ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುವ ಕತ್ತಲು

Last Updated 23 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ನನಗೆ ಉಸಿರಾಟದ ಸಮಸ್ಯೆ ಕಾಡುತ್ತಿದೆ. ಸದಾ ಗಾಳಿಯಾಡುವ ವಾತಾವರಣದಲ್ಲಿ ಇರಬೇಕು ಎನ್ನಿಸುತ್ತದೆ. ಕತ್ತಲಾದರೆ ಊಟ ಮಾಡಲು ಆಗುವುದಿಲ್ಲ. ರಾತ್ರಿ ವೇಳೆ 12 ಗಂಟೆವರೆಗೂ ನಿದ್ದೆ ಬರುವುದಿಲ್ಲ. ಮನೆಯೊಳಗೆ ಇರಲು ಸಾಧ್ಯವಾಗುವುದಿಲ್ಲ. ಯಾವಾಗಲೂ ಹೊರಗಡೆ ಇರಬೇಕು ಅನ್ನಿಸುತ್ತದೆ. ಶಬ್ದ ಕೇಳಿದರೆ ಹೆದರಿಕೆ ಆಗುತ್ತದೆ. ನನ್ನ ಸಮಸ್ಯೆ ಏನು?

ಹೆಸರು, ಊರು ಬೇಡ.

ನಿಮ್ಮನ್ನು ಯಾವುದೋ ಒಂದು ರೀತಿಯ ಆತಂಕ ಕಾಡುತ್ತಿದೆ. ಆ ಆತಂಕವು ನಿಮ್ಮೊಳಗೆ ಭಯವನ್ನು ಹುಟ್ಟು ಹಾಕುತ್ತಿದೆ. ಅದು ನಿಧಾನಕ್ಕೆ ನಿಮ್ಮಲ್ಲಿ ಅಭದ್ರತೆಯನ್ನು ಹುಟ್ಟು ಹಾಕಿದೆ. ಇದೊಂದು ವಿಷವರ್ತುಲ ಇದ್ದಂತೆ. ನಿಮ್ಮನ್ನು ಆತಂಕಕ್ಕೆ ತಳ್ಳುತ್ತಿರುವ ಅಂಶ ಯಾವುದು ಎಂಬುದನ್ನು ಗುರುತಿಸಿ. ಯಾವಾಗ ನಿಮ್ಮ ತಲೆಯಲ್ಲಿ ಗೊಂದಲದ ಭಾವನೆಗಳು ತುಂಬಿಕೊಂಡು ಉಸಿರಾಡಲು ಕಷ್ಟವಾಗುವುದೋ ಆಗ ಆ ಭಾವನೆಗಳನ್ನು ಹಾಳೆಯೊಂದರಲ್ಲಿ ಬರೆದಿಡಿ. ನಿಮ್ಮನ್ನು ಗೊಂದಲಕ್ಕೆ ತಳ್ಳಿ ಅಭದ್ರತೆ ಹುಟ್ಟಿಸುವ ಅಂಶ ಯಾವುದು ಎಂಬುದನ್ನು ಗುರುತಿಸಿ.

ಅದನ್ನು ನಿಮ್ಮಿಂದ ಗುರುತಿಸಲು ಸಾಧ್ಯವಾಗದಿದ್ದರೆ ನೀವು ಒಳ್ಳೆಯ ಆಪ್ತಸಮಾಲೋಚಕರನ್ನು ಕಾಣುವುದು ಉತ್ತಮ. ಅವರು ಖಂಡಿತ ನಿಮಗೆ ಸಹಾಯ ಮಾಡುತ್ತಾರೆ. ಅದರೊಂದಿಗೆ ಯೋಗ, ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಎರಡೂ ವೃದ್ಧಿಸುತ್ತದೆ.

ನನಗೆ 20 ವರ್ಷ. ನಾನು ಓದಿದ್ದು ಖಾಸಗಿ ಶಾಲೆಯಲ್ಲಿ, ಆಗ ಶಾಲೆಯಲ್ಲಿ ಜಾಸ್ತಿ ಜಾಸ್ತಿ ಬರೆಯಲು ಕೊಡುತ್ತಿದ್ದರು. ಆಗ ಬರೆಯುವ ಅಭ್ಯಾಸ ಹೆಚ್ಚಿದ ಕಾರಣ ಈಗ ನಾನು ಸುಮ್ಮನೆ ನಿಂತರೂ, ಕುಳಿತರೂ ನನ್ನ ಬೆರಳುಗಳು ತಾನಾಗಿಯೇ ಬರೆಯುವಂತೆ ತಿರುಗುತ್ತವೆ. ಯಾಕೆ ಹೀಗೆ ಆಗುತ್ತದೆ ತಿಳಿಯುತ್ತಿಲ್ಲ. ನಾನು ಬರೆಯುವುದನ್ನು ಬಿಟ್ಟರೂ ಬೆರಳು ಹಾಗೆಯೇ ವರ್ತಿಸುತ್ತಿವೆ. ಇದನ್ನು ತಡೆಗಟ್ಟುವುದು ಹೇಗೆ ತಿಳಿಸಿ.

ಸಹನಾ,ಮಂಗಳೂರು,

ನಿಮಗೆ ಈಗ ನಿಮ್ಮ ಸಮಸ್ಯೆ ಏನು ಎಂಬುದು ತಿಳಿದಿದೆ. ಹಾಗಾಗಿ ನಿಮಗಿರುವ ಸಮಸ್ಯೆಯಿಂದ ಬಿಡಿಸಿಕೊಳ್ಳಲು ಪ್ರಜ್ಞಾಪೂರ್ವಕವಾಗಿ ನೀವು ಈ ಅಭ್ಯಾಸವನ್ನು ಬಿಡಲು ಪ್ರಯತ್ನಿಸಬೇಕು. ನಿಮಗೆ ಬರೆಯಬೇಕು ಎನ್ನಿಸಿದ ತಕ್ಷಣವೇ ಬೇರೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ ಹಾಗೂ ನಿಮ್ಮ ಮನಸ್ಸನ್ನು ಬೇರೆಡೆಗೆ ತಿರುಗಿಸಿ. ಇದು ದೊಡ್ಡ ಸಮಸ್ಯೆ ಅಲ್ಲ. ಆದರೆ ನೀವೇ ನಿಮ್ಮೊಳಗೆ ಈ ಹವ್ಯಾಸವನ್ನು ರೂಢಿಸಿಕೊಂಡಿದ್ದೀರಿ. ಹಾಗಾಗಿ ನೀವೇ ಇದನ್ನು ಬಿಡಬೇಕು. ನಿಮ್ಮ ಮನೆಯವರು ಹಾಗೂ ಸ್ನೇಹಿತರ ಸಹಾಯ ಪಡೆದುಕೊಳ್ಳಿ. ಅವರ ಎದುರು ನಿಮ್ಮ ಈ ವರ್ತನೆ ಕಾಣಿಸಿದರೆ ಅವರಿಂದ ಎಚ್ಚರಿಸಲು ತಿಳಿಸಿ.ಇದು ನಿಮಗೆ ತಿಳಿಯದಂತೆ ಅಂಟಿಕೊಂಡ ಹವ್ಯಾಸ. ನಿಧಾನಕ್ಕೆ ನಿಮ್ಮಿಂದ ಮಾತ್ರ ಇದನ್ನು ನಿಲ್ಲಿಸಲು ಸಾಧ್ಯ.

ನನಗೆ 25 ವರ್ಷ. ಇತ್ತೀಚೆಗೆ ಮರೆವು ಹೆಚ್ಚಾಗಿದೆ. ಮೊದಲು ಈ ರೀತಿಯ ಮರೆವು ಇರಲಿಲ್ಲ. ಕಳೆದ 3 ವರ್ಷಗಳಿಂದ ಬಹಳ ಮರೆವು. ಯಾಕೆ ಎಲ್ಲವನ್ನೂ ಮರೆಯುತ್ತೇನೆ ಎಂಬುದು ತಿಳಿಯುತ್ತಿಲ್ಲ. ನೆನಪಿಡಬೇಕು ಎಂಬ ನೆನಪಲ್ಲೇ ನೆನಪು ಕಳೆದುಕೊಳ್ಳುತ್ತೇನೆ. ನೆನಪಿನ ಶಕ್ತಿ ಕಡಿಮೆಯಾಗಲು ಕಾರಣವೇನು? ಇದನ್ನು ಹೇಗೆ ಪರಿಹರಿಸಿಕೊಳ್ಳಬೇಕು ತಿಳಿಸಿ.

ಸಂದೇಶ, ರಾಯಚೂರು

ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ರೀತಿಯ ನೆನಪಿನ ಸಮಸ್ಯೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ನೀವು ಮಾಡುತ್ತಿರುವ ಕೆಲಸಗಳ ಬಗ್ಗೆ ಎಚ್ಚರದಿಂದಿಲ್ಲದೇ ಇರುವುದು ಅಥವಾ ಮಾಡುವ ಕೆಲಸಗಳ ಮೇಲೆ ಗಮನ ಹರಿಸದೇ ಇರುವುದು ಇರಬಹುದು. ನೀವು ಧ್ಯಾನದೊಂದಿಗೆ ಕಠಿಣ ವ್ಯಾಯಾಮ ಮಾಡುವುದು ಅಗತ್ಯ.ಇವು ನೀವು ಸದಾ ಎಚ್ಚರದಿಂದಿದ್ದು ನೀವು ಮಾಡುವ ಕೆಲಸಗಳ ಮೇಲೆ ಗಮನ ಹರಿಸಲು ನೆರವಾಗುತ್ತವೆ. ಒಂದಾದ ಮೇಲೆ ಒಂದು ಕೆಲಸವನ್ನು ಮಾಡಿ. ಆಗ ನಿಮಗೆ ಎಲ್ಲವೂ ಸರಿಯಾಗಿ ನೆನಪಿರುತ್ತದೆ. ಅನೇಕ ವಿಚಾರಗಳು ನಿಮ್ಮ ಮನಸ್ಸನ್ನು ಮುತ್ತಿಕೊಂಡಿರಬಹುದು. ಇದರಿಂದ ನಿಮ್ಮಲ್ಲಿ ನೆನಪಿನ ಶಕ್ತಿ ಕಡಿಮೆಯಾಗಿರಬಹುದು.

ಇಷ್ಟೆಲ್ಲಾ ಮಾಡಿದ ಮೇಲೂ ನಿಮ್ಮಲ್ಲಿ ನೆನಪಿನ ಶಕ್ತಿ ಕುಗ್ಗುತ್ತಿದ್ದರೆ, ಗಮನ ಕೊಡಲು ಸಾಧ್ಯವಾಗದಿದ್ದರೆ ನೀವು ನರತಜ್ಞರನ್ನು ಭೇಟಿ ಮಾಡಿ ನಿಮ್ಮ ನೆನಪಿನಶಕ್ತಿ ಕುಂದುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT