ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು: ಗೀಳು ಕಾಯಿಲೆಯಲ್ಲ, ಲಕ್ಷಣ ಮಾತ್ರ

Last Updated 7 ಜನವರಿ 2022, 19:30 IST
ಅಕ್ಷರ ಗಾತ್ರ

ಬಿಇ 3ನೇ ವರ್ಷದ ವಿದ್ಯಾರ್ಥಿ. ನನಗೆ ಓಸಿಡಿ ಕಾಯಿಲೆಯಿದೆ. ಮೊದಲು ಪದೇಪದೇ ಕೈತೊಳೆಯುತ್ತಿದ್ದೆ. ಈಗ ಇತರ ಹಲವಾರು ದೈನಂದಿನ ಚಟುವಟಿಕೆಗಳನ್ನು ಮತ್ತೆಮತ್ತೆ ಮಾಡುತ್ತೇನೆ. ನಾನು ಯಾವಾಗಲೂ ಒತ್ತಡ ಮತ್ತು ಆತಂಕದಲ್ಲಿರುತ್ತೇನೆ. ಓದಿನಲ್ಲಿ ಏಕಾಗ್ರತೆ ಸಾಧ್ಯವಾಗುತ್ತಿಲ್ಲ. ಈ ಕಾಯಿಲೆಯಿಂದ ಹೊರಬರಲು ಸಹಾಯ ಮಾಡಿ.
-
ಹೆಸರು, ಊರು ತಿಳಿಸಿಲ್ಲ.

ಗೀಳು (ಒಸಿಡಿ) ಕಾಯಿಲೆಯಲ್ಲ. ಮನಸ್ಸಿನಲ್ಲಿ ನಡೆಯುವ ಹಲವಾರು ಒತ್ತಡ, ಆತಂಕ, ಬೇಸರ, ಹಿಂಜರಿಕೆಗಳ ಸೂಚನೆ ಮಾತ್ರ. ಯಾವುದಾದರೂ ಒಂದು ಕ್ರಿಯೆಯನ್ನು ಆಗಾಗ ಪುನರಾವರ್ತಿಸುವ ಪ್ರವೃತ್ತಿ ಎಲ್ಲರಲ್ಲಿಯೂ ಸಹನೀಯ ಮಟ್ಟದಲ್ಲಿ ಇರುತ್ತದೆ. ಆದರೆ ಅಂತಹ ಕ್ರಿಯೆಗಳು ನಿಮ್ಮ ದಿನಚರಿಯ ಹೆಚ್ಚಿನ ಭಾಗವನ್ನು ಆವರಿಸಿಕೊಂಡು ಮಾನಸಿಕ ಹಿಂಸೆಯನ್ನು ನೀಡುತ್ತಿದೆ. ಇದನ್ನು ಎರಡು ಹಂತಗಳಲ್ಲಿ ನಿಭಾಯಿಸಬೇಕು.

ಮೊದಲನೆಯದು ಪದೇಪದೇ ಒಂದೇ ಕ್ರಿಯೆಯನ್ನು ಪುನರಾವರ್ತಿಸುವ ಪ್ರವೃತ್ತಿ ನಿಭಾಯಿಸುವುದನ್ನು ಕಲಿಯಬೇಕು. ನಿಮಗೆ ಹೀಗೆ ಒತ್ತಡ ಉಂಟಾದಾಗ ದೀರ್ಘವಾಗಿ ಉಸಿರಾಡುತ್ತಾ ನಿಮ್ಮ ದೇಹವನ್ನು ಗಮನಿಸಿ. ದೇಹದ ಹಲವಾರು ಮಾಂಸಖಂಡಗಳಲ್ಲಿ ಬಿಗಿತ ಕಾಣಿಸಿಕೊಂಡಿರುತ್ತದೆ. ಅವುಗಳನ್ನು ಸಡಿಲಬಿಡಿ. ಹೀಗೆ ಆಗಾಗ ಮಾಡುತ್ತಿದ್ದರೆ ಕ್ರಿಯೆಗಳನ್ನು ಪುನರಾವರ್ತಿಸುವ ಒತ್ತಡ ಕಡಿಮೆಯಾಗುತ್ತದೆ. ಎರಡನೆಯ ಹಂತದಲ್ಲಿ ನಿಮ್ಮ ಆತಂಕವನ್ನು ನಿಭಾಯಿಸಲು ಕಲಿಯಬೇಕು. ಇದಕ್ಕೆ ಮನೋಚಿಕಿತ್ಸೆಯ ಅಗತ್ಯವಿದೆ. ಗೀಳಿನ ಒತ್ತಡ ತೀವ್ರವಾಗಿದ್ದರೆ ತಾತ್ಕಾಲಿಕವಾಗಿ ಮನೋವೈದ್ಯರ ಸಹಾಯ ಬೇಕಾಗಬಹುದು.

*

ಯುವಕ. ನಾನು ಬಹಳ ದಿವಸಗಳಿಂದ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆ. ಇದರಿಂದ ನಿಮಿರುವಿಕೆಯ ಸಮಸ್ಯೆಯಾಗಿದೆ. ಪರಿಹಾರವೇನು?
-
ಹೆಸರು, ಊರು ತಿಳಿಸಿಲ್ಲ.

ಹಸ್ತಮೈಥುನ ಸಂಪೂರ್ಣ ಆರೋಗ್ಯಕರ ಪ್ರವೃತ್ತಿ ಎಂದು ಈ ಅಂಕಣದಲ್ಲಿ ಹಲವಾರು ಬಾರಿ ಬರೆಯಲಾಗಿದೆ. 30 ಜನವರಿ 2021ರ ಇದೇ ಅಂಕಣವನ್ನು ಓದಿ. ಹಸ್ತಮೈಥುನದಿಂದ ನಿಮಿರು ದೌರ್ಬಲ್ಯವುಂಟಾಗುವುದಿಲ್ಲ. ಅದು ಹಾನಿಕರ ಎಂಬ ನಿಮ್ಮ ತಪ್ಪು ತಿಳಿವಳಿಕೆ ಮತ್ತು ಆತಂಕ ನಿಮಿರು ದೌರ್ಬಲ್ಯಕ್ಕೆ ಕಾರಣವಾಗಿದೆ. ನೈರ್ಮಲ್ಯವನ್ನು ಮತ್ತು ಖಾಸಗೀತನವನ್ನು ಕಾಪಾಡಿಕೊಳ್ಳಿ. ಉಳಿದಂತೆ ನಿಮ್ಮ ಓದು, ಉದ್ಯೋಗಗಳ ಕಡೆ ಗಮನ ಹರಿಸಿ. ಆದಷ್ಟು ಬೇಗ ಸೂಕ್ತ ಸಂಗಾತಿಯನ್ನು ಹುಡುಕಿಕೊಳ್ಳಿ.

*

ಯುವಕ. 4 ವರ್ಷಗಳಿಂದ ನನ್ನ ಪರಮಸ್ನೇಹಿತೆಯನ್ನು ಪ್ರೀತಿಸುತ್ತಿದ್ದೆ. ಅವಳು ಮೊದಲು ತಿರಸ್ಕರಿಸಿದ್ದರೂ ನಂತರ ಒಪ್ಪಿದ್ದಳು. ಒಂದು ವರ್ಷದ ನಂತರ ಅವಳ ಮನೆಯವರಿಗೆ ತಿಳಿದಾಗ ನಮ್ಮ ಪ್ರೀತಿ ಮುಕ್ತಾಯವಾಯಿತು. ಅವಳನ್ನು ಮರೆಯಬೇಕೆಂದು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ನಾನೇನು ಮಾಡಬೇಕು?
-
ಹೆಸರು ಊರು ತಿಳಿಸಿಲ್ಲ

ಪ್ರೀತಿಸುವ ವ್ಯಕ್ತಿಯನ್ನು ಕಳೆದುಕೊಂಡಿರುವ ದುಃಖವನ್ನು ನೀವು ಅನುಭವಿಸಿದ್ದೀರಾ? ಅಥವಾ ಮತ್ತೆ ಅವಳು ಸಿಗಬಹುದೆಂದು ನಿರೀಕ್ಷೆಯಲ್ಲಿದ್ದೀರಾ? ನಿರೀಕ್ಷೆ ಇರುವವರೆಗೆ ಅವಳನ್ನು ಮರೆಯಲಾಗುವುದಿಲ್ಲ. ಮೊದಲು ನಿಮ್ಮ ದುಖವನ್ನು ಒಪ್ಪಿಕೊಳ್ಳಿ ಮತ್ತು ಸೂಕ್ತವಾಗಿ ಹೊರಹಾಕಿ. ನಂತರ ಹೀಗೆ ಯೋಚಿಸಿ. ಮನೆಯವರ ನಿರ್ಬಂಧವನ್ನು ಮೀರಲಾಗದ ನಿಮ್ಮ ಸ್ನೇಹಿತೆಯ ಪ್ರೀತಿ ಆಳವಾಗಿ ಇರಲು ಸಾಧ್ಯವೇ? ಸಾಧ್ಯವಿರಲಿಲ್ಲ ಎಂದಾದರೆ ನಿಮ್ಮಿಬ್ಬರ ನಡುವೆ ಇದ್ದದ್ದು ಪ್ರೀತಿಯಲ್ಲ, ಹರೆಯದ ಆಕರ್ಷಣೆ. ಇಂತಹ ಆಕರ್ಷಣೆಯನ್ನು ಪ್ರೀತಿಯಾಗಿ ಬದಲಾಯಿಸಲು ಸಮಯ ಮತ್ತು ಒಡನಾಟದ ಅಗತ್ಯವಿದೆ. ಅದಕ್ಕೆ ಸ್ನೇಹಿತೆ ಸಿದ್ಧವಿರಲಿಲ್ಲವೆಂದ ಮೇಲೆ ನೀವೇನು ಮಾಡಲು ಸಾಧ್ಯವಿತ್ತು? ವಾಸ್ತವವನ್ನು ಒಪ್ಪಿಕೊಂಡು ಕಳೆದುಕೊಂಡಿರುವುದಕ್ಕೆ ದುಃಖಿಸಿ ಮುಂದುವರೆಯುವುದರ ಹೊರತಾಗಿ ನಿಮಗೆ ಬೇರೆ ಆಯ್ಕೆಗಳಿವೆಯೇ?

ಯುವಕ. ಮದುವೆಗೆ ಹುಡುಗಿಯನ್ನು ನೋಡಿ ನಿಶ್ಚಯ ಮಾಡಿದ್ದಾರೆ. ಆ ಹುಡುಗಿಗೆ ಬೇರೆಯವರ ಜೊತೆ ಲೈಂಗಿಕ ಸಂಬಂಧವಿರುವುದನ್ನು ನೋಡಿದ್ದೇನೆ. ಮುಂದೆ ಅವಳ ಜೊತೆ ಖುಷಿಯಿಂದ ಇರಲು ಸಾಧ್ಯವೇ? ಪರಿಹಾರವೇನು?
-
ಹೆಸರು, ಊರು ತಿಳಿಸಿಲ್ಲ

ಇದಕ್ಕೆ ಪರಿಹಾರವನ್ನು ಹೊರಗಡೆ ಹುಡುಕುವ ಬದಲು ನಿಮ್ಮ ಮನಸ್ಸಿನಲ್ಲಿ ಹುಡುಕಿಕೊಳ್ಳಬೇಕಲ್ಲವೇ? ಹುಡುಗಿ ಇನ್ನೊಬ್ಬ ಹುಡುಗನೊಂದಿಗೆ ಸೇರಿದ್ದನ್ನು ನೆನಪಿಸಿಕೊಂಡರೆ ನಿಮ್ಮೊಳಗೆ ಮೂಡುವ ಭಾವನೆಗಳೇನು? ಸಿಟ್ಟು, ಹತಾಶೆ, ಅಸಹಾಯಕತೆ ಅಸಹ್ಯ-ಹೀಗೆ ಯಾವುದಾದರೂ ಆಗಿರಲು ಸಾಧ್ಯ. ಇಂತಹ ಕಹಿಭಾವನೆಗಳನ್ನು ಇಟ್ಟುಕೊಂಡು ನೀವು ಖುಷಿಯಿಂದ ಇರಲು ಹೇಗೆ ಸಾಧ್ಯ? ಅಥವಾ ಮದುವೆಗೆ ಮೊದಲು ಅವಳಿಗೆ ಇದ್ದ ದೈಹಿಕ ಸಂಬಂಧವನ್ನು ನಿಮಗೆ ಸಹಜವಾಗಿ ಒಪ್ಪಿಕೊಳ್ಳುವುದು ಸಾಧ್ಯವೇ? ಸಾಧ್ಯವಿದ್ದರೆ ಮದುವೆಯಾದ ಮೇಲೆ ಇಂತಹ ಸಂಬಂಧಗಳು ಮುಂದುವರೆಯುವುದಿಲ್ಲ ಎಂದು ಖಾತ್ರಿಪಡಿಸಿಕೊಳ್ಳಲು ಹುಡುಗಿಯ ಜೊತೆ ನೇರವಾಗಿ ಚರ್ಚೆ ಮಾಡಬೇಕಲ್ಲವೇ? ನಿಮ್ಮ ಭಾವನೆಗಳ ಕುರಿತು ಹುಡುಗಿಯ ಜೊತೆ ಮಾತನಾಡಿ ನಿಮಗೆ ಮಾತ್ರ ಸೂಕ್ತವೆನಿಸುವ ನಿರ್ಧಾರ ತೆಗೆದುಕೊಳ್ಳಿ. ಮನೆಯವರ ಒತ್ತಡಕ್ಕೆ ಮಣಿದು ತೆಗೆದುಕೊಳ್ಳುವ ನಿರ್ಧಾರಗಳಿಂದ ನೀವು ಸಹಜ ದಾಂಪತ್ಯ ಸುಖವನ್ನು ಅನುಭವಿಸಲು ಕಷ್ಟವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT