ಹಬ್ಬದ ಅಡುಗೆಯಲ್ಲಿದೆ ಆರೋಗ್ಯದ ರುಚಿ

7

ಹಬ್ಬದ ಅಡುಗೆಯಲ್ಲಿದೆ ಆರೋಗ್ಯದ ರುಚಿ

Published:
Updated:
Deccan Herald

ಜ್ಯೋತಿರ್ಭೀಮೇಶ್ವರ ಅಮಾವಾಸ್ಯೆಯಿಂದ ವರ್ಷಋತು ಆರಂಭ. ಅದು ಕೊನೆಯಾಗುವುದು ಮಹಾಲಯ ಅಮಾವಾಸ್ಯೆಗೆ. ಈ ಅವಧಿಯೇ ನಡು ಮಳೆಗಾಲ. ಆಯುರ್ವೇದ ಸಂಹಿತೆಗಳ ಪ್ರಕಾರ ವರ್ಷಋತುವನ್ನು ವಾತ ಪ್ರಕೋಪಗೊಳ್ಳುವ ಕಾಲ ಎಂದು ಬಣ್ಣಿಸಲಾಗಿದೆ. ಬೇಸಿಗೆಯ ಕಡು ಬಿಸಿಲಿನಿಂದ ದೇಹ ಮತ್ತು ಜಾಠರಾಗ್ನಿ ದುರ್ಬಲವಾಗಿರುತ್ತದೆ. ಆದ್ದರಿಂದ ಅತಿ ಹಗುರವಾದ ಆಹಾರವನ್ನು ಮಳೆಗಾಲದಲ್ಲಿ ಉಣ್ಣಬೇಕು. ವಾತದೋಷವನ್ನು ನಿಗ್ರಹಿಸಲು ಸಿಹಿಯಾದ, ಅಲ್ಪ ಹುಳಿಯಾದ ಮತ್ತು ಲವಣರಸ ಪ್ರಧಾನವಾದ ಆಹಾರವನ್ನು ಸೇವಿಸುವುದು ಸೂಕ್ತ.

ಮಳೆಗಾಲದ ದಿನಗಳಲ್ಲಿ ಜೇನುತುಪ್ಪವನ್ನು ಹೆಚ್ಚಾಗಿ ಬಳಸಬೇಕು ಎಂಬ ‘ಚರಕಸಂಹಿತೆ’ಯ ಆದೇಶ ನಮಗೆ ಅನುಸರಣೀಯ. ಗೋಧಿ ಮತ್ತು ಬಾರ್ಲಿಯ ಹಿಟ್ಟು ಬಳಸಿದ ತಿಂಡಿ–ತಿನಿಸಿಗೆ ಹೆಚ್ಚು ಒತ್ತು ನೀಡಬೇಕು. ಅಕ್ಕಿ ಅದರಲ್ಲೂ ವಿಶೇಷವಾಗಿ ಕೆಂಪಕ್ಕಿಯ ಬಳಕೆಗೆ ಮಳೆಗಾಲದ ದಿನಗಳು ಹೆಚ್ಚು ಸೂಕ್ತ. ಹಾಲು ಮತ್ತು ಅದರ ಉತ್ಪನ್ನಗಳಾದ ಬೆಣ್ಣೆ, ಮಜ್ಜಿಗೆ, ಸಿಹಿ ಮೊಸರು, ತುಪ್ಪವನ್ನು ಆಯಾ ವ್ಯಕ್ತಿಯು ತನ್ನ ಹಸಿವೆಯ ಶಕ್ತಿಗೆ ಅನುಗುಣವಾಗಿ ಸೇವಿಸಲು ಅಡ್ಡಿಯಿಲ್ಲ. ಊಟ, ತಿಂಡಿ ಜೊತೆಗೆ ಜೇನು ಹಾಗೂ ತುಪ್ಪವನ್ನು ಸರಿಸಮವಲ್ಲದ ಪ್ರಮಾಣದಲ್ಲಿ ಕೂಡಿಸಿ ಬಳಸಬಹುದು. ಮಳೆಗಾಲದಲ್ಲಿ ಬಳಸಲು ಹಳೆಯ ಧಾನ್ಯಗಳಿಗೆ ಹೆಚ್ಚು ಪ್ರಾಶಸ್ತ್ಯ ಇದೆ.

ಹಗಲಿನ ನಿದ್ದೆ, ಸೂಪ್ ತರಹದ ಹೆಚ್ಚು ದ್ರವರೂಪದ ಆಹಾರ, ಮಂಜು ಮತ್ತು ಬೀಸುವ ತಣ್ಣಗಿನ ಗಾಳಿಗೆ ಮೈ ಒಡ್ಡಿಕೊಳ್ಳುವುದು, ಆಗ ತಾನೇ ಹರಿದು ಬಂದ ಹೊಸ ನೀರು ಕುಡಿಯುವುದು, ಅತಿಯಾದ ವ್ಯಾಯಾಮ, ಮಳೆಗಾಲದ ನಡುಬಿಸಿಲಿನಲ್ಲಿ ಅಡ್ಡಾಡುವ ಸೂಕ್ಷ್ಮ ಸಂಗತಿಗಳನ್ನು ಸಹ ಮಳೆಗಾಲದಲ್ಲಿ ಬಿಡಬೇಕು ಎಂಬ ‘ಚರಕಸಂಹಿತೆ’ಯ ಹಿತನುಡಿ ಆರೋಗ್ಯದ ಸೋಪಾನ. ನೀರು ಕುಡಿಯಲು ಕೆಲವು ಕಿವಿಮಾತುಗಳಿವೆ. ಮಳೆನೀರು ಸಂಗ್ರಹಿಸಿ ಅದನ್ನು ಬಳಸಿದರೆ ಉತ್ತಮ ಎಂಬ ಸೂಚನೆ ಇದೆ. ಅದನ್ನು ‘ಮಾಹೇಂದ್ರ ತೋಯ’ ಎಂದು ಕರೆಯುವರು. ಅದನ್ನೂ ಕಾಯಿಸಿ ಬಳಸಲು ಆದೇಶವಿದೆ. ಬಾವಿ ನೀರನ್ನು ಕೂಡ ಅಂತೆಯೇ ಬಳಸಬಹುದು. ಮೈಗೆ, ತಲೆಗೆ ಎಣ್ಣೆ ಹಚ್ಚುವ ಸಂಪ್ರದಾಯ ಭಾರತದಲ್ಲಿ ಅನೂಚಾನ. ಮಳೆಗಾಲದ ದಿನಗಳಲ್ಲಿ ಅದು ಹೆಚ್ಚು ಸೂಕ್ತ.

ಸೀಗೆಪುಡಿ, ಬಾಗೆಪುಡಿ, ಕಡಲೆಹಿಟ್ಟು ಉಪಯೋಗಿಸಿ ಮೈಉಜ್ಜಿ ಸ್ನಾನ ಮಾಡಿಕೊಳ್ಳುವ ವಿಧಾನ ಉತ್ತಮ. ಇದರಿಂದ ವಾತದುಷ್ಟಿ, ಮೈ ಕೈ ನೋವಿನಿಂದ ಪಾರಾಗಲು ಸಾಧ್ಯವಿದೆ. ಸ್ನಾನದ ಅನಂತರ ಮೈ ಕೈಗೆ ಗಂಧ, ಚಂದನಲೇಪನ ವಿಧಾನ ಹಿಂದೆ ಚಾಲ್ತಿಯಲ್ಲಿತ್ತು. ಇಂದು ನೊಸಲಿಗೆ ಗಂಧ–ಚಂದನ ತಿಲಕ ಹಚ್ಚುವ ಸಾಂಕೇತಿಕ ಆಚರಣೆ ನಾಮಮಾತ್ರ ಉಳಿದಿದೆ.

ನೆರೆಯ ರಾಜ್ಯ ಕೇರಳದಲ್ಲಿ ಓಣಂ ಹಬ್ಬದ ಆಚರಣೆಯಲ್ಲಿ ಮಳೆಗಾಲದ್ದೇ ಸೈ. ಅದು ಹೂಗಳ ಹಬ್ಬ. ಶ್ರಾವಣದ ದಿನಗಳಲ್ಲಿ ಕಾಡು–ನಾಡಿನಲ್ಲಿ ಪುಷ್ಪ ಸಂದೋಹದ ಸಂಭ್ರಮ ಅನನ್ಯ. ಅಂತಹ ಹೂಮಾಲೆಗಳನ್ನು ತುರುಬಿಗೆ, ಕೊರಳಿಗೆ ಸೂಡಿಕೊಳ್ಳುವ ಸಂಪ್ರದಾಯ ಹಿಂದೆ ಇತ್ತು. ಅದು ಮಳೆಗಾಲದ ಆಚರಣೆ ಎಂಬ ಉಲ್ಲೇಖ ಚರಕಸಂಹಿತೆಯಲ್ಲಿದೆ. ಎಲ್ಲ ಬಗೆಯ ಮನೋದೈಹಿಕ ಒತ್ತಡ ದೂರ ಮಾಡುವ ಅಂತಹ ಪುಷ್ಪ ಮಾಲೆ ಧರಿಸುವುದರಿಂದ ವಾತದ ಉದ್ರೇಕ ಉಪಶಮಿತ. ಮಳೆಗಾಲದ ಬಟ್ಟೆ ಧರಿಸುವ ಸೂಕ್ಷ್ಮ ಸಂದೇಶ ಸಹ ಚರಕಸಂಹಿತೆಯಂತಹ ಎರಡೂವರೆ ಸಾವಿರ ವರ್ಷಗಳ ಹಿಂದಿನ ಗ್ರಂಥ ವಿವರಿಸುತ್ತದೆ. ಲಘು ಹಾಗೂ ಶುಚಿಗೊಳಿಸಿದ ಅಂಬರ(ದಿರಸು) ಧರಿಸಿದರೆ ಸಾಲದು. ತೇವ, ಬೀಸುವ ಗಾಳಿ ರಹಿತ ಸುಖವಾದ ಉಷ್ಣಗೃಹದಲ್ಲಿ ವಾಸಿಸುವುದು ಸೂಕ್ತ ಎಂಬ ವರ್ಷಋತು ಚರ್ಯದಲ್ಲಿದೆ. ಇಂತಹ ಅಗಾಧ ಆರೋಗ್ಯ ಕಾಳಜಿ ಮತ್ತು ರೋಗ ರಹಿತ ಸಮಾಜ ನಿರ್ಮಾಣದ ಉದ್ದೇಶಗಳು ಭಾರತದ ಪ್ರಾಗೈತಿಹಾಸಿಕ ಯುಗದಲ್ಲಿತ್ತು.

ಭೀಮನ ಅಮವಾಸ್ಯೆಯನ್ನು ಸಂಜೀವಿನಿ ಅಮಾವಾಸ್ಯೆ ಎಂದು ಕರೆಯುವರು. ಹೆಂಗಳೆಯರು ಕಂಕಣ ಕಟ್ಟಿ ಕೈಗೊಳ್ಳುವ ಶಿವ ಶಕ್ತಿಯರ ಪೂಜೆ ಅವರ ಸಮ್ಮಿಲನದ ಸಾಂಕೇತಿಕ ಆಚರಣೆ ಮತ್ತು ಹಬ್ಬದ ಹಿಟ್ಟಿನ ಕಡುಬು ಸೇವನೆ ದೇಹ ಮತ್ತು ಮನಸ್ಸಿಗೆ ಮುದವೀಯುತ್ತದೆ. ಕುಟುಂಬದ ಎಲ್ಲ ಸದಸ್ಯರ ಒಟ್ಟಾಗುವಿಕೆಗೆ ಇಂಬೀಯುತ್ತದೆ. ಉತ್ತರ ಕನ್ನಡದ ಕೊಡೆ ಅಮಾವಾಸ್ಯೆ ಎಂದರೆ ಇದೇ ಹಬ್ಬ. ದಕ್ಷಿಣ ಕನ್ನಡಿಗರಿಗೆ ಇದು ಆಟಿಯ ಅಮಾವಾಸ್ಯೆ. ಕೊಡೆಯಾಕಾರ ಬೆಳೆಯುವ ಮರವೊಂದರೆ ಹೊರ ತೊಗಟೆ ರಸ ಕುಡಿಯುವ ಆಚರಣೆ ತುಳುನಾಡಿಗರಿಗೆ ಪರಿಚಿತ. ನಾಗರ ಪಂಚಮಿಯ ಸಹೋದರ ಸಹೋದರಿಯರ ಸೌಹಾರ್ದಯುತ ಸಂಬಂಧದ ಆಚರಣೆ, ಅಂದು ಬಳಸುವ ಸಿಹಿ ತಿಂಡಿಗಳು ಮಳೆಗಾಲದ ಆರೋಗ್ಯಕ್ಕೆ ಪೂರಕ. ಅರಿಶಿನಕ್ಕೆ ನಮ್ಮ ಅಡುಗೆಯಲ್ಲಿದೆ ಅಪರಿಮಿತ ಆದ್ಯತೆ. ಅರಿಶಿನ ಎಲೆಗಡುಬು ತಯಾರಿಸಿ ತಿನ್ನುವ ನಾಗರ ಪಂಚಮಿಯ ಹಬ್ಬದ ಅಡುಗೆ ಕರಾವಳಿ ಜಿಲ್ಲೆಯವರಿಗೆ ಪರಿಚಿತ. ದೇಹದ ಎಲ್ಲ ಬಗೆಯ ವಿಷನಿವಾರಕ ಶಕ್ತಿ ಅರಿಶಿನಕ್ಕಿದೆ. ಇಂದು ಕ್ಯಾನ್ಸರ್ ಚಿಕಿತ್ಸೆಗೆ ಕುರ್ಕುಮಿನ್ ಎಂಬ ಅರಿಶಿನ ಗಡ್ಡೆಯ ರಾಸಾಯನಿಕ ಬಳಕೆಯಾಗುವುದು ಜಗತ್ತಿನಾದ್ಯಂತ ಜನಜನಿತ.

ಆಡಂಬರವಿಲ್ಲದೆ ಸರಳವಾಗಿ ಆಚರಿಸಬಹುದಾದ ವರಲಕ್ಷ್ಮಿಯ ಶುಕ್ರವಾರದ ವ್ರತಾಚರಣೆ ನಿಜ ಅರ್ಥದಲ್ಲಿ ಕುಟುಂಬದ ಏಳಿಗೆಗೆ ವಹಿಸುವ ಕಾಳಜಿ. ಮತ್ತೊಮ್ಮೆ ಕೈಗೆ ಅರಿಸಿನದ ಕಂಕಣವನ್ನು ಕಟ್ಟಿ ಪೂಜೆಯಂತಹ ಮಾನಸಿಕ ದೇವೋಪಾಸನೆಯ ಸುಸಂದರ್ಭ. ಅನಂತರದ ಜನಿವಾರದ ಹಬ್ಬದಂದು ದಧಿವ್ರತಾರಂಭ. ವಾಸ್ತವವಾಗಿ ‘ದಧಿಸಕ್ತು’ ಎಂಬ ಒಂದು ತಿಂಡಿಯನ್ನು ತಯಾರಿಸಿ ಜನಿವಾರ ಧರಿಸಿದ ಅನಂತರ ನೀಡುತ್ತಾರೆ. ಭತ್ತದ ಅರಳು ಮತ್ತು ಮೊಸರನ್ನು ಕೂಡಿಸಿದ ಆಹಾರ ಅದು. ವೇದಕಾಲದಿಂದ ಇಂತಹ ಲಘು ಆಹಾರ ಸ್ವೀಕರಿಸಿದ ವಟುಗಳು ವೇದಪಾಠ ಕೈಗೊಳ್ಳುತ್ತಿದ್ದರು. ಭತ್ತದ ಅರಳಿನಷ್ಟು ಸುಲಭವಾಗಿ ಪಚನವಾಗುವ ಆಹಾರ ಮಳೆಗಾಲದ ಆಹಾರವಾಗಲು ಪುಟ್ಟ ಸೂಚನೆ ಇಲ್ಲಿದೆ. ಮೊಸರು ಮತ್ತು ಅರಳಿನಂತಹ ಲಘು ಆಹಾರ ಹೊಟ್ಟೆಗೂ ತಂಪು. ಈ ಆಹಾರ ಪೌಷ್ಟಿಕವೂ ಹೌದು.

 ರಕ್ಷಾಬಂಧನದ ಶ್ರಾವಣ ಹುಣ್ಣಿಮೆ ಹಬ್ಬ ಸಾಮಾಜಿಕ ಸಾಮರಸ್ಯದ ಸುಸಂದರ್ಭ. ಅನಂತರದ ಶ್ರೀಕೃಷ್ಣಜನ್ಮಾಷ್ಟಮಿ ಹಬ್ಬದ ಉಪವಾಸ, ಅರ್ಘ್ಯ ಆಚರಣೆ ಮತ್ತು ವಿಶಿಷ್ಟ ಹಬ್ಬದ ಅಡುಗೆಗಳಲ್ಲಿ ಆರೋಗ್ಯ ಕಾಳಜಿಗಳಿವೆ. ಕೇದಿಗೆ, ಹಲಸೆಲೆಯ ಕೊಟ್ಟೆ ಕಡುಬು, ಹುಣಿಸೆಯ ಗೊಜ್ಜು, ಬಗೆಬಗೆಯ ಉಂಡೆ ಕಜ್ಜಾಯಗಳಂತೂ ಮಧುರ, ಅಮ್ಲರಸಗಳ ತಾಳ–ಮೇಳದ ಸುಂದರ ನಮೂನೆಗಳು. ಭಾದ್ರಪದ ತೃತೀಯ ಮತ್ತು ಚೌತಿಯ ಗೌರಿ–ವಿನಾಯಕಪೂಜೆಯಲ್ಲಿ ಹಲವು ಪ್ರಾದೇಶಿಕ ವೈಶಿಷ್ಟ್ಯಗಳಿವೆ. ಅಂದು ಗಂಗೆಬಳ್ಳಿಯ ಕಾಯಿಗೊನೆ ತಂದು ಗೌರಮ್ಮನಿಗೆ ಸಿಂಗರಿಸುವ ಸಂಪ್ರದಾಯ ಹಾಸನ ಸೀಮೆಯಲ್ಲಿದೆ. ಜ್ಯೋತಿಷ್ಮತೀ ಅಥವಾ ಗಂಗೆಬಳ್ಳಿಯಂತೂ ಆಯುರ್ವೇದಗ್ರಂಥಗಳಲ್ಲಿ ಬಹುಪ್ರಶಂಸಿತ ಮೇಧಾವರ್ಧಕ ಮೂಲಿಕೆ; ಬುದ್ಧಿಶಕ್ತಿಯನ್ನು ಹೆಚ್ಚಿಸಬಲ್ಲ ಬಳ್ಳಿ. ಬುದ್ಧಿಯ ಅಧಿದೇವತೆ ಗಣಪನಿಗೆ ಸೂಡುವ ದೂರ್ವೆಯ ಹಾರವೂ ಅಸಂಖ್ಯ ಗುಣಗಳ ಸಂಜೀವಿನಿ. ಹೀಗೆ ಮಳೆಗಾಲದ ಹಬ್ಬದ ಸಂಗಡ ಆಡಂಬರಗಳೇನೂ ಇಲ್ಲದೆ ಪರಿಸರದ ಸಸ್ಯಸಂಜೀವಿನಿ ಅಡುಗೆಮನೆಯ ಶಿಸ್ತನ್ನೂ ಹೊಂದಿಸುಸುತ್ತಿದ್ದರು. ರೋಗರಹಿತ ಮನೆ–ಮನ ಮತ್ತು ತನು ನಮ್ಮ ಪೂರ್ವಜರ ಹಿರಿತನವಾಗಿತ್ತು. ಅಂತಹ ಮೇಲ್ಪಂಕ್ತಿಯನ್ನು ಮರೆಯದೆ ಮುಂದುವರಿಸಬೇಕಿದೆ.

*


–ಡಾ. ಗೀತಾ ಸತ್ಯ

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !