೆ ಹಾನಿಯಾಗಿರುವುದು ಪತ್ತೆಯಾಯಿತು. ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಯಿಂದ ಸಾಧ್ಯವಿಲ್ಲ ಎಂದು ಅರಿತ ವೈದ್ಯರು, 3ಡಿ ತಂತ್ರಜ್ಞಾನದ ಮೂಲಕ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.

‘3ಡಿ ತಂತ್ರಜ್ಞಾನವನ್ನು ಯುರೋಪ್ ಅಥವಾ ಬ್ರಿಟನ್‌ಯಿಂದ ಎರವಲು ಪಡೆಯಬೇಕಾಗಿತ್ತು. ಇದಕ್ಕೆ 45 ದಿನಗಳು ಬೇಕಾಗುತ್ತಿದ್ದವು. ಹಾಗಾಗಿ ಪೀಣ್ಯದ ನವೋದ್ಯಮವೊಂದರ ನೆರವನ್ನು ಪಡೆದು, 3ಡಿ ತಂತ್ರಜ್ಞಾನವನ್ನು ಶಸ್ತ್ರಚಿಕಿತ್ಸೆಗೆ ಸರಿಹೊಂದುವಂತೆ ವಿನ್ಯಾಸ ಮಾಡಲಾಯಿತು. ಕೃತಕ ಅಂಗವನ್ನು ನಿರ್ಮಿಸಿ, 12 ಗಂಟೆಗಳ ಅವಧಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಕೃತಕ ಅಂಗವು ಸರಿಹೊಂದಿದ ಕಾರಣ ಮೂರು ದಿನಗಳ ನಂತರ ಬೇರೆಯವರ ಸಹಾಯದಿಂದ ನಡೆಯಲು ಪ್ರಾರಂಭಿಸಿದರು. ಈಗ ಅವರು ತಮ್ಮ ಕಾರ್ಯವನ್ನು ನಿಭಾಯಿಸಿಕೊಳ್ಳಲು ಸಮರ್ಥರಾಗಿದ್ದಾರೆ’ ಎಂದು ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಕುಕ್ರೇಜಾ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು