ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟದ ಆಟವಾಡಿ ಫಿಟ್‌ನೆಸ್‌ ಕಾಪಾಡಿಕೊಳ್ಳಿ

Last Updated 21 ಜುಲೈ 2019, 19:30 IST
ಅಕ್ಷರ ಗಾತ್ರ

ಶಾಲಾ ಕಾಲೇಜು ಮುಗಿದು ಕೆಲಸಕ್ಕೆ ಸೇರುತ್ತಿದ್ದಂತೆಯೇ ಆಟಗಳಿಂದ ವಿಮುಖರಾಗುತ್ತೇವೆ. ದೇಹದಲ್ಲಿ ಬೊಜ್ಜು ತುಂಬುತ್ತಿದೆ ಎನ್ನಿಸಿದಾಗ ಫಿಟ್‌ನೆಸ್‌ಗಾಗಿ ಜಿಮ್‌ಗೆ ಹೋಗುತ್ತೇವೆ. ಚಿಕ್ಕಂದಿನಲ್ಲಿ ಆಡಿದ ಆಟಗಳನ್ನು ಮರೆಯುತ್ತೇವೆ. ಕಲಿತ ಇಷ್ಟದ ಆಟವನ್ನು ಬಿಟ್ಟು ಜಿಮ್‌ನಲ್ಲಿ ದೇಹವನ್ನು ಹುರಿಗಟ್ಟಿಸಲು ಹೆಣಗಾಡುವುದು ಸಾಮಾನ್ಯವಾಗುತ್ತದೆ. ಕಷ್ಟಪಟ್ಟು ಫಿಟ್‌ನೆಸ್‌ ಕಾಪಾಡಿಕೊಳ್ಳಬೇಕೆ?

ಇದೇ ಪ್ರಶ್ನೆ ಐದು ವರ್ಷದ ಹಿಂದೆಬೆಂಗಳೂರಿಗೆ ಕೆಲಸ ಅರಸಿ ಬಂದ ಐವರು ಟೆಕಿಗಳಿಗೆ ಕಾಡಲು ಶುರುವಾಯಿತು. ಇವರೂ ಎರಡು ವರ್ಷ ಜಿಮ್‌ನಲ್ಲಿ ದೇಹ ದಂಡಿಸಿದವರೇ. ಆದರವರಿಗೆ ಅದು ಕಷ್ಟವಾಯಿತು. ಚಿಕ್ಕಂದಿನಲ್ಲಿ ಆಡಿದ ಆಟಗಳನ್ನು ಎಲ್ಲರೂ ಈ ಬೆಂಗಳೂರು ನಗರದಲ್ಲಿ ಆಡುವಂತೆ ಮಾಡಬೇಕು ಎಂಬ ಆಲೋಚನೆ ಹೊಳೆದದ್ದೇ ಆಂಡ್ರಾಯ್ಡ್‌ ಆ್ಯಪ್‌ ಒಂದನ್ನು ರೂಪಿಸಲು ಕಾರಣವಾಯಿತು. ಇದೀಗ ಈ ಆ್ಯ‍ಪ್‌ ಬಳಸುವವರ ಸಂಖ್ಯೆ 10 ಲಕ್ಷ ದಾಟಿದೆ. ಬೆಂಗಳೂರಿನಲ್ಲಿಯೇ 5 ಲಕ್ಷ ಬಳಕೆದಾರರಿದ್ದಾರೆ.

ದಾನಿಶ್‌ ಸುಹೈಲ್‌, ಕಾರ್ತಿಕ್‌ ಐಜೂರ್‌, ಅಮಿತ್‌ ರೋಶನ್‌, ಎ.ಎನ್‌.ಉಮಾಶಂಕರ್‌ ಮತ್ತು ಗೌರವ್‌ಜಿತ್‌ಸಿಂಗ್‌ ಟೆಕಿಗಳು ಆರಂಭಿಸಿದ ಪ್ಲೇಯೊ ಆ್ಯಪ್‌ ಫಿಟ್‌ನೆಸ್‌ ಪ್ರಿಯರನ್ನು ಒಂದು ಮಾಡುತ್ತಿದೆ. ನವೋದ್ಯಮದ (ಸಾರ್ಟ್ ಅಪ್) ರಾಜಧಾನಿ ಬೆಂಗಳೂರಿನಲ್ಲಿ ಕ್ರೀಡಾ ಸಂಸ್ಕೃತಿಯನ್ನು ಬೆಳಸಲು ಕಾರಣವಾಗಿದೆ. ಇದೀಗ ಬೆಂಗಳೂರಿನಿಂದ ಮೈಸೂರು, ಮಂಗಳೂರು, ಹುಬ್ಬಳ್ಳಿ ನಗರಗಳಲ್ಲೂ ವಿಸ್ತರಿಸುತ್ತಿದೆ. ಹೈದರಾಬಾದ್, ಚೆನ್ನೈ, ದೆಹಲಿ, ಕೊಚ್ಚಿ, ತಿರುವನಂತಪುರ, ಪುಣೆ ಸೇರಿದಂತೆ ಭಾರತದ 9 ನಗರಗಳಲ್ಲದೇ, ದೂರದ ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈ, ಅಬುಧಾಬಿ ಮತ್ತು ಶಾರ್ಜಾಗಳ ಫಿಟ್‌ನೆಸ್ ಪ್ರಿಯರನ್ನು ಒಂದಾಗಿಸಿದೆ.

ಪ್ಲೇಯೊ ವಿಶೇಷ:ಬ್ಯಾಡ್ಮಿಂಟನ್‌ ಆಟ ಇಷ್ಟವಿದೆ ಎಂದುಕೊಂಡರೆ, ಆಡಲು ಸರಿಸಮನಾದ ಎದುರಾಳಿ ನಮಗೆ ಬೇಕು. ಅಂಗಳವಂತೂ ಬೇಕೇ ಬೇಕು. ನಾವು ಬಯಸಿದ ಸಮಯವೂ ಆಗಿರಬೇಕು. ಪ್ಲೇಯೊ ಆ್ಯಪ್‌ನಲ್ಲಿ ಇವೆಲ್ಲ ಮಾಹಿತಿಯೂ ಇರುತ್ತದೆ. ಬುಕ್‌ ಮಾಡಿದರಷ್ಟೇ ಸಾಕು. ನಾವು ಇರುವ ಜಾಗಕ್ಕೆ ಸಮೀಪದ ಅಂಗಳದಲ್ಲಿಯೇ ನಮ್ಮ ಇಷ್ಟದ ಆಟ ಆಡಬಹುದು.

ಸಹಪಾಠಿಯನ್ನು ಹುಡುಕಿಕೊಡುತ್ತದೆ: ಇಷ್ಟದ ಆಟಕ್ಕೆ ಉತ್ತಮ ಪೈಪೋಟಿ ನೀಡುವ ಸಹಪಾಠಿಯನ್ನೇ ಆರಿಸಿಕೊಡುವ ಪ್ಲೇಯೊ ಹೊಸ ಸ್ನೇಹವನ್ನು ಸಂಪಾದಿಸಿಕೊಡುತ್ತದೆ. ವಿವಿಧ ಭಾಷೆಯ, ವಿವಿಧ ಪ್ರದೇಶದ ಜನರೂ ನಿಮ್ಮೊಂದಿಗೆ ಆಡುತ್ತಾರೆ. ಯಾವ ಹಂತದ ಆಟಗಾರ, ಎಷ್ಟು ವರ್ಷದ ಆಟದ ಅನುಭವ ಇದೆ ಎಂಬ ಮಾಹಿತಿ ಇದರಲ್ಲಿ ಇರುತ್ತದೆ. ಇದರ ಆಧಾರದ ಮೇಲೆ ಎದುರಾಳಿ ಆಟಗಾರರನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು. ಆಟವಾಡಿದ ನಂತರ ನಮ್ಮ ಸಾಮರ್ಥ್ಯವನ್ನೂ ಇದು ಅಳೆಯುತ್ತದೆ. ಹೀಗಾಗಿ ಸಮಬಲದ ಸಹಪಾಠಿಯನ್ನು ಹುಡುಕಿಕೊಳ್ಳಬಹುದು.

ಬಿಡುವಿನ ಸಮಯ ಫಿಟ್‌ನೆಸ್‌ಗಾಗಿ
ಬಹುತೇಕ ಬೆಂಗಳೂರಿಗರು ತಾವು ಪಾಳಿ ಕೆಲಸ ಮುಗಿಸಿ ಹೋಗುವಾಗ ಆಟವಾಡಿಯೇ ಮನೆಗೆ ಹೋಗುತ್ತಾರೆ. ವಾರಂತ್ಯದಲ್ಲಿ ಮನರಂಜನೆಯ ಜೊತೆಗೆ ಫಿಟ್‌ನೆಸ್‌ಗೂ ಒತ್ತು ನೀಡುತ್ತಾರೆ. ಬಿಡುವಿನ ಸಮಯವನ್ನುಫಿಟ್‌ನೆಸ್‌ಗೆ ಮೀಸಲಿಡುವುದಕ್ಕೆ ಪ್ಲೇಯೊ ಪ್ರೋತ್ಸಾಹಿಸುತ್ತದೆ. ಸಿಗುವ ಉಲ್ಲಾಸ, ಗೆಳೆತನ ಬಹುಕಾಲದವರೆಗೆ ಮುಂದುವರಿಯುವಂತೆ ಇದು ಮಾಡುತ್ತಿದೆ.

ತರಬೇತುದಾರರೂ ಲಭ್ಯ: ಆಟಕ್ಕೆ ಬೇಕಾಗುವ ಪರಿಕರ ಮಾಹಿತಿಯನ್ನೂ ಇದು ನೀಡುತ್ತದೆ. ಅಲ್ಲದೆ ತರಬೇತುದಾರರನ್ನೂ ಒದಗಿಸುತ್ತದೆ. ಹಲವು ಅಕಾಡೆಮಿಗಳು‍ಪ್ಲೇಯೊ ಆ್ಯಪ್‌ ಮೂಲಕವೇ ತಮ್ಮ ಅಂಗಳವನ್ನು ಕ್ರೀಡಾಪ್ರೇಮಿಗಳಿಂದ ತುಂಬಿಸಿಕೊಂಡಿವೆ. ಸೈನಾ ನೆಹ್ವಾಲ್‌ ಮೊದಲಾದ ಬ್ಯಾಡ್ಮಿಂಟನ್‌ ತಾರೆಗಳೂ ಪ್ಲೇಯೊ ಆಯೋಜಿಸುವ ಟೂರ್ನಿಗಳಲ್ಲಿ ಅತಿಥಿಗಳಾಗಿ ಗೆದ್ದವರಿಗೆ ಪ್ರಶಸ್ತಿ, ಬಹುಮಾನ ನೀಡಿದ್ದಾರೆ.

ಬೆಂಗಳೂರಿನಲ್ಲಿ ಐದು ಲಕ್ಷ ಬಳಕೆದಾರರು: ಬೆಂಗಳೂರಿನಲ್ಲಿಯೇ 5 ಲಕ್ಷ ಆ್ಯಪ್‌ ಬಳಸುವವರಿದ್ದು, ವಾರದ ಕೊನೆಯಲ್ಲಿ ಏನೆಂದರೂ 4,000 ಮಂದಿ ಆಡಲು ಬುಕ್ ಮಾಡುತ್ತಾರೆ. ಮಿಕ್ಕ ದಿನಗಳಲ್ಲಿ 2ರಿಂದ ಎರಡೂವರೆ ಸಾವಿರ ಮಂದಿ ಪ್ಲೇಯೊ ಮೂಲಕ ಆಟಗಳಾದ ಬ್ಯಾಡ್ಮಿಂಟನ್‌, ಟೆನಿಸ್‌, ಪುಟ್ಬಾಲ್‌, ಸ್ಕ್ವಾಷ್ ಮತ್ತು ಕ್ರಿಕೆಟ್‌ ಇನ್ನಿತರ ಆಟಗಳನ್ನು ಆಡುತ್ತಾರೆ.

ಸಾರ್ವಜನಿಕ ಆಟದ ಅಂಗಳಿರುವ ಕುರಿತು ಮಾಹಿತಿ ನೀಡುವ ಇದೂ ಜೊತೆಗಾರರನ್ನು ಹುಡುಕಿಕೊಡುತ್ತದೆ. ಇದಕ್ಕೆ ಹಣವನ್ನು ಕಟ್ಟಬೇಕಿಲ್ಲ. ಆದರೆ, ಖಾಸಗಿ ಅಂಗಳಗಳಿಗೆ ಮಾತ್ರ ಹಣ ಕೊಟ್ಟು ಆಡಬೇಕಾಗುತ್ತದೆ.

ಬ್ಯಾಡ್ಮಿಂಟನ್‌ನಂತಹ ಚಿಕ್ಕ ಅಂಗಳಕ್ಕೆಗಂಟೆಗೆ ₹ 300, ದೊಡ್ಡದಾದ ಫುಟ್ಬಾಲ್‌ ಅಂಗಳಕ್ಕೆ ₹ 1500 ನೀಡಿ ಬುಕ್ ಮಾಡಬಹುದು. ಆಟ,ಕ್ರೀಡಾಂಗಣದ ವಿಸ್ತೀರ್ಣದ ಆಧಾರದ ಮೇಲೆ ಬೆಲೆಗಳೂ ಬದಲಾಗುತ್ತವೆ.ಹಣ ಕೊಟ್ಟು ಆಡುವುದರಿಂದ ಸಮಯದ ಸದುಪಯೋಗವಾಗುತ್ತದೆ. ‘ಎರಡು ವರ್ಷಗಳಿಂದ ಪ್ಲೇಯೊ ಬಳಸುತ್ತಿದ್ದೇನೆ. ನಾನೂ ಇದುವರೆಗೂ ಹಣ ಕೊಟ್ಟು ಆಡಿಲ್ಲ.ಆದರೆ, ಪ್ಲೇಯೊ ಹೊಸ ಸ್ನೇಹಿತರನ್ನು ಹುಡುಕಿಕೊಟ್ಟಿದೆ. ಸಾರ್ವಜನಿಕ ಆಟದ ಮೈದಾನಗಳಲ್ಲಿ ಜೊತೆಯಾದ 10 ಮಂದಿ ಈಗ ಫುಟ್ಬಾಲ್‌ ಆಡುತ್ತಿದ್ದೇವೆ’ ಎನ್ನುತ್ತಾರೆ ಬೆಂಗಳೂರಿನ ಸಾಫ್ಟ್‌ವೇರ್‌ ಕಂಪನಿ ಉದ್ಯೋಗಿಯಾಗಿರುವ ರಾಹುಲ್‌.

ಬ್ಯಾಡ್ಮಿಂಟನ್ ಆಡುವವರೇ ಹೆಚ್ಚು: ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಅತಿ ಹೆಚ್ಚು ಬ್ಯಾಡ್ಮಿಂಟನ್ ಅಂಗಳಗಳಿವೆ. ಬೆಂಗಳೂರಿನ ಫಿಟ್‌ನೆಸ್ ಪ್ರಿಯರು ಫಿಟ್ ಆಗಿರಲುಬ್ಯಾಡ್ಮಿಂಟನ್ ಆಯ್ಕೆ ಮಾಡಿಕೊಳ್ಳುತ್ತಾರೆ. ತಿಂಗಳಿಗೆ ಅತಿ ಹೆಚ್ಚು ಬುಕಿಂಗ್ ಆಗುವುದು ಬ್ಯಾಡ್ಮಿಂಟನ್‌ ಆಟಕ್ಕೆ ವಾರ್ಷಿಕ ಸುಮಾರು 2 ಲಕ್ಷ ಬುಕ್‌ ಆಗುತ್ತವೆ. ನಂತರದಲ್ಲಿ ಫುಟ್ ಬಾಲ್ (25 ಸಾವಿರ), ಈಜು (15 ಸಾವಿರ), ಕ್ರಿಕೆಟ್ (5 ಸಾವಿರ) , ಟೇಬಲ್ ಟೆನಿಸ್ (3 ಸಾವಿರ), ಪೊಲೊ (1,500) ಮತ್ತು ಟೆನಿಸ್ (1 ಸಾವಿರ) ಸ್ಥಾನ ಪಡೆದಿವೆ.

ಬೆಂಗಳೂರಿನಿಂದ ಇತರೆಡೆಗೆ ವಿಸ್ತರಿಸುತ್ತಿರುವಪ್ಲೇಯೊ ಗೂಗಲ್‌ ಪ್ಲೇ ಸ್ಟೋರ್‌, ಆ್ಯಪಲ್‌ನ ಆ್ಯಪ್‌ ಸ್ಟೋರ್‌ನಲ್ಲಿ ಲಭ್ಯವಿದೆ. ಇನ್ನು ಸ್ನೇಹಿತರಿಗಾಗಿ, ಅವರ ಸಮಯಕ್ಕಾಗಿ ಕಾಯಬೇಕಿಲ್ಲ. ಎಲ್ಲೆಂದರಲ್ಲಿ, ಯಾವಾಗ ಬೇಕಾದರೂ ಅಂಗಳಕ್ಕೆ ಧುಮುಕಬಹುದು. ಫಿಟ್‌ನೆಸ್‌ ಕಾಪಾಡಿಕೊಳ್ಳಬಹುದು.

‘ಇಷ್ಟದ ಆಟ ಆಡಬಹುದು’
ಸ್ಪೋರ್ಟ್ಸ್ ಗಾಗಿ ಜಿಮ್‌ಗೆ ಹೋದರೆ ಅದು ಒಳ್ಳೆಯದು. ಫಿಟ್‌ನೆಸ್‌ಗಾಗಿಯೇ ಜಿಮ್‌ಗೆ ಹೋದರೆ ಅದು ಅಸ್ವಾಭಾವಿಕ. ಜಿಮ್‌ಗೆ ಹೋಗಿ, ಡಯಟ್‌ ಮಾಡುವಾಗೆಲ್ಲ ಸ್ವಲ್ಪ ಅಡ್ಡ ಪರಿಣಾಮಗಳೂ ಆಗುತ್ತವೆ. ಲವಲವಿಕೆ ಇರುವುದಿಲ್ಲ. ಯಾಕೆ ನಮ್ಮ ಇಷ್ಟದ ಆಟವಾಡಿ ಫಿಟ್ ನೆಸ್ ಕಾಪಾಡಿಕೊಳ್ಳಬಾರದು ಎನಿಸಿತು. ಅದಕ್ಕಾಗಿ ಪ್ಲೇಯೊ ರೂಪಿಸಿದೆವು. ಅಕಾಡೆಮಿಗಳ ಪಟ್ಟಿ ತಯಾರಿಸಿದ ನಾವು, ಅಂಗಳಗಳು, ಕ್ರೀಡಾ ಕ್ಲಬ್ ಗಳು ಗುರುತು ಹಾಕಿದೆವು. ಈಗ ಆಟ ಆಡುವವರು ಹತ್ತಿರದಲ್ಲೇ ಇರುವ ಅಂಗಳಕ್ಕೆ ಹೋಗಬಹುದು ಫಿಟ್ ಆಗಬಹುದು ಎನ್ನುತ್ತಾರೆ ಪ್ಲೇಯೊನ ದಾನೀಶ್‌ ಸುಹೈಲ್‌.

‘ಇಷ್ಟು ಜನ ಸೇರಿಸಿದ್ದೇವಲ್ಲ, ಅದೇ ಖುಷಿ’
ಆರಂಭದಲ್ಲಿ 35 ಅಂಗಳಗಳು ಮಾತ್ರ ಲಭ್ಯವಿದ್ದವು. ಇದೀಗ ಕ್ರೀಡಾಂಗಣಗಳ ಸಂಖ್ಯೆ 300 ದಾಟಿದೆ. ಖಾಲಿ ಸೈಟುಗಳಲ್ಲಿ ಬ್ಯಾಡ್ಮಿಂಟನ್ ಅಂಗಳಗಳು ತಲೆ ಎತ್ತಿವೆ. ಹಲವು ಅಕಾಡೆಮಿಗಳಿಗೆ ಹೆಚ್ಚು ಜನರು ಬರುತ್ತಿದ್ದಾರೆ. ಬೆಳ್ಳಂದೂರು, ಮಾರತಹಳ್ಳಿ ಕಡೆ ಹೆಚ್ಚು ಅಂಗಳಗಳು ನಿರ್ಮಾಣವಾಗಿವೆ. ಇಲ್ಲಿನ ಸಾಫ್ಟ್‌ ವೇರ್ ಉದ್ಯೋಗಿಗಳು ಬಿಡುವಿನ ವೇಳೆಯಲ್ಲಿ, ಸಂಜೆ ವೇಳೆಯಲ್ಲಿ ಆಟವಾಡುವುದು ಸಾಮಾನ್ಯವಾಗಿದೆ. ಉದಾಹರಣೆಗೆ ಕಾಡುಬೀಸನಹಳ್ಳಿಯಲ್ಲಿ ಇಬ್ಬರಿಂದ ಆರಂಭವಾದ ಬ್ಯಾಡ್ಮಿಂಟನ್ ಆಟಕ್ಕೆ ಈಗ 80 ಮಂದಿ ಜೊತೆಯಾಗಿದ್ದಾರೆ. ‘ಕಾಡುಬೀಸನಹಳ್ಳಿ ಬ್ಯಾಡ್ಮಿಂಟನ್ ಕ್ಲಬ್’ ಎಂಬ ವಾಟ್ಸಾಪ್ ಗುಂಪು ರಚಿಸಿಕೊಂಡಿದ್ದಾರೆ. ನಿತ್ಯ ಆಟವಾಡುತ್ತಾರೆ. ಇವರಲ್ಲಿ ಹೊರ ರಾಜ್ಯದವರೂ ಇದ್ದಾರೆ. ಇಷ್ಟು ಜನರನ್ನು ಸೇರಿಸಿದೆವೆಲ್ಲ ಎಂಬ ಖುಷಿ ಇದೆ ಎನ್ನುತ್ತಾರೆ ಪ್ಲೆಯೋ ಸ್ಥಾಪಕರಲ್ಲಿ ಒಬ್ಬರಾದ ಕಾರ್ತಿಕ್ ಐಜೂರು.

*

ಆಡುವವರು ಯಾರಿಗೂ ಕಾಯಬೇಕಿಲ್ಲ. ಹತ್ತಿರದಲ್ಲಿರುವ ಕ್ರೀಡಾ ಅಂಗಳವನ್ನು ಗುರುತಿಸಿಕೊಡುವ ಇದೂ ಜೊತೆಗಾರರನ್ನು ಹುಡುಕಿಕೊಡುತ್ತದೆ. ಕ್ರೀಡಾ ಬಾಂಧವ್ಯವನ್ನು ಬೆಸೆಯುತ್ತಿದೆ. ಪ್ಲೇಯೊ ಬಂದ ನಂತರ ಅಕಾಡೆಮಿಗಳನ್ನು, ಅಂಗಳಗಳನ್ನು ಹುಡುಕುವುದು ಕ್ರೀಡಾ ಪ್ರಿಯರಿಗೆ ಸುಲಭವಾಗಿದೆ.
-ಜಗದೀಶ್, ಕೋಚ್, ಜೆಪಿ ಸ್ಪೋರ್ಟ್ಸ್

*
ಫಿಟ್‌ನೆಸ್‌ ಪ್ರಜ್ಞೆ ಇರುವ ನಗರಗಳಲ್ಲಿ ಬೆಂಗಳೂರು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಏಕೆಂದರೆ ಅತಿಹೆಚ್ಚು ಫಿಟ್‌ನೆಸ್‌ ಕೇಂದ್ರಗಳು ಇರುವುದು ಇಲ್ಲಿಯೇ. ಪ್ಲೇಯೊ ಬಂದ ನಂತರ ಹೆಚ್ಚು ಜನರು ಆಡಲು ಬರುತ್ತಿದ್ದಾರೆ. ಕ್ರೀಡಾ ಸಂಸ್ಕೃತಿ ಬೆಳೆಯುತ್ತಿದೆ.
-ರಾಘವನ್, ಕೋಚ್, ಪ್ರೀಮಿಯರ್ ಬ್ಯಾಡ್ಮಿಂಟನ್ ಅಕಾಡೆಮಿ

ಪ್ಲೇಯೊ ಸ್ಥಾಪಕ ಸದಸ್ಯರು
ಪ್ಲೇಯೊ ಸ್ಥಾಪಕ ಸದಸ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT