ಗುರುವಾರ , ಜೂನ್ 24, 2021
22 °C

ತೋಟದಿಂದ ತಟ್ಟೆಗೆ ಆರೋಗ್ಯದ ಕೊಂಡಿಗಳು

ರಘು ಕೆ.ಸಿ. Updated:

ಅಕ್ಷರ ಗಾತ್ರ : | |

ಭತ್ತದ ಗದ್ದೆಯಲ್ಲಿ ನೀರು ಪ್ರವಾಹರೂಪದಲ್ಲಿ ಹಾಯಿಸುವುದರಿಂದ ಜನರಲ್ಲಿ, ಅದರಲ್ಲೂ ಮಹಿಳೆ ಮತ್ತು ಮಕ್ಕಳಲ್ಲಿ ರಕ್ತಹೀನತೆ ಹೆಚ್ಚಾಗುತ್ತದೆ ಎಂದು ‘ಸೈನ್ಸ್ ಅಡ್ವಾನ್ಸಸ್‌’ ಎಂಬ ವೈಜ್ಞಾನಿಕ ನಿಯತಕಾಲಿಕದಲ್ಲಿನ ವರದಿಯೊಂದು ತಿಳಿಸುತ್ತದೆ. ಭಾರತದೇಶ ತಲಾವಾರು ನೀರು ಸಂಗ್ರಹಣೆಯಲ್ಲಿ ಜಾಗತಿಕ ಮಟ್ಟದಲ್ಲಿ ಅತ್ಯಂತ ಕಡಿಮೆ ಸ್ಥಾನದಲ್ಲಿದ್ದರೂ ಕೂಡ, ಕೃಷಿಯಲ್ಲಿ ಅತಿಹೆಚ್ಚು ನೀರು ಬಳಕೆ ಮಾಡುವ ದೇಶವಾಗಿದೆ. ನಮ್ಮ ದೇಶದಲ್ಲಿ ಭತ್ತದ ಗದ್ದೆಯು ಕೊಯ್ಲಿಗೆ ಬರುವ ಮುನ್ನ, ಒಂದೊಂದು ಪೈರಿಗೂ ತನ್ನ ವಿಸ್ತೀರ್ಣದ ಆರು ಅಡಿಯಷ್ಟು ನೀರನ್ನು ಹಾಯಿಸಿರುತ್ತೇವೆ. ನೀರಿನ ವಿಷಯದಲ್ಲಿ ಶ್ರೀಮಂತ ದೇಶಗಳಾಗಿರುವ ರಷ್ಯಾ ಮತ್ತು ಅಮೆರಿಕ ಕೂಡ ನೀರನ್ನು ಈ ರೀತಿ ದುರ್ಬಳಕೆ ಮಾಡುವುದಿಲ್ಲ. ಹೆಚ್ಚು ನೀರಿನ ಬಳಕೆಯಾಗುವುದರಿಂದ ಮಣ್ಣಿನ ಮೇಲ್ಪದರದ ಸವಕಳಿದು ಪೌಷ್ಟಿಕಾಂಶಗಳು ಕೊಚ್ಚಿ ಸಮುದ್ರವನ್ನು ಸೇರುತ್ತವೆ. ಹೀಗಾಗಿ ಆಹಾರಧಾನ್ಯಗಳಲ್ಲಿ ಕಬ್ಬಿಣ, ಸತು ಮತ್ತು ಪ್ರೋಟಿನ್ ಅಂಶಗಳು ಕಡಿಮೆಯಾಗುತ್ತವೆ.

ನಮ್ಮಲ್ಲಿ ಶೇ 50ರಷ್ಟು ಮಕ್ಕಳು ಮತ್ತು ಶೇ 60ರಷ್ಟು ಮಹಿಳೆಯರು ರಕ್ತಹೀನತೆಯಿಂದ ನರಳುತ್ತಿದ್ದಾರೆ. ಹೊಲದಲ್ಲಿನ ನೀರಿನ ದುರುಪಯೋಗಕ್ಕೂ, ನಮ್ಮ ಅನಾರೋಗ್ಯಕ್ಕೂ ಇರುವ ಸಂಬಂಧಗಳನ್ನು ಗಮನಿಸುವುದು ಮುಖ್ಯ. ಆಲ್ಬರ್ಟ್ ಹೋವರ್ ಅನೇಕ ವರ್ಷಗಳ ಹಿಂದೆ ಮಣ್ಣು ಮತ್ತು ಆರೋಗ್ಯ (Soil and Health) ಎಂಬ ಪುಸ್ತಕವನ್ನು ಬರೆದಿದ್ದ. 40 ವರ್ಷಗಳ ಹಿಂದೆ ಮಣ್ಣಿನಲ್ಲಿ 4 ಲಘು ಪೋಷಕಾಂಶಗಳ ಕೊರತೆ ಇದ್ದಿದ್ದು, ಇಂದು 14 ಲಘು ಪೋಷಕಾಂಶಗಳ ಕೊರತೆ ಕಂಡುಬರುತ್ತಿದೆ. ಇತ್ತ ಸತುವಿನ ಸಿರಪ್‌ ಮಾರುಕಟ್ಟೆಯ ಔಷಧ ಅಂಗಡಿಗಳಲ್ಲಿ ವಹಿವಾಟು ₹ 4000 ಕೋಟಿಗೆ ಏರಿದೆ. ಮಣ್ಣಿನಿಂದ ಆಹಾರಧಾನ್ಯಗಳಲ್ಲಿ ಪಡೆದುಕೊಳ್ಳಬೇಕಾದ ಪೋಷಕಾಂಶ
ಗಳನ್ನು ರಾಸಾಯನಿಕ ರೂಪದ ಔಷಧವಾಗಿ ವೈದ್ಯರ ಚೀಟಿಯ ಮೂಲಕ, ಅಂಗಡಿಗಳಲ್ಲಿ ಪಡೆದುಕೊಳ್ಳುವುದಾಗಿದೆ. ಆರೋಗ್ಯವನ್ನು ಕೃಷಿ, ಅದರಲ್ಲೂ ಮಣ್ಣಿನ ನಿರ್ವಹಣೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಹೀಗಲ್ಲದೇ ಕೃಷಿಯೇ ಬೇರೆ, ವೈದ್ಯಶಾಸ್ತ್ರವೇ ಬೇರೆ ಎಂದು ಹೊರಟರೆ ಆಗ ಸಮಗ್ರ ದೃಷ್ಟಿ ಇಲ್ಲದಂತಾಗುತ್ತದೆ. ಒಟ್ಟಾರೆ ಕೃಷಿನೀತಿ, ಬೆಂಬಲ ಬೆಲೆ, ಆಹಾರರಾಜಕಾರಣ – ಇವು ನಮ್ಮ ಆರೋಗ್ಯದ ಮೇಲೆ ಅಪಾರವಾದ ಪರಿಣಾಮ ಬೀರುತ್ತಿವೆ.

ಇತ್ತೀಚೆಗೆ ಉತ್ತರಪ್ರದೇಶದ ಚುನಾವಣಾ ಫಲಿತಾಂಶವನ್ನು ಜಿನ್ನಾ ಮತ್ತು ಗನ್ನಾ ನಡುವಿನ ಹೋರಾಟ ಎಂದು ವ್ಯಾಖ್ಯಾನಿಸಲಾಗಿತ್ತು. ಅಂದರೆ, ಧರ್ಮರಾಜಕಾರಣ ಮತ್ತು ಕಬ್ಬಿನ ಬೆಲೆ ವಿಷಯದ ಆಧಾರದ ಮೇಲೆ ಚುನಾವಣಾ ಫಲಿತಾಂಶ ನಿರ್ಧಾರವಾಯಿತು ಎಂದು ಅರ್ಥ. ಸರ್ಕಾರವು ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಉದ್ಯಮವನ್ನು ಪೋಷಣೆ ಮಾಡಿದಷ್ಟು ಬೇರಾವ ಬೆಳೆಯನ್ನು ಮಾಡುವುದಿಲ್ಲ ಎನ್ನಬಹುದು. ಹೆಕ್ಟೇರ್‌ವಾರು  ಆದಾಯವನ್ನು ಪರಿಗಣಿಸಿ, ಇಂದಿಗೂ ಬೇರೆ ಬೆಳೆಗಳನ್ನು ಗಮನಿಸಿದರೆ, ಕಬ್ಬಿನ ಆದಾಯವನ್ನು ಮೀರುವ ಇತರೆ ಯಾವುದೇ ಬೆಳೆಗಳಿಲ್ಲವೇನೋ? ಕಬ್ಬಿನ ರಕ್ಷಣೆಗಾಗಿ ಈಗ ತನ್ನದೇ ನೀತಿ ನಿಯಮಗಳಿಗೆ ವಿರುದ್ಧವಾಗಿ ಜಿ.ಎಸ್.ಟಿ. ತೆರಿಗೆ ಮೇಲೆ ಹೊಸ ತೆರಿಗೆಯನ್ನು ವಿಧಿಸಲು ಸರ್ಕಾರ ಹೊರಟಿದೆ. ಇದರಿಂದ ಇನ್ನೂ ಹೆಚ್ಚು ಕಬ್ಬು ಉತ್ಪಾದನೆಗೆ ಪ್ರೋತ್ಸಾಹಿಸಿದಂತೆ ಆಗಿದೆ. ಇದಾಗಲೇ 35ಕೋಟಿ ಟನ್ ಕಬ್ಬು ಬೆಳೆದು, 3.5 ಕೋಟಿ ಟನ್ ಸಕ್ಕರೆ ಉತ್ಪಾದಿಸಿ, ಅದರಿಂದ ಬಂದ ಉಪ–ಉತ್ಪನ್ನ ಸಾರಾಯಿಯನ್ನು ಹಂಚಿ, ಅದರಿಂದ ಬಂದ ಅಬಕಾರಿ ತೆರಿಗೆಯಿಂದ ಸರ್ಕಾರ ನಡೆಸುವಂತಾಗಿದೆ! ಇತ್ತ, ಸಕ್ಕರೆ ಸಾರಾಯಿಗಳಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಸಕ್ಕರೆ ಒಂದು ರೀತಿಯಲ್ಲಿ ಮಾದಕವಸ್ತುವಿನ ಹಾಗೆ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವುದರಿಂದ ಸಿದ್ಧ ಆಹಾರಪದಾರ್ಥಗಳನ್ನು ತಯಾರಿಸುವ ಕಂಪನಿಗಳು ಅತಿ ಹೆಚ್ಚು ಬಳಸುವ ಪದಾರ್ಥವೇ ಸಕ್ಕರೆ. ಈಗ ಆಹಾರ ಸುರಕ್ಷಣಾ ಮತ್ತು ಗುಣಮಟ್ಟ ಸಂರಕ್ಷಣ ಇಲಾಖೆ ಈ ದೈತ್ಯ ಕಂಪನಿಗಳಿಂದ ಸಕ್ಕರೆಯನ್ನು ಕಡಿಮೆ ಬಳಸುವುದರ ಬಗ್ಗೆ ಭರವಸೆಯನ್ನು ಪಡೆದಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ, ವ್ಯಕ್ತಿಯೊಬ್ಬನಿಗೆ ದಿನಕ್ಕೆ 25 ಗ್ರಾಂ ಸಕ್ಕರೆ ಸಾಕು ಎಂದು. ಆದರೆ ಭಾರತೀಯರು ಸರಾಸರಿ 125 ಗ್ರಾಂ ಸಕ್ಕರೆಯನ್ನು ಸೇವಿಸುತ್ತಿದ್ದಾರೆ. ನಮಗೆ ಬೇಕಾಗಿರುವುದು ಸುಮಾರು 1ಕೋಟಿ ಟನ್ ಸಕ್ಕರೆ. ಆದರೆ ಈಗ ಸುಮಾರು 3.5 ಕೋಟಿ ಟನ್ ಸಕ್ಕರೆಯನ್ನು ಬಳಸುತ್ತಿದ್ದೇವೆ. ಹೀಗಾಗಿ ಉತ್ತಮ ಆರೋಗ್ಯಕ್ಕೆ ನಮ್ಮ ಕೃಷಿ, ನೀರಿನ ಬಳಕೆ, ಬೆಳೆ ಪದ್ಧತಿ – ಇವುಗಳತ್ತ ಹೆಚ್ಚು ಗಮನವನ್ನು ಹರಿಸಬೇಕಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು