ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಟ್ನೆಸ್: ನಲ್ವತ್ತರ ನಂತರದ ನಾಕ

Last Updated 10 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ನಲ್ವತ್ತಾದರೆ ಸಾಕು, ಎಳೆಮುದುಕಿಯರಾದೆವೆಂದು ಆತಂಕ ಪಟ್ಟುಕೊಳ್ಳುತ್ತೇವೆ. ಇದ್ದಕ್ಕಿದ್ದಂತೆ ವಾಕಿಂಗು, ಅನ್ನ ಬೇಡ ಎಂಬ ನಿರ್ಧಾರ, ಸಿಹಿ ಬೇಡ, ಸಕ್ಕರೆ ಬೇಡ ಎಂದೆಲ್ಲ ತೀರ್ಮಾನಕ್ಕೆ ಬರುತ್ತೇವೆ. ಹೊಸ ನಿಯಮಗಳೆಲ್ಲ ಒಂದು ವಾರದವರೆಗೆ, ಒಂದು ಹಬ್ಬದೂಟದವರೆಗೂ ಸಾಗಿ ಬರುತ್ತವೆ.

ದಿನಗಳೆದಂತೆ, ಚೂರೆ ಚೂರು, ಒಂದಿನ ಉಂಡರೆ ಏನಾಗದು, ಒಂದಿನ ವಾಕಿಂಗ್‌ ಹೋಗದಿರೆ ಏನಾಗದು ಎಂಬ ಸಮಾಧಾನದಲ್ಲಿ ನಾವು ನಮ್ಮ ದಿನಚರಿಯನ್ನು ಬದಲಿಸಿಕೊಳ್ಳುತ್ತೇವೆ.

ಮತ್ತದೇ ಧಾವಂತದ ಬದುಕು, ನಿದ್ದೆಯಿಲ್ಲದ ಇರುಳು, ನೆಮ್ಮದಿಯಿಲ್ಲದ ಬೆಳಗು, ಬಿಡುವಿಲ್ಲದ ದಿನ, ನಿರಾಳವೆನಿಸದ ಸಂಜೆ... ದಿನಗಳು ಓಡುತ್ತವೆ. ಕೈ ಮೇಲೆ, ಮೈಮೇಲೆ ನೆರಿಗೆಗಳು ಮೂಡುತ್ತವೆ. ತಲೆಯಂಚಿನಲ್ಲಿ ಬೆಳ್ಳಿಗೆರೆಗಳು, ಕಣ್ಣಕೆಳಗೆ ಕಪ್ಪು ವರ್ತುಲಗಳು, ಅಲ್ಲಲ್ಲಿ ಚರ್ಮ ಇಳಿಬೀಳುತ್ತದೆ. ಅಯ್ಯೋ ಮುಗಿದೇ ಹೋಯ್ತಲ್ಲ ನಮ್ಮ ಕಾಲ ಎಂಬ ಖಿನ್ನತೆಯೂ ಮೂಡುತ್ತದೆ.

ಇವನ್ನೆಲ್ಲ ಒಮ್ಮೆ ಕೊಡವಿಕೊಂಡು, ಟ್ರ್ಯಾಕ್‌ಪ್ಯಾಂಟ್‌ ಕೊಂಡು ತಂದು, ಶೂ ಹಾಕಿಕೊಂಡು, ಡಯೆಟ್‌ ಚಾರ್ಟ್‌ ಅಡುಗೆ ಮನೆಯಲ್ಲಿ ಅಂಟಿಸಿಕೊಂಡು ವಾಕ್‌ ಹೋಗುವ ಸಂಭ್ರಮವೇ ಬೇರೆ. ಬಹುತೇಕ ಜನರು ಈ ದಿನಚರಿಯನ್ನು ಮುಂದುವರಿಸಲು ಆಗದು. ತೂಕ ಏರಿದಷ್ಟೇ ವೇಗದಲ್ಲಿ ಇಳಿಯುವುದಿಲ್ಲ. ಕಸರತ್ತು ಆರಂಭಿಸಿದೊಡನೆ ಚಮತ್ಕಾರಗಳಾಗಲಿ ಎಂಬ ನಿರೀಕ್ಷೆ ನಮ್ಮದು.

ಮೂವತ್ತರ ನಂತರವೇ ನಮ್ಮ ಸ್ನಾಯುಗಳು ಬಲಕಳೆದುಕೊಳ್ಳಲು ಆರಂಭಿಸುತ್ತವೆ. ಸೂಕ್ತವಾದ ವ್ಯಾಯಾಮವನ್ನು ದಿನಗಳೆದಂತೆ ಮೈಗೂಡಿಸಿಕೊಳ್ಳಬೇಕು. ಹಗುರವಾದ ನಡಿಗೆ, ಬೀಸುನಡಿಗೆಯಿಂದ ಆರಂಭವಾಗುವ ವ್ಯಾಯಾಮ, ಕಾರ್ಡಿಯೊ ಮಾಡುವವರೆಗೂ, ಭಾರ ಎತ್ತಿಳಿಸುವವರೆಗೂ ಮುಂದುವರಿಯಲಿ. ನಿಯಮಿತವಾಗಿರಲಿ. ನಿರ್ದಿಷ್ಟವಾಗಿರಲಿ. ನಿಮ್ಮ ಸಾಮರ್ಥ್ಯದ ಅರಿವು ನಿಮಗಿರಲಿ. ಪ್ರತಿದಿನವೂ ಚೂರುಚೂರೆ ಹೆಚ್ಚಾಗಲಿ. ಒಂದೇ ದಿನ ಎಲ್ಲವನ್ನೂ ಪ್ರಯತ್ನಿಸಿ, ಸುಸ್ತಾಗಿ, ದೇಹ ಬಸವಳಿದರೆ ಮರುದಿನ ಪ್ರತಿರೋಧ ತೋರುತ್ತದೆ.
ನಿಮ್ಮ ಆಹಾರದ ಅರಿವು ನಿಮಗಿರಲಿ: ಸರಳ ಡಯೆಟ್‌ ಮತ್ತು ಡಯಟ್‌ನಲ್ಲಿ ಸರಳವಾಗಿರುವುದು ಎರಡೂ ವಿಭಿನ್ನ ಅರ್ಥಗಳನ್ನು ನೀಡುತ್ತದೆ. ಸರಳ ಡಯೆಟ್‌ ಅಂದರೆ ನಿಮಗಿಷ್ಟವಾದ ಆಹಾರಗಳನ್ನು ಶಾಸ್ತ್ರಕ್ಕಾಗಿಯಾದರೂ ನಿಮ್ಮ ಆಹಾರ ಅಭ್ಯಾಸದಲ್ಲಿ ಸೇರಿಸುವುದು. ರಾತ್ರಿಯೂಟಕ್ಕೆ ಒಂದೆರಡು ತುತ್ತು ಅನ್ನ ಉಣ್ಣುವುದರಲ್ಲಿ ಯಾವ ತಪ್ಪೂ ಇಲ್ಲ. ಅದು ನಿಮ್ಮಲ್ಲಿ ಸಂತೃಪ್ತಿಯನ್ನು ಮೂಡಿಸುತ್ತದೆ. ಊಟ ಪರಿಪೂರ್ಣವಾದ ಭಾವ ಮೂಡಿಸುತ್ತದೆ. ಇದೊಂದು ಶಿಸ್ತು. ಡಯೆಟ್‌ ಸರಳವಾಗಿಸುವುದು ಎಂದು ಇಷ್ಟವಾದಾಗ, ಇಷ್ಟವಾದಷ್ಟು ಉಂಡು, ಮರುದಿನ ಉಪವಾಸ ಇರುವುದಲ್ಲ.

ತೂಕ ಕಳೆಯುವ ಸರಳ ಸೂತ್ರವೆಂದರೆ ನಿಮ್ಮ ದೇಹಕ್ಕೆ ಅಗತ್ಯ ಇರುವ ಕ್ಯಾಲೊರಿಗಳಷ್ಟು ಆಹಾರ ಸೇವಿಸುವುದು. ಮತ್ತು ಅದನ್ನು ಅರಗಿಸುವುದು. ನಮ್ಮಲ್ಲಿ ನಮ್ಮ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವ, ಅದನ್ನು ಅತಿ ಕಡಿಮೆ ಕರಗಿಸುವ ಜೀವನ ಶೈಲಿಯಲ್ಲಿ ಕಳೆದುಹೋಗಿರುತ್ತೇವೆ.
ತೂಕದ ವಿಷಯ ತಾಳ ತಪ್ಪುವುದೇ ಈ ಸಂದರ್ಭದಲ್ಲಿ.

ವಿಟಮಿನ್‌ ಡಿ2, ವಿಟಮಿನ್‌ ಡಿ3 ಇವು ಧಾರಾಳವಾಗಿ ಸಿಗುವಂತೆ ಆಗಬೇಕು. ನಿಮ್ಮ ತೂಕದ ಪ್ರತಿ ಕೆ.ಜಿ.ಗೆ 0.8 ಗ್ರಾಂ ಪ್ರೊಟೀನು ಅಗತ್ಯ ಇರುತ್ತದೆ. ಅದನ್ನು ಹೇಗೆ ಹೊಂದಿಸುವುದು ಎಂಬುದು ನಿಮ್ಮ ಆಹಾರ ಪದ್ಧತಿಯನ್ನು ಅವಲಂಬಿಸಿರುತ್ತದೆ.
ಇನ್ನು ನಿರಾಳವಾಗಿರಲು ನಿಯಮಿತ ನಿದ್ದೆ ಮತ್ತು ಒತ್ತಡರಹಿತ ಜೀವನ ಅತ್ಯಗತ್ಯವಾಗಿದೆ. ನಿದ್ದೆಗಿಳಿಯುವ ಮುನ್ನ ಪ್ರತಿದಿನವೂ ಸಂಭವಿಸಿದ ಒಳಿತಿಗಾಗಿ ಕೃತಜ್ಞತೆ ಸಲ್ಲಿಸುವುದನ್ನು ರೂಢಿಸಿಕೊಳ್ಳಿ. ಇದು ಒತ್ತಡವನ್ನು ನಿಯಂತ್ರಿಸುತ್ತದೆ. ನಿದ್ದೆಗೆ ಒಂದು ಗಂಟೆ ಮೊದಲೇ ಸ್ಕ್ರೀನ್‌ಗಳ ವೀಕ್ಷಣೆ ನಿಷೇಧಿಸಿ. ಟಿವಿಯಾಗಿರಲಿ, ಸ್ಮಾರ್ಟ್‌ಫೋನ್‌ ಆಗಿರಲಿ ಎಲ್ಲವುದರಿಂದಲೂ ದೂರ ಇರಿ. ಧ್ಯಾನ ಮಾಡಿ. ಮಲಗಿ ಏಳಿ.

ನಲ್ವತ್ತಾಯಿತು ಎಂದು ಉಳಿದ ಜವಾಬ್ದಾರಿಗಳಿಗಾಗಿ ಮಿಡಿಯು ವಂತೆಯೇ, ನಿಮ್ಮ ದೇಹಕ್ಕೂ ವಯಸ್ಸಾಗುತ್ತಿದೆ. ಅದಕ್ಕೂ ದೇಖುರೇಕಿಯ ಅಗತ್ಯವಿದೆಯೆಂದು ಮನಗಾಣಿರಿ. ಫಿಟ್ನೆಸ್‌ಗೂ, ತೂಕ ಕಳೆಯಲೂ ಇರುವ ವ್ಯತ್ಯಾಸ ಇದೇನೆ. ಜೀವನವನ್ನು ಆನಂದಿಸುವುದು, ಸ್ವಾಸ್ಥ್ಯಮಯಗೊಳಿಸುವುದು, ದೇಹದ ಧಾರಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದು, ಸದೃಢರಾಗುವುದು ಫಿಟ್ನೆಸ್‌ನ ಗುರಿಯಾಗಿರಲಿ. ಉಳಿದಂತೆ ಸೌಂದರ್ಯ ನಿಮ್ಮದಾಗಿಯೇ ಆಗುತ್ತದೆ. ಅಂಗ ಸೌಷ್ಠವದಲ್ಲಿ ಸ್ನಾಯುಗಳು ಬಿಗಿಯಾಗುತ್ತವೆ. ತೂಕ ಕಳೆದುಕೊಳ್ಳುವುದೇ ಗುರಿಯಾದಲ್ಲಿ ಆಗಾಗ ತೂಕದ ಏರಿಳಿತಗಳಿಗೆ ತಕ್ಕಂತೆ ನಿಮ್ಮ ದಿನಚರಿ ಬದಲಾಗುತ್ತಲೇ ಹೋಗುತ್ತದೆ.

ನಿಯಮಿತವಾದ ಡಯೆಟ್‌, ವ್ಯಾಯಾಮ ಇದ್ದಲ್ಲಿ ನಲ್ವತ್ತರ ನಂತರವೂ ಇಪ್ಪತ್ತರ ಹರೆಯದಲ್ಲಿ ಇದ್ದಿದ್ದಕ್ಕಿಂತ ಆಸಕ್ತಿಕರ, ಉತ್ತಮ ಗುಣಮಟ್ಟದ ಜೀವನಶೈಲಿಯಂತೂ ನಿಮ್ಮದಾಗುತ್ತದೆ.

‘ಡಯೆಟ್‌ ಅಂಡ್‌ ಮಿ’

ತೂಕ ಕಳೆದುಕೊಳ್ಳುವ ಪ್ರಯತ್ನದಲ್ಲಿದ್ದಾಗ, ಸಪೂರವಾಗಿದ್ದರೆ ಸಾಕೆ? ದೇಹ ಸದೃಢವಾಗಿರಬಾರದೆ? ಆರೋಗ್ಯಕರವಾಗಿರುವುದು ಹೇಗೆ? ಎಂಬ ಪ್ರಶ್ನೆಗಳು ಎದುರಾದವು. ಗಟ್ಟಿಗಿತ್ತಿಯಾಗಬೇಕು, ಸ್ವಾಸ್ಥ್ಯವೇ ಮುಖ್ಯ ಗುರಿ ಯಾಗಿರಬೇಕು. ಉಳಿದ ಸೌಂದರ್ಯ ತಾನಾಗಿಯೇ ಒಡಮೂಡುತ್ತದೆ ಎಂಬ ಅನುಭವವಾಯಿತು. ನಂತರ, ಆಹಾರ ಲೋಕದ ವಿಜ್ಞಾನ, ದೇಹಕ್ಕೆ ಅಗತ್ಯ ಇರುವ ಆಹಾರ, ಪ್ರತಿ ದೇಹವೂ ಅನನ್ಯ, ಯಾವುದನ್ನು ಎಷ್ಟು ದಂಡಿಸಬೇಕು? ಎಷ್ಟು ಉಣಿಸಬೇಕು ಹೀಗೆ ಎಲ್ಲದಕ್ಕೂ ವೈಜ್ಞಾನಿಕ ಕಾರಣಗಳನ್ನು ‘ಡಯಟ್‌ ಅಂಡ್‌ ಮಿ’ ಪುಸ್ತಕರೂಪದಲ್ಲಿ ಸಂಗ್ರಹಿಸಿದ್ದೇನೆ. ಪಾರ್ಟ್ರಿಜ್‌ ಪ್ರಕಾಶನ ಈ ಪುಸ್ತಕ ಪ್ರಕಟಿಸಿದೆ.

ಜೀವನೋತ್ಸಾಹ ಮತ್ತು ಜೀವನಪ್ರೀತಿ ಒಟ್ಟೊಟ್ಟಿಗೆ ಮೂಡಬೇಕೆಂದರೆ ಫಿಟ್ನೆಸ್‌ ಮಂತ್ರ ದಿನನಿತ್ಯದ ಜಪವಾಗಿರಬೇಕು
- ಡಾ. ಸೋನಾಲಿ ಸರ್ನೊಬತ್‌, ನ್ಯೂಟಿಷಿಯನ್‌ ತಜ್ಞೆ, ನಿಯತಿ ಟ್ರಸ್ಟ್‌ ಸಂಸ್ಥಾಪಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT