ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲೂ ವಿದೇಶಿ ‘ದಮ್‌’!

Last Updated 25 ಜುಲೈ 2019, 19:49 IST
ಅಕ್ಷರ ಗಾತ್ರ

ವಿದೇಶಿ ಸಿಗರೇಟುಗಳು ಮತ್ತೆ ಸುದ್ದಿಯಲ್ಲಿವೆ!

ಜೂನ್‌ ಮತ್ತು ಜುಲೈ ತಿಂಗಳಲ್ಲಿ ಸಿಟಿ ಮಾರುಕಟ್ಟೆ, ಚಿಕ್ಕಪೇಟೆಯ ಗೋದಾಮುಗಳಮೇಲೆ ದಾಳಿ ನಡೆಸಿದ ಕಸ್ಟಮ್ಸ್‌ ಅಧಿಕಾರಿಗಳು ₹2 ಕೋಟಿ ಮೌಲ್ಯದ 10 ಲಕ್ಷ ಸಿಗರೇಟ್‌ ವಶಪಡಿಸಿಕೊಂಡರು. ಪಶ್ಚಿಮ ಬಂಗಾಳದ ಹೌರಾ, ಕೋಲ್ಕತ್ತಾ ಮತ್ತು ವಾರಣಸಿಯಿಂದ ರೈಲಿನಲ್ಲಿಅಕ್ರಮವಾಗಿ ಬಟ್ಟೆಗಳ ಪಾರ್ಸೆಲ್‌ನಲ್ಲಿ ಬಚ್ಚಿಟ್ಟು ಬೆಂಗಳೂರಿಗೆ ಸಾಗಿಸಿದ್ದ ₹2 ಕೋಟಿ ಮೌಲ್ಯಕ್ಕೂ ಮಿಗಿಲಾದ 7.50 ಲಕ್ಷ ವಿವಿಧ ಬ್ರ್ಯಾಂಡ್‌ಗಳ ಸಿಗರೇಟ್‌ಗಳನ್ನು ಯಶವಂತಪುರ ಮತ್ತು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಗಳಲ್ಲಿ ಜಪ್ತಿ ಮಾಡಲಾಯಿತು.

ದುಬೈ, ಕ್ವಾಲಾಂಲಪುರ, ಮಲೇಷ್ಯಾ, ಇಂಡೊನೇಷ್ಯಾ, ಹಾಂಗ್‌ಕಾಂಗ್‌, ಸಿಂಗಾಪುರನಿಂದ ನೆರೆಯ ಬಾಂಗ್ಲಾದೇಶ, ಮ್ಯಾನ್ಮಾರ್‌ ಮತ್ತುಶ್ರೀಲಂಕಾ ತಲುಪುವ ಸಿಗರೇಟ್‌ ಕಳ್ಳಮಾರ್ಗಗಳ ಮೂಲಕ ಭಾರತ ಪ್ರವೇಶಿಸುತ್ತವೆ. ಪಶ್ಚಿಮ ಬಂಗಾಳ ತಲುಪಿ ಅಲ್ಲಿಂದ ರೈಲು ಹಾಗೂ ಅನ್ಯ ಮಾರ್ಗಗಳ ಮೂಲಕ ದೇಶದ ವಿವಿಧ ಭಾಗಗಳಿಗೆ ರವಾನಿಯಾಗುತ್ತವೆ.

ಬಟ್ಟೆ, ಗೊಂಬೆ, ಚಪ್ಪಲಿ ಡಬ್ಬಗಳೆಂದು ಸುಳ್ಳು ಹೆಸರು ನಮೂದಿಸಿ ಸಿಗರೇಟ್‌ ಕಾರ್ಟನ್‌ಗಳನ್ನು ಕೋಲ್ಕತ್ತಾ ಮತ್ತು ಹೌರಾ ರೈಲು ನಿಲ್ದಾಣಗಳಿಂದ ದಕ್ಷಿಣ ಭಾರತಕ್ಕೆ ರವಾನಿಸಲಾಗುತ್ತದೆ. ಶ್ರೀಲಂಕಾದಿಂದ ದೋಣಿಗಳ ಮೂಲಕ ಬರುವ ಸಿಗರೇಟು ಕೇರಳ ಮತ್ತು ತಮಿಳುನಾಡಿನ ಮೂಲಕ ಗೂಡಂಗಡಿ ಸೇರುತ್ತವೆ.ನೇಪಾಳ ಗಡಿಯಿಂದ ಭಾರತದೊಳಗೆ ನುಸುಳುವ ಸಿಗರೇಟ್‌ ಉತ್ತರ ಪ್ರದೇಶದಿಂದ ರಾಜಸ್ಥಾನ, ದೆಹಲಿ, ಹರಿಯಾಣ, ಮಧ್ಯ ಪ್ರದೇಶ ತಲುಪುತ್ತವೆ.

ವಿದೇಶಿ ಸಿಗರೇಟ್‌ಗಳನ್ನು ಕಳ್ಳಮಾರ್ಗಗಳ ಮೂಲಕ ದೇಶದೊಳಗೆ ಸಾಗಿಸುವ ಜಾಲಗಳು ಕಾರ್ಯಾಚರಣೆ ನಡೆಸುತ್ತಿರುವ ವಿಷಯ ಗಮನಕ್ಕೆ ಬಂದಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ಹೇಳುತ್ತಾರೆ.ಈ ಜಾಲ ನಗರದಲ್ಲಿ ಸಕ್ರಿಯವಾಗಿದೆ. ಇದರ ಮೇಲೆ ನಿಗಾ ಇಟ್ಟಿರುವುದಾಗಿ ಕಸ್ಟಮ್ಸ್‌ ಇಲಾಖೆ ಹೇಳಿದೆ.

ವಿದೇಶದಿಂದ ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರು ಸಣ್ಣ ಪ್ರಮಾಣದಲ್ಲಿ ವಿದೇಶಿ ಸಿಗರೇಟ್‌ ತರುತ್ತಾರೆ. ಈ ಕೆಲಸಕ್ಕಾಗಿಯೇ ನಿಯೋಜಿಸಲಾದ ಕೆಲವರು ಕಸ್ಟಮ್ಸ್‌ ಅಧಿಕಾರಿಗಳ ಕಣ್ಣು ತಪ್ಪಿಸಿ ಸಣ್ಣ ಪ್ರಮಾಣದಲ್ಲಿ ವಿದೇಶಿ ಸಿಗರೇಟ್‌ ಸಾಗಿಸುತ್ತಾರೆ.

ವಿದೇಶಿ ಸಿಗರೇಟ್‌ಗಳಿಗೆ ಕೊರತೆ ಇಲ್ಲ

ತೆರಿಗೆ ವಂಚಿಸಿ, ಕಳ್ಳ ಮಾರ್ಗಗಳ ಮೂಲಕ ಸಾಗಣೆ ಮಾಡಲಾಗುತ್ತಿರುವ ವಿದೇಶಿ ಸಿಗರೇಟ್‌ಗಳನ್ನು ಬೆಂಗಳೂರಿನ ಪ್ರತಿಷ್ಠಿತ ಪ್ರದೇಶ ಮತ್ತು ರಸ್ತೆಗಳ ಅಂಗಡಿ, ಬಾರ್‌ಗಳಲ್ಲಿ ರಾಜಾರೋಷವಾಗಿ ಮಾರಾಟ ಮಾಡುತ್ತಿರುವ ಸಂಗತಿ ‘ಮೆಟ್ರೊ’ ರಿಯಾಲ್ಟಿ ಚೆಕ್‌ನಲ್ಲಿ ಪತ್ತೆಯಾಗಿದೆ.

ನಗರದ ಬ್ರಿಗೇಡ್‌ ರಸ್ತೆಯಲ್ಲಿರುವ ಅಂಗಡಿಗಳಲ್ಲಿ ಬೇಕಾದಷ್ಟು ವಿದೇಶಿ ಬ್ರ್ಯಾಂಡ್‌ ಸಿಗರೇಟ್‌ಗಳು ಸಿಗುತ್ತವೆ. ಎಂ.ಜಿ. ರಸ್ತೆ, ಚರ್ಚ್‌ಸ್ಟ್ರೀಟ್‌, ಬ್ರಿಗೇಡ್‌ ರಸ್ತೆ, ಗಾಂಧಿನಗರದಲ್ಲಿರುವ ನ್ಯಾಷನಲ್‌ ಮಾರ್ಕೆಟ್‌, ಬರ್ಮಾ ಬಜಾರ್, ಹಾಂಗ್‌ಕಾಂಗ್‌ ಮಾರ್ಕೆಟ್‌, ಇಂದಿರಾ ನಗರ, ಕೋರಮಂಗಲ, ಜಯನಗರ, ಶಿವಾಜಿನಗರದ ಅಂಗಡಿ, ಬಾರ್‌ ಮತ್ತು ಪಬ್‌ಗಳಲ್ಲಿ ವಿದೇಶಿ ಸಿಗರೇಟ್‌ ಮಾರಾಟ ಮಾಡಲಾಗುತ್ತದೆ.

ಇಂಗ್ಲೆಂಡ್‌ನ ಡನ್‌ಹಿಲ್‌, ಮೋರ್‌ ಹಾಗೂ ಅಮೆರಿಕದ ಮಾಲ್‌ಬರೊ, ಡಿಜಾರಮ್‌ ಬ್ಲಾಕ್‌ ಸಿಗರೇಟ್‌ ಬೆಂಗಳೂರಿನ ಬಹುತೇಕ ಗೂಡಂಗಡಿಗಳಲ್ಲಿಯೂ ಸಿಗುತ್ತವೆ. ಅಷ್ಟೇನೂ ದುಬಾರಿ ಅಲ್ಲದ ಈ ಬ್ರ್ಯಾಂಡ್‌ಗಳನ್ನು ಹೆಚ್ಚಿನವರು ಖರೀದಿಸುತ್ತಾರೆ.

ಇಂಥದ್ದೇ ಬ್ರಾಂಡ್ ಬೇಕು ಎನ್ನುವವರು ಬ್ರಿಗೇಡ್‌ ರೋಡ್‌ ಸುತ್ತಮುತ್ತ ಚಿಕ್ಕಪುಟ್ಟ ಗೂಡಂಗಡಿ ಎದುರು ನಿಂತರೆ ಸಾಕು. ಎಲ್ಲ ಬಗೆಯ ವಿದೇಶಿಬ್ರಾಂಡ್‌ ಸಿಗರೇಟ್‌ ಲೋಕವೇ ಕಣ್ಣಮುಂದೆ ತೆರೆದುಕೊಳ್ಳುತ್ತದೆ.

ಕೋರಿಯಾದ ಪ್ರಸಿದ್ಧ ಎಸ್ಸೆ ಲೈಟ್ಸ್‌, ಸ್ವಿಟ್ಜರ್ಲೆಂಡ್‌ನ ಡೇವಿಡ್‌ಆಫ್‌, ಬ್ರಿಟನ್‌ನ 555ಮತ್ತು ರಾಥಮನ್ಸ್‌, ಬೆನ್ಸನ್‌ & ಹೆಡ್ಜಸ್‌, ಮೋರ್‌ ಬ್ರಾಂಡ್‌ನ ಸಿಗರೇಟ್‌ ಪ್ಯಾಕ್‌ಗಳು ಹೇರಳವಾಗಿ ಸಿಗುತ್ತವೆ.

ಭಾರತೀಯ ಸಿಗರೇಟ್‌ಗಳಿಗೆ ಹೋಲಿಸಿದರೆ ಇವುಗಳ ಬೆಲೆ ಕೂಡ ದುಬಾರಿಯಾದರೂ ಸ್ವಾದ, ಅನುಭವ ವಿಭಿನ್ನ. ಹತ್ತು ಮತ್ತು 20 ಸಿಗರೇಟ್‌ ಪ್ಯಾಕ್‌ಗಳಲ್ಲಿ ಇವು ಲಭ್ಯ. ₹200–₹2,800 ವರೆಗಿನ ಸಿಗರೇಟ್‌ ಇಲ್ಲಿವೆ. ₹15ರಿಂದ 30 ರೂಪಾಯಿಗೆಲ್ಲಾ ಡನ್‌ಹಿಲ್‌ ಲೈಟ್ಸ್‌, ಮಾಲಬರೊ, ಬ್ಲ್ಯಾಕ್‌, ಮೋರ್‌ ಒಂದು ಸಿಗರೇಟ್‌ ಸಿಗುತ್ತವೆ.

ಚಿಕ್ಕಪೇಟೆ, ಸಿಟಿ ಮಾರುಕಟ್ಟೆ, ಶಿವಾಜಿನಗರ, ಗಾಂಧಿ ನಗರದಲ್ಲಿ ಕಾಳಸಂತೆಯಲ್ಲಿ ಕಾರ್ಟನ್‌ ಲೆಕ್ಕದಲ್ಲಿ ವಿದೇಶಿ ಸಿಗರೇಟ್‌ ಮಾರಾಟ ಮಾಡಲಾಗುತ್ತದೆ.ಚರ್ಚ್‌ಸ್ಟ್ರೀಟ್‌, ಬ್ರಿಗೇಡ್‌,ಕಮ್ಮನಹಳ್ಳಿ, ಬಾಣಸವಾಡಿ, ಇಂದಿರಾನಗರ, ಜಯನಗರದಲ್ಲಿ ಚಿಲ್ಲರೆ ಮಾರಾಟ ಮಾಡಲಾಗುತ್ತದೆ.ಕಮ್ಮನಹಳ್ಳಿ, ಬಾಣಸವಾಡಿ ಮತ್ತು ಬ್ರಿಗೇಡ್‌ ರಸ್ತೆಗಳ ವರ್ತಕರಿಗೆ ವಿದೇಶಿ ವಿದ್ಯಾರ್ಥಿಗಳೇ ಗಿರಾಕಿಗಳು.

ಬೆಂಗಳೂರಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರು ತಮ್ಮ ನೆಚ್ಚಿನ ಸಿಗರೇಟ್‌ ಹುಡುಕಿಕೊಂಡು ಬರುವುದು ಬ್ರಿಗೇಡ್‌ ರಸ್ತೆಯ ಅಂಗಡಿಗಳಿಗೆ. ವಿದೇಶಿ ಸಿಗರೇಟ್‌ಗಳು ಕಳ್ಳಮಾರ್ಗದಲ್ಲಿ ಬರುವುದರಿಂದ ತೆರಿಗೆ ಪಾವತಿಸಿರುವುದಿಲ್ಲ. ಹೀಗಾಗಿ ಎಂಆರ್‌ಪಿ ದರಕ್ಕಿಂತ ಕಡಿಮೆ ಬೆಲೆ ಮಾರಾಟ ಮಾಡಿದರೂ ವರ್ತಕರಿಗೆ ಹಾನಿಯಾಗುವುದಿಲ್ಲ.

ಜಿಎಸ್‌ಟಿ ಜಾರಿ ನಂತರ ಹೆಚ್ಚಾದ ಹಾವಳಿ

ಜಿಎಸ್‌ಟಿ ಜಾರಿ ಆದ ನಂತರ ವಿದೇಶಿ ಸಿಗರೇಟ್‌ ಹಾವಳಿ ಹೆಚ್ಚಾಗಿದೆ ಎನ್ನುವ ಮಾತು ಕೇಳಿ ಬರುತ್ತಿವೆ. ತೆರಿಗೆ ಪಾವತಿಸದಿರುವುದು ಮತ್ತು ಪ್ಯಾಕ್‌ಗಳ ಮೇಲೆ ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ) ನಮೂದಿಸಿದ ಕಾರಣ ಅಗ್ಗದ ಬೆಲೆಗೆ ಇವುಗಳನ್ನು ಮಾರಾಟ ಮಾಡಲಾಗುತ್ತಿದೆ.

ಪ್ಯಾಕ್‌ಗಳ ಮೇಲೆ ಸಚಿತ್ರ ಎಚ್ಚರಿಕೆಯ ಸಂದೇಶ ಶೇ 85ರಷ್ಟು ಇರಬೇಕು ಎಂಬ ನಿಯಮವಿದೆ. ವಿದೇಶಿ ಸಿಗರೇಟ್‌ ಪ್ಯಾಕ್‌ಗಳ ಮೇಲೆ ಚಿತ್ರಸಹಿತ ಎಚ್ಚರಿಕೆಯ ಸಂದೇಶ ದೊಡ್ಡದಾಗಿ ಇರುವುದಿಲ್ಲ. ಮೇಲಾಗಿಉತ್ಪಾದಿಸಿದ ದಿನಾಂಕ, ಎಂಆರ್‌ಪಿ, ಕಂಪನಿ ಹೆಸರು ಇತ್ಯಾದಿ ವಿವರ ಕೂಡ ಕಾಣುವುದಿಲ್ಲ.

‘ಸಿಗರೇಟ್‌ ಹಾಗೂ ತಂಬಾಕು ಪದಾರ್ಧಗಳ ತಿದ್ದುಪಡಿ ನಿಯಮ 2017’ರ ಅಡಿ ಸಿಗರೇಟ್‌ ಪ್ಯಾಕ್‌ಗಳ ಮೇಲೆ ಎಚ್ಚರಿಕೆ ಸಂದೇಶ ಕಡ್ಡಾಯ. ಸಂದೇಶ ಇಲ್ಲದ ಮತ್ತು ತೆರಿಗೆ ಪಾವತಿಸದ ವಿದೇಶಿ ಸಿಗರೇಟ್‌ ಮಾರಾಟವನ್ನು ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT