ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ | ಊಟದಷ್ಟೇ ಉಪವಾಸವೂ ಮುಖ್ಯ

Last Updated 4 ಜುಲೈ 2022, 20:15 IST
ಅಕ್ಷರ ಗಾತ್ರ

ಊಟ ಎಂದರೆ ನಾವು ಬಾಯಿಯ ಮುಖಾಂತರ ಸೇವಿಸುವ ಆಹಾರ ಎಂಬದು ಎಲ್ಲರಿಗೂ ತಿಳಿದಿದೆ. ಬಾಯಿಯ ಮುಖಾಂತರ ಯಾವುದೇ ಆಹಾರವನ್ನು ಸೇವಿಸದಿರುವುದು ‘ಉಪವಾಸ’. ದೇಹಪೋಷಣೆ ಮೂರು ರೀತಿಯಲ್ಲಿ ಆಗುತ್ತದೆ: ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಮಾತಿನ ಮೂಲಕ ಸೇವಿಸುವ ಆಹಾರಗಳಿಂದ. ಇವುಗಳಲ್ಲಿ ಯಾವುದೊಂದು ಸರಿ ಇಲ್ಲದಿದ್ದರೂ ಆರೋಗ್ಯ ವ್ಯತ್ಯಾಸವಾಗಬಹುದು. ಹೀಗಾಗಿ ಉಪವಾಸ ಎಂದರೆ ಆಹಾರನಿಷೇಧ ಮಾತ್ರವಲ್ಲ, ಮಾನಸಿಕವಾಗಿ, ವಾಚಿಕವಾಗಿ, ಐಂದ್ರಿಕವಾಗಿ ಇರುವ ನಮ್ಮ ಪ್ರವೃತ್ತಿಗಳೂ ಉಪವಾಸದಲ್ಲಿಯೇ ಸೇರುತ್ತವೆ. ಆಹಾರನಿಷ್ಠೆ ಮಾತ್ರವಲ್ಲದೆ, ವ್ಯಾಯಾಮ ಮಾಡುವುದು, ಹೆಚ್ಚು ಮಾತನಾಡದಿರುವುದು, ಇಂದ್ರಿಯ ವ್ಯಾಪಾರಗಳಾದ ಮಾಧ್ಯಮಗಳ ಅತಿ ಬಳಕೆಯಿಂದ ದೂರವಿರುವುದೂ ಉಪವಾಸವೇ.

ಕೆಲವರ ಅಭಿಪ್ರಾಯದ ಪ್ರಕಾರ ಒಂದು ವಾರ ಅಥವಾ 15 ದಿವಸ ಯಾವುದೇ ರೀತಿಯ ಆಹಾರ ಸೇವಿಸಿದರೂ, ಒಂದು ದಿನ ನಿರ್ಜಲ ಉಪವಾಸ ಮಾಡಿದರೆ ನಾವು ತಿಂದ ಆಹಾರವೆಲ್ಲವೂ ಜೀರ್ಣವಾಗಿ ಆರೋಗ್ಯ ಲಭಿಸುತ್ತದೆ ಎಂದು. ವಾಸ್ತವಿಕವಾಗಿ ಅಜೀರ್ಣವಾಗುವಷ್ಟು ತಿನ್ನುವುದೇ ಅನಾರೋಗ್ಯಕರ. ಇಂದಲ್ಲ ನಾಳೆ ಅಪಥ್ಯದ ಪರಿಣಾಮವನ್ನು ಅನುಭವಿಸಲೇ ಬೇಕು. ಆದರೆ ಉಪವಾಸ ಅಥವಾ ನಿರಾಹಾರ ಅಥವಾ ಅಲ್ಪಾಹಾರಸೇವನೆಯಿಂದ ರೋಗವನ್ನು ಮುಂದೂಡಬಹುದು.

ಆಯುರ್ವೇದ ವಿಜ್ಞಾನದ ಪ್ರಕಾರ ನಾಲ್ಕು ರೀತಿಯ ವ್ಯಕ್ತಿಗಳಿರುತ್ತಾರೆ:

1. ಯಾವುದೇ ಆಹಾರ ಸೇವಿಸಿದರೂ ಜೀರ್ಣವಾಗುವವರು.

2. ಯಾವುದೇ ಆಹಾರವಾದರೂ ಸುಲಭವಾಗಿ ಜೀರ್ಣವಾಗದವರು.

3. ಆರೋಗ್ಯಕರ ಅಥವಾ ದೇಹಕ್ಕೆ ಒಗ್ಗುವ ಆಹಾರ ಸಂಪೂರ್ಣವಾಗಿ ಜೀರ್ಣವಾಗುತ್ತದೆ. ದೇಹಕ್ಕೆ ಒಗ್ಗದ ಆಹಾರ ಅಜೀರ್ಣವಾಗುವವರು.

4. ನಿಶ್ಚಿತವಾಗಿ ಇಂತಹದೇ ಆಹಾರ ದೇಹಕ್ಕೆ ಒಗ್ಗುತ್ತದೆ ಎಂದು ಹೇಳಲಾಗದವರು. ಇವರಿಗೆ ಆರೋಗ್ಯಕರ ಆಹಾರವೂ ಅಜೀರ್ಣವಾಗಬಹುದು. ಕೆಲವೊಮ್ಮೆ ಉಳಿದವರಿಗೆ ಅಜೀರ್ಣವಾಗುವ ಆಹಾರವೂ ಇವರಿಗೆ ಜೀರ್ಣವಾಗಬಹುದು.

ಇವರಲ್ಲಿ ಮೊದಲು ಮತ್ತು ನಾಲ್ಕನೆಯ ವಿಭಾಗದ ಜನರು ಉಪವಾಸ ಮಾಡುವುದರಿಂದ ಅನಾರೋಗ್ಯ ಉತ್ಪತ್ತಿ ಆಗುತ್ತದೆ. ಆದರೆ ಎರಡನೆಯ ವಿಭಾಗದವರು ಉಪವಾಸ ಮಾಡುವುದರಿಂದ ಸ್ವಲ್ಪ ಮಟ್ಟಿಗಾದರೂ ಜೀರ್ಣಶಕ್ತಿ ಹೆಚ್ಚಿ ಜೀರ್ಣಕ್ರಿಯೆಯು ಸುಗಮವಾಗುತ್ತದೆ. ಮೂರನೆಯ ವಿಭಾಗದವರು ಪರಿಸ್ಥಿತಿಗೆ ಅನುಗುಣವಾಗಿ ಅಲ್ಪಾಹಾರದ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಎಂದರೆ ಉಪವಾಸ ಎನ್ನುವುದು ಎಲ್ಲರಿಗೂ ಒಂದೇ ರೀತಿಯ ಫಲವನ್ನು ನೀಡುವುದಿಲ್ಲ.

‘ಲಂಘನಂ ಪರಮೌಷಧಂ’ ಎನ್ನುವುದು ಎಲ್ಲರೂ ಕೇಳಿರುವ ವಾಡಿಕೆಯ ಮಾತು. ಯಾವುದೇ ರೀತಿಯ ಅನಾರೋಗ್ಯಕ್ಕಾದರೂ ಉಪವಾಸ ಮಾಡುವುದರಿಂದ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ. ಲಂಘನ ಎನ್ನುವುದನ್ನು ಶಾಸ್ತ್ರಗಳು ಅನೇಕ ಪ್ರಕಾರವಾಗಿ ಹೇಳಿವೆ; ಅದರಲ್ಲಿ ಒಂದು ವಿಭಾಗ ನಿರಾಹಾರ. ವಾಸ್ತವಿಕವಾಗಿ ‘ಲಂಘನ’ ಎಂದರೆ ದೇಹವನ್ನು ಹಗುರಗೊಳಿಸುವುದು ಎಂದರ್ಥ. ದೇಹವನ್ನು ಹಗುರವಾಗಿಸಲು ಮಾಡುವ ಎಲ್ಲಾ ಪ್ರಕ್ರಿಯೆಗಳೂ ಲಂಘನಗಳೇ.

ಯುಕ್ತಿಯುಕ್ತವಾಗಿ ಮಾಡುವ ವ್ಯಾಯಾಮ, ಬಿಸಿಲು–ಗಾಳಿಯ ಸೇವನೆಯೂ ಲಂಘನವೇ. ಇವೂ ಜೀರ್ಣಶಕ್ತಿಯನ್ನು ಹೆಚ್ಚಿಸಿ ಆಹಾರ ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ. ಆದರೆ ದೇಹವನ್ನು ಹಗುರವಾಗಿಸುವ ನೆಪದಲ್ಲಿ ಮಾಡುವ ಅತಿಯಾದ ವ್ಯಾಯಾಮವೂ ವಾತವ್ಯಾಧಿಯನ್ನು ಉತ್ಪತ್ತಿ ಮಾಡಬಹುದು. ಎಳೆಯ ಬಿಸಿಲಿನಲ್ಲಿ ಉದ್ಯಾನವನದಲ್ಲಿ ನಡೆಯುವುದು ವಿಟಮಿನ್‌ಗಳ ಉತ್ಪಾದನೆಯನ್ನು ಹೆಚ್ಚಿಸಿ, ಆಹಾರಜೀರ್ಣವಾಗಲೂ ಕಾರಣವಾಗುತ್ತದೆ.

ಅತಿಯಾದ ದ್ರವಾಹಾರದ ಸೇವನೆಯೇ ಉಪವಾಸವೆಂದು ತಿಳಿದು, ಆಹಾರವನ್ನು ಸೇವಿಸದೆ ಕೆಲವರು ಹಸಿವಾದಾಗಲೆಲ್ಲಾ ನೀರನ್ನು ಸೇವಿಸುತ್ತಾರೆ. ಕೆಲವರು ಅತಿ ಹೆಚ್ಚು ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ದಿನಕ್ಕೆ 5-6 ಲೀ. ನೀರು ಕುಡಿಯುತ್ತಾರೆ. ಆದರೆ, ಹೀಗೆ ಮಾಡುವುದು ಜೀರ್ಣಶಕ್ತಿಯನ್ನು ಕುಂಠಿತಗೋಳಿಸುತ್ತದೆ. ಅನಗತ್ಯವಾಗಿ ನೀರು, ತಂಪುಪಾನೀಯಗಳು, ಇತರೆ ದ್ರವಪದಾರ್ಥಗಳನ್ನು ಮಾತ್ರ ಸೇವಿಸುವುದು ಅಥವಾ ಉಪವಾಸವೆಂದು ಹಣ್ಣು–ಹಾಲನ್ನು ಮಿಶ್ರಮಾಡಿ ಮಿಲ್ಕ್ ಶೇಕ್, ಹಾಲು ಬೆರೆಸಿ ತಯಾರಿಸಿದ ಹಣ್ಣುಗಳ ರಸಾಯನ – ಇವುಗಳನ್ನು ಸೇವಿಸುವುದು ಅನಾರೋಗ್ಯವನ್ನೇ ತಂದೀತು. ಬಾಯಾರಿಕೆ ಅಥವಾ ಸುಸ್ತು ಇಲ್ಲದಿರುವಾಗ ದ್ರವಾಹಾರವನ್ನು ಸೇವಿಸದಿರುವುದೂ ಲಂಘನವೇ.

ಕೆಲವು ಮೂತ್ರಸಂಬಂಧಿ ಕಾಯಿಲೆಗಳಲ್ಲಿ ದ್ರವಾಹಾರವನ್ನು ನಿಷೇಧಿಸುತ್ತಾರೆ. ಇದು ಆ ವ್ಯಕ್ತಿಗೆ ಸಂಬಂಧಪಟ್ಟು ಲಂಘನವೇ ಆಗಿದೆ. ಉಪವಾಸ ಮಾಡುವವರು ಸಾಮಾನ್ಯವಾಗಿ ಎರಡು ವಿಧದ ಜನರಾಗಿರುತ್ತಾರೆ. ಒಂದು, ಯಾವುದೋ ದೇವತಾಕಾರ್ಯ, ಹರಕೆ, ಪುಣ್ಯಪ್ರಾಪ್ತಿಗಾಗಿ ಉಪವಾಸ ಮಾಡುವವರು. ಎರಡನೆಯದು, ಸಣ್ಣಗಾಗಬೇಕೆಂದೋ ಅಥವಾ ಆರೋಗ್ಯವಾಗಿರಬೇಕೆಂದೋ ಉಪವಾಸ ಮಾಡುವವರು.

ಮೊದಲ ವರ್ಗದ ಜನರು ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ, ಅಥವಾ ತಿಂಗಳಿಗೆ ಒಂದು ದಿನ ಊಟಮಾಡುವುದಿಲ್ಲ ಎಂಬ ಸಂಕಲ್ಪ ಮಾಡುತ್ತಾರೆ. ಇವರಿಗೆ ಅನ್ನ ತಿಂದರೆ ಮಾತ್ರ ಆಹಾರ, ಮಿಕ್ಕೆಲ್ಲಾ ಪದಾರ್ಥಗಳ ಸೇವನೆ ಉಪವಾಸವೇ! ಇನ್ನು ಕೆಲವರು ಬೆಳಗ್ಗೆ ಮತ್ತು ರಾತ್ರಿ ಪುಷ್ಕಳ ‘ಊಟದಷ್ಟೇ ಉಪಹಾರ’ ಮಾಡುತ್ತಾರೆ, ಆದರೆ ಮಧ್ಯಾಹ್ನ ಮಾತ್ರ ಆಹಾರವನ್ನು ಸೇವಿಸುವುದಿಲ್ಲ. ಇವು ಉಪವಾಸವೇ ಅಲ್ಲ. ದ್ರವಾಹಾರವೆಂದು ಕೂಲ್ಡ್ರಿಂಕ್ಸ್‌ಗಳನ್ನೋ ಅತಿ ತಂಪಾದ ನೀರನ್ನೋ ಅಥವಾ ಅತಿ ತಂಪಾದ ಪಾನಕವನ್ನೋ ಮಿಲ್ಕ್‌ಶೇಕನ್ನೋ ಸೇವಿಸಬಾರದು. ಕೇವಲ ಹಣ್ಣಿನ ರಸವನ್ನೋ ಅಥವಾ ಕುದಿಸಿ ತಣಿಸಿದ ನೀರನ್ನೋ ಹಾಲನ್ನೋ ಸೇವಿಸಬಹುದು. ಹಣ್ಣುಗಳ ಸೇವನೆಯೂ ಹಿತಕರವೇ. ಆದರೆ ಹಣ್ಣು ಮತ್ತು ಹಾಲನ್ನು ಒಟ್ಟಿಗೆ ಬೆರೆಸಿ ಸೇವಿಸುವುದು ಆಹಿತಕರ; ಮಧುಮೇಹ, ಕ್ಯಾನ್ಸರ್ ಮುಂತಾದ ಮಹಾವ್ಯಾಧಿಗಳಿಗೆ ಕಾರಣವಾಗಬಹುದು.

ಸಾಮಾನ್ಯವಾಗಿ ಅಲ್ಪಾಹಾರ ಸೇವನೆ ಆರೋಗ್ಯಕರವೆಂದು ಭಾವಿಸುತ್ತಾರೆ. ಆದರೆ ದೈಹಿಕ ಶ್ರಮ ಉಳ್ಳವರು, ಸರಿಯಾಗಿ ವ್ಯಾಯಾಮ ಮಾಡುವವರು, ಅತಿ ಬಿಸಿಲಿನಲ್ಲಿ ಒಡಾಡುವವರು, ಉಪವಾಸ ಅಥವಾ ಅಲ್ಪಾಹರ ಸೇವನೆ ಮಾಡಬಾರದು. ಅವರವರ ಜೀರ್ಣಶಕ್ತಿಗೆ ಅನುಗುಣವಾಗಿ ಪ್ರಾದೇಶಿಕ ಆಹಾರವನ್ನು, ತಮಗೆ ಅಭ್ಯಾಸವಿರುವ ಆಹಾರಗಳನ್ನು ಆರೋಗ್ಯಕರವಾದ ರೀತಿಯಲ್ಲಿ, ಸಕಾಲಕ್ಕೆ, ಸರಿಯಾದ ವಾತಾವರಣದಲ್ಲಿ ಸೇವಿಸುವುದು ಉಪವಾಸದಷ್ಟೇ ಉಪಕಾರಿ. ಆದರೆ ಶಾರೀರಿಕ ಶ್ರಮವಿಲ್ಲದೆ. ಕುಳಿತು ಕೆಲಸ ಮಾಡುವವರಿಗೆ ಅಲ್ಪಾಹಾರ ಹಿತಕರ. ವಿಪರೀತ ಮಾತನಾಡುವ ವೃತ್ತಿಯವರು ಎಂದರೆ, ಶಿಕ್ಷಕರು, ವಕೀಲರು, ವೈದ್ಯರು – ಈ ವೃತ್ತಿಯವರು ನಿರ್ಜಲ ಉಪವಾಸ ಮಾಡುವುದು ಹಾನಿಕರ. ಯಾರೇ ಆದರೂ ಹಿತವಾಗಿ, ಮಿತವಾಗಿ, ಋತುವಿಗನುಗುಣವಾಗಿ ಆಹಾರವನ್ನು ಸೇವಿಸುವುದು ಉಪವಾಸವನ್ನು ಮಾಡಿದಂತೆಯೇ. ಹೀಗೆ ಯಾರಿಗೆ ಯಾವ ರೀತಿಯ ಲಂಘನವು ಹಿತಕರವೋ ಅದನ್ನು ಆರಿಸಿಕೊಳ್ಳುವುದು ಒಳಿತು; ಕೇವಲ ಊಟ ಬಿಡುವುದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT