ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ | ಹಗುರಾಗಲಿ ಹೃದಯ ಹಸನಾಗಲಿ ಬದುಕು

Published : 30 ಸೆಪ್ಟೆಂಬರ್ 2024, 23:30 IST
Last Updated : 30 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments
ಮುಷ್ಟಿಯಷ್ಟಿರುವ ಹೃದಯ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಮನುಷ್ಯನ ಅಸ್ತಿತ್ವ ಮತ್ತು ಜೀವಂತಿಕೆಯ ಸಂಕೇತ. ಭಾವನೆಗಳ ಮೂಲಸೆಲೆ. ಹೃದಯದ ಬಡಿತದೊಂದಿಗೆ ಜೀವನವೂ ಶುರುವಾಗುತ್ತದೆ. ಹೃದಯ ಸದ್ದು ಸ್ವಲ್ಪ ಲಯ ತಪ್ಪಿದರೂ ಏರುಪೇರಾಗುತ್ತದೆ. ಬಡಿತ ನಿಲ್ಲಿಸಿದರೆ ಕೊನೆಯಾಗುತ್ತದೆ. ಬೇರೆಯವರಿಗಾಗಿ ಮಿಡಿಯುವ ನಮ್ಮ ಹೃದಯ ತನ್ನ ಆರೋಗ್ಯಕ್ಕೂ ಮಿಡಿಯುವಂತಾಗಲಿ.

ಭಾರತದಲ್ಲಿ ಹೃದಯಾಘಾತ ಪ್ರಕರಣ ತೀವ್ರಗತಿಯಲ್ಲಿ ಹೆಚ್ಚುತ್ತಿವೆ. ನಮ್ಮ ದೇಶದಲ್ಲಿ ಪ್ರತಿ ವರ್ಷ 25 ಲಕ್ಷಕ್ಕೂ ಹೆಚ್ಚು ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಸಾಯುತ್ತಿದ್ದಾರೆ. ಅದರಲ್ಲೂ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ.  ಹೃದಯಾಘಾತ ಸಂಭವದ ವಯೋಮಿತಿ 40ವರ್ಷದಿಂದ 30 ವರ್ಷಕ್ಕೆ ಇಳಿದಿದೆ. ಆಧುನಿಕ ಜೀವನಶೈಲಿ ಯುವಜನತೆಯಲ್ಲಿ ಹೃದಯನಾಳ ತೊಂದರೆ, ಹೃದಯಾಘಾತ, ಪಾರ್ಶ್ವವಾಯು ಸಂಭವವನ್ನು ಮೂರುಪಟ್ಟು ಹೆಚ್ಚಿಸಿದೆ. 

20 ರಿಂದ 30ರ ವಯೋಮಾನದವರು ತಮಗೆ ಹೃದಯ ಸಮಸ್ಯೆ ಬರುವುದಿಲ್ಲ ಎಂಬ ಹುಸಿ ನಂಬಿಕೆಯಲ್ಲಿ ತಪಾಸಣೆಗೆ
ಒಳಗಾಗುವುದಿಲ್ಲ.  ಶೇ 76ರಷ್ಟು ಜನರು ಸಮಸ್ಯೆ ಅಂತಿಮ ಹಂತಕ್ಕೆ ತಲುಪುವವರೆಗೂ ವೈದ್ಯರ ಬಳಿ ಹೋಗುವುದಿಲ್ಲ. 20 ರಿಂದ 65 ವಯೋಮಾನದ ಶೇ 60ರಷ್ಟು ಭಾರತೀಯರಿಗೆ ಈ ಕುರಿತು ತಿಳಿವಳಿಕೆ ಇರುವುದಿಲ್ಲ. 

ಬದಲಾದ ಜೀವನಶೈಲಿ, ಒತ್ತಡದ ಜೀವನ, ದೈಹಿಕ ಶ್ರಮವಿಲ್ಲದ ದುಡಿಮೆ ಹೃದಯಕ್ಕೆ ಗಂಡಾಂತರ ತಂದೊಡ್ಡುತ್ತಿವೆ. ಎಲ್ಲ ಕ್ಷೇತ್ರಗಳಲ್ಲೂ ಒತ್ತಡ ಹೆಚ್ಚಾಗುತ್ತಿದೆ. ಒತ್ತಡ ಹೆಚ್ಚಾದಷ್ಟು ಹೃದಯ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು. 

ಮುನ್ಸೂಚನೆ ಕೊಡುತ್ತಾ?

ಹೃದಯಾಘಾತದ ಮುನ್ಸೂಚನೆಯಲ್ಲೂ ವ್ಯತ್ಯಾಸಗಳಿರುತ್ತವೆ. ಕೆಲವೊಮ್ಮೆ ಈ ಲಕ್ಷಣ ಬಿರುಸಾಗಿದ್ದರೆ, ಕೆಲವೊಬ್ಬರಲ್ಲಿ ಲಘುವಾಗಿರುತ್ತವೆ. ಕೆಲವು ಸಂದರ್ಭದಲ್ಲಿ ಯಾವುದೇ ಲಕ್ಷಣವಿಲ್ಲದೇ ಅಥವಾ ಲಘು ಲಕ್ಷಣಗಳೊಂದಿಗೆ ಹೃದಯಾಘಾತ ಸಂಭವಿಸುತ್ತವೆ. ಬೋರಲಾಗಿ ಮಲಗುವವರಲ್ಲೂ ಹೃದಯಾಘಾತ ಸಂಭವ ಜಾಸ್ತಿ. 

ಕೂತಲ್ಲೆ ಕೆಲಸ (ಮಾಹಿತಿ ತಂತ್ರಜ್ಞಾನ, ಕಚೇರಿ ಕೆಲಸ), ವಿಶ್ರಾಂತಿರಹಿತ ದುಡಿಮೆ, ದೈಹಿಕ ಚಟುವಟಿಕೆ ಇಲ್ಲದ ಜಡ ಜೀವನಶೈಲಿ, ಧೂಮಪಾನ, ಮದ್ಯಪಾನದಂಥ ಹವ್ಯಾಸಗಳು ಹೃದಯಾಘಾತ ಹೆಚ್ಚಲು ತಮ್ಮದೇ ಕೊಡುಗೆ ನೀಡುತ್ತಿವೆ. 

ಸ್ವಲ್ಪ ಮುಂಜಾಗ್ರತೆ ವಹಿಸಿದರೂ ಹೃದ್ರೋಗ ತಡೆಯಬಹುದು. ಬಹುತೇಕ ಹೃದಯ ಸಂಬಂಧಿ ಕಾಯಿಲೆಗಳನ್ನು ಉತ್ತಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದಲೇ ತಡೆಗಟ್ಟಬಹುದು.

ಗಮನವಿರಲಿ

  • ಧೂಮಪಾನಿಗಳು ಹೃದಯಾಘಾತಕ್ಕೆ ತುತ್ತಾಗುವ ಸಾಧ್ಯತೆ 3 ರಿಂದ 6 ಪಟ್ಟು ಹೆಚ್ಚಾಗುತ್ತದೆ.  

  • ರಕ್ತದಲ್ಲಿಯ ಕೊಬ್ಬಿನಾಂಶ(ಕೊಲೆಸ್ಟ್ರಾಲ್) ಹೆಚ್ಚಾದರೆ ರಕ್ತನಾಳ(ಕರೋನರಿ ಆರ್ಟರಿ) ಗಟ್ಟಿಯಾಗಿ  ಹೃದಯಾಘಾತ ಸಂಭವಿಸುವ ಅಪಾಯ ಇರುತ್ತದೆ.

  • ಅನಿಯಂತ್ರಿತ ಮಧುಮೇಹ, ಅತಿಯಾದ ತೂಕ, ಅಧಿಕ ರಕ್ತದೊತ್ತಡದಿಂದ ರಕ್ತನಾಳಗಳು ಸ್ಥಿತಿಸ್ಥಾಪಕ ಗುಣ ಕಳೆದುಕೊಂಡು ಗಡಸಾಗುತ್ತವೆ. ಇದರಿಂದ ಹೃದಯಸ್ತಂಭನ, ಆಘಾತ ಸಂಭವಿಸುತ್ತವೆ.  

  • ಅಧಿಕ ರಕ್ತದೊತ್ತಡ ನಿಯಂತ್ರಿಸದಿದ್ದರೆ ಮಿದುಳು ಹಾಗೂ ಮೂತ್ರಪಿಂಡಗಳ ರಕ್ತನಾಳಗಳಿಗೂ ತೊಂದರೆಯಾಗಿ  ಪಾರ್ಶ್ವವಾಯು ಮತ್ತು ಕಿಡ್ನಿ ವೈಫ್ಯಲಕ್ಕೆ ಕಾರಣವಾಗುತ್ತದೆ.  

  • ಅತಿ ಉದ್ವೇಗ, ಒತ್ತಡ, ಆಯಾಸ, ಆತುರ, ಕೋಪ, ಆವೇಶಕ್ಕೆ ಒಳಗಾಗುವ ವ್ಯಕ್ತಿಗಳಿಗೆ ಹೃದಯಾಘಾತವಾಗುವ ಸಂಭವ ಹೆಚ್ಚು. 

  • ಕುಟುಂಬದಲ್ಲಿ ಹೃದಯಾಘಾತದ ಇತಿಹಾಸ ಇದ್ದರೆ  ಅಗಾಗ ತಪಾಸಣೆಗೆ ಒಳಗಾಗಬೇಕು.

ಹೃದಯದ ಆರೈಕೆಗೆ ಹೀಗೆ ಮಾಡಿ

  •  ಯೋಗ, ಧ್ಯಾನ, ವ್ಯಾಯಾಮ ಮತ್ತು ದೀರ್ಘ ಉಸಿರಾಟದ ಮೂಲಕ ಮನಸ್ಸು ಮತ್ತು ದೇಹವನ್ನು  ಪ್ರಫುಲ್ಲವಾಗಿ ಇಟ್ಟುಕೊಳ್ಳಿ. 

  • ಸರಳ ಜೀವನಶೈಲಿ, ಸಮಯ ನಿರ್ವಹಣೆ, ಸಂವಹನ ಕೌಶಲ ರೂಢಿಸಿಕೊಳ್ಳಿ.

  • ಉತ್ತಮ ನಿದ್ರೆ ಅಗತ್ಯ. ಬೇಗ ಮಲಗಿ, ಬೇಗ ಏಳುವ ಅಭ್ಯಾಸ ರೂಢಿಸಿಕೊಳ್ಳಿ. ನಿಯಮಿತವಾಗಿ ತೂಕ ತಪಾಸಣೆ ಹಾಗೂ ನಿತ್ಯ 45 ನಿಮಿಷ ವೇಗದ ನಡಿಗೆ ಮಾಡಿ.  

  • ನಾಲಿಗೆಯ ಚಪಲವನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ. ಸೇವಿಸುವ ಆಹಾರದ ಮೇಲೆ ನಿಯಂತ್ರಣ ಸಾಧಿಸಿ. ಹಿತಮಿತವಾದ ಸಮತೋಲಿತ ಆಹಾರ, ಹಣ್ಣು, ಹಂಪಲು, ಹಸಿರು ತರಕಾರಿ, ಬೇಳೆ ಕಾಳು, ಹಸಿ ಮೊಳಕೆ ಒಡೆದ ಕಾಳು ಊಟದ ತಟ್ಟೆಯಲ್ಲಿ ಹೇರಳವಾಗಿರಬೇಕು.

  • ಕೊಬ್ಬಿನ ಆಹಾರ, ಕರಿದ ಪದಾರ್ಥ ಮತ್ತು ಬೇಕರಿ ತಿಂಡಿ, ತಿನಿಸು ಹಾಗೂ ಫ್ರೆಂಚ್ ಫ್ರೈಸ್‌, ಬರ್ಗರ್‌, ಪಿಜ್ಜಾ ಸೇರಿ ಜಂಕ್‌ ಫುಡ್‌ ಕಡಿಮೆ ಮಾಡಿದಷ್ಟೂ ಹೃದಯ ಗಟ್ಟಿಯಾಗುತ್ತದೆ. ಧೂಮಪಾನ, ಮದ್ಯ ಸೇವನೆ ಬಿಟ್ಟುಬಿಡಿ. ಆಯುಷ್ಯ ಹೆಚ್ಚಾಗುತ್ತದೆ. ಆಹಾರ ಸೇವಿಸುವಾಗ ಔಷಧಿಯಂತೆ ಸೇವಿಸಿ. ಇಲ್ಲವಾದಲ್ಲಿ ಔಷಧಿಯನ್ನೇ ಆಹಾರವಾಗಿ ಸೇವಿಸಬೇಕಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT