ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಮು ಚುಮು ಚಳಿಯಲಿ ನಳನಳಿಸಲಿ ಆರೋಗ್ಯ

Last Updated 21 ನವೆಂಬರ್ 2022, 19:45 IST
ಅಕ್ಷರ ಗಾತ್ರ

‘ಹಸಿವರಿತು ಉಂಬುವುದು ಬಿಸಿನೀರ ಕುಡಿಯುವುದು ಹಸಿವಕ್ಕು ವಿಷಯ ಘನವಕ್ಕು ವೈದ್ಯಂಗೆ ಬೆಸಸಬೇಡೆಂದ ಸರ್ವಜ್ಞ’. ಕನ್ನಡದ ತ್ರಿಪದಿಕಾರ ಬರೆದ ಈ ಸಾಲು ಚಳಿಗಾಲದ ಅರೋಗ್ಯಪಾಲನೆಯ ಸೂತ್ರ.

ಚಳಿಗಾಲದಲ್ಲಿ ಹಸಿವೆ ಹೆಚ್ಚು. ರಾತ್ರಿ ಉದ್ದವಿರುವುದರಿಂದ ಬೆಳ್ಳಂಬೆಳಗ್ಗೇ ಮಿತಿಮೀರುವ ಹೊಟ್ಟೆಯ ಹಸಿವೆ ಸಹಜ. ಆದರೆ ಹಸಿವರಿತು ಉಂಬುವುದು ಲೇಸು. ‘ಮಜ್ಜಿಗೂಟಕೆ ಲೇಸು ಮಜ್ಜನಕೆ ಮಡಿ ಲೇಸು ಕಜ್ಜಾಯ ತುಪ್ಪ ಉಣಲೇಸು’ ಎಂದವನು ಸರ್ವಜ್ಞ ಕವಿ. ಇದು ಸಹ ಹೇಮಂತ ಋತುವಿಗೆ ಸಲ್ಲುವ ಆಹಾರ ಕ್ರಮ. ಚಳಿಗಾಲದ ಚರ್ಮದ ಬಿರುಸುತನವೇ? ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಮಣೆ ಹಾಕಿರಿ. ಸಿಹಿತಿನಿಸು, ಕಜ್ಜಾಯದೂಟ ಧಾರಾಳವಾಗಿ ಸವಿಯಿರಿ. ಸರ್ವಜ್ಞನೆಂದಂತೆ ಮಜ್ಜನದ ಮಡಿ ಸಹ ಚಳಿಗಾಲಕ್ಕೆ ಹೇಳಿ ಮಾಡಿಸಿದ್ದು. ದೀವಳಿಗೆಯಿಂದ ಆರಂಭಗೊಳುವ ಎಣ್ಣೆಸ್ನಾನ ಶರದೃತುವಿಗಷ್ಟೆ ಅಲ್ಲ, ಹೇಮಂತಕ್ಕೆ ಸಹ ಸಲ್ಲುತ್ತದೆ.

ಎಂತಹ ಮಜ್ಜನ ಬೇಕು? ನೆತ್ತಿಗೊತ್ತುವ ಮಾಲೀಶು ಎಳ್ಳು/ಹರಳು/ ಕೊಬ್ಬರಿ ಎಣ್ಣೆ ಸಹಿತ ತುಪ್ಪದ ಯಮಕ (ಜಂಟಿ) ಸ್ನೇಹ ಒಳಿತು. ಮೈಗೆ ಹಚ್ಚುವ ಯೋಗ್ಯ ತೈಲಗಳು ಹಲವು. ಸಾಸಿವೆ, ಎಳ್ಳು, ಹರಳು, ಕೊಬ್ಬರಿಯೆಣ್ಣೆಯ ಹದವಾದ ಬಿಸಿಯ ಮಾಲೀಶು ಸಲೀಸು. ಅನಂತರ ಹದಬಿಸಿ ನೀರ ಹಂಡೆ, ತಪ್ಪಲೆಯ ಧಾರೆಯ ಜಳಕ. ಕಿರುಗಂಟು, ಬೆರಳುಗಳಿಗೆ ಮಾಲೀಶಿನ ವಿಶೇಷ ಕಾಳಜಿ ಇರಲಿ. ನಿಮಗೆ ತಿಳಿದಿದೆ; ಚಳಿಗಾಲದ ಅನುಭವವು ಒಂದೆರಡಲ್ಲ. ಮೈ ಮನಗಳು ಮುದುಡುವ ಕಾಲವಿದು. ಕೀಲುಗಂಟು, ಗಿಣ್ಣುಗಳು ಬೇಗನೆ ಸೆಟೆದು ಮುರುಟುವ ಅನುಭವ. ಹಾಗಾಗಿ ಪಾದ, ಪಾಣಿಗಳಿಗೆ ಚಳಿಗಾಳಿ ಸೋಕದಂತೆ ಎಚ್ಚರವಿರಲಿ. ಕೈಗವುಸು, ಕಾಲುಚೀಲಗಳ ರಕ್ಷಣೆಯನ್ನು ಪಡೆದುಕೊಳ್ಳಿ.

ಬೇಗನೆ ಮಲಗಿರಿ. ಬೇಗ ಎಚ್ಚರಗೊಳ್ಳಿರಿ. ಕೊಜಾಗರೀವ್ರತ ಮುಗಿದು ಧನುರ್ಮಾಸದ ಸಮಯವಿದು. ಕೋಜಾಗರೀಯ ಶಬ್ದಾರ್ಥವು ‘ಯಾರು ಎಚ್ಚರವಿರುವರು’ ಎಂಬುದು. ಧನುರ್ಮಾಸದ ಬೆಳಗಿನ ಪೂಜೆಗೆ ಕೇವಲ ಧಾರ್ಮಿಕ ಮಾನ್ಯತೆಯಷ್ಟೆ ಅಲ್ಲ; ವೈದ್ಯಕೀಯ ಗ್ರಂಥಾಧಾರಗಳಿವೆ. ಮುಂಜಾವಿನ ಬ್ರಾಹ್ಮೀಮುಹೂರ್ತದ ಎಚ್ಚರದಿಂದ ಕಫ ಸಂಚಯವಾಗದು. ಆಧುನಿಕ ವೈದ್ಯದ ಅಂಕಿ ಅಂಶಗಳನ್ವಯ ನಡಿರುಳಿನ ಹೃದಯಸ್ತಂಭನ ಮತ್ತು ಮೃತ್ಯು ಅತ್ಯಧಿಕವಂತೆ. ರಕ್ತಸಂಚಲನೆಗೆ ಚಳಿಯಿಂದ ಅಡಚಣೆ. ಅತಿ ವೃದ್ಧರು, ರೋಗಿಗಳು ಬಿಟ್ಟರೆ ಉಳಿದವರಿಗೆ ಹಗಲು ನಿದ್ದೆ ಅನಗತ್ಯ. ಕುಳಿತ ಭಂಗಿಯ ನಿದ್ದೆ ಓಕೆ. ಬೀಸುಗಾಳಿಗೆ ಇದಿರು ನಡೆಯುವ, ಓಡುವ ಸಾಹಸ ಖಂಡಿತ ಬೇಡ. ದ್ವಿಚಕ್ರ ವಾಹನ ಚಾಲನೆ ಸಹ ಸಲ್ಲದು.

ಆಯುರ್ವೇದ ಸಂಹಿತೆಗಳನ್ವಯ ಹೇಮಂತ, ಶಿಶಿರದ ದಿನಗಳು ಉಳಿದ ಋತುಗಳಿಗಿಂತ ಕೊಂಚ ನಿರಾಳವಾದವು. ಆರೋಗ್ಯಕ್ಕೆ ಅಪಾಯ ಕಡಿಮೆ. ಇದನ್ನೇ ವಿಸರ್ಗಕಾಲವೆಂದು ಪರಿಗಣಿಸುವರು. ಅಂದರೆ ಸೂರ್ಯ–ಚಂದ್ರರು ಪ್ರಸನ್ನರಾಗಿರುವ ಅನುಕೂಲ ಕಾಲವಿದು. ಅಗ್ನಿಬಲವೂ ಹೆಚ್ಚು. ಆದರೂ ವಿಷಮಾಚರಣೆಯಿಂದ ಕೆಮ್ಮು, ನೆಗಡಿ, ದಮ್ಮು, ಉಬ್ಬಸ, ಮೂತ್ರಸೋಂಕುಗಳ ಕಾಲವಿದು. ನೀರಡಿಕೆ ಕಮ್ಮಿ. ಹಾಗಾಗಿ ನೀರು ಕುಡಿಯುವ ಇಚ್ಛೆಯಾಗದು. ಹಾಗಾಗಿ ಪದೇ ಪದೇ ಮೂತ್ರಸೋಂಕಿಗೆ ಅವಕಾಶ. ಬಿಸಿ ನೀರು ಕುಡಿದರೆ ಕಫಸಂಚಯಕ್ಕೆ ಕಡಿವಾಣ.

ಬೆಳಗಿನ ಆಹಾರ ಚೆನ್ನಾಗಿಯೇ ಇರಲಿ. ನಡು ಮಧ್ಯಾಹ್ನಕ್ಕೆ ರಾಜನಂತೆ ಉಣಬೇಕಂತೆ. ಅಲ್ಪ ಆಹಾರದಿಂದ ತೃಪ್ತಿ ಪಡೆಯೋಣ. ಮಧುರರಸ ಪ್ರಬಲವಾಗಿರುವ ಹಿಟ್ಟಿನ ತಿಂಡಿಗಳಿರಲಿ. ಗೋಧಿ, ಬಾರ್ಲಿ, ಬೆಲ್ಲ, ಎಳ್ಳು ಬಳಸುವ ತಿಂಡಿ ತಿನ್ನಲು ಸಕಾಲವಿದು. ಖರ್ಜೂರ, ಇತರ ಒಣ ಹಣ್ಣುಗಳು, ಉದ್ದು ತಿಂಡಿಗಳ ಸೇವನೆಗೂ ಹೇಮಂತ ಋತು ಸಕಾಲ. ದಾಳಿಂಬೆ, ಮೋಸಂಬಿ, ರಸಬಾಳೆ, ಅನಾನಾಸು, ಪಪಾಯಿಯಂತಹ ಹಣ್ಣು, ಹಣ್ಣುರಸ ಸೇವನೆಗೆ ಸಕಾಲ. ಕಹಿ, ಒಗರಿನ ನೇರಳೆ, ನೆಲ್ಲಿಯ ಸೇವನೆಯಿಂದ ಲಾಭವಿದೆ. ಸಂಜೆಯೂಟ ಶೀಘ್ರ ಮುಗಿಸಿರಿ. ಉಂಡ ಅನಂತರದ ವಿಶ್ರಾಂತಿಯಾಗಲೀ ನಡಿಗೆಯಾಗಲೀ ಬೆಚ್ಚನೆಯ ತಾಣದಲ್ಲಾಗಲಿ. ನೆಲಮಾಳಿಗೆಯ ವಾಸಕ್ಕೆ ಚರಕಸಂಹಿತೆ ಒತ್ತು ನೀಡಿದೆ. ಹಾಸು, ಹೊದಿಕೆಯ ಬಗ್ಗೆ ಬೆಚ್ಚನೆಯ ಎಚ್ಚರಿಕೆ ಮಾತು ಸಹ ಚರಕರದ್ದು. ಉಣ್ಣೆಗಂಬಳಿ, ಕೌದಿ, ಹತ್ತಿ,ರೇಷ್ಮೆ ವಸ್ತ್ರದ ಧಾರಣೆಯ ಪ್ರಸ್ತಾಪವೂ ಸಂಹಿತೆಯದು. ಕಾಲಿಗೆ ಹಾಕುವ ಚಪ್ಪಲಿ ಸಹ ಬೆಚ್ಚನೆಯದಾಗಿರಲಿ. ಅನುಕೂಲವಿದ್ದರೆ ಸಂಜೆಯ ಸೂರ್ಯಸ್ನಾನ ಮಾತ್ರ ಸಾಕು. ಸೂರ್ಯನಮಸ್ಕಾರ ಮಾಡುವಿರಾ? ನಾಲ್ಕಾರು ಬಾರಿ ಮಾಡಬಹುದು. ಗೋಮುಖಾಸನ, ತ್ರಿಕೋಣಾಸನದ ಅಭ್ಯಾಸ ಕೂಡ ಹೇಮಂತಾಚರಣೆಯ ಭಾಗವಾಗಲಿ.

ಶಿಶಿರದ ದಿನಚರಿಯು ಬಹುತೇಕ ಹೇಮಂತದ ಪುನರಾವರ್ತನೆ. ಆದ್ದರಿಂದ ಸಂಕ್ರಾಂತಿ ಪರ್ಯಂತ ನಮ್ಮ ಜೀವನಶೈಲಿ ಇದೇ ತೆರನಾಗಿರಲಿ. ಜಾಣರ ಮಾತಿದೆ. ರೋಗದ ಚಿಕಿತ್ಸೆಗಿಂತ ತಡೆಯ ಹಾದಿ ಸುಗಮ. ಅದನ್ನು ಸದಾಕಾಲ ನೆನಪಿಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT