ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ಮಾಸ್ಕ್‌ ಧರಿಸಿ ವ್ಯಾಯಾಮ, ಎಚ್ಚರಿಕೆ ಇರಲಿ

Last Updated 28 ಡಿಸೆಂಬರ್ 2020, 19:32 IST
ಅಕ್ಷರ ಗಾತ್ರ

ಕೋವಿಡ್‌–19 ಶುರುವಾದಾಗಿನಿಂದಲೂ ಮಾಸ್ಕ್‌ ಧರಿಸುವ ಬಗ್ಗೆ ಹಲವರಲ್ಲಿ ಬಹಳಷ್ಟು ಅನುಮಾನಗಳಿವೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ‘ಮಾಸ್ಕ್‌ ಧರಿಸಿದರೆ ಇತರ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳು ತಲೆದೋರಬಹುದು’ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿರುವುದು ವೈರಲ್ ಆಗಿತ್ತು.

ಆದರೆ ಮಾಸ್ಕ್‌ ಧರಿಸುವುದರಿಂದ, ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ಸರ್ಜಿಕಲ್‌ ಮತ್ತು ಹತ್ತಿ ಬಟ್ಟೆಯ ಮಾಸ್ಕ್‌ ಧರಿಸುವುದರಿಂದ ಯಾವುದೇ ರೀತಿಯ ಅನಾರೋಗ್ಯ ಸಂಭವಿಸಲಾರದು ಎಂಬುದು ತಜ್ಞರ ಸ್ಪಷ್ಟನೆ. ವೈಜ್ಞಾನಿಕವಾಗಿ ಇದಕ್ಕೆ ಯಾವುದೇ ಆಧಾರವಿಲ್ಲ ಎಂದು ಇಂಗ್ಲೆಂಡ್‌ನ ಈಸ್ಟ್‌ ಆಂಗ್ಲಿಯ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಪ್ರೊ. ಪಾಲ್‌ ಹಂಟರ್‌ ವಿಶ್ವವಿದ್ಯಾಲಯದ ಜರ್ನಲ್‌ನಲ್ಲಿ ಬರೆದ ಲೇಖನದಲ್ಲಿ ತಿಳಿಸಿದ್ದಾರೆ.

ಮಾಸ್ಕ್‌ ಧರಿಸಿದರೆ ದೇಹಕ್ಕೆ ಆಮ್ಲಜನಕದ ಕೊರತೆ (ಹೈಪೊಕ್ಸಿಯ) ಯಾಗಿ ತೀವ್ರತರಹದ ಅಪಾಯ ಸಂಭವಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ.

ಸರ್ಜಿಕಲ್‌ ಮಾಸ್ಕ್‌ ಅಥವಾ ಹತ್ತಿ ಬಟ್ಟೆಯಿಂದ ಮುಖ ಮುಚ್ಚಿಕೊಂಡರೆ ಎಲ್ಲೋ ಅಪರೂಪದ ಪ್ರಕರಣಗಳಲ್ಲಿ ಕಿರಿಕಿರಿಯಾಗಬಹುದು ಅಥವಾ ತ್ವಚೆಗೆ ಅಲರ್ಜಿಯಾಗಿ ಬೊಕ್ಕೆಗಳು ಏಳಬಹುದು. ಆದರೆ ಉಸಿರಾಡಲು ಯಾವುದೇ ತೊಂದರೆಯಿಲ್ಲ. ಮಾಸ್ಕ್‌ ಅನ್ನು ನಿಯಮಿತವಾಗಿ ಬದಲಾಯಿಸಬೇಕು. ಕೊಳೆಯಾದ, ಒದ್ದೆಯಾದ ಮಾಸ್ಕ್‌ ಅನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಿ, ಹೊಸದನ್ನು ಬಳಸಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿದೆ.

ಧರಿಸಿದ ಮಾಸ್ಕ್‌ ಅನ್ನು ಪದೇ ಪದೇ ಕೈಯಿಂದ ಮುಟ್ಟಬಾರದು ಮತ್ತು ಸಾರ್ವಜನಿಕವಾಗಿ ಮುಖದಿಂದ ಸರಿಸಬಾರದು. ಎನ್‌95 ಮಾಸ್ಕ್‌ ಅನ್ನು ಧರಿಸಿ ಅಲ್ಪಾವಧಿ ವ್ಯಾಯಾಮ ಕೂಡ ಮಾಡಬಹುದು. ಆದರೆ ಶ್ವಾಸಕೋಶದ ಸಮಸ್ಯೆ ಇರುವವರು ಯಾವುದೇ ಮಾಸ್ಕ್ ಧರಿಸಿ ಇಂತಹ ವ್ಯಾಯಾಮ ಅಥವಾ ವೇಗದ ನಡಿಗೆಗೆ ಯತ್ನಿಸಬೇಡಿ ಎಂದು ಲೇಖನದಲ್ಲಿ ಎಚ್ಚರಿಸಲಾಗಿದ್ದು, ಸಿಒಪಿಡಿ (ಕ್ರೋನಿಕ್‌ ಅಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌) ಇದ್ದವರು ಎನ್‌95 ಮಾಸ್ಕ್‌ ಧರಿಸಿದಾಗ ಉಸಿರಾಟದ ತೊಂದರೆಯಾಗಿ ಪರದಾಡಿದ ಪ್ರಕರಣಗಳಿವೆ ಎಂದು ಉಲ್ಲೇಖಿಸಲಾಗಿದೆ. ಚಿಕ್ಕ ಮಕ್ಕಳು, ದೈಹಿಕ ಅಥವಾ ಮಾನಸಿಕ ನ್ಯೂನತೆ ಇದ್ದವರು ಮಾಸ್ಕ್‌ ಧರಿಸದಂತೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT