ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ ಅಂಡ್ ಸಿಯಿಂದ ತೊಂದರೆಯೇ?

Last Updated 17 ಡಿಸೆಂಬರ್ 2021, 19:56 IST
ಅಕ್ಷರ ಗಾತ್ರ

1. ನನಗೆ 47 ವರ್ಷ. ಕಳೆದೊಂದು ವರ್ಷದಿಂದ ಮುಟ್ಟಾದಾಗ ಅತಿಯಾದ ರಕ್ತಸ್ರಾವ ಇರುತ್ತದೆ. ಅಲ್ಲದೇ ಇದು ಏಳೆಂಟು ದಿನಗಳವರೆಗೆ ಮುಂದುವರಿಯುತ್ತದೆ. ವೈದ್ಯರು ಸ್ಕ್ಯಾನಿಂಗ್ ಮಾಡಿ ಗರ್ಭಕೋಶ ಸ್ವಲ್ಪ ದೊಡ್ಡದಿದೆ, ಡಿ ಆಂಡ್ ಸಿ/ ಬಯಾಪ್ಸಿ ಮಾಡಿಸಿ ಎಂದು ಹೇಳಿ ತುಂಬಾ ದಿನಗಳಾಗಿವೆ. ನನಗೆ ಈ ಬಗ್ಗೆ ಭಯ ಇರುವ ಕಾರಣ ವೈದ್ಯರು ಹೇಳಿದ ಯಾವ ಪರೀಕ್ಷೆಯನ್ನೂ ಮಾಡಿಸಿಲ್ಲ. ಆದರೆ ನನಗೆ ತುಂಬಾ ಸುಸ್ತಾಗುತ್ತದೆ. ಏನು ಮಾಡಲಿ? ಡಿ ಆಂಡ್ ಸಿ ಮಾಡಿಸುವುದು ಅರ್ಬಾಷನ್‌ಗಾಗಿ ಎಂದು ಕೇಳಿದ್ದೇನೆ. ಇದರ ಬಗ್ಗೆ ಮಾಹಿತಿ ನೀಡಿ

ಪಾರ್ವತಿ, ಶಿರಾ

ಪಾರ್ವತಿಯವರೇ, ನೀವು ಚಿಕಿತ್ಸೆ ಪಡೆಯುತ್ತಿರುವ ತಜ್ಞರ ಬಳಿ ಶೀಘ್ರದಲ್ಲೇ ಮುಟ್ಟಿನ ಮುನ್ನಾದಿನಗಳಲ್ಲಿ ಅಥವಾ ಮುಟ್ಟಾದ ದಿನವೇ ಹೋಗಿ ಬಯಾಪ್ಸಿ ಅಥವಾ ಡಿ ಆಂಡ್ ಸಿ ಮಾಡಿಕೊಳ್ಳಿ. ಈ ಬಗ್ಗೆ ಹೆದರಿಕೆ ಬೇಡ. ಡಿ ಆಂಡ್ ಸಿ ಎಂದರೆ ಗರ್ಭದ್ವಾರವನ್ನು ಹಿಗ್ಗಿಸಿ (ಡಯಲೇಟೇಷನ್) ಗರ್ಭಾಶಯದ ಒಳಪದರವನ್ನು (ಎಂಡೋಮೆಟ್ರಿಯಂ) ಕೆರೆದು ತೆಗೆಯುವುದು. ಈ ಗರ್ಭಕೋಶದ ಒಳಪದರ ಪ್ರತಿ ಮಹಿಳೆಯರ ರಕ್ತಕ್ಕೆ ಸೇರುವ ಬೇರೆ ಬೇರೆ ರಸದೂತಗಳಿಗೆ ಸ್ಪಂದಿಸುತ್ತಾ, ಪ್ರತಿತಿಂಗಳು ಭ್ರೂಣದ ಆಗಮನಕ್ಕಾಗಿ ಕಾಯುತ್ತಾ ಗರ್ಭಕೋಶ ತನ್ನ ಸಿದ್ಧತೆ ನಡೆಸಿರುತ್ತದೆ. ಗರ್ಭಧಾರಣೆಯಾಗದಿದ್ದಾಗ ಪ್ರತಿತಿಂಗಳು ರಕ್ತಸ್ರಾವದ ರೂಪದಲ್ಲಿ ಹೊರಬರುತ್ತದೆ. ನೀವು ಸೂಕ್ತ ತಜ್ಞರಲ್ಲಿ ಸುಸಜ್ಜಿತ ವ್ಯವಸ್ಥೆಯಲ್ಲಿ, ಸೋಂಕು ರಹಿತ ವಾತಾವರಣದಲ್ಲಿ ಡಿ ಆಂಡ್ ಸಿ ಮಾಡಿಸಿಕೊಂಡರೆ ಏನೂ ತೊಂದರೆಯಾಗುವುದಿಲ್ಲ. ಗರ್ಭಪಾತ ವಾದಾಗಲೂ ಡಿ ಆಂಡ್ ಸಿ ಮಾಡಿದಾಗ ಕೆಲವು ಗರ್ಭದ ತುಣುಕುಗಳು ಹಾಗೇ ಉಳಿದಿದ್ದನ್ನು ಪೂರ್ಣವಾಗಿ ಕೆರೆದು ತೆಗೆಯುತ್ತಾರೆ. ಆದರೆ ನಿಮಗೆ ಈಗ ಮಾಡಲಿರುವ ಡಿ ಆಂಡ್ ಸಿಯಲ್ಲಿ ಗರ್ಭಕೋಶದ ಒಳಪದರವನ್ನೇ ತೆಗೆದು ಅದನ್ನು ತಜ್ಞರು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಹಾರ್ಮೋನುಗಳಿಂದ ಈ ಒಳಪದರದಲ್ಲಾಗುವ ಬದಲಾವಣೆಗಳು ತಜ್ಞರಿಗೆ ಪರೋಕ್ಷವಾಗಿ ತಿಳಿದುಬರುತ್ತದೆ. ಇದರಿಂದ ಮುಂದಿನ ಚಿಕಿತ್ಸೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ವೈದ್ಯರಿಗೆ ಸಹಾಯವಾಗುತ್ತದೆ. ಹಾಗಾಗಿ ಭಯಪಡದೆ ಬೇಗನೇ ಪರೀಕ್ಷಿಸಿಕೊಳ್ಳಿ. ಬಯಾಪ್ಸಿ ಮಾಡಿಸಿಕೊಳ್ಳಿ.

2. ನನ್ನ ಹೆಂಡತಿಗೆ 20 ದಿನಕ್ಕೊಮ್ಮೆ ಮುಟ್ಟು ಆಗುತ್ತಿದ್ದು ನಂತರ 10 ದಿನಗಳು ರಕ್ತಸ್ರಾವವಾಗುತ್ತದೆ. ಮತ್ತೆ ಸ್ವಲ್ಪ ಸ್ವಲ್ಪ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ. ಯಾವ ಕಾರಣಕ್ಕೆ ಹೀಗಾಗುತ್ತದೆ? ಇದರ ನಿವಾರಣೆ ಹೇಗೆ? ಸಲಹೆ ಕೊಡಿ.

ಸುನಿಲ್, ಊರು ವಯಸ್ಸು ತಿಳಿಸಿಲ್ಲ

ಸುನಿಲ್‌ ಅವರೇ, ನಿಮ್ಮ ಮಡದಿಗೆ ವಯಸ್ಸೆಷ್ಟು, ಮಕ್ಕಳಿದ್ದಾರೆಯೇ ಎಂಬ ಬಗ್ಗೆ ನೀವು ಇಲ್ಲಿ ತಿಳಿಸಿಲ್ಲ, ಇರಲಿ. ಸಹಜ ರಕ್ತಸ್ರಾವ 22 ದಿನದಿಂದ 45 ದಿನಗಳವರೆಗೆ ಯಾವಾಗ ಬೇಕಾದರೂ ಆಗಬಹುದು. ನಿಮ್ಮ ಪತ್ನಿಗೆ 20 ದಿನಕ್ಕೊಮ್ಮೆ ಮುಟ್ಟಾಗುತ್ತಿದ್ದು ದೀರ್ಘಾವಧಿಯವರೆಗೆ ಸ್ರಾವ ಆಗುವುದರಿಂದ ಗರ್ಭಕೋಶದ ನಾರುಗಡ್ಡೆಗಳ ಅಥವಾ ಪಾಲಿಪ್‌ನಂತಹ ಸಮಸ್ಯೆ ಇರಬಹುದು. ಆದ್ದರಿಂದ ತಜ್ಞವೈದ್ಯರಿಂದ ಕೂಲಂಕಷವಾಗಿ ತಪಾಸಣೆ ನಡೆಸಿದ ನಂತರವೇ ಚಿಕಿತ್ಸೆ ಪಡೆಯಿರಿ. ನಿರ್ಲಕ್ಷಿಸಬೇಡಿ.

3. ನನ್ನ ವಯಸ್ಸು 38. ನಾನು ಖಾಸಗಿ ಶಾಲೆಯಲ್ಲಿ ಶಿಕ್ಷಕಿ. ನನಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ ಕೂಡಾ ಆಗಿದೆ. ಈಗ ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ನನ್ನ ಪ್ರಶ್ನೆ, ಈಗ ನನಗೆ ಇನ್ನೊಂದು ಮಗು ಬೇಕು. ಇದು ಸಾಧ್ಯವೇ? ಅದಕ್ಕೆ ಏನು ಮಾಡಬೇಕು ಎಂದು ದಯವಿಟ್ಟು ತಿಳಿಸಿ

ಹೆಸರು, ಊರು ತಿಳಿಸಿಲ್ಲ

ನಿಮಗೆ ವಿಚ್ಛೇದನ ಸಿಕ್ಕಿ, ಇನ್ನೊಂದು ಮದುವೆ ಆಗಿ ಮಗು ಆಗಬೇಕು ಎಂದರೆ ನೀವು ತಜ್ಞವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ರೀಕ್ಯಾನಲೈಸೇಶನ್ (ಡಿಂಬನಾಳಗಳ ಮರುಜೋಡಣೆ) ಬಗ್ಗೆ ವಿಚಾರಿಸಿ. ಆ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡು ಮಕ್ಕಳು ಮಾಡಿಕೊಳ್ಳಲು ಪ್ರಯತ್ನಿಸಬಹುದು. ಆದರೆ ಫಲಿತಾಂಶ ಶೇ 50ರಷ್ಟು ಕೂಡಾ ಫಲಕಾರಿಯಲ್ಲ. ನೀವು ಆರ್ಥಿಕವಾಗಿ ಅನುಕೂಲವಾಗಿದ್ದಲ್ಲಿ ಪ್ರನಾಳಶಿಶು (ಐ.ವಿ.ಎಫ್) ಶಿಶು ಮಾಡಿಕೊಳ್ಳಲು ಪ್ರಯತ್ನಿಸಬಹುದು. ಈಗಂತೂ ಜಿಲ್ಲೆ ಜಿಲ್ಲೆಗಳಲ್ಲೂ ಬಂಜೆತನದ ಚಿಕಿತ್ಸಾ ತಜ್ಞರಿರುತ್ತಾರೆ. ಅವರನ್ನು ಭೇಟಿಮಾಡಿ ಸೂಕ್ತ ಸಲಹೆ ಪಡೆದುಕೊಳ್ಳಿ.

4. ನನಗೆ 29ವರ್ಷ. ಮದುವೆಯಾಗಿ ಆರು ತಿಂಗಳಾಗಿದೆ. ನಾವು ಮಗುವಿಗಾಗಿ ಪ್ರಯತ್ನ ಮಾಡುತ್ತಿದ್ದೇವೆ. ನನ್ನ ಋತುಚಕ್ರ ನಿಯಮಿತ ವಾಗಿದೆ. ಯಾವ ದಿನಗಳಲ್ಲಿ ಸಂಭೋಗ ನಡೆಸಿದರೆ ಒಳ್ಳೆಯದು, ದಯವಿಟ್ಟು ತಿಳಿಸಿ?

ಹೆಸರು, ಊರು ತಿಳಿಸಿಲ್ಲ

ಹಿಂದಿನ ಸಂಚಿಕೆಗಳಲ್ಲಿ ಈ ಬಗ್ಗೆ ತಿಳಿಸಿದ್ದೇನೆ, ಓದಿಕೊಳ್ಳಿ. ಅಂಡಾಣು ಬಿಡುಗಡೆಯಾಗುವ ಆಸುಪಾಸಿನಲ್ಲಿ ಲೈಂಗಿಕ ಸಂಪರ್ಕವಾದರೆ ಅಂದರೆ ಮುಟ್ಟು ಆರಂಭವಾಗಿ 8 ರಿಂದ 18 ದಿನಗಳ ಒಳಗೆ ಋತುಫಲಪ್ರದ ದಿನಗಳಲ್ಲಿ ಸಂಪರ್ಕವಾದರೆ ಮಕ್ಕಳಾಗುವ ಸಂಭವ ಹೆಚ್ಚು. ಇನ್ನು 6 ತಿಂಗಳೊಳಗೆ ಗರ್ಭ ನಿಲ್ಲದಿದ್ದಲ್ಲಿ ತಜ್ಞವೈದ್ಯರ ಸಲಹೆ ಪಡೆಯಿರಿ.

5. ನಮಸ್ತೆ ಮೇಡಂ, ನನಗೆ ಮದುವೆ ಆಗಿ 10 ವರ್ಷ. ಇವಾಗ 9 ವರ್ಷದ ಹೆಣ್ಣು ಮಗು ಇದೆ. ನನಗೆ ಈಗ ಗಂಡು ಮಗು ಬೇಕು. ಹೇಗೆ ಅಂತ ಹೇಳಿ ಮೇಡಂ?

ನಿಮ್ಮ ಆಸೆ ಮಾನವ ಸಹಜಗುಣ. ಅದು ತಪ್ಪಲ್ಲವಾದರೂ ಗಂಡು ಮಗು ಪಡೆಯಲು ಸಲಹೆ ಕೊಡುವುದು ಮಾತ್ರ ತಪ್ಪಾಗುತ್ತದೆ ಹಾಗೂ ಪಿಸಿಪಿಎನ್‌ಡಿಟಿ ಕಾಯ್ದೆ ಪ್ರಕಾರ ಕಾನೂನುಬಾಹಿರ. ಅಷ್ಟಕ್ಕೂ ಯಾವ ಮಗುವೇ ಆಗಲಿ ಕೈಕಾಲು ಅಂಗಾಗಳು ಸರಿಯಿದ್ದು ಆರೋಗ್ಯವಂತ ಮಗು ಜನಿಸಲಿ ಎಂದು ಸದಾಬಯಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT