ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತ ಗರ್ಭಧಾರಣೆ ನಿಮ್ಮದಾಗಲಿ..

Last Updated 5 ಜುಲೈ 2019, 19:30 IST
ಅಕ್ಷರ ಗಾತ್ರ

ವಯಸ್ಸು, ವೈದ್ಯಕೀಯ ಇತಿಹಾಸ, ಕುಟುಂಬದ ಇತಿಹಾಸ ಗರ್ಭಧಾರಣೆಯ ಯಶಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಆದ್ದರಿಂದ ಗರ್ಭಧಾರಣೆಗೆ ಮುನ್ನ ಈ ಎಲ್ಲಾ ಅಂಶಗಳ ಬಗ್ಗೆ ತಿಳಿದುಕೊಳ್ಳುವುದು, ನಿಮ್ಮ ವೈದ್ಯರ ಗಮನಕ್ಕೆ ತರುವುದು, ಸೂಕ್ತ ತಪಾಸಣೆ-ಚಿಕಿತ್ಸೆಗಳ ಬಗ್ಗೆ ಚರ್ಚಿಸುವುದು ಮತ್ತು ಸಹಕರಿಸುವುದು ಮುಖ್ಯ.

ಒಂದು ವರ್ಷದ ಅಸುರಕ್ಷಿತ ಲೈಂಗಿಕ ಜೀವನದ ನಂತರವೂ (ಅಂದರೆ, ಯಾವುದೇ ಗರ್ಭನಿರೋಧಕ ಕ್ರಮಗಳನ್ನು ಬಳಸದೆ) ಗರ್ಭಧರಿಸದೇ ಇದ್ದರೆ ಅದನ್ನು ಬಂಜೆತನವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ 35 ಅಥವಾ ಹೆಚ್ಚು ವಯಸ್ಸಿನವರಾಗಿದ್ದರೆ, ಆರು ತಿಂಗಳ ಪ್ರಯತ್ನದಲ್ಲಿ ಆಕೆ ಗರ್ಭಧರಿಸಬೇಕು, ಒಂದು ವೇಳೆ ಆ ಅವಧಿಯಲ್ಲಿ ಪ್ರಯತ್ನ ಯಶಸ್ವಿಯಾಗದೇ ಇದ್ದರೆ ಕೂಡಲೇ ಬಂಜೆತನದ ತಪಾಸಣೆ ಮತ್ತು ಅಗತ್ಯ ಕ್ರಮಗಳ ಬಗ್ಗೆ ಚಿಂತಿಸಬೇಕು.

ಅನಿಯಮಿತ ಋತುಚಕ್ರ, (ಅಮೆನೋರಿಯಾ), ಲೈಂಗಿಕ ಅಪಸಾಮಾನ್ಯತೆ, ಪೆಲ್ವಿಕ್‌ನ ಕಾಯಿಲೆಯ ಇತಿಹಾಸ ಅಥವಾ ಪೂರ್ವ ಶಸ್ತ್ರಚಿಕಿತ್ಸೆಯಂತಹ ಗರ್ಭಧಾರಣೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ವೈದ್ಯಕೀಯ ಸಮಸ್ಯೆಗಳು ಅಪಾಯದ ಮಟ್ಟವನ್ನು ಹೆಚ್ಚಿಸುತ್ತವೆ. ಇಂತಹ ಸಮಸ್ಯೆಗಳಿರುವ ಮಹಿಳೆಯರಿಗೆ ವೈದ್ಯರು ಅಂಡೋತ್ಪತ್ತಿ ಪತ್ತೆ ಮತ್ತು ಫಾಲೋಪಿನ್ ಟ್ಯೂಬ್ ಗಳು, ಗರ್ಭಕಂಠ ಮತ್ತು ಗರ್ಭಾಶಯದ ತಪಾಸಣೆ ಸೇರಿದಂತೆ ಕೆಲವು ನಿರ್ದಿಷ್ಟ ಪರೀಕ್ಷೆಗಳನ್ನು ಮಾಡುತ್ತಾರೆ. ಹಾಗೆಯೇ ಪುರುಷ ಸಂಗಾತಿಗೆ ವೀರ್ಯ ವಿಶ್ಲೇಷಣೆ ಮಾಡಲಾಗುತ್ತದೆ. ಈ ಎಲ್ಲಾ ಪರೀಕ್ಷೆಯನ್ನು 6 ತಿಂಗಳ ಒಳಗೇ ಪೂರ್ಣಗೊಳಿಸಬಹುದು ಮತ್ತು ತಪಾಸಣೆ ಪೂರ್ಣಗೊಂಡ ತಕ್ಷಣವೇ ಸೂಕ್ತ ಚಿಕಿತ್ಸೆಯನ್ನು ಪ್ರಾರಂಭಿಸಬಹುದು.

ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಂತಹ ವೈದ್ಯಕೀಯ ಇತಿಹಾಸ ಹೊಂದಿರುವ ಮಹಿಳೆಯರು ಗರ್ಭಧಾರಣೆಗೆ ಪ್ರಯತ್ನಿಸುವ ಮೊದಲು ತಮ್ಮ ವೈದ್ಯರ ಜೊತೆ ಈ ಬಗ್ಗೆ ಮಾತನಾಡಬೇಕು. ಗರ್ಭಧಾರಣೆಗೂ ಮುನ್ನ ಇಂತಹ ಸ್ಥಿತಿಗಳನ್ನು ನಿಯಂತ್ರಣದಲ್ಲಿಡಬೇಕು. ಅದರಲ್ಲೂ 30 ದಾಟಿದ ಮಹಿಳೆಯರಲ್ಲಿ ಇಂತಹ ತೊಡಕುಗಳಿದ್ದಾಗ ಇನ್ನೂ ಹೆಚ್ಚಿನ ಅಪಾಯಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ಗರ್ಭಧಾರಣೆಯ ಮೊದಲು ವೈದ್ಯರು ಔಷಧಿ ಅಥವಾ ಆರೋಗ್ಯ ಸೇವೆಯಲ್ಲಿ ಬದಲಾವಣೆ ಸೂಚಿಸಬಹುದು. ಈ ಇತಿಹಾಸ ಇಲ್ಲದೇ ಇರುವವರೂ ಸಹ 35ನೇ ವಯಸ್ಸಿನ ನಂತರ ಗರ್ಭಧರಿಸುವಾಗ ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಂತಹ ಪರಿಸ್ಥಿತಿಗಳು ತಲೆದೋರಬಹುದು. 35 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಜನಿಸುವ ಮಕ್ಕಳಲ್ಲಿ ಕ್ರೋಮೋಜೋಮ್ (ವರ್ಣತಂತು) ಸಮಸ್ಯೆಗಳ ಅಪಾಯವೂ ಹೆಚ್ಚು.

ಗರ್ಭಾವಸ್ಥೆಗೆ ಮುನ್ನ ಅಥವಾ ಗರ್ಭಧರಿಸಿದ ನಂತರ ಈ ಸ್ಥಿತಿಗಳು ಕಂಡುಬಂದರೆ ಕಂಗಾಲಾಗುವ ಅಗತ್ಯವೇನೂ ಇಲ್ಲ. ಸುಧಾರಿತ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿರುವ ಕಾರಣ ನಿರಂತರ ತಪಾಸಣೆ, ಮೇಲ್ವಿಚಾರಣೆ ಮತ್ತು ಪರೀಕ್ಷೆಗಳ ಮೂಲಕ ಯಾವುದೇ ಸ್ಥಿತಿಯಲ್ಲಿರುವವರಿಗೂ ಸುರಕ್ಷಿತ ಗರ್ಭಧಾರಣೆ ಸಾಧ್ಯ. ಆದರೆ ಗರ್ಭಧಾರಣೆಗೆ ಪ್ರಯತ್ನಿಸುವ ಮೊದಲು ಮಹಿಳೆಯರು ತಮ್ಮ ವೈದ್ಯರೊಂದಿಗೆ ಈ ಅಪಾಯಗಳ ಬಗ್ಗೆ ಚರ್ಚಿಸಬೇಕು. ಕೆಲವು ಜನ್ಮ ದೋಷಗಳನ್ನು ಪರೀಕ್ಷಿಸಲು ಗರ್ಭಧಾರಣೆಯ ನಂತರ ಪ್ರಸವಪೂರ್ವ ಪರೀಕ್ಷೆಯನ್ನು ಮಾಡಲಾಗುತ್ತದೆ. ಆಮ್ನಿಯೋಸೆಂಟಿಸಿಸ್ ಮತ್ತು ಕೊರಿಯೊನಿಕ್ ವಿಲ್ಲಸ್ ಸ್ಯಾಂಪ್ಲಿಂಗ್ – ಇವು ಪ್ರಸವಪೂರ್ವ ಪರೀಕ್ಷೆಯ ಎರಡು ವಿಧಾನಗಳಾಗಿವೆ. ರಕ್ತ ಪರೀಕ್ಷೆ ಮತ್ತು ಅಲ್ಟ್ರಾಸೌಂಡ್ ಮೂಲಕವೂ ಕೆಲವು ಜನ್ಮ ದೋಷಗಳನ್ನು ಗುರುತಿಸಬಹುದು. ಗರ್ಭಧಾರಣೆಗೂ ಮುನ್ನ ನಿಮ್ಮ ವಯಸ್ಸು, ವೈದ್ಯಕೀಯ ಇತಿಹಾಸ, ಕುಟುಂಬದ ಇತಿಹಾಸ ಮುಂತಾದ ಸಂಗತಿಗಳ ಬಗ್ಗೆ ತಿಳಿದುಕೊಂಡು, ವೈದ್ಯರೊಂದಿಗೆ ಚರ್ಚಿಸಿ, ಅಗತ್ಯ ಕ್ರಮಗಳನ್ನು ಅನುಸರಿಸಿ ಎಚ್ಚರಿಕೆಯ ಹೆಜ್ಜೆಯನ್ನಿಡುವ ಮೂಲಕ ಆರೋಗ್ಯಕರ ಮತ್ತು ಸುರಕ್ಷಿತ ಗರ್ಭಧಾರಣೆಯನ್ನು ಖಚಿತಪಡಿಸಿಕೊಳ್ಳಬಹುದು.

ಮುಂದಿನ ವಾರ: ಬಂಜೆತನ– ಆಯ್ಕೆಗಳು ಮತ್ತು ಪರ್ಯಾಯಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT