’ಈ ಕ್ಷಣವನ್ನು ಅನುಭವಿಸಿ’

7

’ಈ ಕ್ಷಣವನ್ನು ಅನುಭವಿಸಿ’

Published:
Updated:

ಅಪ್ಪ ಇಲ್ಲದಿದ್ದಾಗ, ಅಮ್ಮ ಒಬ್ಬಳೇ ಸಂಸಾರ ನಡೆಸಬೇಕು. ತುಂಬಾ ಕಷ್ಟದ ದಿನಗಳು ಅವು. ಅಮ್ಮ ಒಬ್ಬಾಕೆಯೇ ಕಷ್ಟ ಪಡುತ್ತಿದ್ದಾಳೆ. ಆಕೆಯ ಸಹಾಯಕ್ಕೆ ನಿಲ್ಲಬೇಕು. ಮನೆಯ ಜವಾಬ್ದಾರಿಗಳನ್ನು ನಾವು ಹೊರಬೇಕು ಎನ್ನುವುದು ನನ್ನ ಮನಸ್ಸಿನಲ್ಲಿ ಇತ್ತು. ಕಡೆಯ ಪಕ್ಷ ಶಾಲೆಯ ಖರ್ಚನ್ನಾದರೂ ನಾವೇ ದುಡಿದುಕೊಳ್ಳಬೇಕು ಎಂದು ನಿರ್ಧಾರ ಮಾಡಿದೆ. ಇದು ಒತ್ತಡವೋ ಅನಿವಾರ್ಯವೋ ನನಗೆ ಗೊತ್ತಿಲ್ಲ. ಆದರೆ, ಖಂಡಿತ ಆ ಸಂದರ್ಭ ನನ್ನನ್ನು ಗಟ್ಟಿ ಮಾಡಿದೆ. 

ನನ್ನ ಪ್ರಕಾರ ಒತ್ತಡ ಅಂದರೆ, ನಮಗೆ ನಾವಾಗಿಯೇ ಕರೆಸಿಕೊಳ್ಳೋ ಬೇಡವಾದ ಅತಿಥಿ ಇದ್ದ ಹಾಗೆ. ನಮ್ಮ ಜೀವನವು ಒತ್ತಡದಿಂದ ಕೂಡಿರಬೇಕೋ ಬೇಡವೋ –ಅನ್ನೋದು ನಮ್ಮ ಕೈಯಲ್ಲೇ ಇದೆ ಎನ್ನುವುದನ್ನು ನಾನು ನಂಬುತ್ತೇನೆ. ಜೊತಗೆ, ಒತ್ತಡವಿಲ್ಲದ ಬದುಕು ಇರಲಿಕ್ಕೆ ಸಾಧ್ಯವೇ ಇಲ್ಲ. ಒತ್ತಡ – ಅದು ಕೆಲವೊಮ್ಮೆ ಬಾಹ್ಯ ಪರಿಸರದಿಂದ ಬರಬಹುದು. ಕೆಲವೊಮ್ಮೆ ನಮ್ಮಲ್ಲೇ ಹುಟ್ಟುತ್ತದೆ. 

ಇದು ಸ್ಪರ್ಧಾತ್ಮಕ ಯುಕ. ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧೆ ಇದೆ. ಆದ್ದರಿಂದ ಒತ್ತಡ ಬಂದೇ ಬರುತ್ತದೆ. ಸ್ಪರ್ಧೆ ಮತ್ತು ಒತ್ತಡವನ್ನು ಸಮನಾಗಿ ನಿಭಾಯಿಸೋದು ನನ್ನ ಪ್ರಕಾರ ಜಾಣತನ. ಹೀಗೆ ನಿಭಾಯಿಸದಿದ್ದಾಗ ಒತ್ತಡ ಕಾಡುತ್ತದೆ. ತಮಾಷೆ ಅಂದ್ರೆ, ಒತ್ತಡ ಬಂತು ಎಂದು ಚಿಂತೆ ಮಾಡಿದ್ರೆ, ಅದು ಇನ್ನಷ್ಟು ಒತ್ತಡಕ್ಕೆ ಕಾರಣ ಆಗುತ್ತದೆ. ಹಾಗಾಗಿ, ಇದರಿಂದ ಹೇಗೆ ಹೊರಬರಬೇಕು ಅನ್ನುವುದನ್ನು ಚಿಂತಿಸಬೇಕು.

ನಿರೂಪಣೆಗೆ ಬರಬೇಕು ಅನ್ನೋ ಯೋಚನೆಯನ್ನು ಸಹ ನಾನು ಮಾಡಿರಲಿಲ್ಲ. ನನಗೆ ಗಗನಸಖಿ ಆಗಬೇಕು ಅನ್ನೋ ಕನಸಿತ್ತು. ಅಮ್ಮಂಗೆ ನಾನು ನರ್ಸ್ ಆಗಬೇಕು ಅಂತ ಇತ್ತು. ಎಲ್ಲರೂ ಇವಳು ಪಕ್ಕಾ ಟೀಚರ್ ಆಗ್ತಾಳೆ ಅಂತಿದ್ರು. 

ಬದುಕಿನ ಒತ್ತಡ ನೋಡಿ; ಮೊದಮೊದಲು ಮಕ್ಕಳಿಗೆ ಟ್ಯೂಷನ್ ಮಾಡ್ತಿದ್ದೆ, ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡಿದೀನಿ. ನಂತರ ಹೇಗೋ ಜೀವನ ನನ್ನನ್ನು ಈ ಕ್ಷೇತ್ರಕ್ಕೆ ತಂದು ನಿಲ್ಲಿಸಿತು. ಊರಲ್ಲಿ ಯಾರಿಗೂ ನಾನು ಬೆಂಗಳೂರಿಗೆ ಬಂದು ಈ ಕ್ಷೇತ್ರದಲ್ಲಿ ಕೆಲಸ ಮಾಡೋದು ಇಷ್ಟ ಇರಲಿಲ್ಲ. ನಾನು ಬಸ್ಸು ಹತ್ತುವ ಸಂದರ್ಭದಲ್ಲಿ ನನ್ನ ಸಂಬಂಧಿಕರು ಯಾರೂ ನನ್ನೊಂದಿಗೆ ಇರಲಿಲ್ಲ; ಅಮ್ಮ ಮಾತ್ರ ಜೊತೆ ಇದ್ದದ್ದು. ಅವರು ಹೇಳಿದ್ದು ಇಷ್ಟೆ: ‘ಹೋಗಿ ಜಯಿಸಿ ಬಾ. ಪ್ರಾಮಾಣಿಕವಾಗಿ ಪ್ರಯತ್ನ ಮಾಡು’.

ಸರಿ, ಬೆಂಗಳೂರಿಗೆ ಬಂದೆ. ಇಲ್ಲಿಗೆ ಬಂದ ಮೇಲೆ ಒತ್ತಡ ಇನ್ನೂ ಹೆಚ್ಚಾಯಿತು. ನನ್ನದು ಮಂಗಳೂರು ಕನ್ನಡ. ಹೀಗಾಗಿಯೇ ಹಲವಾರು ಅವಕಾಶಗಳು ಕೈತಪ್ಪಿತು. ಆದರೂ, ಛಲ ಬಿಡಲಿಲ್ಲ. ಏನಾದ್ರು ಮಾಡಬೇಕು, ಸಾಧಿಸಬೇಕು ಅನ್ನೋ ಒತ್ತಡ ಮತ್ತು ಅನಿವಾರ್ಯತೆ ನನ್ನಲ್ಲಿ ಇತ್ತು. ಬಹುಶಃ ಇದರಿಂದಲೇ ನಾನು ಬೆಂಗಳೂರು ಕನ್ನಡ ಕಲಿತೆ. ಒಳ್ಳೆಯ ನಿರೂಪಕಿ ಆಗಬೇಕು ಅಂತ ನಿರ್ಧಾರ ಮಾಡಿ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುತ್ತಾ ಬಂದೆ.

ನಾನು ನಿರೂಪಣೆ ಕೆಲಸ ಶುರು ಮಾಡಿದಾಗ ₹250 ಸಂಬಳ. ನಮ್ಮದೇ ಬಟ್ಟೆ-ಬರೆ ಎಲ್ಲ. ಮೊದಲ ವರ್ಷದ ಪಿಯು ಮುಗಿದ ನಂತರ ನಾನು ಈ ಕ್ಷೇತ್ರಕ್ಕೆ ಬಂದೆ. ಒಂದು ಥರ ಮೊಂಡು ಧೈರ್ಯ ನಂದು. ಹಾಗಾಗಿ, ಒತ್ತಡವನ್ನು ಒತ್ತಡ ಅಂದುಕೊಳ್ಳದೇ ಎದುರಿಸಿಬಿಟ್ಟೆ. ಇವತ್ತು ಏನೋ ಸ್ವಲ್ಪ ಹೆಸರು ಮಾಡಿದ್ದೀನಿ ಅಂದರೆ, ಈ ಒತ್ತಡಗಳೇ ಕಾರಣ. ಜೀವನದಲ್ಲಿ ಒತ್ತಡ ಇರಬೇಕು. ಆಗ ಮಾತ್ರ ಮನುಷ್ಯ ಬೆಳೆಯಲು ಸಾಧ್ಯ. ಕ್ರೀಡಾಸ್ಫೂರ್ತಿಯೊಂದಿಗೆ ಎಲ್ಲವನ್ನೂ ಸ್ವೀಕರಿಸಬೇಕು.

ನಿರೂಪಣೆ ಕ್ಷೇತ್ರ ಬಹಳ ಒತ್ತಡದಿಂದ ಕೂಡಿರುತ್ತದೆ. ಇಡೀ ಕಾರ್ಯಕ್ರಮ ನಿರೂಪಕರ ಮೇಲೆಯೇ ನಿಂತಿರುತ್ತದೆ. ಕೆಲವೊಮ್ಮೆ ಕಾರ್ಯಕ್ರಮದ ಯಶಸ್ಸು ಸಹ. ನನ್ನದೇ ಉದಾಹರಣೊಂದಿಗೆ ವಿವರಿಸ್ತೀನಿ. ಈಗ ಒಂದು ಸಂಗೀತ ರಿಯಾಲಿಟಿ ಶೋ ಅಂದುಕೊಳ್ಳಿ. ಹಾಡೋರು ಬಂದು ಹಾಡಿ ಹೋಗ್ತಾರೆ. ತೀರ್ಪುಗಾರರು ಬಂದು ತೀರ್ಪು ನೀಡಿ ಹೋಗ್ತಾರೆ. ನಿರೂಪಕ ಮಾತ್ರ ಬೆಳಿಗ್ಗೆಯಿಂದ ಸಂಜೆವರೆಗೂ ನಿಂತು ಎಲ್ಲವನ್ನೂ ಎಲ್ಲರನ್ನೂ ಸರಿತೂಗಿಸಿಕೊಂಡು ಹೋಗಬೇಕು.

ಬೆಳಿಗ್ಗೆ ಶೂಟಿಂಗ್ ಶುರು ಆಯಿತು. ಅಲ್ಲಿಂದ ಶೂಟಿಂಗ್ ಮುಗಿಯೋ ತನಕ ಇಡೀ ಸೆಟ್‍ನ ಹಿಡಿದಿಟ್ಟುಕೊಳ್ಳಬೇಕು. ಸ್ಪರ್ಧಿಗಳು, ತೀಪುಗಾರರು, ಪ್ರೇಕ್ಷಕರು, ಕ್ಯಾಮೆರಾ, ನಿರ್ದೆಶಕ, ಸ್ಕ್ರಿಪ್ಟ್ ರೈಟರ್ –  ಹೀಗೆ ಎಲ್ಲರನ್ನು ಸರಿತೂಗಿಸಿಕೊಂಡು ಹೋಗಬೇಕು. ಮೆದುಳು ಹಲವಾರು ವಿಧದಲ್ಲಿ ಕೆಲಸ ಮಾಡ್ತಾ ಇರುತ್ತದೆ. ಈ ಎಲ್ಲವನ್ನೂ  ನಿಭಾಯಿಸೋದು ಎಷ್ಟು ಒತ್ತಡ ಎಂದರೆ, ಶೂಟಿಂಗ್ ಮುಗಿಸಿಕೊಂಡು ಎಂದರೆ ಶಕ್ತಿ ಎಲ್ಲ ಪೂರ್ತಿ ಖಾಲಿ ಆಗುತ್ತದೆ. ಮಾನಸಿಕವಾಗಿಯೂ ಹಾಗೂ ದೈಹಿಕವಾಗಿಯೂ ಇದು ಒತ್ತಡದ ಕೆಲಸ. ಇದು ಶೂಟಿಂಗ್‌ ಕಥೆ ಆಯ್ತು.

ಇನ್ನು ನೇರಪ್ರಸಾರ ಕಾರ್ಯಕ್ರಮವಂತೂ ಎಲ್ಲಕ್ಕಿಂತ ಒತ್ತಡ ಜಾಸ್ತಿ. ಒಂದು ಕ್ಷಣವೂ ಮುಖ್ಯವಾದುದು. ಒಂದು ಕ್ಷಣ ಮೌನ ಅಂದರೆ ಕಾರ್ಯಕ್ರಮ ಸೋಲು. ಕಾರ್ಯಕ್ರಮದ ಓಘ ತಪ್ಪಿಹೋಗುತ್ತದೆ. ತೀರ್ಪುಗಾರರು ಸ್ವಲ್ಪ ಹೆಚ್ಚಿಗೆ ಮಾತಾಡಿದ್ರು ಸಾಕು, ಕಿವಿ ಒಳಗೆ ಶುರು ಆಗಿತ್ತೆ, ‘ಕಟ್ ಮಾಡಿ, ಕಟ್ ಮಾಡಿ ಮೇಡಂ’ ಅಂತ. 

ಜೀವನವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಗಂಭೀರವಾಗಿ ತೆಗೆದುಕೊಂಡಾಗ ಒತ್ತಡ ಹೆಚ್ಚಾಗುತ್ತದೆ. ನಾನು ಹಾಗೆ ಇದ್ದೆ. ನಾನು ಅಂದುಕೊಂಡಿದ್ದು ಆಗಲಿಲ್ಲ ಎಂದಾಗ ಒತ್ತಡ ಅನುಭವಿಸುತ್ತಿದ್ದೆ. ಆದರೆ, ಈಗ ಹಾಗಿಲ್ಲ. ಯಾವಾಗಿಂದ ನಾನು ಯೋಗ ಮಾಡುವುದನ್ನು ಕಲಿತೆನೋ ಅಲ್ಲಿಂದ ನಾನು ಬದಲಾಗಿದ್ದೀನಿ. ಸಂತೋಷದ ವಿಚಾರ ಆದರೂ ಆ ಕ್ಷಣಕ್ಕೆ ಸಂತೋಷವನ್ನು ಪಟ್ಟು ಅದನ್ನು ಆಮೇಲೆ ಬಿಡಬೇಕು. ದುಃಖದ ವಿಚಾರ ಕೂಡ ಹೀಗೆ. ಗಡಿಯಾರದ ಮುಳ್ಳು ಯಾವಾಗಲೂ ಸಾಗುತ್ತಲೇ ಇರುತ್ತದೆ. ಯಾವುದು ಶಾಶ್ವತ ಅಲ್ಲ. ಹಾಗಾಗಿ, ಹೆಚ್ಚು ಯೋಚಿಸೋ ಬದಲು ಈ ಕ್ಷಣವನ್ನು ಅನುಭವಿಸಬೇಕು. ಒತ್ತಡ ನಿವಾರಣೆಗೆ ನಾನು ಯೋಗ ಮಾಡ್ತೀನಿ. ಇದರ ಜೊತೆಗೆ, ರನ್ನಿಂಗ್ ಕೂಡ ಮಾಡ್ತೀನಿ. ಇವು ನನ್ನನ್ನು ಸದಾ ಉಲ್ಲಾಸದಿಂದ ಇರುವುದಕ್ಕೆ ಸಹಾಯ ಮಾಡುತ್ತದೆ. 

 

ಬರಹ ಇಷ್ಟವಾಯಿತೆ?

 • 17

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !