ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇಮ– ಕುಶಲ | ನಲುಗಿಸದಿರಲಿ ನಕಾರಾತ್ಮಕ ಸೆಳೆತ

ಸುಷ್ಮ ಸಿಂಧು
Published : 16 ಸೆಪ್ಟೆಂಬರ್ 2024, 23:30 IST
Last Updated : 16 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ನಕಾರಾತ್ಮಕ ಆಲೋಚನೆಗಳೇ ತಪ್ಪೆಂದು ತಪ್ಪಿಸಿಕೊಳ್ಳುವ ಬದಲು ಅದರಲ್ಲಿರಬಹುದಾದ ಜೀವನ ಪಾಠದ ಬಗ್ಗೆ ಗಮನವಿರಿಸಿ. ಪದೇ ಪದೇ ನಕಾರಾತ್ಮಕ ಆಲೋಚನೆಗಳು ಆಕ್ರಮಣ ಮಾಡುತ್ತಿದ್ದರೆ, ಪಟ್ಟು ಹಿಡಿದು ಅವನ್ನು ನಿರ್ಲಕ್ಷ್ಯಿಸುವ ದಾರಿಗಳನ್ನು ಕಂಡುಕೊಳ್ಳಿ.

ನೆಲಕ್ಕೆ ಬಿದ್ದ ನೀರು ಇಳಿಜಾರಿನತ್ತಲೇ ಸರಸರನೇ ಓಡುವಂತೆ, ಭಾರವಾದ್ದು  ಬಿಡದೇ ಜಗ್ಗುವಂತೆ ನಮ್ಮ ಮನ ತಾಕಿದ ಆಲೋಚನೆಗಳೆಲ್ಲವೂ ಅವಿಶ್ವಾಸದ ಪಥದಲ್ಲಿ ಕೆಳಕೆಳಗೆ ಇಳಿಯುತ್ತ, ವ್ಯಾಕುಲತೆಯತ್ತಲೇ ಚಲಿಸುತ್ತವೆ.

ಈ ನಕಾರಾತ್ಮಕ ಆಲೋಚನೆಗಳ ಸಹವಾಸವೇ ಸಾಕು ಎಂದು ನಿಡುಸುಯ್ದಷ್ಟೂ ತಿರುತಿರುಗಿ ಬಂದು ಮುತ್ತಿಕ್ಕುವ ಯಾತನಾಮಯ ಯೋಚನೆಗಳು ಹಚ್ಚಿದ ಒಂದೊಂದು ಕಿಡಿ ನಮ್ಮನ್ನು ಆಕ್ರಮಿಸಿ, ಒಂದಡಿ ಹೆಜ್ಜೆ ಇಡದಂತೆ ನಿಯಂತ್ರಿಸುತ್ತದೆ. 

ಬೇಡದ್ದು ವೇಗವಾಗಿ ಬೆಳೆಯುವುದು

ಕಾಪಿಟ್ಟು ಸಲಹಿದ ಬೆಳೆಗಿಂತ ಬೇಡದ ‘ಕಳೆ ಗಿಡಗಳು’ ವೇಗವಾಗಿ ಬೆಳೆಯುವಂತೆ, ಮನದಂಗಳದಲ್ಲಿ ನಕಾರಾತ್ಮಕ ಆಲೋಚನೆ ಎಂಬುದು ಬಹು ವೇಗವಾಗಿ ಹುಟ್ಟಿ ಹರಡುತ್ತದೆ. ಏನೇ ಒಳ್ಳೆಯದೇ ನಡೆಯುತ್ತಿದ್ದರೂ, ಅದರಲ್ಲಿರುವ ಸಣ್ಣ ಹುಳುಕುಗಳನ್ನೇ ಕೆದಕಿ ಕಾಡುತ್ತದೆ. ಆಗಿ ಹೋದದ್ದನ್ನು ನೆನಪಿನಿಂದ ಅತ್ತ ಸರಿಯಲು ಬಿಡದೇ ಎಳೆದಾಡಿ ದೊಡ್ಡದು ಮಾಡಿ ನೋಯಿಸುತ್ತದೆ. ಯಾವಾಗಲೂ ನ್ಯೂನತೆಗಳ ಬಗ್ಗೆಯೇ ಲೆಕ್ಕ ಹಾಕುತ್ತಾ, ಒಳ್ಳೆಯದರತ್ತ ಚಿತ್ತ ಹರಿಯಲು ಬಿಡುವುದಿಲ್ಲ. ಹೀಗೆ ಆಗುವುದರಿಂದ ಕ್ರಮೇಣ ಸಣ್ಣಪುಟ್ಟ ಸಂತಸಗಳಿಗೆ ಹರ್ಷಿಸುವುದನ್ನೇ ಮನಸ್ಸು ಮರೆತುಬಿಡುತ್ತದೆ. ಬದಲಿಗೆ ನೋವಿನ ನಡುವೆ ಜೀಕುವುದನ್ನು ರೂಢಿಮಾಡಿಕೊಳ್ಳುತ್ತದೆ.

ರಕ್ಷಣಾ ತಂತ್ರವೇ?

ಮುಂಬರುವ ಕೆಡುಕಿನ ಸಂದರ್ಭಗಳಿಗೆ ಅಣಿಗೊಳಿಸಲು ಮನಸ್ಸು ಹಾಕಿಕೊಂಡ ರಕ್ಷಣಾ ತಂತ್ರವಾಗಿಯೂ ಈ ನಕಾರಾತ್ಮಕ ಆಲೋಚನೆಗಳನ್ನು ನೋಡಬಹುದು. ಹಾಗೆ ನೋಡಿದರೆ ಮನಸ್ಸು ಇರುವುದೇ ಹೀಗೆ. ಕಟ್ಟಿಕೊಂಡ ಆಶಾಗೋಪುರ ಕಳಚಿ ಬಿದ್ದರೆ ಆಗುವ ಆಘಾತವನ್ನು ಕಡಿಮೆ ಮಾಡಿಕೊಳ್ಳುವ ಕಕ್ಕುಲಾತಿಯಲ್ಲಿಯೇ ಕೆಟ್ಟ ಸಾಧ್ಯತೆಗಳನ್ನು ಕಲ್ಪಿಸಿಕೊಳ್ಳುತ್ತದೆ. ಸೋಲುವ ಭಯವನ್ನು ಭರಿಸಲಾಗದ ಭೀತಿಯಲ್ಲೇ ಅದರ ಬಗ್ಗೆ ಚಿಂತಿಸುತ್ತದೆ. ಇವು ಪರಿಸ್ಥಿತಿಗೆ ತನ್ನನ್ನು ತಾನು ಸಿದ್ಧಗೊಳಿಸಿಕೊಳ್ಳುವ ವಿಧಾನವೇ ಆಗಿರುತ್ತವೆ. ಆದರೆ, ಅದಕ್ಕೂ ಒಂದು  ಮಿತಿ ಬೇಕಿರುತ್ತದೆ. ಅದು ಹದ ತಪ್ಪಿದರೆ  ಬರೀ ನಕಾರಾತ್ಮಕ ಆಲೋಚನೆಗಳೆ ತುಂಬಿಕೊಳ್ಳುತ್ತವೆ. 

ನಮ್ಮದೇ ಆಯ್ಕೆ

ಭವಿಷ್ಯದಲ್ಲಿ ನೋವಿಗೆ ಈಡಾಗುತ್ತೇವೆ ಎಂಬ ಆತಂಕದಲ್ಲಿ ಚಂದದ ವರ್ತಮಾನವನ್ನು ಕಳೆದುಕೊಳ್ಳಬಾರದು. ಪ್ರಜ್ಞಾಪೂರ್ವಕವಾಗಿ ಮನಸ್ಸನ್ನು ಆ ರೀತಿ ಮಾರ್ಪಾಡು ಮಾಡಿಕೊಳ್ಳುವುದು ಕೂಡ ನಮ್ಮದೇ ಆಯ್ಕೆಯಾಗಬಲ್ಲದು. ಹೀಗೆ ಮಾಡುವುದರಿಂದ ನಕಾರಾತ್ಮಕ ಯೋಚನೆಗಳು ಅನಾಯಾಸವಾಗಿ ಚಿತ್ತಭಿತ್ತಿಯಿಂದ ದೂರ ಸರಿಯಬಲ್ಲವು. 

ಪರಿಹಾರಗಳು ಇಲ್ಲಿವೆ

  • ನಿರ್ಲ್ಯಕ್ಷದ ಮದ್ದು: ರಚ್ಚೆ ಹಿಡಿಯುವ ಮಗುವಿಗೆ ಗಮನ ಸಿಗದಿದ್ದಾಗ ತಾನಾಗೇ ಹಠದ ಸ್ವಭಾವ ಕಡಿಮೆ ಮಾಡುತ್ತದೆ. ನಕಾರಾತ್ಮಕ ಯೋಚನೆಗಳು ಬರುವಾಗ ಸಂಪೂರ್ಣ ನಿರ್ಲಕ್ಷ್ಯ ಮಾಡುವುದನ್ನು ಕಲಿಯಿರಿ. 

  • ಕೃತಜ್ಞತಾ ಭಾವವಿರಲಿ: ಇರುವುದರ ಬಗೆಗೆ, ಬದುಕು ಈಗಾಗಲೇ ಕರುಣಿಸಿರುವುದನ್ನು ನೆನಪಿಸಿಕೊಂಡು ಕೃತಜ್ಞತೆಯ ಭಾವವನ್ನು ಹೊಂದುವುದನ್ನು ಕಲಿತರೆ ಮನಕ್ಕೆ ಹಿತ.

  • ಗಮನ ಬದಲಿಸಿ: ಯಾವುದೇ ವಿಚಾರದ ಲೋಪದೋಷಗಳತ್ತ ಗಮನವಿಟ್ಟಷ್ಟೂ ಅದು ಎದ್ದೆದ್ದು ಕಾಣುತ್ತವೆ. ಮನಸ್ಸು ವೇದನೆಯೊಳಗೆ ಸಿಲುಕಿದಾಗ ಚೆಂದದ ಭಾವನೆ, ಅನುಭವ, ಅಭ್ಯಾಸಗಳತ್ತ ನಿರ್ದೇಶನ ನೀಡಿ.

  • ವಾಸ್ತವದಲ್ಲಿ ಮನಸ್ಸು: ಭೂತ–ಭವಿಷ್ಯಗಳ ಲೆಕ್ಕಾಚಾರದಲ್ಲಿ ಕಳೆದು ಹೋಗುವ ಮನಕ್ಕೆ ಈ ಕ್ಷಣಕ್ಕಿಂತ ಯಾವ ಕ್ಷಣವೂ ಮುಖ್ಯವಲ್ಲವೆಂಬ ಅರಿವಿರದು. ವಾಸ್ತವವಷ್ಟೇ ಮುಖ್ಯವೆಂದು ನೆನಪಿಸಿ.

  • ತಪ್ಪಿಸಿಕೊಳ್ಳುವುದು ಸಲ್ಲ: ನಕಾರಾತ್ಮಕ ಆಲೋಚನೆಗಳೇ ತಪ್ಪೆಂದು ತಪ್ಪಿಸಿಕೊಳ್ಳುವ ಬದಲು ಅದರಲ್ಲಿರಬಹುದಾದ ಜೀವನ ಪಾಠದ ಬಗ್ಗೆ ಗಮನವಿರಿಸಿ. ಕೆಟ್ಟದ್ದು ಮನದಲ್ಲಿ ಮೂಡಲೇಬಾರದು ಎಂದರಾಗದು. ಹಾಗೆಂದುಕೊಂಡಷ್ಟೂ ಅದರ ಉಪಟಳವೇ ಹೆಚ್ಚಾಗುವುದು. ಹಾಗಾಗಿ ನಕಾರಾತ್ಮಕ ಆಲೋಚನೆಗಳು ಒಂದು ಸಾಧ್ಯತೆಯಷ್ಟೇ ಎಂದು ಅರಿತು ಮುನ್ನಡೆಯಿರಿ.

ಸಮತ್ವದ ಮಹತ್ವ

ನಿಜಕ್ಕೂ ಸಂಪೂರ್ಣ ಸಕಾರಾತ್ಮಕ ಅಥವಾ ನಕಾರಾತ್ಮಕ ಎಂಬುದಿಲ್ಲ. ಎರಡೂ ಮನದ ಪ್ರಕೃತಿಯ ಭಾಗವೇ. ಬೆಳಕು-ಕತ್ತಲೆಗಳಂತೆ ಆಂತರ್ಯಕ್ಕೆ ಅತ್ಯಗತ್ಯವೇ. ಬೇಗುದಿಗೆ ಬೀಳುವ ಮನವು ಬೆಳಕಿನ ಇರುವಿಕೆಯನ್ನೂ, ಯಾವ ಸ್ಥಿತಿಯೂ ಶಾಶ್ವತವಲ್ಲ ಎಂಬ ತಿಳಿವನ್ನೂ ಕಂಡುಕೊಳ್ಳಬೇಕಾದ್ದು ಅವಶ್ಯಕ.

ಬದುಕಿಗೆ ಸಕಾರಾತ್ಮಕವೆ ದೀವಿಗೆ ಎಂಬುದನ್ನು ನಿರ್ಧರಿಸಿದರೆ, ಸಕಾರಾತ್ಮಕ ವಿಚಾರಗಳನ್ನಷ್ಟೇ ಆಯ್ದುಕೊಂಡು ಮುನ್ನಡೆಯುವುದು ಸುಲಭ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT