ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿವಯಸ್ಸಿನಲ್ಲಿ ಆರೋಗ್ಯದ ರಕ್ಷಣೆ

Last Updated 11 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ವಯಸ್ಸಾಗುವಿಕೆ ಒಂದು ಸಹಜವಾದ ಪ್ರಕ್ರಿಯೆ; ಇದಕ್ಕೆ ಯಾರೂ ಹೊರತಲ್ಲ ಎನ್ನುವುದನ್ನು ಒಪ್ಪಿಕೊಳ್ಳುವುದೇ ಪರಿಹಾರದೆಡೆ ಇಡುವ ಮೊದಲ ಹೆಜ್ಜೆ.

ಆರೋಗ್ಯ, ಅನಾರೋಗ್ಯಗಳೆರಡೂ ನಮ್ಮ ಜೀವನದ ಅವಿಭಾಜ್ಯ ಅಂಗಗಳೇ ಆಗಿವೆ. ಹುಟ್ಟಿನಿಂದ ಹಿಡಿದು ಸಾವಿನವರೆಗೆ ಜೀವನಬಂಡಿ ಮುಂದಕ್ಕೆ ಸಾಗುತ್ತಿದ್ದಂತೆಯೇ ನಮ್ಮ ಜೀವನಶೈಲಿ, ಸಾಮಾಜಿಕ ಸ್ಥಾನ-ಮಾನ, ಸಂಬಂಧಗಳ ಗ್ರಹಿಕೆಯಲ್ಲೂ ಏರಿಳಿತಗಳು ಕಾಣಬರುತ್ತವೆ. ಕೊನೆಗೆ ಇದರ ಪರಿಣಾಮ ನಮ್ಮ ಆರೋಗ್ಯದ ಮೇಲೂ ಆಗುತ್ತದೆ. ಚಿಕ್ಕಂದಿನಲ್ಲಿ ನಮಗೆ ಕೆಲವು ರೀತಿಯ ಕಾಯಿಲೆಗಳು ಕಾಡಿದರೆ, ಇಳಿ ವಯಸ್ಸಿನಲ್ಲಿ ಇನ್ನೊಂದು ರೀತಿಯ ಕಾಯಿಲೆಗಳು ನಮ್ಮನ್ನಾವರಿಸುತ್ತವೆ. ಹದಿಹರೆಯದಲ್ಲಿ ನಮ್ಮ ದೇಹ ಹೆಚ್ಚು ಗಟ್ಟಿಮುಟ್ಟಾಗಿರುವುದರಿಂದ ಈ ಪ್ರಾಯದಲ್ಲಿ ಕಾಯಿಲೆಗಳು ಕೊಂಚ ಕಡಿಮೆ ಎಂದು ಹೇಳಬಹುದು.

ನಮ್ಮ ದೇಹ ವಯಸ್ಸಿಗೆ ಹೇಗೆ ಸ್ಪಂದಿಸುತ್ತದೆ ಎಂದು ಸ್ವಲ್ಪ ತಿಳಿದುಕೊಳ್ಳೋಣ. ಚಿಕ್ಕಮಗುವಿನಿಂದ ಹಿಡಿದು ಹದಿ-ಹರಯದವರೆಗೆ ನಮ್ಮ ಶರೀರ ಸತತವಾಗಿ ಬೆಳವಣಿಗೆಯನ್ನು ಕಾಣುತ್ತದೆ. ನಂತರ ಮಧ್ಯವಯಸ್ಕರಾಗುವವರೆಗೂ ಹೆಚ್ಚೂ ಕಡಿಮೆ ಅದೇ ಸ್ಥಿತಿಯಲ್ಲಿ ಇರುತ್ತದೆ. ನಂತರ ನಿಧಾನವಾಗಿ ಇಳಿಮುಖವಾಗುತ್ತದೆ. ಈ ಸ್ಥಿತಿಯನ್ನೇ ವಯಸ್ಸಾಗುವುದು ಎಂದು ಕರೆಯಬಹುದು. ಈ ಸಮಯದಲ್ಲಿ ಕೂದಲು ಉದುರುವುದು, ಕಣ್ಣು ಮಂಜಾಗುವುದು, ಚರ್ಮ ಸುಕ್ಕುಗಟ್ಟುವುದು ಸಾಮಾನ್ಯ. ಇದರ ಜೊತೆಗೆ ನಮ್ಮ ಪಚನಶಕ್ತಿ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ. ನಮ್ಮ ಸ್ನಾಯು-ಕೀಲುಗಳು ಕೊಂಚ ಜಡವಾಗುತ್ತವೆ. ಮೆದುಳಿನ ಗಾತ್ರ ಕೂಡ ಕೊಂಚ ಕುಗ್ಗುವುದರಿಂದ ನೆನಪಿನ ಶಕ್ತಿ, ಯೋಚನಾಶಕ್ತಿಗಳು ಕೂಡ ಕೆಲವೊಮ್ಮೆ ಕೈಕೊಡುತ್ತವೆ. ಆದರೆ ಇವೆಲ್ಲಾ ವಯೋಸಹಜ ಬದಲಾವಣೆಗಳು, ಅನಾರೋಗ್ಯವಲ್ಲ ಎನ್ನುವುದನ್ನು ಮರೆಯಬಾರದು.

ಅದೇ ರೀತಿ ಪರಿಸರದಲ್ಲಿ ಉಂಟಾಗುವ ಬದಲಾವಣೆಗಳು ಕೆಲವು ಬಾರಿ ನಮ್ಮ ದೇಹದ ಮೇಲೆ ದುಷ್ಪರಿಣಾಮಗಳನ್ನೂ ಮಾಡುತ್ತವೆ. ಅದು ಕಲುಷಿತ ವಾತಾವರಣವಿರಬಹುದು ಅಥವಾ ಹವಾಮಾನ ವೈಪರೀತ್ಯ ಆಗಿರಬಹುದು. ಹಲವಾರು ವರ್ಷಗಳ ಕಾಲ ನಮ್ಮ ದೇಹ ಈ ದುಷ್ಪರಿಣಾಮಗಳನ್ನು ಸಹಿಸುವುದರಿಂದ ನಮ್ಮ ಅಂಗಾಂಗಗಳ ಕ್ರಿಯೆಗಳು ಕೊಂಚಮಟ್ಟಿಗೆ ಕುಂಠಿತಗೊಳ್ಳುತ್ತವೆ. ಮಧ್ಯವಯಸ್ಸನ್ನು ದಾಟಿ ಇಳಿವಯಸ್ಸನ್ನು ಪ್ರವೇಶಿಸುತ್ತಿದ್ದಂತೆಯೇ ಅನೇಕರಿಗೆ ಶ್ವಾಸಕೋಶದ ತೊಂದರೆ, ಹೃದಯಸಂಬಂಧಿ ಕಾಯಿಲೆಗಳಂಥವು ಗಂಟುಬೀಳುತ್ತವೆ.

ಹೊರಪರಿಸರದ ಹಾಗೆಯೇ ನಮ್ಮ ದೇಹ ಹಾಗೂ ಅಂತಃಪರಿಸರದ ಜೊತೆಯ ಸಂಬಂಧ ಕೂಡ ಅಷ್ಟೇ ಮುಖ್ಯ; ಇದು ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಪ್ರಧಾನ ಅಂಶವಾಗಿದೆ. ನಾವು ನಮ್ಮ ದೇಹವನ್ನು ಚೆನ್ನಾಗಿ ಅರಿತುಕೊಂಡು ಅದನ್ನು ಹದವಾಗಿ ಇಟ್ಟುಕೊಳ್ಳಬೇಕಲ್ಲದೇ ಕೋಪ-ತಾಪ, ಉದ್ರೇಕ, ನಿರಾಸೆಗಳಂತಹ ಋಣಾತ್ಮಕ ಭಾವನೆಗಳಿಂದ ದೇಹವನ್ನು ದಂಡಿಸುವುದನ್ನು ಕಡಿಮೆ ಮಾಡಬೇಕು. ಯೌವನದಲ್ಲಿ ಹಾಗೂ 40-60ರ ಮಧ್ಯವಯಸ್ಸಿನಲ್ಲಿ ನಾವು ಅನೇಕ ಜವಾಬ್ದಾರಿಗಳನ್ನು ನಿಭಾಯಿಸುವುದರಿಂದ ಕೆಲವು ಬಾರಿ ಋಣಾತ್ಮಕ ಭಾವನೆಗಳು ನಮ್ಮನ್ನು ಕಾಡುವುದು ಸಹಜ. ಬಿಪಿ, ಸಕ್ಕರೆಖಾಯಿಲೆ, ಕಣ್ಣಿನ ತೊಂದರೆ, ಕೀಲುನೋವು ಇತ್ಯಾದಿಗಳು ಸೇರಿಕೊಳ್ಳುವುದು ಬಹುತೇಕ ಈ ಸಂದರ್ಭದಲ್ಲೇ. ಸಮತೋಲಿತ ಆಹಾರ, ವ್ಯಾಯಾಮದ ಜೊತೆ ನಮ್ಮ ಮಾನಸಿಕ ಆರೋಗ್ಯದ ಕಡೆಗೂ ಕೂಡ ಗಮನವನ್ನು ಕೊಡುವುದರಿಂದ ಇಂತಹ ರೋಗಗಳನ್ನು ಸ್ವಲ್ಪಮಟ್ಟಿಗಾದರೂ ತಪ್ಪಿಸಬಹುದು.

ಇವಲ್ಲದೆ ಇಳಿವಯಸ್ಸಿನಲ್ಲಿ ಇನ್ನೂ ಕೆಲವು ರೋಗಗಳು ನಮ್ಮನ್ನು ಬಾಧಿಸುತ್ತವೆ. ಉದಾಹರಣೆಗೆ, ಮೂತ್ರವಿಸರ್ಜನೆಯ ತೊಂದರೆ. ಇದು ಗಂಡಸರಲ್ಲಿ ಸಾಮಾನ್ಯವಾಗಿ ಪ್ರಾಸ್ಟೇಟ್ ಗ್ರಂಥಿಯ ಊತದಿಂದ ಕಂಡು ಬಂದರೆ, ಹೆಂಗಸರಲ್ಲಿ ಗರ್ಭಕೋಶದ ಜಾರುವಿಕೆಯಿಂದ (Prolapse) ಉಂಟಾಗಬಹುದು. ತಜ್ಞವೈದ್ಯರು ಸೂಚಿಸುವ ಮಾತ್ರೆಗಳ ಮೂಲಕ ಈ ತೊಂದರೆಯನ್ನು ಗುಣಪಡಿಸಬಹುದು. ಕೆಲಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯೂ ಬೇಕಾಗಬಹುದು.

ನಿದ್ರಾಹೀನತೆ ಕೂಡ ಅನೇಕ ಜನರನ್ನು ಬಾಧಿಸುತ್ತದೆ. ಹಗಲು ಹೊತ್ತಿನಲ್ಲಿ ತುಂಬಾ ನಿದ್ರಿಸದೇ ಸಾಧ್ಯವಾದಷ್ಟೂ ಸಕ್ರೀಯರಾಗಿರಬೇಕು. ರಾತ್ರಿ ಟೀ -ಕಾಫಿಯನ್ನು ಸೇವಿಸುವುದನ್ನು, ಟಿವಿ–ಮೊಬೈಲಗಳನ್ನು ತಡರಾತ್ರಿವರೆಗೂ ನೋಡುವುದನ್ನು ತಪ್ಪಿಸಬೇಕು. ರಾತ್ರಿ ಸುಮಾರು 7-8 ಗಂಟೆಗೆ ಊಟ ಮಾಡಿ ಎರಡು ತಾಸಿನ ನಂತರ ನಿದ್ರಿಸಬೇಕು. ರಾತ್ರಿ ಅತಿಯಾದ ಎಣ್ಣೆಪದಾರ್ಥ, ಖಾರವಾದ ಅಡಿಗೆಯನ್ನು ವರ್ಜಿಸಬೇಕು. ಇದರಿಂದ ಅಸಿಡಿಟಿ, ಹುಳಿತೇಗಿನಿಂದ ನಡುವೆ ಎಚ್ಚರವಾಗುವುದು ತಪ್ಪುತ್ತದೆ. ಆದರೂ ನಿದ್ರೆ ಬರದಿದ್ದಲ್ಲಿ ವೈದ್ಯರಿಂದ ನಿದ್ರೆಮಾತ್ರೆಗಳನ್ನು ಪಡೆಯಬಹುದು.

ಖಿನ್ನತೆ ಕೂಡ ಇಳಿವಯಸ್ಸಿನಲ್ಲಿ ಕಾಡುವ ಒಂದು ರೋಗ. ಇದಕ್ಕೆ ಅನೇಕ ಕಾರಣಗಳಿವೆ. ತಮ್ಮ ದೇಹ ಮೊದಲಿನಂತೆ ಸ್ಪಂದಿಸುತ್ತಿಲ್ಲ ಎಂದೋ, ಕೂದಲು ಉದುರಿತು, ಹಲ್ಲು ಬೀಳುತ್ತಿದೆ ಎಂದೋ ಚಿಂತಿಸಿ ಕೀಳರಿಮೆಯಿಂದ ಕೆಲವರು ಬಳಲುತ್ತಾರೆ. ನಿವೃತ್ತಿಹೊಂದಿರುವುದರಿಂದ ಆದಾಯ ಕೊಂಚ ಕಡಿಮೆಯಾಗಿ ಮುಂದೆ ಹೇಗೋ ಎಂಬ ಚಿಂತೆ ಕೂಡ ಇರುತ್ತೆ. ಅದಲ್ಲದೆ, ಮಕ್ಕಳೆಲ್ಲಾ ಬೆಳೆದು ದೊಡ್ಡವರಾಗಿ ಬೇರೆ ಕಡೆ ಇದ್ದಾಗ ಒಂಟಿತನ ಕಾಡುತ್ತದೆ. ಇವೆಲ್ಲಾ ವ್ಯಕ್ತಿಯನ್ನು ಖಿನ್ನತೆಗೆ ದೂಡುತ್ತವೆ.

ಹಾಗಾದರೆ ಇವಕ್ಕೆಲ್ಲ ಪರಿಹಾರವೇ ಇಲ್ಲವೇ? ಖಂಡಿತ ಇದೆ. ವಯಸ್ಸಾಗುವಿಕೆ ಒಂದು ಸಹಜವಾದ ಪ್ರಕ್ರಿಯೆ; ಇದಕ್ಕೆ ಯಾರೂ ಹೊರತಲ್ಲ ಎನ್ನುವುದನ್ನು ಒಪ್ಪಿಕೊಳ್ಳುವುದೇ ಪರಿಹಾರದೆಡೆ ಇಡುವ ಮೊದಲ ಹೆಜ್ಜೆ. ಸಾಧ್ಯವಾದಷ್ಟೂ ಸಕ್ರೀಯವಾಗಿ, ಲವಲವಿಕೆಯಿಂದ ಎಲ್ಲರೊಂದಿಗೆ ದಿನಗಳನ್ನು ಕಳೆಯಬೇಕು, ನಮ್ಮ ದೇಹಕ್ಕೆ ಎಷ್ಟು ಅವಶ್ಯಕತೆ ಇದೆಯೋ ಅಷ್ಟೇ ಆಹಾರಸೇವನೆಯನ್ನು ಮಾಡಬೇಕು. ಒಬ್ಬಂಟಿಗರಾಗಿದ್ದಾಗ ಫೋನ್, ವಿಡಿಯೋ ಕಾಲಿಂಗ್ ಮೂಲಕ ಕುಟುಂಬಸದಸ್ಯರೊಂದಿಗೆ ಆಗಾಗ ಮಾತನಾಡುತ್ತಿರಬೇಕು. ನಿಗದಿತ ಸಮಯದಲ್ಲೇ ಮಾತ್ರೆಸೇವನೆ, ಊಟ-ತಿಂಡಿ ಮಾಡಬೇಕು. ನಿಯಮಿತವಾಗಿ ವೈದ್ಯರನ್ನು ಭೇಟಿಯಾಗಿ ತಮ್ಮ ಅರೋಗ್ಯ, ದೇಹಸ್ಥಿತಿಯ ಬಗ್ಗೆ ಸಮಾಲೋಚಿಸಬೇಕು. ಋಣಾತ್ಮಕ ಆಲೋಚನೆಗಳನ್ನು ದೂರವಿರಿಸಿ, ತಮ್ಮ ಜೀವನದ ಸುಂದರ ಘಳಿಗೆಗಳನ್ನು, ಸಾಧನೆಗಳನ್ನು ಆಗಾಗ್ಗೆ ನೆನಪಿಸಿಕೊಂಡು ಸಂತಸಪಡಬೇಕು. ನಮ್ಮ ಸುತ್ತಮುತ್ತಲು ನಡೆಯುವ ಸಮಾರಂಭಗಳಲ್ಲಿ, ಹಬ್ಬ-ಹುಣ್ಣಿಮೆಗಳಲ್ಲಿ ಕುಟುಂಬ ಸದಸ್ಯರೊಂದಿಗೆ, ಸ್ನೇಹಿತರೊಂದಿಗೆ ಬೆರೆಯುತ್ತಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT