ಮಂಗಳವಾರ, ಡಿಸೆಂಬರ್ 7, 2021
24 °C

ಆರೋಗ್ಯಕರ ಆಹಾರ: ಊಟದಲ್ಲಿರಲಿ 6 ರಸಗಳು

ಡಾ. ವಿಜಯಲಕ್ಷ್ಮಿ ಪಿ. Updated:

ಅಕ್ಷರ ಗಾತ್ರ : | |

Prajavani

ಕೆಲವರು ಸಿಹಿಪ್ರಿಯರಾದರೆ ಕೆಲವರು ಹುಳಿಪ್ರಿಯರು; ಖಾರವನ್ನು ಬಯಸುವವರು ಕೆಲವರಾದರೆ, ‘ಉಪ್ಪಿಗಿಂತ ರುಚಿ ಇಲ್ಲ’ ಎಂಬಂತೆ ಯಾವುದೇ ಆಹಾರಕ್ಕಾದರೂ ಉಪ್ಪು ಬೇಕೇ ಬೇಕು. ಸಿಹಿಯಿಂದ ಶುಗರ್ ಬರುತ್ತದೆಂದೂ, ಹುಳಿ ಅಸಿಡಿಟಿ ಮಾಡುತ್ತದೆಂದೂ, ಖಾರ ಉರಿ ಬರಿಸುತ್ತದೆಂದೂ, ಉಪ್ಪು ತಿಂದರೆ ಬಿ.ಪಿ. ಖಂಡಿತ ಎಂದು ಈ ರಸಗಳನ್ನು ಸೇವಿಸದೇ ಇರುವವರೂ ಇದ್ದಾರೆ. ಆದರೆ ವಿಜ್ಞಾನ ಹೇಳುತ್ತದೆ, ನೀವು ಏನು ತಿಂದರೂ, ದೇಹದಲ್ಲಿ ಪಾಕವಾದ ನಂತರ ಸಿಹಿಯೇ ಆಗುತ್ತದೆ ಎಂದು. ಆಹಾರದಲ್ಲಿ ಸಮತೆ ಬರಬೇಕಾದರೆ, ಆರೋಗ್ಯ ಪ್ರಾಪ್ತಿಯಾಗಬೇಕಾದರೆ, ಅದು ಷಡ್ರಸೋಪೇತ ಆಹಾರವಾಗಿರಬೇಕು. ಆದರೆ ಯಾವುದೇ ರಸವನ್ನು ಮಿತಿಮೀರಿ ಸೇವಿಸುವುದಾಗಲೀ ಅಥವಾ ಸಂಪೂರ್ಣವಾಗಿ ಸೇವಿಸದೇ ಇರುವುದಾಗಲೀ ಎರಡೂ ಅನಾರೋಗ್ಯಕಾರಕವೇ. ಹಾಗಾದರೆ ಯಾವ ರುಚಿಯ ಪರಿಣಾಮ ಏನು ಎಂಬುದರ ಬಗ್ಗೆ ಒಂದು ಸಣ್ಣ ಚಿಂತನೆ ಮಾಡೋಣ.

ಸಿಹಿ ಪ್ರಧಾನವಾಗಿರುವ ಆಹಾರ ಸಾಮಾನ್ಯವಾಗಿ ಸಪ್ತಧಾತುಗಳಿಗೆ ಪೋಷಣೆಯನ್ನೂ ದೇಹಬಲವನ್ನೂ ಶರೀರದ ಕಾಂತಿಯನ್ನೂ ಕಾಪಾಡುತ್ತದೆ. ಮಾತ್ರವಕ್ಕ, ಚರ್ಮದ ಆರೋಗ್ಯವನ್ನು ರಕ್ಷಿಸುತ್ತ, ಜೊತೆಗೆ ಇಂದ್ರಿಯಗಳ ದಾರ್ಢ್ಯವನ್ನು ಕಾಪಾಡುವಲ್ಲೂ ಮುಖ್ಯ ಪಾತ್ರ ವಹಿಸುತ್ತದೆ. ಸಿಹಿ ಎಂದರೆ ಕೇವಲ ಸಕ್ಕರೆ–ಬೆಲ್ಲಗಳು ಮಾತ್ರವಲ್ಲ, ಎಲ್ಲ ಏಕದಳ ಧಾನ್ಯಗಳೂ ಬೇಳೆಕಾಳುಗಳೂ ಮಧುರ(ಸಿಹಿ)ರಸದಿಂದ ಕೂಡಿರುವವುಗಳೇ. ಸಿಹಿಯನ್ನು ಸೇವಿಸದೇ ಸಂಪೂರ್ಣವಾಗಿ ವರ್ಜಿಸಿದರೆ ಚರ್ಮ ಸುಕ್ಕುಗಟ್ಟುವಿಕೆ, ಉತ್ಸಾಹಹಾನಿ ಮೊದಲಾದ ಅನೇಕ ತೊಂದರೆಗಳೂ ಉಂಟಾಗುತ್ತವೆ. ಹಾಗೆಂದು ಅತಿಯಾಗಿ ಸೇವಿಸಿದಿರೋ ಆಲಸ್ಯ, ಕೆಮ್ಮು, ದಮ್ಮು, ಹೊಟ್ಟೆಹುಳ, ಸ್ವರಹಾನಿ, ಮಲಪ್ರವೃತ್ತಿಯಲ್ಲಿ ವ್ಯತ್ಯಾಸ, ಥೈರಾಯ್ಡ್ ಮುಂತಾದ ರೋಗಗಳಿಗೂ ಕಾರಣವಾಗಬಹುದು. ಆದರೆ ಸಿಹಿ ತಿನ್ನುವುದರಿಂದ ಮಧುಮೇಹ ಬರುವುದಿಲ್ಲ; ವ್ಯಾಧಿ ಬಂದ ನಂತರ ಸಿಹಿಸೇವನೆಯು ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಲು ಕಾರಣವಾಗುತ್ತದೆ.

ಹಾಗೆಯೇ ಹುಳಿಯೂ ಸಹ; ಅದರ ಹೆಸರನ್ನು ಕೇಳಿದರೆ ಸಾಕು, ಬಾಯಲ್ಲಿ ನೀರು ಬರುವಂತಾಗುತ್ತದೆ. ಆದರೆ ಆಹಾರದಲ್ಲಿ ಆಮ್ಲ(ಹುಳಿ)ರಸವನ್ನು ಸೇರಿಸುವುದರಿಂದ, ಅದು ತಿಂದ ಆಹಾರವನ್ನು ಸಂಪೂರ್ಣವಾಗಿ ಜೀರ್ಣಿಸಿ ಪಚನಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಹೊಟ್ಟೆ ಉಬ್ಬರಿಸದಂತೆ ನೋಡಿಕೊಂಡು, ಮಲಪ್ರವೃತ್ತಿ ಸರಿಯಾಗುವಂತೆ ಮಾಡುವಲ್ಲಿ ಹುಳಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶರೀರದ ಸ್ನೇಹಾಂಶವನ್ನು ಕಾಪಾಡಲೂ ಸಹಕಾರಿಯಾಗುವ ರಸ ಹುಳಿ. ಆದರೆ ಹುಳಿ ಇಷ್ಟ ಎಂದು ಹುಳಿಮಜ್ಜಿಗೆ, ಹುಳಿಹಿಟ್ಟುಗಳಿಂದ ತಯಾರಿಸಿದ ಆಹಾರಸೇವನೆ, ಅದರಲ್ಲೂ ಹುಳಿಯನ್ನು ಶೈತ್ಯೀಕರಿಸಿ ಸೇವಿಸಿದರೆ ಹುಳುಕು ಹಲ್ಲು, ಬಾಲನೆರೆ, ಕೂದಲು ಉದುರುವಿಕೆ, ಶರೀರದೌರ್ಬಲ್ಯ, ಮೂಳೆ ಸವೆಯುವಿಕೆಗೆ ಕಾರಣವಾಗುತ್ತದೆ. ಹುಳಿಯನ್ನು ಅತಿಯಾಗಿ ಸೇವಿಸಬೇಕೆಂಬ ಬಯಕೆ ಉಂಟಾಗುವುದು ರಕ್ತಕ್ಷೀಣತೆಯ ಲಕ್ಷಣವೂ ಆಗಿದೆ.

ಉಪ್ಪಿಗಿಂತ ರುಚಿ ಇಲ್ಲ. ಆಹಾರಕ್ಕೆ ರುಚಿಯನ್ನು ನೀಡುವ ಪ್ರಧಾನ ರಸವೇ ಉಪ್ಪು. ಇದು ನಾಲಿಗೆಗೆ ರುಚಿಯಾಗುವುದರೊಂದಿಗೆ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುವ ಕಾರ್ಯವನ್ನೂ ಮಾಡುತ್ತದೆ. ಉಪ್ಪು ಕಡಿಮೆಯಾದರೆ, ಸಂಧಿಮಾಂಸಗಳಲ್ಲಿ ಮೃದುತ್ವವು ಕಡಿಮೆಯಾಗಿ ಮಾಂಸಖಂಡಗಳು ಸೆಟಗೊಂಡಂತಾಗಿ, ಆಂತರಿಕ ಮತ್ತು ಬಾಹ್ಯ ಚಲನೆ ಕಷ್ಟವಾಗಿ ನೋವಿನಿಂದ ಕೂಡಿರುತ್ತದೆ. ಉಪ್ಪನ್ನು ಹೆಚ್ಚು ಸೇವಿಸುವುದು ಸಂಧಿಶಿಥಿಲತೆ, ಇಂದ್ರಿಯಗಳ ದೌರ್ಬಲ್ಯ, ಕಣ್ಣು ಕೆಂಪಾಗುವಿಕೆ, ಮೈನೆವೆ, ರಕ್ತಸ್ರಾವ – ಹೀಗೆ ಅನೇಕ ರೋಗಗಳ ಉತ್ಪತ್ತಿಗೆ ಕಾರಣವಾಗುತ್ತದೆ.

ಖಾರ ತಿನ್ನದಿದ್ದರೆ ದೇಹಕ್ಕೆ ಶಕ್ತಿ ಕಡಿಮೆಯಾಗುತ್ತದೆ ಎಂಬುದು ಹಲವರ ಅನಿಸಿಕೆ. ಖಾರದ ಪದಾರ್ಥಗಳು, ಸ್ವತಃ ಬಲವನ್ನು ಕೊಡದಿದ್ದರೂ, ತನ್ನ ಜೊತೆಗಿರುವ ಪದಾರ್ಥಗಳು ಧಾತುಪೋಷಕಗಳಾಗಲು ದಾರಿ ಮಾಡಿಕೊಡುವುದರಲ್ಲಿ ಎತ್ತಿದ ಕೈ. ಮೇದಸ್ಸನ್ನು ಕರಗಸಿ ಶರೀರ ಪಟುತ್ವವನ್ನು ಹೆಚ್ಚಿಸುತ್ತದೆ. ಆದರೆ ಖಾರವು ಮೇದಸ್ಸನ್ನು ಕರಗಿಸುವುದರ ಜೊತೆಗೆ ಶರೀರ ಸಾಮರ್ಥ್ಯವನ್ನೂ ಕುಂಠಿತಗೊಳಿಸುತ್ತದೆ. ಅಲ್ಲದೆ ಮಲಮೂತ್ರಗಳಲ್ಲಿ ರಕ್ತ ಪ್ರವೃತ್ತಿಯನ್ನು, ಮೈ ಉರಿಯನ್ನು ಉತ್ತ್ಪತ್ತಿ ಮಾಡುತ್ತದೆ. ಖಾರ ತಿಂದರೆ ಯಾವ ರೋಗವೂ ಬರದು ಎಂದು ನಂಬುವವರು ಅತಿಯಾಗಿ ಸೇವಿಸೀರಿ ಜೋಕೆ!

ಇನ್ನು ಆಹಾರದಲ್ಲಿ ಕಹಿ ಮತ್ತು ಒಗರು. ಈ ರುಚಿಗಳೂ ಬೇಕೇ ಬೇಕು. ಅದೆರಡು ದೇಹದಲ್ಲಿ ಯಾವ ಅಂಶವು ಅತಿಯಾಗದಂತೆ ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ರವಹಿಸುತ್ತವೆ. ಅತಿಯಾಗಿ ಸೇವಿಸಿದರೆ ಗಂಟುನೋವು, ಸಂತಾನಹೀನತೆಗಳಿಗೂ ಕಾರಣವಾಗಬಹುದು. ನಿತ್ಯ ಬೇವು, ಮಂತ್ಯಗಳ ರಸ, ಕಷಾಯಗಳ ಸೇವನೆ ಮಹಾವ್ಯಾಧಿಗಳಿಗೆ ನಾಂದಿ.

ನಮ್ಮ ಸಾಂಪ್ರದಾಯಿಕ ಅಡುಗೆಗಳಲ್ಲಿ ಸಾಮಾನ್ಯವಾಗಿ ಉಪ್ಪು, ಹುಳಿ, ಖಾರ, ಬೆಲ್ಲ, ಜೊತೆಗೆ ಮೆಂತ್ಯ, ಸ್ವಲ್ಪ ಕೊತ್ತಂಬರಿ, ಸಾಸಿವೆ, ಎಣ್ಣೆ, ಬೇಳೆ, ತರಕಾರಿ, ಏಕದಳ ಧಾನ್ಯಗಳ ಹಿತಮಿತವಾದ ಮಿಶ್ರಣವಿದ್ದು ಸರ್ವ ಧಾತುಪೋಷಕ, ಆರೋಗ್ಯಕರ ವ್ಯಂಜನಗಳಾಗಿವೆ. ರುಚಿ ಎಂದೋ ಒಳ್ಳೆಯದು ಎಂದೋ ಒಂದೇ ರುಚಿಯ ಅಹಾರವನ್ನು ಅತಿಯಾಗಿ ಸೇವಿಸುವುದು ಅನಾರೋಗ್ಯಕ್ಕೆ ದಾರಿ ಮಾಡಿಕೊಟ್ಟಂತೆ.  

ರಸಗಳ ಸಮತೋಲನ ಅರೋಗ್ಯಕ್ಕೆ ಕಾರಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು