ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಯನಗಳ ನಾಜೂಕು: ಕಣ್ಣುಗಳ ಆರೋಗ್ಯಕ್ಕೆ ಇಲ್ಲಿವೆ ಕ್ರಮಬದ್ಧ ವ್ಯಾಯಾಮಗಳು

Last Updated 25 ಅಕ್ಟೋಬರ್ 2022, 3:13 IST
ಅಕ್ಷರ ಗಾತ್ರ

ಆಧುನಿಕ ಜಗತ್ತಿನಲ್ಲಿ ಕಣ್ಣುಗಳು ಸಾಕಷ್ಟು ಒತ್ತಡಗಳನ್ನು ತಡೆದುಕೊಳ್ಳಬೇಕಾಗಿದೆ. ನಯನಗಳನ್ನು ನಾಜೂಕಾಗಿ ನೋಡಿಕೊಳ್ಳುವುದು ಇಂದಿನ ಅನಿವಾರ್ಯ.

ಅತಿಯಾದ ಇಂಟರ್ನೆಟ್‌ನ ಬಳಕೆ, ಕಂಪ್ಯೂಟರ್/ಲ್ಯಾಪ್‍ಟಾಪ್‍ಗಳ ಉಪಯೋಗ, ಹೆಚ್ಚಾಗಿ ಟೆಲಿವಿಷನನ್ನು ವೀಕ್ಷಿಸುವುದು, ಮೊಬೈಲ್ ಫೋನ್‍ಗಳ ಕಿರುಪರದೆಯನ್ನು ದೃಷ್ಟಿಸುವುದು, ವಿಡಿಯೊ ಗೇಮ್ಸ್‌ಗಳ ಪರಿಣಾಮವಾಗಿ ಕಣ್ಣುಗಳು ನಿತ್ರಾಣವಾಗುತ್ತಿರುವುದು ಅನೇಕರು ದೃಷ್ಟಿದೋಷಗಳಿಗೆ ತುತ್ತಾಗುತ್ತಿರುವುದು ದುರ್ದೈವವೇ ಸರಿ. ಇದರೊಂದಿಗೆ ಅಲ್ಪಕಾಲೀನ ನಿದ್ರೆ, ನಿನಿದ್ರತೆಗಳೂ ಸೇರಿಬಿಟ್ಟರೆ ಕಣ್ಣುಗಳು ಮತ್ತಷ್ಟು ಬಳಲಿಕೆಗೆ ಒಳಗಾಗುತ್ತವೆ.

ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಳವಡಿಸಿಕೊಳ್ಳಬಹುದಾದ ಕೆಲವು ವಿಧಾನಗಳನ್ನು ಈ ಲೇಖನದಲ್ಲಿ ಕೊಡಲಾಗಿದೆ. ಕಣ್ಣಿಗೆ ಕೆಲವು ಸುಲಭ ಸಾಧ್ಯವಾದ ವ್ಯಾಯಾಮ ವಿಧಾನಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಕಣ್ಣುಗಳಿಗೆ ಸಾಕಷ್ಟು ತ್ರಾಣವನ್ನು ನೀಡಬಹುದು.

ಈ ವ್ಯಾಯಾಮಗಳನ್ನು ಮಾಡುವಾಗ ಗಮನಿಸಬೇಕಾದ ಅಂಶಗಳು:

1. ಕಣ್ಣಿನ ಸ್ನಾಯುಗಳ ಮೇಲೆ ತೀವ್ರ ಒತ್ತಡ ಬರದಂತೆ ಎಚ್ಚರ ವಹಿಸಿ.

2. ತಲೆನೋವು, ತಲೆ ತಿರುಗುವಿಕೆ ಇತ್ಯಾದಿ ಸಮಸ್ಯೆಗಳು ತಲೆದೋರಿದರೆ ಅಭ್ಯಾಸವನ್ನು ನಿಲ್ಲಿಸಿ.

3. ಈ ಚಲನೆಗಳನ್ನು ಉಸಿರಾಟದೊಂದಿಗೆ ಸಮೀಕರಿಸಿ ಮಾಡಬಹುದು.

ಎಚ್ಚರಿಕೆ: ಕಣ್ಣಿನ ತೀವ್ರ ತರವಾದ ಸಮಸ್ಯೆಯಿರುವವರು ವೈದ್ಯರ ಸಲಹೆಯನ್ನು ಪಡೆದು ನುರಿತ ಶಿಕ್ಷಕರ ಬಳಿ ಆಭ್ಯಾಸ ಮಾಡಬೇಕು

ಕ್ರಮ 1 : ಮುಂದು-ಹಿಂದು ಚಲನೆ

1. ಕುರ್ಚಿಯ ಮೇಲೆ ನೇರವಾಗಿ ಕುಳಿತುಕೊಳ್ಳಿ. ನಿಮ್ಮ ಅಸ್ಥಿ-ಸ್ನಾಯುಗಳ ವ್ಯವಸ್ಥೆಯ ಸಮಗ್ರ ಅರಿವಿರಲಿ.

2. ಬಲಹೆಬ್ಬೆಟ್ಟನ್ನು ನೇರ ಮಾಡಿ; ಮಿಕ್ಕ ನಾಲ್ಕು ಬೆರಳುಗಳನ್ನು ಮಡಿಚಿ; ಬಲಗೈಯನ್ನು ಮುಂದಕ್ಕೆ ಚಾಚಿ. ಹೆಬ್ಬೆಟ್ಟಿನ ತುದಿ ಕಣ್ಣಿನ ನೇರಕ್ಕೆ ಹಿಡಿಯಿರಿ.

3. ಬಲಹೆಬ್ಬೆಟ್ಟನ್ನು ತದೇಕ ಚಿತ್ತದಿಂದ ರೆಪ್ಪೆಗಳನ್ನು ಅಲುಗಾಡಿಸದೇ ದೃಷ್ಟಿಸಿ ನೋಡಿ.

4. ಉಸಿರನ್ನು ತೆಗೆದುಕೊಳ್ಳುತ್ತಾ, ಮೊಣಕೈಯನ್ನು ನಿಧಾನವಾಗಿ ಮಡಿಚಿ ಬಲಹಸ್ತವನ್ನು ಕಣ್ಣಿನ ಹತ್ತಿರಕ್ಕೆ (ಕಣ್ಣಿನಿಂದ ಸುಮಾರು 6 ಇಂಚುಗಳಷ್ಟು ದೂರಕ್ಕೆ) ತನ್ನಿ.

5. ಉಸಿರನ್ನು ಬಿಡುತ್ತಾ, ಮೊಣಕೈಯನ್ನು ನಿಧಾನವಾಗಿ ಚಾಚಿ ಬಲಹಸ್ತವನ್ನು ಕಣ್ಣಿನಿಂದ ದೂರಕ್ಕೆ ಸರಿಸಿ. ಹೆಬ್ಬೆಟ್ಟು ಒಂದೇ ಎತ್ತರದಲ್ಲಿರುವಂತೆ ಚಲಿಸಿ.

6. ಈ ಕ್ರಮವನ್ನು ಸುಮಾರು 10-15 ಬಾರಿ ಪುನರಾವರ್ತಿಸಿ.

7. ಕಣ್ಣುಗಳನ್ನು ಮುಚ್ಚಿ, ಕೈಗಳನ್ನು ವಿರಮಿಸಿ.

ಕ್ರಮ 2 : ಪಾರ್ಶ್ವಚಲನೆ

1. ಮುಂದಕ್ಕೆ ಹಾಗೂ ಹಿಂದಕ್ಕೆ ಚಲಿಸಿ ವಿರಮಿಸಿದ ನಂತರ ಮೇಲೆ ಹೇಳಿದ ರೀತಿ ಹೆಬ್ಬೆಟ್ಟನ್ನು ಹಿಡಿದು ಪಾರ್ಶ್ವಚಲನೆಗಳನ್ನು ಮಾಡಿ.

2. ಸ್ವಾಭಾವಿಕವಾಗಿ ಅಕ್ಕ-ಪಕ್ಕ ನೋಡಬೇಕಾದರೆ ಕುತ್ತಿಗೆಯು ತಿರುಗುತ್ತದೆ. ಆದರೆ ಈ ಚಲನೆಗಳನ್ನು ಮಾಡುವಾಗ ಕಣ್ಣುಗಳಷ್ಟೇ ಚಲಿಸಬೇಕು. ಕುತ್ತಿಗೆಯ ತಿರುಗುವಿಕೆಯನ್ನು ತಡೆಯಬೇಕು. ಇದಕ್ಕಾಗಿ ಎಡಹಸ್ತದಿಂದ ಗಂಟಲ ಭಾಗವನ್ನು ಮೃದುವಾಗಿ ಹಿಡಿಯಿರಿ. ಸ್ಪರ್ಶ ಸಂವೇದನಾ ಗ್ರಹಿಕೆಯಿಂದ ಕುತ್ತಿಗೆಯು ತಿರುಗದಂತೆ ಗಮನಿಸಿ.

3. ಉಸಿರನ್ನು ಬಿಡುತ್ತಾ ಬಲ ಹಸ್ತವನ್ನು (ಅದೇ ಎತ್ತರದಲ್ಲಿ) ನಿಧಾನವಾಗಿ ಬಲ ಪಾರ್ಶ್ವಕ್ಕೆ ಚಾಚಿ.

4. ಈ ಕ್ರಮವನ್ನು ಸುಮಾರು 10-15 ಬಾರಿ ಪುನರಾವರ್ತಿಸಿ.

5. ನಂತರ ಮತ್ತೊಂದು ಪಾರ್ಶ್ವದಲ್ಲೂ ಪುನರಾವರ್ತಿಸಿ

6. ಕಣ್ಣುಗಳನ್ನು ಮುಚ್ಚಿ, ಕೈಗಳನ್ನು ವಿರಮಿಸಿ.

ಕ್ರಮ 3: ಕೆಳ-ಮೇಲು ಚಲನೆ

1. ಬಲಹಸ್ತವನ್ನು ಕೆಳಮುಖವಾಗಿ ಇರಿಸಿ ಬೆರಳುಗಳನ್ನು ಒಳಮುಖವಾಗಿ ಮಡಿಚಿ; ಬಲಹೆಬ್ಬೆಟ್ಟನ್ನು ಚಾಚಿ.

2. ಬಲಹೆಬ್ಬೆಟ್ಟನ್ನು ತದೇಕಚಿತ್ತದಿಂದ ರೆಪ್ಪೆಗಳನ್ನು ಅಲುಗಾಡಿಸದೇ ದೃಷ್ಟಿಸಿ.

3. ಎಡಹಸ್ತದಿಂದ ಗಂಟಲ ಭಾಗವನ್ನು ಮೃದುವಾಗಿ ಹಿಡಿಯಿರಿ. ಸ್ಪರ್ಶ ಸಂವೇದನಾ ಗ್ರಹಿಕೆಯಿಂದ ಕುತ್ತಿಗೆಯು ಚಲಿಸದಂತೆ ಗಮನಿಸಿ.

4. ಹೆಬ್ಬೆಟ್ಟಿನ ತುದಿ ಕಾಣುವವರೆಗೂ ಬಲಗೈಯನ್ನು ಮೇಲಕ್ಕೆ ಚಲಿಸಿ.

5. ಉಸಿರನ್ನು ಬಿಡುತ್ತಾ ಬಲಹಸ್ತವನ್ನು ನಿಧಾನವಾಗಿ ಕೆಳಕ್ಕೆ ಇಳಿಸಿ.

6. ಈ ಕ್ರಮವನ್ನು ಸುಮಾರು 10-15 ಬಾರಿ ಪುನರಾವರ್ತಿಸಿ.

7. ಕಣ್ಣುಗಳನ್ನು ಮುಚ್ಚಿ, ಕೈಗಳನ್ನು ವಿರಮಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT