‘ಕೊನೆಗೂ ಮನುಷ್ಯನಿಗೆ ಏನು ಬೇಕು?’ ಎಂಬುದರಷ್ಟು ಕಠಿಣ ಪ್ರಶ್ನೆ ಮತ್ತೊಂದು ಇರಲಾರದು. ಯಾಕಾಗಿ ಜೀವನಪರ್ಯಂತ ಅನುದಿನವೂ ಈ ಪರಿಯ ಹೋರಾಟ ಮಾಡುವುದು? ಈ ಬದುಕಿನಿಂದ ಕಡೆಗೂ ಏನು ಪಡೆಯಬಲ್ಲೆವು? ನಿರಂತರ ಸಂತೋಷವಾದರೂ ಏಕೆ ಬೇಕು? ಏನಾದೀತು ಸಂತೋಷವಿಲ್ಲದಿದ್ದರೆ?

ನೆಮ್ಮದಿಯಾಗಿರಬೇಕೆಂದು ಎಲ್ಲರನ್ನೂ ಬಿಟ್ಟು ಎಲ್ಲೋ ದೂರ ಕಾಡಿಗೆ ಹೋಗುವುದು, ಒಂಟಿತನ ನೆಮ್ಮದಿಗೆ ಭಂಗ ಎಂದು ಮತ್ತೆ ನಾಡಿಗೆ ಮರಳುವುದು; ತೃಪ್ತಿಯಾಗಿ ಬದುಕಬೇಕೆಂದು ಪಡೆದದ್ದೇ ಅತೃಪ್ತಿಗೆ ದಾರಿಮಾಡಿಕೊಡುವುದು; ಮನೆ ಬೇಸರವೆಂದು ಪ್ರಪಂಚ ಪರ್ಯಟನೆಗೆ ಹೋಗುವುದು, ಆ ವಿಶಾಲ ಪ್ರಪಂಚದಲ್ಲಿ ಮತ್ತೆ ನಮ್ಮ ಬೆಚ್ಚಗಿನ ಗೂಡು ಕಂಡುಕೊಳ್ಳಲು ಪರಿತಪಿಸುವುದು; ಏನೋ ಮಹತ್ವವಾದದ್ದನ್ನು ಸಾಧಿಸಲು ಅತ್ಯುತ್ಸಾಹದಲ್ಲಿ ತೊಡಗಿಕೊಳ್ಳುವುದು, ಏನೂ ಮಾಡದೇ ‘ಸುಮ್ಮನೆ ಇರುವುದು’ ದೊಡ್ಡ ಸಾಧನೆ ಎಂದು ಅರಿಯುವುದು; ಒಟ್ಟಿನಲ್ಲಿ ನಾವು ಎಲ್ಲಿರುವೆವೋ, ಏನಾಗಿರುವೆವೋ, ಹೇಗಿರುವೆವೋ, ಯಾವುದನ್ನು ಗಟ್ಟಿಯಾಗಿ ಹಿಡಿದಿದ್ದೇವೋ ಅದನ್ನು ಬಿಟ್ಟು ಹೊರಡುವುದು, ‘ನನ್ನ ಬಳಿ ಏನಿತ್ತೋ ಅದೇ ನಿಜವಾಗಲೂ ನನಗೆ ಬೇಕಾದ್ದು’ ಎಂದರಿತು ಶುರುಮಾಡಿದ ಜಾಗಕ್ಕೇ ಬಂದು ಮುಟ್ಟುವುದು; ಆರೋಗ್ಯದ ಕಡೆಗಿನ ಪ್ರಯಾಣವೂ ಈ ಬಗೆಯದೇ ಹೌದು. ಆರೋಗ್ಯ ಎನ್ನುವುದನ್ನು ಒಂದು ದೈಹಿಕ ಸ್ಥಿತಿ ಎಂಬುದಾಗಿ ನೋಡದೆ ಅದನ್ನು ನಮ್ಮತನದ ಕಡೆಗಿನ ಪಯಣದಂತೆ, ಅಂದರೆ ಆರೋಗ್ಯವನ್ನು ಒಂದು ಆಧ್ಯಾತ್ಮಿಕ ಪ್ರವಾಸದಂತೆ ಕಂಡಾಗ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ನಮಗೆ ಅರ್ಥವಾಗುತ್ತಾ ಹೋಗುತ್ತವೆ.

ಯಾವ ಕೆಲಸ ಮಾಡುವುದರಿಂದ ನಮ್ಮ ಚೈತನ್ಯದ ಸಂಪೂರ್ಣ ವಿನಿಯೋಗ ವಾಗುವುದೋ ಆ ಕೆಲಸವನ್ನು ಮಾಡಿಕೊಂಡು, ಏನು ನಮ್ಮ ಪರಿಸರದಲ್ಲಿ ಬೆಳೆಯುವುದೋ ಅದನ್ನೇ ತಿಂದುಕೊಂಡು, ನಮ್ಮ ದೇಹ-ಮನಸ್ಸನ್ನು ಪ್ರೀತಿಯಿಂದ ಸ್ನೇಹದಿಂದ ಕಂಡು, ಪಡೆದದ್ದನ್ನು ಭಾಗ್ಯವೆಂದು ಸ್ವೀಕರಿಸಿ, ಬದುಕಿನಲ್ಲಿ ಇಲ್ಲದ್ದನ್ನು ಮನಸ್ಸಿನಲ್ಲೂ ಇರಗೊಡದೆ ಇರುವ ಸ್ವಾಭಾವಿಕ ಜೀವನಕ್ರಮದಿಂದ ನಾವೆಲ್ಲಾ ಎಷ್ಟು ದೂರಬಂದಿದ್ದೇವೆ ಎನ್ನುವುದನ್ನು ಯಾರೇನೂ ನಮಗೆ ಬಿಡಿಸಿ ಹೇಳಬೇಕಾಗಿಲ್ಲ.

ಮನುಷ್ಯ ಪ್ರಾಕೃತಿಕ ಸ್ಥಿತಿಯಿಂದ ದೂರಸರಿದು ಸಾಂಸ್ಕೃತಿಕ ನೆಲೆಗಟ್ಟನ್ನು ಕಂಡುಕೊಳ್ಳುವುದೇಕೋ? ಮತ್ತೆ ‘ಪ್ರಕೃತಿಯಿಂದ ನಾನು ದೂರವಾದೆ, ನಾನಲ್ಲೇ ಚೆನ್ನಾಗಿದ್ದೆ’ ಎಂದು ಕೊರಗುವುದೇಕೋ? ಪ್ರಕೃತಿಯಿಂದ ಸಂಸ್ಕೃತಿಯ ಕಡೆಗೆ ನಡೆಯುವ ಮನುಷ್ಯನಿಗೆ ಆರೋಗ್ಯ-ಅನಾರೋಗ್ಯಗಳ ಚಿಂತನೆ-ಚಿಂತೆ ಕಾಡದೇ ಇರುವುದಾದರೂ ಹೇಗೆ?

ಆರೋಗ್ಯದ ಕಡೆಗಿನ ಪಯಣವೆಂದರೆ ಅದು ನಮ್ಮನ್ನು, ನಾವು ಬದುಕುವ ರೀತಿಯನ್ನು, ಬದುಕಿನ ಬಗೆಗಿನ ಪ್ರೀತಿಯನ್ನು, ಕಟ್ಟಿಕೊಂಡ ಕಟ್ಟುಪಾಡುಗಳನ್ನು, ಬೆಳೆಸಿಕೊಂಡ ಚಿತ್ರವಿಚಿತ್ರ ಆಸೆಗಳನ್ನು, ಮೌಲ್ಯಗಳೆಂದುಕೊಂಡು ಹೊತ್ತು ತಿರುಗುವ ಆಲೋಚನೆಗಳನ್ನು, ಜೀವನಶೈಲಿ ಎಂದು ರೂಢಿಸಿಕೊಂಡ ಭಯಮೂಲವಾದ ಅಭ್ಯಾಸಗಳನ್ನು- ಈ ಎಲ್ಲವನ್ನೂ ಒಮ್ಮೆ ಸಮಗ್ರವಾಗಿ ಅವಲೋಕಿಸುವುದು, ಈ ಎಲ್ಲದರ ಹಿಂದಿರುವ ಉದ್ದೇಶಗಳನ್ನು, ಅವುಗಳ ಪರಿಣಾಮವನ್ನು ಕೂಲಂಕಷವಾಗಿ ಪರೀಕ್ಷಿಸಿಕೊಳ್ಳುವುದು ಎಂದರ್ಥ.

ದೈಹಿಕ-ಮಾನಸಿಕ ಆರೋಗ್ಯದ ಬಗ್ಗೆ ಇಂದು ನಮಗೆ ಹಿಂದೆಂದೂ ಇಲ್ಲದಷ್ಟು ಮಾಹಿತಿ ಸಿಗುತ್ತದೆ. ಸಾಮಾಜಿಕ ಮಾಧ್ಯಮದಲ್ಲಂತೂ ಆರೋಗ್ಯ ಸಂಬಂಧಿತ ವಿಷಯಗಳದ್ದೇ ಸಿಂಹಪಾಲು. ಯಾವುದು ಆರೋಗ್ಯ, ಯಾವುದು ಅನಾರೋಗ್ಯ, ಏನು ತಿನ್ನಬೇಕು, ಏನು ತಿನ್ನಬಾರದು, ಆರೋಗ್ಯಕ್ಕೆ ಪೂರಕವಾಗಿ ಏನು ಮಾಡಬೇಕು, ಏನು ಮಾಡಬಾರದು ಎಂದು ಹೇಳುವವರ ಸಂಖ್ಯೆಯೇನು ವಿರಳವೇ? ಎಲ್ಲರೂ ಅವರವರದೇ ಒಂದು ಆರೋಗ್ಯ ಸಿದ್ಧಾಂತ ಕಟ್ಟಿಕೊಂಡು ಅದನ್ನೇ ಎಲ್ಲರಿಗೂ ಬೋಧಿಸುತ್ತಿರುತ್ತಾರೆ. ಸುಮ್ಮನೆ ಹಿಂದಿನಂತೆ ದಿನಕ್ಕೆರಡು ಬಾರಿ ಅನ್ನ ತಿನ್ನುವುದೋ ಸಿರಿಧಾನ್ಯ ತಿನ್ನುವುದೋ, ದೋಸೆ-ಇಡ್ಲಿ ತಿನ್ನುವುದೋ ಓಟ್ಸ್ ತಿನ್ನುವುದೋ, ರಾತ್ರಿಗೆ ರೊಟ್ಟಿ ತಿನ್ನುವುದೋ ಬೇಯಿಸಿದ ತರಕಾರಿ ಮಾತ್ರ ತಿನ್ನುವುದೋ, ಹಣ್ಣು ಯಾವಾಗ ತಿನ್ನಬೇಕು, ಯಾವ ತಿನಿಸಿನಿಂದ ಎಷ್ಟು ಪ್ರೋಟೀನು ಸಿಗುತ್ತದೆ ಮುಂತಾದ ಪ್ರಶ್ನೋತ್ತರಗಳು; ಮಿದುಳು ಸ್ರವಿಸುವ ಹಾರ್ಮೋನುಗಳ ಅಸಮತೋಲನವೋ ಕರುಳಿನಲ್ಲಿರುವ ಸೂಕ್ಷ್ಮಜೀವಿಗಳ ಹೆಚ್ಚುಕಡಿಮೆಯೋ, ಹೃದಯಬಡಿತದ ಸಣ್ಣ ಏರುಪೇರೋ, ಎಣ್ಣೆ-ಸಕ್ಕರೆ-ಮೈದಾ ಹಿಟ್ಟುಗಳ ಸಂಯೋಗವೋ, ಆಹಾರದಲ್ಲಿ ಸೇರಿರುವ ಕೃತಕ ವಸ್ತುಗಳಲ್ಲಿನ ರಾಸಾಯನಿಕಗಳೋ, ಅನೈರ್ಮಲ್ಯವೋ, ಎಲ್ಲೆಲ್ಲೂ ಗಾಳಿಯಂತೆ ಹಬ್ಬುತ್ತಿರುವ ಪ್ಲಾಸ್ಟಿಕ್ ಹಾವಳಿಯೋ, ಔಷಧದ ಅಡ್ಡಪರಿಣಾಮವೋ, ಕೀಟನಾಶಕಗಳ ಕಾರ್ಯವಿಧಾನವೋ, ತಂತ್ರಜ್ಞಾನ ತರುವ ಆಪತ್ತೋ, ಒತ್ತಡದ ಜೀವನವೋ, ಒತ್ತಿಟ್ಟ ದುಃಖವೋ, ಕಿತ್ತಾಡುವ ಕುಟುಂಬಗಳೋ, ಆನುವಂಶೀಯತೆಯೋ, ಆಲೋಚನಾಕ್ರಮವೋ, ಕೇವಲ ಅದೃಷ್ಟ–ದುರದೃಷ್ಟವೋ- ಎಲ್ಲ ಅನಾರೋಗ್ಯವೂ ಶುರುವಾಗುವುದೆಲ್ಲಿಂದ ಎನ್ನುವ ವಿಶ್ಲೇಷಣೆಯಂತೂ ತಲೆಚಿಟ್ಟು ಹಿಡಿಸುವುದು ಖಂಡಿತ.

ಸುಮ್ಮನೆ ನುರಿತ ವೈದ್ಯರು ಹೇಳಿದ್ದನ್ನು ಕೇಳಿಕೊಂಡು, ಪಾಲಿಸಿಕೊಂಡು ಇರುವವರ ಸದ್ಬುದ್ಧಿಯನ್ನೂ ಹಾಳುಮಾಡುವ ಸಂಶಯಬುದ್ಧಿ ಇಂದು ಎಲ್ಲ ರನ್ನೂ ಕಾಡಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯದ ಬಗೆಗಿನ ಕಾಳಜಿ ಭಯವಾಗಿ ಮಾರ್ಪಾಡಾಗುವುದಕ್ಕೆ ಹೆಚ್ಚಿನ ಸಮಯವೇನೂ ಬೇಕಾಗುವುದಿಲ್ಲ. ‘ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವೇನು ಮಾಡಬಹುದೋ ಅದನ್ನು ಮಾಡಬಹುದು, ಅದನ್ನು ಮೀರಿ ಚಿಂತಿಸಿ ಫಲವಿಲ್ಲ, ಏಕೆಂದರೆ ಆರೋಗ್ಯ ಎನ್ನು ವುದು ಸದ್ಯಕ್ಕೆ ನಮ್ಮ ತಿಳಿವಳಿಕೆಗೆ, ನಿಯಂತ್ರಣಕ್ಕೆ ಸಂಪೂರ್ಣವಾಗಿ ಸಿಗುವಂತಹದ್ದಲ್ಲ ಎನ್ನುವ ಸತ್ಯವನ್ನು ಮರೆತು ಸದಾ ಏನು ತಿನ್ನಬೇಕು, ಯಾವ ವ್ಯಾಯಾಮ ಮಾಡಬೇಕು, ಆ ರೋಗ ಬಂದರೆ, ಈ ತೊಂದರೆಯಾದರೆ ಎಂಬ ಭಯವನ್ನು ನಿರ್ವಹಿಸುವುದನ್ನು ಮೊದಲು ಕಲಿಯಬೇಕು.

ಅನಾರೋಗ್ಯದ ಭಯ ಒಂದು ನೆಪವಷ್ಟೇ; ಅದರ ಆಳದಲ್ಲಿ ಮತ್ತೇನೋ ಭಯವಿರುತ್ತದೆ. ಅಂದರೆ ‘ಬದುಕನ್ನು ನನ್ನ ಅಜಾಗರೂಕತೆಯಿಂದ ಹಾಳುಮಾಡಿ ಕೊಂಡುಬಿಟ್ಟರೆ, ಬದುಕು ಅನಾರೋಗ್ಯದ ಕಾರಣದಿಂದ ನನ್ನ ಕೈಜಾರಿಹೋದರೆ, ನಾನು ಪ್ರೀತಿಸುವ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿ ನನ್ನಿಂದ ದೂರವಾದರೆ’ ಎನ್ನುವ ಭಯ ಇರುತ್ತದೆ. ಬದುಕಿನ ಬಗೆಗಿನ ಈ ಆತಂಕವನ್ನು ನಿರ್ವಹಿಸುವ ಮಾರ್ಗಗಳನ್ನು ಕಂಡುಕೊಂಡಾಗ ಮಾತ್ರ ಅಂತರ್ಜಾಲದಲ್ಲಿ ಆರೋಗ್ಯದ ಮಾಹಿತಿಯನ್ನು ಹುಡುಕುವ ಅಭ್ಯಾಸ ಕೊನೆಯಾಗುತ್ತದೆ. ಬದುಕನ್ನು ಬದುಕದೇ ಅದರ ಬಗ್ಗೆ ಯೋಚನೆ, ಯೋಜನೆಗಳನ್ನು ಮಾಡುವಾಗ ಮಾತ್ರ ಅನಾರೋಗ್ಯ, ಸಾವು ಮುಂತಾದವುಗಳ ಚಿಂತೆ ಕಾಡುತ್ತದೆ. ಬದುಕನ್ನು ಪ್ರತಿಕ್ಷಣವೂ ಸವಿಯುವುದು ಅಭ್ಯಾಸವಾದಾಗ ಕಾಲ್ಪನಿಕ ಭಯಗಳು ಅಷ್ಟು ಬಾಧಿಸುವುದಿಲ್ಲ.

ಜೀವನದಲ್ಲಿ ಮುಖ್ಯವಾಗಿ ಮಾಡಲೇಬೇಕೆಂದಿರುವ ಕೆಲಸವನ್ನುಆದಷ್ಟು ಬೇಗ, ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಬಗೆಗೆ ದಿನವೂ ಪ್ರಯತ್ನ ಜಾರಿಯಲ್ಲಿರಲಿ. ‘ನಾಳೆ’ಯನ್ನು ತುಂಬಾ ನೆಚ್ಚಿ ಬದುಕಬೇಕಾದಾಗ ಮಾತ್ರ ‘ನಾಳೆ ಅನಾರೋಗ್ಯವಾದರೆ’ ಎಂಬ ಭಯ ಅತಿ ಹೆಚ್ಚಾಗಿ ಕಾಡುತ್ತದೆ. ನಮ್ಮ ನಿಯಂತ್ರಣ ದಲ್ಲಿರುವುದು ಏನು, ನಮ್ಮ ನಿಯಂತ್ರಣದಲ್ಲಿಲ್ಲದಿರುವುದೇನು ಎನ್ನುವುದರ ಬಗೆಗೆ ಸ್ಪಷ್ಟ ಚಿತ್ರಣವಿರಲಿ. ನಮ್ಮ ನಿಯಂತ್ರಣದಲ್ಲಿಲ್ಲದ್ದನ್ನು, ಅದರ ಬಗೆಗೆ ನಮ್ಮ ಭಾವನೆಗಳನ್ನು ಒಮ್ಮೆ ವಿವರವಾಗಿ ಬರೆದಿಟ್ಟು ಅದರ ಬಗ್ಗೆ ಚಿಂತೆ ಬಂದಾಗಲೆಲ್ಲ- ‘ಅದು ನನ್ನ ನಿಯಂತ್ರಣದಲ್ಲಿಲ್ಲ, ನಾನು ಅದರ ಬಗ್ಗೆ ಯೋಚಿಸಬೇಕಾಗಿಲ್ಲ’ ಎಂದು ನೆನಪಿಸಿಕೊಳ್ಳುವ ಅಭ್ಯಾಸ ಇಟ್ಟುಕೊಳ್ಳುವುದು ಸಹಕಾರಿ. ನಮ್ಮ ಬದುಕಿನ ಬಗೆಗೆ ನಮಗಿರುವ ಧೋರಣೆ, ನಮ್ಮ ದೇಹ-ಮನ ಸ್ಸನ್ನು ನಾವು ಕಾಣುವ ಬಗೆ - ಇವುಗಳು ನಮ್ಮ ಆರೋಗ್ಯ-ಅನಾರೋಗ್ಯದ ಪರಿಕಲ್ಪನೆಯನ್ನು ರೂಪಿಸುತ್ತವೆ. ಈ ಸೂಕ್ಷ್ಮತೆಯ ಅರಿವಿಲ್ಲದೆ ಆಹಾರದ ಬಗ್ಗೆ, ವ್ಯಾಯಾಮದ ಬಗ್ಗೆ, ದೈಹಿಕ ಓರೆಕೋರೆಯ ಬಗ್ಗೆ, ದೇಹದ ತೂಕ ಇಳಿಸುವ ಬಗ್ಗೆ ತಮಗೆ ತೋಚಿದ್ದನ್ನು ನಮ್ಮ ಮೇಲೆ ಹೇರುವವರ ಟೀಕೆಯ ಮಾತನ್ನು ನಿರ್ಲಕ್ಷಿಸು ವುದು ಒಳಿತು. ಸಹಾನುಭೂತಿಯುಳ್ಳ, ಅನುಭವದಿಂದ ಮಾಗಿದ ಮಾತುಗಳಿಂದ ನಮ್ಮ ನಂಬಿಕೆ ಸ್ಥಿರಗೊಳಿಸುವ ವೈದ್ಯರ ಮಾತನ್ನು ಮಾತ್ರ ನೆಚ್ಚಿಕೊಳ್ಳುವುದು ಮೇಲು; ಏಕೆಂದರೆ ಅಂತಹ ವೈದ್ಯರಿಗೆ ಗೊತ್ತು, ಆರೋಗ್ಯದ ಕಡೆಗಿನ ಪಯಣಕ್ಕೆ ಕೇವಲ ಆರೋಗ್ಯವಿಜ್ಞಾನದ ಮಾಹಿತಿ ಸಾಕಾಗುವುದಿಲ್ಲ, ಅದಕ್ಕೆ ಅವಶ್ಯವಾಗಿ ಬೇಕಾದ್ದು ಸ್ನೇಹಪೂರ್ವಕ ಬೆಂಬಲ ಮತ್ತು ಅಂತಃಕರಣದ ಸ್ಪಂದನ ಎಂದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.