ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಉದ್ಯಾನದಲ್ಲೂ ಫಿಟ್‌ನೆಸ್‌ ಮಂತ್ರ

Last Updated 21 ಅಕ್ಟೋಬರ್ 2019, 5:42 IST
ಅಕ್ಷರ ಗಾತ್ರ

ಜಿಮ್‌ನಲ್ಲಿ ವ್ಯಾಯಾಮ ಮಾಡುವುದಕ್ಕಿಂತ ಮುಕ್ತ, ಹಸಿರು ತುಂಬಿದ ವಾತಾವರಣದಲ್ಲಿ ಕಸರತ್ತು ನಡೆಸಿ ಆರೋಗ್ಯ ವೃದ್ಧಿಸಿ ಕೊಳ್ಳಲು ಅನೇಕರು ಇಷ್ಟಪಡುತ್ತಾರೆ. ಅವರಿಗೆ ಓಪನ್ ಜಿಮ್‌ ‘ವರ’ವಾಗಿದೆ

ಜಿಮ್‌ಗೆ ಹೋಗೋದ್ರಿಂದ ದುಡ್ಡು ವೇಸ್ಟ್‌.. ಜಿಮ್‌ನವರು ಹೇಳಿದ ಸಮಯಕ್ಕೆ ಹೋಗೋಕೆ ನನಗಾಗೋದೇ ಇಲ್ಲ... ವ್ಯಾಯಾಮ ಮಾಡೋಕೆ ಬೇಕಾಗುವಂಥ ಉಪಕರಣವನ್ನು ಕೊಂಡೊಕೊಳ್ಳುವಷ್ಟು ಹಣ ನನ್ನ ಬಳಿ ಇಲ್ಲ..

ಫಿಟ್‌ನೆಸ್‌ ಕಾಯ್ದುಕೊಳ್ಳಬೇಕು ಎಂಬ ಆಸೆ ಇದ್ದರೂ, ಅದು ನೆರವೇರದ ಹಂತದಲ್ಲಿರುವ ಬಹುತೇಕರ ಅಭಿಪ್ರಾಯಗಳಿವು. ಇಂತಹ ಮನಸ್ಥಿತಿಯವರಿಗೆ ಆಶಾದಾಯಕವಾಗಿ ಕಾಣುತ್ತಿವೆ ಉದ್ಯಾನದಲ್ಲಿನ ಓಪನ್‌ ಜಿಮ್‌ಗಳು. ಮನಸಿಗೆ ಸಮಾಧಾನದ ಜೊತೆಗೆ ದೇಹಕ್ಕೆ ‘ಫಿಟ್‌ನೆಸ್‌’ ಒದಗಿಸುವ ನಿಟ್ಟಿನಲ್ಲಿ ಈ ಮುಕ್ತ ವ್ಯಾಯಾಮ ಕೇಂದ್ರಗಳು ಕೊಡುಗೆ ನೀಡುತ್ತಿವೆ. ಇವುಗಳ ಮಹತ್ವ ಅರಿತು, ಸರ್ಕಾರ ಕೂಡ ಹೆಚ್ಚಿನ ಅನುದಾನವನ್ನು ಇಂತಹ ಓಪನ್‌ ಜಿಮ್‌ ನಿರ್ಮಾಣಕ್ಕೆ ನೀಡುತ್ತಿದೆ.

ಬೆಂಗಳೂರು ಮಹಾನಗರದ ಬಹುತೇಕ ಉದ್ಯಾನಗಳಲ್ಲಿ ಇಂತಹ ಉಪಕರಣಗಳನ್ನು ಅಳವಡಿಸಲಾಗಿದೆ. ಉಚಿತವಾಗಿ ಸಿಗುತ್ತಿರುವ ಈ ಸೌಲಭ್ಯ ಜನರಿಗೆ ಅನುಕೂಲವಾಗಿದೆ. ಉದ್ಯೋಗಿಗಳು ಬೆಳಿಗ್ಗೆ 8ರ ಒಳಗೆ ಮತ್ತು ಸಂಜೆ 6ರ ನಂತರ ಉದ್ಯಾನದ ಕಡೆಗೆ ಹೆಜ್ಜೆ ಹಾಕುತ್ತಿದ್ದರೆ, ಗೃಹಿಣಿಯರು, ವಿದ್ಯಾರ್ಥಿಗಳುತಮಗೆ ಅನುಕೂಲಕರವಾದ ವೇಳೆಯಲ್ಲಿ ಉದ್ಯಾನಕ್ಕೆ ಬಂದು ದೈಹಿಕ ಕಸರತ್ತು ನಡೆಸುತ್ತಿದ್ದಾರೆ.

ಆರ್ಮ್ ವೀಲ್, ಏರ್ ಸ್ವಿಂಗ್, ಲೆಗ್ ಎಕ್ಸ್‌ಸೈಜ್‌, ಸ್ಟೆಪ್ಪರ್/ಟ್ವಿಸ್ಟರ್, ಫುಲ್ ಅಪ್, ರೋವಿಂಗ್, ಡಬಲ್‌ ಏರ್‌ ವಾಕರ್‌, ಲೆಗ್‌ ಪ್ರೆಸ್‌, ಕ್ರಾಸ್‌ ಟ್ರೈನರ್‌, ಚೆಸ್ಟ್‌ ಕಮ್‌ ಶೋಲ್ಡರ್‌ ಪ್ರೆಸ್‌ ಡಬಲ್‌, ಪುಲ್‌ ಅಂಡ್‌ ಪುಷ್‌ ಚೇರ್‌, ಪ್ಯಾರಲಲ್‌ ಬಾರ್ಸ್‌... ಹೀಗೆ ಹಲವು ವಿಧದ ಉಪಕರಣಗಳನ್ನು ಈ ಉದ್ಯಾನಗಳಲ್ಲಿ ಅಳವಡಿ ಸಲಾಗಿದೆ.

ಹಸಿರು ಸ್ಫೂರ್ತಿ

ಜಿಮ್‌ನಲ್ಲಿ ನಾಲ್ಕು ಗೋಡೆಗಳ ನಡುವೆ ವ್ಯಾಯಾಮ ಮಾಡುವುದಕ್ಕಿಂತ, ಮುಕ್ತ ವಾತಾವರಣದಲ್ಲಿ, ಹಸಿರಿನ ನಡುವೆ ವ್ಯಾಯಾಮ ಮಾಡುವುದು ಹೆಚ್ಚು ಖುಷಿ ಕೊಡುತ್ತದೆ ಎನ್ನುತ್ತಾರೆ ವಾಯುವಿಹಾರಿಗಳು.ಉದ್ಯಾನಗಳಲ್ಲಿ ಒಂದೆಡೆ ವಾಯುವಿಹಾರ ಪಥ ನಿರ್ಮಾಣ ಮಾಡಿದ್ದರೆ, ಯೋಗಾಸನ ಮಾಡಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಇದರಿಂದ ವಾಯುವಿಹಾರದ ಜತೆಗೆ ವ್ಯಾಯಾಮ ಕೂಡ ಮಾಡಬಹುದಾಗಿದೆ. ಹಿರಿಯ ನಾಗರಿಕರು ವಾಯುವಿಹಾರ, ಯೋಗಾಸನದ ಮೊರೆ ಹೋದರೆ, ಯುವಕ–ಯುವತಿಯರು ವ್ಯಾಯಾಮವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

‘ರಸ್ತೆಗಿಳಿದರೆ ಸಂಚಾರ ದಟ್ಟಣೆ, ವಾಯುಮಾಲಿನ್ಯ ಮನಸಿಗೆ ಕಿರಿಕಿರಿ ತರುತ್ತದೆ. ಆದರೆ, ಉದ್ಯಾನದೊಳಗೆ ಕಾಲಿಟ್ಟರೆ ಮನಸು ಹಗುರ ಎನಿಸುತ್ತದೆ. ವಾಯುವಿಹಾರದ ಜೊತೆಗೆ ವ್ಯಾಯಾಮ ಮಾಡುವ ಮನಸೂ ಆಗುತ್ತದೆ. ಇಂತಹ ಸಂದರ್ಭದಲ್ಲಿ ಮೂಲ ವ್ಯಾಯಾಮದ ಉಪಕರಣಗಳನ್ನು ಒದಗಿಸಿರುವುದು ತುಂಬಾ ಅನುಕೂಲವಾಗಿದೆ. ನಿಯಮಿತ ವ್ಯಾಯಾಮದ ಪರಿಣಾಮ ಬೊಜ್ಜು ಕೂಡ ಕರಗುತ್ತಿದೆ’ ಎನ್ನುತ್ತಾರೆ ಆರ್‌.ಟಿ. ನಗರ ನಿವಾಸಿ ಕೆ.ಪಿ. ಶಿವಕುಮಾರ್.

‘ತಿಂಗಳಿಗೆ ₹1,000 ಕೊಟ್ಟು ಮೊದಲು ಜಿಮ್‌ಗೆ ಹೋಗುತ್ತಿದ್ದೆ. ನಿಯಮಿತವಾಗಿ ಹೋಗಲು ಸಾಧ್ಯವಾಗದಿದ್ದರೆ ದುಡ್ಡು ವ್ಯರ್ಥ ವಾಗುತ್ತಿದೆಯಲ್ಲ ಎಂಬುದೇ ದೊಡ್ಡ ಚಿಂತೆಯಾಗುತ್ತಿತ್ತು. ಈಗ ಆ ತಲೆನೋವಿಲ್ಲ. ಜಿಮ್‌ಗೆ ಹೋಗುವುದು ಬಿಟ್ಟು, ಉದ್ಯಾನಕ್ಕೆ ಬರಲು ಪ್ರಾರಂಭಿಸಿದ್ದೇನೆ. ನನಗೆ ಅನುಕೂಲವಾದ ಸಂದರ್ಭದಲ್ಲಿ ಬಂದು ವ್ಯಾಯಾಮ ಮಾಡುತ್ತೇನೆ. ಒಮ್ಮೊಮ್ಮೆ ವಾಯುವಿಹಾರ ಮಾಡಿ ಹಿಂದಿರುಗುತ್ತೇನೆ. ಫಿಟ್‌ನೆಸ್‌ ಕಾಯ್ದುಕೊಳ್ಳಲು ಈ ಸೌಲಭ್ಯ ಸಹಕಾರಿಯಾಗಿದೆ’ ಎನ್ನುತ್ತಾರೆ ಜಯನಗರ ನಿವಾಸಿ ಜಯಂತ್‌ ಅಯ್ಯರ್.

ಇನ್ನೂ ಹೆಚ್ಚು ಉಪಕರಣಗಳನ್ನು ಒದಗಿಸುವುದರ ಜೊತೆಗೆ, ಉದ್ಯಾನದಲ್ಲಿ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ. ಪ್ರತಿ ವಾರ್ಡ್‌ನ ಯಾವುದಾದರೂ ಒಂದು ಪ್ರಮುಖ ಉದ್ಯಾನದಲ್ಲಿ ತರಬೇತುದಾರರು ಅಥವಾ ಸಲಹೆಗಾರರನ್ನು ನೇಮಕ ಮಾಡಿದರೆ ಉತ್ತಮ ಎಂದು ಹಲವರು ಸಲಹೆ ನೀಡುತ್ತಾರೆ.

‘198 ವಾರ್ಡ್‌ಗಳ ಪ್ರಮುಖ ಉದ್ಯಾನಗಳಲ್ಲಿ ಉಪಕರಣಗಳನ್ನು ಅಳವಡಿಸಲಾಗಿದೆ. ಆದರೆ, ಆಯಾ ವಾರ್ಡ್‌ಗೆ ನೀಡಲಾದ ಅಭಿವೃದ್ಧಿ ನಿಧಿಯನ್ನು ಕೆಲವರು ಉಪಕರಣ ಖರೀದಿಗೆ ಬಳಸಿದ್ದರೆ, ಕೆಲವರು ಉದ್ಯಾನ ಅಭಿವೃದ್ಧಿ ಮತ್ತಿತರ ಉದ್ದೇಶಕ್ಕೆ ಬಳಸಿರುತ್ತಾರೆ. ಹಾಗಾಗಿ, ಒಟ್ಟು ಎಷ್ಟು ಉಪಕರಣಗಳನ್ನು ಒದಗಿಸಲಾಗಿದೆ ಎಂಬ ಲೆಕ್ಕ ಸಿಗುವುದಿಲ್ಲ. ಉದ್ಯಾನಗಳ ನಿರ್ವಹಣೆಯನ್ನು ತೋಟಗಾರಿಕೆ ಇಲಾಖೆಯವರು ನೋಡಿಕೊಳ್ಳುತ್ತಾರೆ. ಓಪನ್‌ ಜಿಮ್‌ಗೆ ಬೇಡಿಕೆ ಹೆಚ್ಚಿದ್ದು, ಆಯಾ ವಾರ್ಡ್‌ನ ಬೇಡಿಕೆಗೆ ಅನುಗುಣವಾಗಿ ಉಪಕರಣ ಒದಗಿಸಲಾಗುತ್ತಿದೆ’ ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್‌ (ಯೋಜನೆ, ಪಶ್ಚಿಮ) ವೆಂಕಟೇಶ್‌ ಹೇಳುತ್ತಾರೆ.

ಮಮತಾ ಗಾಯಕ್‌ವಾಡ್
ಮಮತಾ ಗಾಯಕ್‌ವಾಡ್

ಸಮಯದ ಅಭಾವದ ಕಾರಣ ಜಿಮ್‌ಗೆ ಹೋಗಲು ನನಗೆ ಸಾಧ್ಯವಾಗುವುದಿಲ್ಲ. ಆದರೆ, ಅನುಕೂಲಕರವಾದ ಸಮಯದಲ್ಲಿ ಉದ್ಯಾನಕ್ಕೆ ಬಂದು ಹೋಗುತ್ತೇನೆ. ಉಪಕರಣಗಳನ್ನು ಅಳವಡಿಸಿರುವುದರಿಂದ ನಿಯಮಿತ ವ್ಯಾಯಾಮವನ್ನೂ ಮಾಡುತ್ತಿದ್ದು, ಫಿಟ್‌ನೆಸ್‌ ಕಾಯ್ದುಕೊಳ್ಳಲು ಸಹಕಾರಿಯಾಗಿದೆ ಎನ್ನುತ್ತಾರೆಮಮತಾ ಗಾಯಕ್‌ವಾಡ್.

ಮವೀನಾ
ಮವೀನಾ

ಉದ್ಯಾನದ ಹಸಿರು ಮತ್ತು ತಂಪಾದ ವಾತಾವರಣದಲ್ಲಿ ವ್ಯಾಯಾಮ ಮಾಡುವುದು ಖುಷಿ ಕೊಡುತ್ತದೆ. ಮಹಿಳೆಯರು ಮತ್ತು ಯುವತಿಯರೂ ಉದ್ಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಈ ಉಪಕರಣಗಳನ್ನು ಬಳಸಿ ವ್ಯಾಯಾಮ ಮಾಡುವುದಕ್ಕೆ ಯಾವುದೇ ಮುಜುಗರ ಎನಿಸುವುದಿಲ್ಲ ಎನ್ನುತ್ತಾರೆಮವೀನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT