ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಜಾಗೃತಿ; ಆರೋಗ್ಯ ಕಾಳಜಿ

Last Updated 24 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಇಡೀ ಪ್ರಪಂಚವೇ ಸ್ತಬ್ಧವಾದಂತೆ ಭಾಸವಾಗ್ತಾ ಇದೆ. ಒಂದು ಸಣ್ಣ ವೈರಾಣು ಇಡೀ ಮಾನವ ಜನಾಂಗವನ್ನು ಕಂಗೆಡಿಸಿದೆ. ನಾವು ಹಿಂದೆಂದೂ ಯೋಚಿಸದ ಮತ್ತು ಕಾಣದ ದಿನಗಳನ್ನ ನಮ್ಮ ಮುಂದೆ ಇಟ್ಟಿದೆ. ನಾಳೆ ಏನೋ ಹೇಗೋ ಅನ್ನೋ ಚಿಂತೆ ಮಾಡದ ಜೀವಗಳಿಲ್ಲ. ನಮ್ಮ ಕೈಯಲ್ಲಿ ಏನೂ ಆಗದ ಪರಿಸ್ಥಿತಿ ಅಂತ ಅಂದುಕೊಳ್ಳೋ ಜನ ಒಂದಷ್ಟಾದರೆ, ಇಲ್ಲ ನಮ್ಮ ಕೈಯಲ್ಲಿ ಎಷ್ಟಾಗತ್ತೋ ಅಷ್ಟು ಈ ಸಂಕಟದಿಂದ ಹೊರ ಬರಲು ಮತ್ತು ಹೋರಾಡಲು ಸಂಕಲ್ಪ ಮಾಡಿರುವವರು ಇನ್ನಷ್ಟು ಜನ.

ಈ ಹಂತದಲ್ಲಿ ಮನುಷ್ಯನ ಬದುಕಿಗೆ ಬಹಳ ಮುಖ್ಯವಾದದ್ದು ಆಹಾರ ಮತ್ತು ಸೂರು. ಈಗಿರುವ ಪರಿಸ್ಥಿತಿ ನೆನೆದರೆ ಕೆಲವಾರು ದಿನಗಳ ನಂತರ ನಮಗೆ ಬೇಕಾಗುವ ಆಹಾರ ಧಾನ್ಯಗಳ ಕೊರತೆ ಶುರುವಾಗಬಹುದು.

ನಾವೆಲ್ಲ ಬೇಕಾದಷ್ಟು ವಿಡಿಯೊಗಳನ್ನು ನೋಡಿದ್ದೇವೆ. ಹೇಗೆ ಅಂಗಡಿಗಳಲ್ಲಿ ಕಪಾಟುಗಳೇ ಖಾಲಿಯಾಗಿವೆ ಎಂದು. ಈ ಸ್ಥಿತಿ ಹೀಗೆ ಮುಂದುವರೆದರೆ…?

ಹಾಗಾಗಿ, ನಾವೆಲ್ಲ ಒಂದಿಷ್ಟು ಆಹಾರದ ಕಡೆಗೆ, ಆರೋಗ್ಯದ ಕಡೆಗೆ, ನೆರೆ ಹೊರೆಯವರ ಬದುಕಿನ ಕಡೆಗೂ ನೋಡೋಣ. ‘ಎಲ್ಲವೂ ನಮಗೆ ಬೇಕು‘ ಎನ್ನುವುದಕ್ಕಿಂತ, ನಮಗೆಷ್ಟು ಬೇಕೊ ಅಷ್ಟೇ ಸಾಕು ಎಂದು ತೀರ್ಮಾನಿಸೋಣ. ಇದು ನಮ್ಮ ಆರೋಗ್ಯಕ್ಕೂ ಒಳ್ಳೆಯದು. ಸಮಾಜದ ಆರೋಗ್ಯಕ್ಕೂ ಒಳ್ಳೆಯದು. ಇಂಥ ‘ಸ್ವಾಸ್ಥ್ಯ ಸಮಾಜ‘ಕ್ಕಾಗಿ ಇಲ್ಲಿವೆ ಟಿಪ್ಸ್‌..

* ಮನೆಗೆ ಎಷ್ಟು ಬೇಕೊ ಮತ್ತು ಯಾವ ಸಾಮಗ್ರಿ ಬೇಕೋ ಅಷ್ಟು ಮಾತ್ರ ಆಹಾರ ಸಂಗ್ರಹಿಸಿ. ಎರಡು ದಿನಕ್ಕಿಂತ ಹೆಚ್ಚಿನ ಹಾಲು, ಮೊಸರು, ತರಕಾರಿಯ ಖರೀದಿ ಬೇಡ. ಬೇರೆಯವರ ಪಾಲಿನ ಈ ಸಾಮಗ್ರಿಗಳನ್ನು ನಾವು ಮನೆಯಲ್ಲಿ ತಂದಿಟ್ಟುಕೊಂಡು ತಿನ್ನುವುದಕ್ಕಾದರೂ ಮನಸ್ಸು ಹೇಗೆ ಬಂದೀತು, ಅಲ್ವಾ ?

* ದಿನದಲ್ಲಿ ಮೂರು ಸಮಯ, ಕೆಲವರಂತೂ ನಾಲ್ಕು ಹೊತ್ತು ತಿನ್ನುವ ಅಭ್ಯಾಸ. ಎಲ್ಲ ಸಮಯಕ್ಕೂ ಬೇರೆ ಬೇರೆ ತಿಂಡಿಯ ಡಿಮ್ಯಾಂಡ್. ಇದನ್ನು ಇಂದಿನಿಂದಲೇ ನಿಲ್ಲಿಸಿ. ಒಂದೇ ಒಂದು ತರಕಾರಿಯ ಆಹಾರ ತಯಾರಿಸಿ, ಅದರಲ್ಲೇ ತೃಪ್ತಿ ಪಡುವ ನಿರ್ಧಾರ ಮಾಡಿಕೊಳ್ಳಿ. ಮುಂದೆ ದಿನಗಳು ಇನ್ನಷ್ಟು ಕಠಿಣವಾಗಬಹುದು.

* ಬೆಳೆಯುವ ಮಕ್ಕಳು ಮತ್ತು ವಯೋವೃದ್ಧರನ್ನು ಹೊರತು ಪಡಿಸಿ ಉಳಿದವರು ಸ್ವಲ್ಪ ಕಡಿಮೆ ಊಟ ಮಾಡಬಹುದು. ಒಂದೆರಡು ದಿನ ಮಾಡಿ ನೋಡಿ. ಈಗ ಎಲ್ಲರೂ ಮನೆಯಿಂದಲೇ ಕಚೇರಿ ಕೆಲಸ ( work from home ) ಮಾಡುತ್ತಿದ್ದಾರೆ. ಹೀಗಾಗಿ ಹೆಚ್ಚು ಓಡಾಟ ಇಲ್ಲದಿರುವುದರಿಂದ, ಆಹಾರ ಸೇವನೆ ಪ್ರಮಾಣವೂ ಕಡಿಮೆ ಮಾಡಬಹುದು. ಕೆಲವರಿಗೆ ಎನ್ನಿಸಬಹುದು, ‘ಮನೆಯಲ್ಲಿದ್ರೆ ತಿನ್ನೋದೆ ಜಾಸ್ತಿ, ಡಬ್ಬಿಗಳನ್ನು ನೋಡೋ ಹಾಗಾಗತ್ತೆ‘ ಅಂತ. ಆ ತಿಂಡಿ ಡಬ್ಬಿಗಳನ್ನ ಮೊದಲು ಖಾಲಿಯಾಗಿ ಇಟ್ಟುಬಿಡಿ. ಆಗ ಸರಿ ಹೋಗುತ್ತದೆ..

* ಸಂಜೆ ಕಾಫಿಯೊಂದಿಗೆ ಅಂತ ಕಾರಣ ಕೊಟ್ಟು ತಿನ್ನುವ ಕುರುಕಲು ತಿಂಡಿ ತಿನ್ನಬೇಡಿ. ಅವುಗಳಿಂದ ಸ್ವಲ್ಪ ದಿನ ದೂರವಿರಿ. ಇದು ಆರೋಗ್ಯಕ್ಕೂ ಒಳ್ಳೆಯದು.

* ಕಾಫಿ ಮತ್ತು ಟೀ ಪ್ರಿಯರು ಮನೆಯಲ್ಲಿದ್ದ ಮೇಲೆ ಗಂಟೆಗೊಮ್ಮೆ ಕಾಫಿ/ಟೀ ಎನ್ನಬೇಡಿ. ಈ ಪೇಯಗಳ ಸೇವನೆಗೆ ಒಂದು ಸಮಯ ನಿಗದಿ ಮಾಡಿಕೊಂಡು, ಕುಡಿಯಿರಿ.

* ಬಹಳ ಮುಖ್ಯವಾದ ಇನ್ನೊಂದು ಟಿಪ್.. ಬಿಸಿ ನೀರನ್ನು ಆಗಾಗ್ಗೆ ಗುಟುಕಿಸುತ್ತಾ ಇರಿ. ಇದರಿಂದ ಆರೋಗ್ಯಕ್ಕೆ ಆರೋಗ್ಯ ಮತ್ತು ಹಸಿವಿನಿಂದ ಸ್ವಲ್ಪ ದೂರ ಇರಬಹುದು.

* ನಿಮ್ಮ ಮನೆಯ ಅಕ್ಕ ಪಕ್ಕ ವಯಸ್ಸಾದವರು ಇದ್ದರೆ ಅವರಿಗೆ ಯಾವ ವಸ್ತುವಿನ ಅಗತ್ಯವಿದೆಯೋ ಅದನ್ನು ಕೇಳಿ ಅವರಿಗೆ ಅಂಗಡಿಯಿಂದ ತಂದುಕೊಡಿ. ಇದರಿಂದ ಹೆಚ್ಚು ಅಪಾಯದಲ್ಲಿರುವ ಅವರು ಹೊರಗೆ ಹೋಗುವುದು ತಪ್ಪುತ್ತದೆ.

* ನಿಮಗೆ ಇವುಗಳಲ್ಲಿ ಯಾವುದು ಸೂಕ್ತ ಅನಿಸುತ್ತದೋ ಅದನ್ನು ನಿಮ್ಮ ಮನೆಯಲ್ಲಿ ಚರ್ಚಿಸಿ ನಿರ್ಧಾರ ಮಾಡಿ.

* ಕೊನೆಯದಾಗಿ ಈಗ ಬೆಟ್ಟದ ನೆಲ್ಲಿಕಾಯಿ ಸಿಗುವ ಕಾಲ. ಅದರೊಂದಿಗೆ ಸ್ವಲ್ಪ ಶುಂಠಿ, ಅರಿಷಿನಪುಡಿ, ಜೇನುತುಪ್ಪ, ನಿಂಬೆರಸ ಹಾಕಿ ಶರಬತ್ತು ಮಾಡಿ ಪ್ರತಿದಿನವೂ ಸೇವಿಸಿ.

ಇಷ್ಟೆಲ್ಲ ಆಹಾರ ಕಾಳಜಿ ತೆಗೆದುಕೊಂಡ ಮೇಲೆ ನಮ್ಮ ಆರೋಗ್ಯದ ಬಗ್ಗೆ ಸಣ್ಣ ಗಮನ ಹರಿಸಿ.

*ಮನೆಯಲ್ಲೇ ಆದಷ್ಟು ಯೋಗ, ನಾಡಿಶುದ್ಧಿ ಪ್ರಾಣಾಯಾಮ, ಸೂಕ್ಷ್ಮ ವ್ಯಾಯಾಮಗಳು ಅಂದರೆ ನಮ್ಮ ದೇಹದ ಪ್ರತಿಯೊಂದು ಅಂಗ, ಸ್ನಾಯು, ಕೀಲುಗಳನ್ನು ಸಡಿಲಗೊಳಿಸುವ ಕ್ರಿಯೆ.

*ಸರ್ವೇ ಭವಂತು ಸುಖಿನಃ ಎಂಬ ಭಾವದೊಂದಿಗೆ ಹತ್ತು ನಿಮಿಷ ದೇವರಲ್ಲಿ ಪ್ರಾರ್ಥನೆ ಮತ್ತು ಸ್ನೇಹಿತರೊಂದಿಗೆ ಸಕಾರಾತ್ಮಕವಾಗಿ ಮಾತನಾಡಿ.ಇವೆಲ್ಲವೂ ವೈರಾಣುವನ್ನು ಓಡಿಸದಿದ್ದರೂ ನಮ್ಮ ಮನೋಬಲ ವೃದ್ಧಿಸುವುದರಲ್ಲಿ ಸಂಶಯವಿಲ್ಲ.

ಸಮಾಜದ ಸ್ವಾಸ್ಥ್ಯ ನಮ್ಮ ಸ್ವಾಸ್ಥ್ಯ. ಬದುಕೋಣ ಮತ್ತು ಬದುಕಲು ಬಿಡೋಣ.

– ಪೂರ್ಣಿಮಾ ಗಿರೀಶ್, ಯೋಗ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT