ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗ ಪತ್ತೆಗೆ ಸರಳ ವಿಧಾನಎಫ್‌ಎನ್‌ಎಸಿ

Last Updated 15 ನವೆಂಬರ್ 2019, 19:30 IST
ಅಕ್ಷರ ಗಾತ್ರ

ರೋಗ ಪತ್ತೆ ಮಾಡುವಾಗ ಅತ್ಯಂತ ಎಚ್ಚರಿಕೆ ಅಗತ್ಯ. ವಿವಿಧ ಕಾಯಿಲೆಗಳನ್ನು ಪತ್ತೆ ಮಾಡಲು ರಕ್ತ ಪರೀಕ್ಷೆ, ಎಕ್ಸ್‌ರೇ, ಅಲ್ಟ್ರಾ ಸೌಂಡ್‌ ಸ್ಕ್ಯಾನಿಂಗ್‌, ಎಂಆರ್‌ಐ ಮೊದಲಾದ ಅತ್ಯಾಧುನಿಕ ತಂತ್ರಜ್ಞಾನಗಳು ನಮ್ಮ ನೆರವಿಗೆ ನಿಂತಿವೆ. ಅದೇ ರೀತಿ ದೇಹದಲ್ಲಿ ಕಾಣಿಸಿಕೊಳ್ಳುವ ಗಡ್ಡೆಗಳ ಬಗ್ಗೆ ವಿವರ ಪಡೆಯಲು ಎಫ್‌.ಎನ್‌.ಎ.ಸಿ. (ಫೈನ್ ನಿಡಲ್ ಆಸ್ಪಿರೇಶನ್ ಸೈಟಾಲಜಿ) ಎಂಬ ಸುಧಾರಿತ ತಂತ್ರಜ್ಞಾನ ವೈದ್ಯಕೀಯ ಲೋಕದಲ್ಲಿ ಹೆಚ್ಚು ಬಳಕೆಯಾಗುತ್ತಿದೆ.

ನಮ್ಮ ದೇಹದ ವಿವಿಧ ಭಾಗಗಳಲ್ಲಿ ಗಡ್ಡೆ ಅಥವಾ ಊತ ಕಾಣಿಸಿಕೊಳ್ಳುವುದು ಸಾಮಾನ್ಯ. ಕುತ್ತಿಗೆ, ಗದ್ದದ ಕೆಳಭಾಗ, ಕಿವಿಯ ಮುಂಭಾಗ, ಬೆನ್ನು, ಕೈ, ತಲೆಯ ಭಾಗ, ಕಂಕುಳು, ತೊಡೆಯ ಸಂಧು, ಹೊಟ್ಟೆಯ ಭಾಗ ಹಾಗೂ ಮಹಿಳೆಯರಲ್ಲಿ ಸ್ತನಗಳಲ್ಲಿ ಕಾಣಿಸಿಕೊಳ್ಳುವ ಗಡ್ಡೆಗಳು ವ್ಯಕ್ತಿಯನ್ನು ಆತಂಕಗೊಳಿಸುತ್ತವೆ. ಮೊದಲಿಗೆ ರೋಗಿ ಅದನ್ನು ನಾಲ್ಕಾರು ಬಾರಿ ಒತ್ತಿ ನೋಡಿಕೊಳ್ಳುವುದು ಸಾಮಾನ್ಯ. ನೋವಿದೆಯೋ ಇಲ್ಲವೋ ಎಂದು ನೋಡಲು ಮತ್ತು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆಯೋ ಹೇಗೆ ಎಂದೆಲ್ಲ ಗಮನಿಸಬಹುದು. ಸಮಸ್ಯೆ ಜಟಿಲವಾಗಿರಬಹುದು ಎನಿಸಿದಾಗ ವೈದ್ಯರ ಬಳಿ ಸಲಹೆಗೆ ಬರುತ್ತಾರೆ. ಅಂತಹ ಗಡ್ಡೆಗಳನ್ನು ಪರೀಕ್ಷಿಸಿ ನೋಡುವ ಶಸ್ತ್ರಚಿಕಿತ್ಸಾ ತಜ್ಞರು ಗಡ್ಡೆ ಕಾಣಿಸಿಕೊಂಡಾಗಿನ ಅವಧಿ, ಅದರ ಲಕ್ಷಣಗಳು ಹಾಗೂ ವ್ಯಕ್ತಿಯ ಇತರ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿ ಹೆಚ್ಚಿನ ಸಂದರ್ಭಗಳಲ್ಲಿ ಎಫ್.ಎನ್.ಎ.ಸಿ. ಪರೀಕ್ಷೆಯನ್ನು ಸೂಚಿಸಬಹುದು.

ಗಡ್ಡೆ ಕಾಣಿಸಿಕೊಳ್ಳಲು ಕಾರಣಗಳು

* ಅಂಗಾಂಶಗಳ ಉರಿಯೂತ

* ವ್ಯಕ್ತಿಯ ರೋಗ ನಿರೋಧಕ ವ್ಯವಸ್ಥೆಯ ಭಾಗವಾದ ದುಗ್ಧರಸ ಗಡ್ಡೆಗಳ (ಲಿಂಫ್ ನೋಡ್) ದೊಡ್ಡದಾಗುವಿಕೆ

* ಥೈರಾಯ್ಡ್, ಪೆರೋಟಿಡ್ ಮೊದಲಾದ ಗ್ರಂಥಿಗಳ ದೊಡ್ಡದಾಗುವಿಕೆ.

* ಅಂಗಾಂಶಗಳ ಹಿಗ್ಗುವಿಕೆ.

* ಹಾನಿಕಾರಕವಲ್ಲದ ಗಡ್ಡೆ (ಬಿನೈನ್ ಟ್ಯೂಮರ್‌)

* ಕ್ಯಾನ್ಸರ್ ಗಡ್ಡೆಗಳು

ಪ್ರಕ್ರಿಯೆ ಹೇಗೆ?

ರೋಗ ಲಕ್ಷಣ ತಜ್ಞರು ಮೊದಲು ರೋಗಿಯನ್ನು ಮಾತನಾಡಿಸಿ ಗಡ್ಡೆಯ ಪೂರ್ವಾಪರಗಳನ್ನು ಪಡೆಯುತ್ತಾರೆ. ಗಡ್ಡೆಯ ಜೊತೆಯಲ್ಲಿಯೇ ಆರಂಭವಾಗಿರಬಹುದಾದ ಇತರ ಶಾರೀರಿಕ ವ್ಯತ್ಯಾಸಗಳ ಬಗ್ಗೆಯೂ ಮಾಹಿತಿಯನ್ನು ಪಡೆಯುತ್ತಾರೆ. ನಂತರ ರೋಗಿಯನ್ನು ಕುಳ್ಳಿರಿಸಿ ಅಥವಾ ಮಲಗಿಸಿ ಗಡ್ಡೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿ ಅದರ ಆಕಾರ, ಗಾತ್ರ, ಅದರ ಸ್ಥಿರತೆ, ಅದರ ಸುತ್ತಲಿನ ಬದಲಾವಣೆ ಮುಂತಾದವುಗಳನ್ನು ಬರೆದುಕೊಳ್ಳುತ್ತಾರೆ. ಅದಾದ ಮೇಲೆ ಗಡ್ಡೆಯು ಸರಿಯಾಗಿ ಕಾಣುವಂತೆ ಹಾಗೂ ಅಲುಗಾಡದಂತೆ ಎಡಗೈಯಿಂದ ಗಟ್ಟಿಯಾಗಿ ಹಿಡಿದು, ಸಿರಿಂಜ್‌ನ ಸೂಜಿಯನ್ನು ಗಡ್ಡೆಯೊಳಗೆ ತೂರಿಸಿ ಮೊದಲು ಅಲ್ಲಿ ಋಣಾತ್ಮಕ ಒತ್ತಡವನ್ನು ಸೃಷ್ಟಿಸಿ ನಂತರ ನಾಲ್ಕಾರು ಬಾರಿ ಸೂಜಿಯನ್ನು ಗಡ್ಡೆಯೊಳಗೇ ವಿವಿಧ ದಿಕ್ಕುಗಳಲ್ಲಿ ತೂರಿಸಿ ಅಲ್ಲಿನ ಜೀವಕೋಶಗಳನ್ನು ಸಿರಿಂಜ್‌ನ ಒಳಗೆ ಎಳೆದುಕೊಳ್ಳುತ್ತಾರೆ. ಹೊರ ನೋಟಕ್ಕೆ ಅದು ರಕ್ತ ಮಿಶ್ರಿತ ದ್ರವದಂತೆ ಕಂಡರೂ ಅದರಲ್ಲಿರುವ ಜೀವಕೋಶಗಳು ಹಾಗೂ ಅಂಗಾಂಶದ ಇತರ ಅಂಶಗಳು ರೋಗ ಲಕ್ಷಣ ತಜ್ಞರಿಗೆ ಮುಖ್ಯವೆನಿಸುತ್ತವೆ.

ಕೆಲವು ತಜ್ಞರು ಪ್ರಕ್ರಿಯೆ ಆದ ನಂತರ ರೋಗಿಯನ್ನು ಸ್ವಲ್ಪ ಸಮಯ ಪ್ರಯೋಗಾಲಯದ ಬಳಿಯೇ ಕುಳಿತಿರಲು ತಿಳಿಸುತ್ತಾರೆ. ಆ ರಕ್ತ ಮಿಶ್ರಿತ ದ್ರವದಲ್ಲಿ ತಮಗೆ ರೋಗ ನಿರ್ಣಯ ಮಾಡಲು ಬೇಕಾಗಿರುವಷ್ಟು ಜೀವಕೋಶಗಳು ಬಂದಿವೆಯೆ ಎಂಬುದನ್ನು ಖಾತ್ರಿ ಮಾಡಿಕೊಂಡು ನಂತರವೇ ರೋಗಿಯನ್ನು ತೆರಳಲು ಸೂಚಿಸುತ್ತಾರೆ.

ಹೀಗೆ ತೆಗೆದ ಜೀವಕೋಶಗಳನ್ನು ಸಮತಟ್ಟಾದ ಗಾಜಿನ ತುಂಡಿನ ( ಸ್ಲೈಡ್) ಮೇಲಿರಿಸುತ್ತಾರೆ. ನಂತರ ಪ್ರಯೋಗಾಲಯ ತಂತ್ರಜ್ಞರು ಇದಕ್ಕೆ ಕೆಲವು ರಾಸಾಯನಿಕಗಳನ್ನು ಮತ್ತು ಸೂಕ್ತ ವರ್ಣ ದ್ರವ್ಯಗಳನ್ನು ಬೆರೆಸಿ (ಸ್ಟೈನಿಂಗ್) ತಜ್ಞರ ಬಳಿ ತರುತ್ತಾರೆ. ಈ ಪ್ರಕ್ರಿಯೆಗೆ ಸುಮಾರು ಮೂವತ್ತರಿಂದ ನಲವತ್ತು ನಿಮಿಷ ಬೇಕಾಗುತ್ತದೆ.

ಈ ರೀತಿ ಅಣಿಯಾದ ಜೀವಕೋಶಗಳನ್ನು ರೋಗ ಲಕ್ಷಣ ತಜ್ಞರು ಸೂಕ್ಷ್ಮದರ್ಶಕ ಯಂತ್ರದ ಮೂಲಕ ನೋಡಿ ಅವುಗಳ ಆಕಾರ, ಗಾತ್ರ ಮತ್ತು ರೂಪ ವಿಜ್ಞಾನಗಳನ್ನು ಗಮನಿಸುತ್ತಾರೆ. ಅದರ ಆಧಾರದ ಮೇಲೆ ಗಡ್ಡೆಯು ಯಾವ ಬಗೆಯದ್ದು ಎಂದು ವರದಿ ಮಾಡುತ್ತಾರೆ.

ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ನೆರವು

ಕೆಲವೊಮ್ಮೆ ಶರೀರದ ಒಳಭಾಗದಲ್ಲಿನ ಅಂಗಾಂಗಗಳಾದ ಪಿತ್ತಜನಕಾಂಗ, ಮೂತ್ರ ಪಿಂಡಗಳ ಗಡ್ಡೆಗಳಿಗೂ ಎಫ್.ಎನ್.ಎ.ಸಿ. ವಿಧಾನವನ್ನು ಮಾಡಬೇಕಾದ ಅಗತ್ಯ ಉಂಟಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಗಡ್ಡೆಯ ನಿಖರವಾದ ಸ್ಥಾನವನ್ನು ತಿಳಿಯಲು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಅಥವಾ ಸಿ.ಟಿ. ಸ್ಕ್ಯಾನಿಂಗ್‌ನ ನೆರವು ಬೇಕಾಗುತ್ತದೆ. ವಿಕಿರಣ ತಜ್ಞರು ಸ್ಕ್ಯಾನಿಂಗ್ ಮಾಡುವಾಗಲೇ ರೋಗ ಲಕ್ಷಣ ತಜ್ಞರು ಈ ಪ್ರಕ್ರಿಯೆಯನ್ನು ನಡೆಸಬೇಕಾಗುತ್ತದೆ. ಅಂತೆಯೇ ಇಂತಹ ಸಂದರ್ಭದಲ್ಲಿ ಬಳಸುವ ಸೂಜಿಯೂ ಉದ್ದವಾಗಿ ತುಸು ಭಿನ್ನವಾಗಿರುತ್ತದೆ.

ರೋಗಿಯನ್ನು ಯಾವುದೇ ಅರಿವಳಿಕೆಗಾಗಲಿ, ಶಸ್ತ್ರ ಚಿಕಿತ್ಸೆಗಾಗಲಿ ಒಳಪಡಿಸದೆ ಹೊರರೋಗಿ ವಿಭಾಗದಲ್ಲಿಯೇ ಮಾಡುವ ಈ ತಪಾಸಣಾ ವಿಧಾನದಿಂದ ಗಡ್ಡೆಯ ಮೂಲ ಹಾಗೂ ರೀತಿಯನ್ನು ತಿಳಿಯಬಹುದು. ಹೀಗೆ ಆರಂಭಿಕ ಹಂತಗಳಲ್ಲಿಯೇ ಶರೀರದಲ್ಲಿ ಮೂಡುವ ಗಡ್ಡೆಗಳು ಕ್ಯಾನ್ಸರ್ ಗಡ್ಡೆಗಳೋ ಅಲ್ಲವೋ ಎಂಬುದನ್ನು ಅತಿ ಸುಲಭವಾಗಿ ಹಾಗೂ ಅತಿ ಶೀಘ್ರವಾಗಿ ಪತ್ತೆ ಮಾಡಲು ನೆರವಾಗುವ ಹಾಗೂ ಶಸ್ತ್ರಚಿಕಿತ್ಸಾ ತಜ್ಞರಿಗೆ ರೋಗಿಯ ಮುಂದಿನ ಚಿಕಿತ್ಸೆಯನ್ನು ಯೋಜಿಸಲು ಸೂಕ್ತ ಸುಳಿವು ಕೊಡುವ ಈ ವಿಧಾನವು ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವವನ್ನು ಪಡೆಯಲಿದೆ.

ಅಂತೆಯೇ ಈ ತಪಾಸಣಾ ವಿಧಾನಕ್ಕೆ ಕೆಲವು ಮಿತಿಗಳಿವೆ. ಅವೆಂದರೆ, ಇಲ್ಲಿ ಕೇವಲ ಜೀವಕೋಶಗಳು ಬಿಡಿ ಬಿಡಿಯಾಗಿ ಅಧ್ಯಯನಕ್ಕೆ ಸಿಗುವುದರಿಂದ ಇತರ ಅಂಗಾಂಶಗಳೊಂದಿಗಿನ ಅವುಗಳ ರಚನೆ ಹಾಗೂ ಅಲ್ಲಿನ ವ್ಯತ್ಯಾಸಗಳನ್ನು ತಿಳಿಸುವಲ್ಲಿ ಎಫ್.ಎನ್.ಎ.ಸಿ. ಪರೀಕ್ಷೆ ವಿಫಲಗೊಳ್ಳುತ್ತದೆ. ಅಂತಹ ಸಂದರ್ಭಗಳಲ್ಲಿ ಗಡ್ಡೆಯಿಂದ ಒಂದು ತುಣುಕು ಅಂಗಾಂಶವನ್ನು ತೆಗೆದು (ಬಯಾಪ್ಸಿ) ಪರೀಕ್ಷಿಸುವುದು ಹೆಚ್ಚು ಸೂಕ್ತವೆನಿಸುತ್ತದೆ. ಅಲ್ಲದೆ ಈ ಪರೀಕ್ಷೆಯಲ್ಲಿ ಗಡ್ಡೆಯ ಒಂದು ಬಿಂದುವಿನಿಂದ ಮಾತ್ರವೇ ಜೀವಕೋಶಗಳನ್ನು ತೆಗೆಯುವುದರಿಂದ ಕೆಲವೊಮ್ಮೆ ನಿಖರವಾದ ರೋಗ ನಿರ್ಣಯವನ್ನು ಮಾಡುವುದು ಕಷ್ಟಕರವೆನಿಸುತ್ತದೆ.

ಎಫ್‌ಎನ್‌ಎಸಿ ವಿಧಾನ

ಎಫ್.ಎನ್.ಎ.ಸಿ. ಪರೀಕ್ಷೆಯು ಗಡ್ಡೆಯು ಯಾವ ಬಗೆಯದು ಎಂಬುದನ್ನು ನಿಖರವಾಗಿ ತಿಳಿಯಲು ಸಹಕರಿಸುತ್ತದೆ. ರೋಗ ಲಕ್ಷಣ ತಜ್ಞರು ಮಾಡುವ ಈ ಪರೀಕ್ಷಾ ವಿಧಾನವು ಬಹಳ ಸರಳವಾದ ಪ್ರಕ್ರಿಯೆ. ಪ್ರಯೋಗಾಲಯಲ್ಲಿಯೇ ಒಂದು ಪ್ರತ್ಯೇಕವಾದ ಸ್ಥಳದಲ್ಲಿ ಅಥವಾ ಆಸ್ಪತ್ರೆಯ ಚಿಕಿತ್ಸಾ ಕೊಠಡಿಯಲ್ಲಿ ಈ ವಿಧಾನವನ್ನು ಮಾಡಬಹುದು. ಈ ಪರೀಕ್ಷೆಯನ್ನು ವ್ಯಕ್ತಿ ಹೊರ ರೋಗಿಯಾಗಿಯೂ ಮಾಡಿಸಿಕೊಳ್ಳಬಹುದು, ಅಲ್ಲದೆ ಇದಕ್ಕೆ ಯಾವುದೇ ಬಗೆಯ ಅರಿವಳಿಕೆಯ ಅಥವಾ ವಿಶೇಷ ಸಲಕರಣೆಗಳ ಅಗತ್ಯ ಇರುವುದಿಲ್ಲ. ತಜ್ಞರು ಚುಚ್ಚುಮದ್ದುಗಳನ್ನು ಕೊಡಲು ಬಳಸುವ ಸಾಮಾನ್ಯ ಸಿರಿಂಜ್‌ ಅನ್ನು ಬಳಸಿ ಗಡ್ಡೆಯಿಂದ ಒಂದಿಷ್ಟು ಜೀವಕೋಶಗಳನ್ನು ತೆಗೆದು, ಅದಕ್ಕೆ ಸೂಕ್ತ ವರ್ಣದ್ರವ್ಯಗಳನ್ನು ಬೆರೆಸಿ (ಸ್ಟೈನಿಂಗ್), ಸೂಕ್ಷ್ಮದರ್ಶಕ ಯಂತ್ರದ ಮೂಲಕ ಆ ಜೀವಕೋಶಗಳ ಗುಣಲಕ್ಷಣಗಳನ್ನು ಅಧ್ಯಯನ ಮಾಡುತ್ತಾರೆ. ಗಡ್ಡೆ ಯಾವ ಬಗೆಯದ್ದು ಎಂಬ ವರದಿಯನ್ನು ಕೊಡುತ್ತಾರೆ. ಈ ವರದಿಯನ್ನು ಆಧರಿಸಿ ಶಸ್ತ್ರಚಿಕಿತ್ಸಾ ತಜ್ಞರು ವ್ಯಕ್ತಿಗೆ ಬೇಕಾಗಬಹುದಾದ ಮುಂದಿನ ಚಿಕಿತ್ಸೆಯ ಕುರಿತು ನಿರ್ಧರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT