ಮಂಗಳವಾರ, ನವೆಂಬರ್ 12, 2019
28 °C

ಚಳಿಗಾಲದ ವ್ಯಾಯಾಮ; ಇರಲಿ ಸಿದ್ಧತೆ

Published:
Updated:

ನಿತ್ಯವೂ ತಪ್ಪದೇ ವ್ಯಾಯಾಮ ಮಾಡುತ್ತಾ ಫಿಟ್‌ನೆಸ್‌ ಕಾಪಾಡಿಕೊಳ್ಳುವವರು ಚಳಿಗಾಲ ಬಂತೆಂದರೆ ಹೆದರುತ್ತಾರೆ. ಚಳಿಗಾಲದ ಶೀತಗಾಳಿಯ ತೀಕ್ಷ್ಣತೆ ಎಂಥವರಲ್ಲೂ ನಡುಕ ಹುಟ್ಟಿಸುತ್ತದೆ. ಚಳಿಗಾಲದ ಬಗ್ಗೆ ಎಚ್ಚರದಿಂದಿದ್ದರೆ ಎಂದಿನಂತೆ ವ್ಯಾಯಾಮ ಮಾಡುತ್ತಾ ಫಿಟ್‌ನೆಸ್ ಕಾಪಾಡಿಕೊಳ್ಳಬಹುದು. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಒದ್ದೆಬಟ್ಟೆ ಧರಿಸಬೇಡಿ

ಬೆವರು ಹರಿಸಿ ಕಷ್ಟಪಟ್ಟು ವ್ಯಾಯಾಮ ಮಾಡಿದಾಗ ಮಾತ್ರ ದೇಹದ ತೂಕ ಇಳಿಸಿಕೊಂಡು ಫಿಟ್‌ ಆಗಿರಲು ಸಾಧ್ಯ. ಹೀಗಾಗಿ ಚಳಿಗಾಲದಲ್ಲಿ ಸಾಧ್ಯವಾದಷ್ಟು ಒದ್ದೆಬಟ್ಟೆ ಧರಿಸುವುದು ಸಲ್ಲ. ಸರಿಯಾಗಿ ಒಣಗಿರುವಂತಹ ಬಟ್ಟೆಗಳನ್ನೇ ಧರಿಸಿ ವ್ಯಾಯಾಮ ಮಾಡಿದರೆ ಹೆಚ್ಚು ಅನುಕೂಲವಾಗಿರುತ್ತದೆ. ಒದ್ದೆಬಟ್ಟೆಗಳು ದೇಹದ ಉಷ್ಣಾಂಶದಲ್ಲೂ ವ್ಯತ್ಯಾಸಗಳನ್ನು ಮಾಡುವ ಸಾಧ್ಯತೆ ಇರುತ್ತದೆ. ಕಾರಣ ನೀರು ಉತ್ತಮ ಉಷ್ಣವಾಹಕ. ಹತ್ತಿಯಿಂದ ತಯಾರಿಸಿದ ಬಟ್ಟೆಗಳು ಬೆವರು ಮತ್ತು ನೀರನ್ನು ಹೆಚ್ಚಾಗಿ ಹೀರಿಕೊಳ್ಳುತ್ತವೆ. ಹೀಗಾಗಿ ಸಿಂಥೆಟಿಕ್ ಫ್ಯಾಬ್ರಿಕ್, ಪಾಲಿಸ್ಟರ್, ನೈಲಾನ್, ಪೊಲಿಪ್ರೊಪಿಲೈನ್‌ನಿಂದ ತಯಾರಿಸಿದ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿ.

ಹೆಚ್ಚುವರಿ ಉಡುಪುಗಳು

ಚಳಿಗಾಲದಲ್ಲಿ ಶೀತಗಾಳಿಯ ಜತೆಗೆ ಮಂಜು, ಮಳೆಯಂತಹ ಸಮಸ್ಯೆಗಳೂ ಕಾಡುತ್ತವೆ. ಹೀಗಾಗಿ ದೇಹವನ್ನು ಬೆಚ್ಚಗೆ ಇಡುವ ಹೊದಿಕೆಯಂತಹ ವಸ್ತ್ರಗಳನ್ನು ಧರಿಸುವುದು ಉತ್ತಮ. ಸಿಂಥೆಟಿಕ್‌ ಫ್ಯಾಬ್ರಿಕ್‌ನಿಂದ ತಯಾರಿಸಿದ ಉಡುಗೆಗಳಾದರೆ ಚರ್ಮದಿಂದ ಉಕ್ಕುವ ಬೆವರಿನಿಂದ ಕಿರಿಕಿರಿಯ ಭಾವನೆ ಮೂಡಿಸುತ್ತವೆ. ಉಷ್ಣಾಂಶವನ್ನು ಗಮನಿಸಿಕೊಂಡು ಸಾಧ್ಯವಾದಷ್ಟು ಹಗರುವಾಗಿರುವ ಬಟ್ಟೆಗಳನ್ನು ಧರಿಸಿ ವ್ಯಾಯಾಮ ಮಾಡಬೇಕು.

ಗಾಢ ಬಣ್ಣದ ಬಟ್ಟೆಗಳು

ತಿಳಿ ಬಣ್ಣದ ಬಟ್ಟೆಗಳಿಗೆ ಹೋಲಿಸಿದರೆ ಗಾಢ ಬಣ್ಣವಿರುವ (ಮುಖ್ಯವಾಗಿ ಕಪ್ಪು ಬಣ್ಣ) ಬಟ್ಟೆಗಳು ದೇಹವನ್ನು ಹೆಚ್ಚು ಬೆಚ್ಚಗೆ ಇಡುತ್ತವೆ. ಶೀತಗಾಳಿಯಿಂದ ದೇಹವನ್ನು ರಕ್ಷಿಸುವಲ್ಲಿ ಗಾಢ ಬಣ್ಣದ ಬಟ್ಟೆಗಳು ನೆರವಾಗುತ್ತವೆ. ಕತ್ತಲೆಯಲ್ಲಿ ಕಪ್ಪು ಬಣ್ಣ ಹೆಚ್ಚು ಕಾಣದೇ ಇರುವುದರಿಂದ ಬೇರೆ ಬಣ್ಣದ ಪಟ್ಟಿಗಳಿರುವ ಕಪ್ಪು ಬಣ್ಣದ ಉಡುಪುಗಳನ್ನು ಧರಿಸಬಹುದು.

ಅಂಗಾಂಗಗಳ ಬಗ್ಗೆ ಜಾಗೃತಿ ಇರಲಿ

ಚಳಿಗಾಲದಲ್ಲಿ ದೇಹದ ಫಿಟ್‌ನೆಸ್‌ ಬಗ್ಗೆ ವಹಿಸುವ ಕಾಳಜಿ ಯನ್ನು ಬೆರಳುಗಳು ಕಿವಿ, ಮೂಗು ಮತ್ತು ಪಾದಗಳ ರಕ್ಷಣೆಗೂ ನೀಡಬೇಕು. ಈ ಅಂಗಾಂಗಗಳಿಗೆ ಶೀತ ವಾತಾವರಣದಿಂದ ಹೆಚ್ಚು ಹಾನಿಯಾಗುತ್ತದೆ. ಮುಖ್ಯವಾಗಿ ಪಾದಗಳಿಗೆ ಮತ್ತು ಅಂಗೈಗಳಿಗೆ ಕಡಿಮೆ ಪ್ರಮಾಣದಲ್ಲಿ ರಕ್ತ ಪೂರೈಕೆಯಾಗುತ್ತದೆ. ಹೀಗಾಗಿ ಗವಸುಗಳು ಮತ್ತು ಸಾಕ್ಸ್‌ಗಳನ್ನು ಧರಿಸಿರುವುದು ಉತ್ತಮ. ಈ ಜಾಗ್ರತಾ ಕ್ರಮಗಳು ವ್ಯಾಯಾಮಕ್ಕೆ ನೆರವಾಗುತ್ತವೆ.

ಚರ್ಮದ ರಕ್ಷಣೆಗೆ ಕಾಳಜಿ

ಚಳಿಗಾಲವನ್ನು ಶೀತವೆಂದೇ ಭಾವಿಸುವುದು ಸಲ್ಲ, ಶೀತಗಾಳಿ ಚರ್ಮದ ತೇವವನ್ನು ಹಾಳು ಮಾಡುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ದೇಹಕ್ಕೆ ಬೇಕಾಗುವಷ್ಟು ನೀರು ಕುಡಿಯುವುದು ಕೂಡ ಮುಖ್ಯ. ಚರ್ಮ ಒಡೆಯದಂತೆ ಗುಣಮಟ್ಟದ ಲೋಷನ್‌ಗಳು, ಕ್ರೀಮ್‌ಗಳನ್ನು ಹಚ್ಚುವುದು ಉತ್ತಮ. ಹೊರಾಂಗಣ ಪ್ರದೇಶಗಳಲ್ಲಿ ವ್ಯಾಯಾಮ ಮಾಡುವವರಿದ್ದರೆ, ಚರ್ಮದ ಕುರಿತು ಕಾಳಜಿ ವಹಿಸುವುದು ಸೂಕ್ತ. ಕಿವಿ ಮತ್ತು ಮೂಗಿಗೂ ವ್ಯಾಸೆಲಿನ್‌ನಂತಹ ಔಷಧಿಗಳನ್ನು ಬಳಿಯುವುದು ಸೂಕ್ತ. ಮೋಡಕವಿದ ವಾತಾವರಣದಲ್ಲೂ ಅತೀ ನೆರಳೆ ಕಿರಣಗಳು ಚರ್ಮದ ಮೇಲೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ.

ವ್ಯಾಯಾಮದ ಪ್ರದೇಶ ಸುರಕ್ಷಿತವಾಗಿರಲಿ

ವ್ಯಾಯಾಮ ಮಾಡುವಾಗ ಮಳೆ, ಮಂಜು ಸುರಿಯುವ ಪ್ರದೇಶಗಳ ಬಗ್ಗೆ ಜಾಗ್ರತೆ ಇರಲಿ. ಮಳೆ ಅಥವಾ ಮಂಜು ಸುರಿದಿರುವ ಪ್ರದೇಶಗಳಲ್ಲಿ ವ್ಯಾಯಾಮ ಮಾಡುವುದಕ್ಕೆ ಕಿರಿಕಿರಿ ಎನಿಸಬಹುದು. ನೆಲ ಜಾರುವ ಸಾಧ್ಯತೆಯೂ ಇರುತ್ತದೆ. ವ್ಯಾಯಾಮ ಮಾಡುವಾಗ ಜಾರಿ ಬಿದ್ದರೆ ಪೆಟ್ಟಾಗುವ ಸಾಧ್ಯತೆಯೂ ಇರುತ್ತದೆ. ಕಾಲುಗಳನ್ನು ಸರಿಯಾಗಿ ಊರಲಾಗದೇ ನೋವು ಕಾಡುವ ಸಾಧ್ಯತೆಯೂ ಇರುತ್ತದೆ.

ಉಸಿರಾಟದ ಮೇಲೆ ಗಮನವಿರಲಿ

ಶೀತಗಾಳಿಗೆ ನೆಗಡಿ ಹಿಡಿದರೆ, ವ್ಯಾಯಾಮ ಮಾಡುವುದು ಕಷ್ಟ. ಕಾರಣ ವ್ಯಾಯಾಮ ಮಾಡುವಾಗ ಉಸಿರಾಟದ ಸಮಸ್ಯೆ ಇರಬಾರದು. ದೀರ್ಘವಾಗಿ ಉಸಿರಾಡುವುದಕ್ಕೆ ನೆರವಾಗುವಂತಹ ಸ್ಥಿತಿಯಲ್ಲಿ ಇದ್ದರೆ ಕಷ್ಟದ ವ್ಯಾಯಾಮಗಳನ್ನೂ ಸುಲಭವಾಗಿ ಮಾಡಲು ಸಾಧ್ಯ. ಹೀಗಾಗಿ ಚಳಿಗಾಲದಲ್ಲಿ ಮೂಗು ಕಟ್ಟಿಕೊಳ್ಳದಂತೆ ಎಚ್ಚರವಹಿಸಬೇಕು.

ನೀರು ಕುಡಿಯುವುದನ್ನು ಮರೆಯಬೇಡಿ

ಬಹುತೇಕರು ಬೇಸಿಗೆಯಲ್ಲಿ ಕುಡಿದಷ್ಟು ನೀರು ಚಳಿಗಾಳದಲ್ಲಿ ಕುಡಿಯುವುದಿಲ್ಲ. ಆದರೆ ವ್ಯಾಯಾಮ ಮಾಡುವವರು ಯಥಾಪ್ರಕಾರ ತಪ್ಪದೇ ನೀರು ಕುಡಿಯುವುದು ಒಳ್ಳೆಯದು. ವ್ಯಾಯಾಮ ಮಾಡುವಾಗ ಬೆವರಿನ ಮೂಲಕ ದೇಹದಲ್ಲಿನ ನೀರು ಹೊರಹೋಗುತ್ತಿರುತ್ತದೆ. ಹೀಗಾಗಿ ಅಗತ್ಯವಿರುವಷ್ಟು ನೀರು ಕುಡಿಯಬೇಕು. 

ಇದನ್ನೂ ಓದಿ: ಚಳಿಗಾಲದ ವ್ಯಾಯಾಮ, ಬೇಡ ವಿರಾಮ

ಪ್ರತಿಕ್ರಿಯಿಸಿ (+)