ಗುರುವಾರ , ಅಕ್ಟೋಬರ್ 29, 2020
27 °C
ಕೊರೊನಾ ಒಂದಷ್ಟು ತಿಳಿಯೋಣ

ಕೋವಿಡ್ ನಿಯಂತ್ರಣಕ್ಕೆ ಮುಖಗವಸು ಸಹಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ಗೆ ಈವರೆಗೂ ನಿರ್ದಿಷ್ಟ ಔಷಧ ಸಂಶೋಧಿಸಲ್ಪಟ್ಟಿಲ್ಲ. ಹಾಗಾಗಿ ಕೊರೊನಾ ಸೋಂಕು ಹರಡುವಿಕೆ ತಡೆಯಲು ಕಡ್ಡಾಯವಾಗಿ ಮುಖಗವಸು ಧರಿಸುವ ಜತೆಗೆ ಅಂತರ ಕಾಯ್ದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಈ ಸೋಂಕಿನ ಲಕ್ಷಣಗಳಿಗೆ ಚಿಕಿತ್ಸೆ ನೀಡಲು ಸದ್ಯಕ್ಕೆ ಯಾವುದೇ ನಿರ್ದಿಷ್ಟ ವೈರಾಣು ನಿರೋಧಕ ಔಷಧಗಳಿಲ್ಲ. ಎಲ್ಲ ವಯೋಮಾನದವರಲ್ಲೂ ಕಾಣಿಸಿಕೊಳ್ಳುವ ಈ ಕಾಯಿಲೆಯು ವೇಗವಾಗಿ ಹರಡುತ್ತದೆ. ಸೋಂಕಿತ ವ್ಯಕ್ತಿ ಸೀನಿದಾಗ ಹಾಗೂ ಕೆಮ್ಮಿದಾಗ ಹೊರಹೊಮ್ಮುವ ತುಂತುರು ಹನಿಗಳ ಮೂಲಕ ವೈರಾಣುಗಳು ಇನ್ನೊಬ್ಬ ವ್ಯಕ್ತಿಯ ದೇಹ ಸೇರುವ ಸಾಧ್ಯತೆ ಇರುತ್ತದೆ. ಮುಖಗವಸು ಧರಿಸುವುದರಿಂದ ಈ ರೀತಿಯ ಸೋಂಕು ಹರಡುವಿಕೆ ತಡೆಯಲು ಸಾಧ್ಯ ಎನ್ನುವುದು ವೈದ್ಯಕೀಯ ಸಂಶೋಧನೆಗಳಿಂದ ದೃಢಪಟ್ಟಿದೆ ಎಂದು ಇಲಾಖೆ ತಿಳಿಸಿದೆ.

ಮುಖಗವಸನ್ನು ಧರಿಸುವಾಗ ಹಾಗೂ ತೆಗೆಯುವಾಗ ಮಾಡುವ ತಪ್ಪುಗಳಿಂದ ಕೂಡ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಹಾಗಾಗಿ ಮುಖಗವಸಿನ ಮುಂಭಾಗವನ್ನು ಕೈಗಳಿಂದ ಸ್ಪರ್ಶಿಸಬಾರದು. ಅದೇ ರೀತಿ, ಬಳಸಿ ಬಿಸಾಡುವ ಮುಖಗವಸನ್ನು 8 ಗಂಟೆಗಳಿಗಿಂತ ಹೆಚ್ಚಿನ ಸಮಯ ಬಳಕೆ ಮಾಡಬಾರದು ಎಂದು ಇಲಾಖೆ ಸೂಚಿಸಿದೆ.

ಮುಖಗವಸು ಧರಿಸುವಾಗ ಏನು ಮಾಡಬೇಕು?

* ಮುಖಗವಸು ಧರಿಸುವ ಮೊದಲು ಕೈಗಳನ್ನು ಸ್ಯಾನಿಟೈಸರ್‌ನಿಂದ ಸ್ವಚ್ಛ‍ಪಡಿಸಿಕೊಳ್ಳಬೇಕು

* ಮೂಗು ಹಾಗೂ ಬಾಯಿಯ ಭಾಗವು ಪೂರ್ಣವಾಗಿ ಮುಚ್ಚುವಂತೆ ಧರಿಸಬೇಕು

* ಮುಖಗವಸು ಧರಿಸಿದ ಮೇಲೆ ಪದೇ ಪದೇ ಬಾಯಿ ಮತ್ತು ಮೂಗನ್ನು ಮುಟ್ಟಿಕೊಳ್ಳಬಾರದು

* ಕುತ್ತಿಗೆಯ ಭಾಗದಲ್ಲಿ ಮುಖಗವಸು ನೇತಾಡುವ ಹಾಗೆ ಧರಿಸಬಾರದು

* ಮುಖಗವಸು ಒದ್ದೆಯಾಗಿದ್ದಲ್ಲಿ ಅಥವಾ ತೇವವಾಗಿದ್ದಲ್ಲಿ ಕೂಡಲೇ ಬದಲಾಯಿಸಬೇಕು

* ಒಮ್ಮೆ ಬಳಸುವಂತಹ ಮುಖಗವಸುಗಳನ್ನು ಯಾವುದೇ ಕಾರಣಕ್ಕೂ ಪುನರ್ಬಳಕೆ ಮಾಡಬಾರದು

ಮುಖಗವಸು ತೆಗೆಯುವಾಗ ಏನು ಮಾಡಬೇಕು?

* ಮುಖಗವಸಿನ ಮುಂಭಾಗವನ್ನು ಮುಟ್ಟದೆ ಲೇಸ್‌ಗಳನ್ನು ಹಿಡಿದು ಹಿಂಭಾಗದಿಂದ ತೆಗೆಯಬೇಕು

* ಮುಖಗವಸಿನ ಮುಂಭಾಗವನ್ನು ಕೈಗಳಿಂದ ಸ್ಪರ್ಶಿಸಬಾರದು 

* ಮುಖಗವಸನ್ನು ತೆಗೆದ ಬಳಿಕ ಕೈಗಳನ್ನು ಸ್ಯಾನಿಟೈಸರ್ ಅಥವಾ ಸೋಪಿನ ನೀರಿನಿಂದ ಮತ್ತೊಮ್ಮೆ ಸ್ವಚ್ಛಪಡಿಸಿಕೊಳ್ಳಬೇಕು

 ಮುಖಗವಸಿನ ಸ್ವಚ್ಛತೆ ಹೇಗೆ? 

* ಸಾಬೂನು ಮತ್ತು ಬೆಚ್ಚನೆಯ ನೀರನ್ನು ಬಳಸಿ ಮುಖಗವಸನ್ನು ಸಂಪೂರ್ಣವಾಗಿ ತೊಳೆಯಬೇಕು

* ಬಿಸಿಲಿನಲ್ಲಿ ಕನಿಷ್ಠ ಐದು ಗಂಟೆಗಳವರೆಗೆ ಒಣಗಿಸಬೇಕು

* ಪ್ರೆಶರ್‌ ಕುಕ್ಕರಿನ ಒಳಗೆ ಉಪ್ಪುನೀರು ಹಾಕಿ, ಹತ್ತು ನಿಮಿಷ ಕುದಿಸುವ ಮೂಲಕವೂ ಸ್ವಚ್ಛಪಡಿಸಬಹುದು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು