ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರು ಕೇಳ್ಬೊದು: ಜಾತಿ– ಪ್ರೀತಿಯ ಕೊನೆಯಿಲ್ಲದ ಹೋರಾಟ

Last Updated 25 ಡಿಸೆಂಬರ್ 2020, 20:18 IST
ಅಕ್ಷರ ಗಾತ್ರ

ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಅವಳಿಗೂ ನನ್ನ ಮೇಲೆ ಪ್ರೀತಿಯಿದ್ದರೂ ಬೇರೆ ಜಾತಿ ಅಂತ ಮನೆಯವರು ಒಪ್ಪೋದಿಲ್ಲ. ಏನು ಮಾಡಬೇಕು?
-ಗಿರಿ, ಊರಿನ ಹೆಸರಿಲ್ಲ.

23ರ ಯುವತಿ. ನಾನು ಪ್ರೀತಿಸುತ್ತಿರುವ ಹುಡುಗನ ಬಗ್ಗೆ ಅಮ್ಮನಿಗೆ ತಿಳಿಸಿದರೆ ಅವನು ಬೇರೆ ಜಾತಿ ಅಂತ ಒಪ್ಪುತ್ತಿಲ್ಲ. ಅಪ್ಪನಿಗೆ ಹೇಳಿಲ್ಲ. ಏನು ಮಾಡಬೇಕೆಂದು ತಿಳಿಯದೆ ಮನಶ್ಶಾಂತಿಯಿಲ್ಲ. ಸಲಹೆ ನೀಡಿ.
-ಹೆಸರು, ಊರು ತಿಳಿಸಿಲ್ಲ.

ನಾನು ಬಿಎಸ್‌ಎಫ್‌ಗೆ ಆಯ್ಕೆಯಾಗಿದ್ದೇನೆ. 5 ವರ್ಷಗಳಿಂದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೇನೆ. ನಾನು ದಲಿತ ಜನಾಂಗದವನು, ಹುಡುಗಿ ಒಕ್ಕಲಿಗರವಳು. ಮದುವೆಗೆ ಹುಡುಗಿಯ ಮನೆಯವರ ಒಪ್ಪಿಗೆಯಿಲ್ಲ. ಮೋಸ ಮಾಡಲು ನನಗೆ ಮನಸ್ಸಾಗುತ್ತಿಲ್ಲ. ಏನು ಮಾಡಬೇಕೆಂದು ತಿಳಿಯದಾಗಿದೆ.
-ಹೆಸರು, ಊರು ತಿಳಿಸಿಲ್ಲ.

ಶತಶತಮಾನಗಳಿಂದ ಬಂದಿರುವ ಜಾತಿಯನ್ನು ಕುರಿತಾದ ನಂಬಿಕೆಯ ಬೇರುಗಳನ್ನು ಅಲ್ಲಾಡಿಸುವುದು ಸುಲಭವಲ್ಲ. ನಿಮಗೆಲ್ಲಾ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಕಷ್ಟವಾಗುವುದು ಕೆಲವೇ ಕಾರಣಗಳಿಂದಾಗಿ.

ಮೊದಲನೆಯದಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯನ್ನು ನೀವಿನ್ನೂ ತಲುಪಿರುವುದಿಲ್ಲ. ವಿದ್ಯಾಭ್ಯಾಸ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಪಡೆದುಕೊಳ್ಳದಿದ್ದರೆ ಬೇರೆಯವರ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ.

ಎರಡನೆಯದಾಗಿ ನಿಮ್ಮ ಪ್ರೀತಿಯ ಬಗ್ಗೆ ಆಳವಾದ ನಂಬಿಕೆ ಮತ್ತು ಬದ್ಧತೆಯ ಕೊರತೆಯಿರುತ್ತದೆ. ಯೌವನದ ಪ್ರಕೃತಿ ಸಹಜ ಆಕರ್ಷಣೆಯನ್ನು ಜೀವನವೆಲ್ಲಾ ಉಳಿಯಬಲ್ಲ ಪ್ರೀತಿಯಾಗಿ ಬದಲಾಯಿಸಲು ಇಬ್ಬರೂ ಪ್ರಾಮಾಣಿಕವಾಗಿ ಅಂತರಂಗವನ್ನು ಹಂಚಿಕೊಳ್ಳುವ ಧೈರ್ಯವನ್ನು ತೋರಿಸಬೇಕು ಮತ್ತು ಸಂಗಾತಿಯನ್ನು ಅವರು ಇರುವ ರೀತಿಯಲ್ಲಿಯೇ ಒಪ್ಪಿಕೊಳ್ಳುವ ಮನಸ್ಥಿತಿ ಬೇಕು. ಇದಕ್ಕೆಲ್ಲಾ ಸಮಯದ ಅಗತ್ಯವಿದೆ. ಹಾಗಾಗಿ ನೀವಿನ್ನೂ ಮದುವೆಯಾಗುವ ಸಮಯ ಬಂದಿಲ್ಲವೆಂದಾದರೆ ತಕ್ಷಣಕ್ಕೆ ಹಿರಿಯರನ್ನು ಒಪ್ಪಿಸುವ ಪ್ರಯತ್ನವನ್ನು ಮಾಡಿ ವಿರೋಧವನ್ನೇಕೆ ಆಹ್ವಾನಿಸಿಕೊಳ್ಳುತ್ತೀರಿ? ಈ ಸಮಯವನ್ನು ಪರಸ್ಪರ ಹೆಚ್ಚು ಪರಿಚಿತರಾಗಲು ಬಳಸಬಹುದಲ್ಲವೇ? ಇದರಿಂದಾಗಿ ಇಬ್ಬರೂ ಸೇರಿ ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಂಡು ಸೂಕ್ತ ಸಮಯದಲ್ಲಿ ಪೋಷಕರೊಡನೆ ಮಾತನಾಡಬಹುದು.

ಮೂರನೆಯದು ಮತ್ತು ಪ್ರಮುಖವಾದದ್ದು ಪೋಷಕರ ವಿರೋಧವನ್ನು ಮೀರಲಾಗದ ನಿಮ್ಮೊಳಗಿನ ಭಯ, ಹಿಂಜರಿಕೆಗಳು. ಪೋಷಕರನ್ನು ವಿರೋಧಿಸುವುದನ್ನು ನಿಮ್ಮ ಮನಸ್ಸು ಹೇಗೆ ಸ್ವೀಕರಿಸುತ್ತದೆ? ಅವರ ಪ್ರೀತಿಯನ್ನು ಕಳೆದುಕೊಳ್ಳುವುದು, ಅವರಿಂದ ದೂರವಾಗುವುದು, ತಿರಸ್ಕೃತರಾಗುವುದು, ಅವರಿಗೆ ಅನ್ಯಾಯ ಮಾಡುವುದು, ನೋವು ಕೊಡುವುದು, ಎಲ್ಲರ ದೃಷ್ಟಿಯಲ್ಲಿ ಕೆಟ್ಟ ಮಕ್ಕಳೆನಿಸಿಕೊಳ್ಳುವುದು- ಇಂತಹ ಹಲವಾರು ಗೊಂದಲಗಳು ನಿಮ್ಮನ್ನು ಕಾಡುತ್ತಿರಬಹುದು. ಅಂತಹ ನಂಬಿಕೆಗಳು ನಿಮ್ಮೊಳಗೆ ಹೇಗೆ ಮೂಡಿದವು? ಅವುಗಳು ಸತ್ಯವೇ? ನನ್ನ ಸಮಾಧಾನ, ಸಂತೋಷಗಳಿಗೆ ಸಹಕಾರಿಯೇ ಎಂದು ಯೋಚಿಸಿ. ನಿಮ್ಮದೇ ನಿರ್ಧಾರಗಳನ್ನು ತೆಗೆದುಕೊಂಡ ಮೇಲೂ ಪೋಷಕರಿಗೆ ಪ್ರೀತಿ, ಬೆಂಬಲವನ್ನು ಕೊಡುವುದು ಹೇಗೆ ಎಂದು ಯೋಚಿಸಿ. ಎಲ್ಲವನ್ನೂ ಪೋಷಕರೊಡನೆ ಹಂಚಿಕೊಂಡು ನಿಮಗೆ ಸರಿಯೆನಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಿ. ನಿಮ್ಮೊಳಗಿನ ಪ್ರಾಮಾಣಿಕತೆ, ಗಟ್ಟಿತನಗಳು ಪೋಷಕರ ಜೊತೆಯ ಸಂಬಂಧವನ್ನು ನಿಧಾನವಾಗಿಯಾದರೂ ಹೊಸದಾಗಿ ರೂಪಿಸುತ್ತವೆ.

**

23ರ ಯುವಕ. ನಾನು ಪೊಲೀಸ್‌ ಆಗಬೇಕೆಂದು ಓದುತ್ತಿದ್ದೇನೆ. ನನ್ನನ್ನು ಪ್ರೀತಿಸುತ್ತಿದ್ದ ಹುಡುಗಿಗೆ ಮದುವೆ ನಿಶ್ಚಯವಾಗಿದೆ. ಅವಳು ನೀನೂ ಬೇಕು, ಮನೆಯವರೂ ಬೇಕು ಎನ್ನುತ್ತಿದ್ದಾಳೆ. ಅಪ್ಪ– ಅಮ್ಮ ಇಲ್ಲದ ಕಾರಣ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಸಹಾಯ ಮಾಡಿ.
-ಮಂಜುನಾಥ್‌, ಊರಿನ ಹೆಸರಿಲ್ಲ.

ಅಪ್ಪ– ಅಮ್ಮ ಇಲ್ಲದ ಕಾರಣಕ್ಕೆ ನಿಮ್ಮೊಳಗೆ ಅನಾಥ ಭಾವನೆ ಕಾಡುತ್ತಿರಬೇಕಲ್ಲವೇ? ಇದರಿಂದಾಗಿಯೇ ನೀವು ಮದುವೆ ನಿಶ್ಚಯವಾಗಿರುವ ಹುಡುಗಿಯಿಂದ ದೂರವಾಗಲು ಕಷ್ಟಪಡುತ್ತಿದ್ದೀರಿ. ಹುಡುಗಿಗೆ ಯಾರು ಬೇಕೆಂದು ನಿರ್ಧರಿಸಲಾಗದೆ ಇರುವುದಕ್ಕೆ ನೀವು ಹೇಗೆ ಹೊಣೆಯಾಗುತ್ತೀರಿ? ಅವಳು ಬೇರೊಬ್ಬನನ್ನು ಬಾಳಸಂಗಾತಿಯಾಗಿ ಒಪ್ಪಿಕೊಂಡ ಮೇಲೆ ನಿಮ್ಮ ಬಗೆಗೆ ತೋರಿಸುತ್ತಿರುವುದು ಕರುಣೆಯೇ ಹೊರತು ಪ್ರೀತಿಯಾಗಲು ಸಾಧ್ಯವಿಲ್ಲ. ಬೇರೊಬ್ಬನನ್ನು ಒಪ್ಪಿಕೊಂಡಿರುವವಳ ಬಾಳಿನಲ್ಲಿ ನಿಮಗೆಲ್ಲಿಯ ಸ್ಥಾನವಿದೆ? ಮುಂದೆ ಇನ್ನೊಬ್ಬಳ ಸಂಪೂರ್ಣ ಪ್ರೀತಿಯನ್ನು ಪಡೆಯುವ ಯೋಗ್ಯತೆ ನಿಮ್ಮೊಳಗಿದೆ. ಈ ಹುಡುಗಿಯಿಂದ ದೂರವಾಗಿ ನಿಮ್ಮ ಸ್ವಂತಿಕೆ, ಆತ್ಮಗೌರವವನ್ನು ಹುಡುಕುವ ಪ್ರಯತ್ನಮಾಡಿ. ಕಳೆದುಕೊಂಡ ನೋವು ಕೆಲವು ಕಾಲ ಕಾಡಿದರೂ ನೀವು ಮುಂದೆ ಅಮೂಲ್ಯವಾದದ್ದನ್ನು ಗಳಿಸಿಕೊಳ್ಳುತ್ತೀರಿ.

**

10 ವರ್ಷದಿಂದ ಒಂದು ಹುಡುಗಿಯನ್ನು ನಾನು ಪ್ರೀತಿಸುತ್ತಿದ್ದೇನೆ. ಈಗ ಮದುವೆಯಾಗಲು ಇಬ್ಬರೂ ಸಿದ್ಧರಾಗಿದ್ದರೂ ಮನೆಯವರು ಒಪ್ಪುತ್ತಿಲ್ಲ. ಇಬ್ಬರ ಕುಟುಂಬದ ಹೆಸರು ಪಾಟೀಲ ಎಂದಿರುವುದರಿಂದ ನಾವಿಬ್ಬರೂ ಅಣ್ಣ– ತಂಗಿಯಾಗುತ್ತೇವೆ ಎಂದು ಹೇಳುತ್ತಾರೆ. ನೂರಾರು ತಲೆಮಾರುಗಳು ಕಳೆದುಹೋಗಿದ್ದರೂ ಒಂದೇ ಅಡ್ಡ ಹೆಸರಿದೆ ಎನ್ನುವ ಕಾರಣಕ್ಕೆ ಮದುವೆ ಮಾಡುವುದಿಲ್ಲ ಎನ್ನುತ್ತಿದ್ದಾರೆ. ಅವರಿಗೆ ಹೇಗೆ ಅರ್ಥ ಮಾಡಿಸುವುದು ಎನ್ನುವ ಗೊಂದಲದಲ್ಲಿದ್ದೇನೆ. ಉಪಾಯವನ್ನು ಸೂಚಿಸಿ.
-ಮದನ, ಹಾವೇರಿ

ಎಲ್ಲಾ ಜನಾಂಗಗಳಲ್ಲಿಯೂ ಕೆಲವು ನಂಬಿಕೆಗಳು ತಲೆತಲಾಂತರದಿಂದ ಬಂದಿರುತ್ತವೆ. ಇವುಗಳನ್ನು ಮೀರುವುದಕ್ಕೆ ಹಿರಿಯರು ಒಪ್ಪದಿದ್ದಾಗ ನಿರ್ಧಾರಗಳನ್ನು ತೆಗೆದುಕೊಳ್ಳುವ ಗಟ್ಟಿತನವನ್ನು ನೀವು ಬೆಳೆಸಿಕೊಳ್ಳಬೇಕು. ಅವರನ್ನು ಒಪ್ಪಿಸುವ ಉಪಾಯ ಹುಡುಕುತ್ತಾ ನಿಮ್ಮ ಹತಾಶೆಯನ್ನು ಹೆಚ್ಚು ಮಾಡಿಕೊಳ್ಳುವ ಬದಲಾಗಿ ಜೀವನ ನಿರ್ವಹಣೆಗೆ ದಾರಿ ಮಾಡಿಕೊಂಡು ಪ್ರೀತಿಸಿದವಳನ್ನು ಮದುವೆಯಾಗಿ. ನಿಮ್ಮ ಪ್ರಾಮಾಣಿಕ ಪ್ರೀತಿಯನ್ನು ಹಿರಿಯರು ನಿಧಾನವಾಗಿ ಒಪ್ಪಿಕೊಳ್ಳಲೇಬೇಕು.

***

ಏನಾದ್ರೂ ಕೇಳ್ಬೋದು
ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಉತ್ತರಿಸಲಿದ್ದಾರೆ. bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT