ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವೂ ‘ಮಗು’ವಾಗಿ ಆಡಿ

Last Updated 11 ಜುಲೈ 2022, 19:30 IST
ಅಕ್ಷರ ಗಾತ್ರ

ಒಮ್ಮೆ ಯೋಚಿಸಿ ನೋಡಿ. ನೀವು ಕೊನೇ ಸಲ ಆಟವಾಡಿದ್ದು ಯಾವಾಗ?! (ಮೊಬೈಲ್ ಗೇಂ ಅಲ್ಲ! ಮತ್ತೊಬ್ಬರೊಂದಿಗೆ ಆಡುವ ಆಟ.)

ಹಿರಿಯರು ಚಿಕ್ಕ ಮಕ್ಕಳ ಕಾಟ ತಡೆಯಲಾಗದೆ ಅವರೊಂದಿಗೆ ಆಟವಾಡುತ್ತಾರೆ. ಆದರೆ ಅದರಿಂದ ತಮಗೆ ಆಗುವ ಲಾಭವನ್ನು ಗಮನಿಸುವುದಿಲ್ಲ. ಅದನ್ನು ತಾವು ಮಕ್ಕಳಿಗಾಗಿ ಮಾಡುವ ಒಂದು ‘ಕೆಲಸ’ವಾಗಿಯೇ ಗ್ರಹಿಸುತ್ತಾರೆ. ಅಪ್ಪಂದಿರಾದರೂ ಪಾಠ ಓದಿಸುವುದರ ಬದಲು ಮಕ್ಕಳೊಡನೆ ಆಟವಾಡುವುದನ್ನೇ ಆರಿಸಿಕೊಂಡಾರು! ಅಮ್ಮಂದಿರಿಗಂತೂ ಪಾಠವೇ ಮುಖ್ಯ. ‘ಆಟ ಆಡಿ’ ಎಂದರೆ, ಆಟಕ್ಕೆ ಸಮಯ ಕೊಟ್ಟರೆ ತೊಂದರೆಗೊಳಗಾಗುವ ತಮ್ಮ ಬಹು ಜವಾಬ್ದಾರಿಗಳ ಉದ್ದದ ಪಟ್ಟಿಯನ್ನೇ ನಮ್ಮ ಮುಂದಿಡುತ್ತಾರೆ!

ಆದರೆ ವಿಜ್ಞಾನದ ಪ್ರಕಾರ ‘All work and no play' (ಬರೀ ಕೆಲಸ, ಆಟವಿಲ್ಲದಿರುವುದು) ಬರೀ ಚಿಕ್ಕ ಮಕ್ಕಳನ್ನು ಮಾತ್ರ ‘ಮಂಕಾ’ಗಿಸುವುದಲ್ಲ, ದೊಡ್ಡವರನ್ನೂ ಮಂಕಾಗಿಸುತ್ತದೆ. ಪ್ರಾಣಿಗಳಲ್ಲಿಯೇ ಸಸ್ತನಿವರ್ಗದಲ್ಲಿ ಆಟವಾಡುವುದು ಒಂದು ಸಹಜ ಸ್ವಭಾವ. ಇದರಿಂದ ಮಿದುಳಿನ ವಿಕಾಸ, ದೇಹದ ಬೆಳವಣಿಗೆಯ ಹಾರ್ಮೋನ್‌ಗಳು, ಸಾಮಾಜಿಕ ಬುದ್ಧಿವಂತಿಕೆ ಮತ್ತು ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯಗಳು ಹೆಚ್ಚುತ್ತವೆ.

ಆಟ ಇಷ್ಟೆಲ್ಲಾ ಲಾಭ ತಂದರೂ, ಬೇರೆಯವರು ಆಟವಾಡುವುದನ್ನು ಸತತವಾಗಿ ನೋಡುವ ಅಭ್ಯಾಸ ಹಲವರಿಗೆ ಇದ್ದರೂ, ಆಟವಾಡಲು ಮಾತ್ರ ಹಿರಿಯರು ಮುಂದಾಗದಿರುವುದೇಕೆ? ಹಿರಿಯರಲ್ಲಿ ಆಟವಾಡಲು ಇರುವ ಹಿಂಜರಿಕೆಗೆ ಹಲವು ಕಾರಣಗಳನ್ನು ಅಧ್ಯಯನಗಳು ಪಟ್ಟಿ ಮಾಡಿವೆ. ಗುಂಪಿನಲ್ಲಿ ಸೇರಲು ನಾಚಿಕೆ/ಇರಿಸು-ಮುರಿಸು, ಬಾಲ್ಯದ ಆಟದ ಅನುಭವಗಳಲ್ಲಿ ಅವರಿಗೆ ಸಂತಸದ ಅನುಭವದ ಬದಲು ಕೇವಲ ಸ್ಪರ್ಧಾತ್ಮಕ ಮನೋಭಾವ ಅಭ್ಯಾಸವಾಗಿದ್ದದ್ದು, ಸೋಲು-ಗೆಲುವುಗಳ ಬಗ್ಗೆ ತುಂಬಾ ಗಂಭೀರವಾಗಿ ಚಿಂತಿಸುವುದು, ಬೇರೆಯವರು ತಮಾಷೆ ಮಾಡುವುದು - ಆಟವಾಡುವುದು ಹೆಚ್ಚಾದಾಗ ಅದು ಕಿರಿಕಿರಿ ಎನಿಸುವುದು - ಹೀಗೆ ಈ ಕಾರಣಗಳು ಹಲವು.

ವಿಶೇಷವಾಗಿ ಮಹಿಳೆಯರು ಆಟವಾಡುವಾಗ ತಾವು ತಪ್ಪು ಮಾಡುವ ಬಗ್ಗೆ, ತಮಗೆ ಒಂದು ವಿಷಯ ‘ಗೊತ್ತಿಲ್ಲ’ ಎಂದು ಒಪ್ಪುವ ಬಗ್ಗೆ ಹಿಂಜರಿಯುತ್ತಾರೆ. ಬಹುಶಃ ದೊಡ್ಡವರಿಗೆ ಮಕ್ಕಳ ಜೊತೆ ಆಡುವುದು ಹೇಗೆ ಎಂದೇ ಗೊತ್ತಿಲ್ಲದಿರುವುದೂ ಕಾರಣವಾಗಬಹುದು. ಆದರೆ ಹಿರಿಯರು ಆಟವನ್ನು ಒಂದು ಜೀವನಕಲೆಯಾಗಿ ತಮ್ಮದಾಗಿಸಿಕೊಳ್ಳಲು ಸಾಧ್ಯವಿದೆ. ಮಕ್ಕಳು ಆಟದ ಲಾಭಗಳ ಬಗೆಗೆ ತಲೆ ಕೆಡಿಸಿಕೊಳ್ಳದೆ, ಅದರಿಂದ ಸಿಗುವ ಆನಂದಕ್ಕಾಗಿಯೇ ಅದರ ಹಿಂದೆ ಓಡಬಹುದು. ಆದರೆ ಹಿರಿಯರು ಆಟದಿಂದ ಆ ಆನಂದದ ಜೊತೆಗೆ, ಅರಿವಿನಿಂದ ಮತ್ತಷ್ಟನ್ನು ಪಡೆದುಕೊಳ್ಳಬಹುದು.

ಆಟವನ್ನು ರೂಢಿಸಿಕೊಳ್ಳಬೇಕೆ? ಮೊದಲು ನಿಮ್ಮ ಬಾಲ್ಯವನ್ನು ನೆನಪಿಸಿಕೊಳ್ಳಿ. ನೀವು ಆಡುತ್ತಿದ್ದ ಆಟಗಳು ಯಾವುವು? ಯಾರ ಜೊತೆ ಆಡುತ್ತಿದ್ದಿರಿ? ಯಾವ ಅಂಶಗಳು ನಿಮ್ಮನ್ನು ಆಟವಾಡುವುದರಿಂದ ತಡೆದಿದ್ದವು? ಬಾಲ್ಯದ ಆಟದ ಕಹಿ ಘಟನೆಗಳು ಈಗಲೂ ನಿಮಗೆ ನೆನಪಾಗುತ್ತವೆಯೇ? ಈ ಪ್ರಶ್ನೆಗಳನ್ನು ನಿಮ್ಮನ್ನು ನೀವು ಕೇಳಿಕೊಳ್ಳುವುದು ಆಟಕ್ಕೆ ಮತ್ತೆ ಮರಳುವಲ್ಲಿ ಬಹು ಮುಖ್ಯವಾಗುತ್ತವೆ.

ಚಿಕ್ಕ ಮಕ್ಕಳಾಡುವ ‘imaginative play’ - ಕಾಲ್ಪನಿಕ ಆಟ ಹಿರಿಯರಿಗೂ ಬಹು ಉಪಯುಕ್ತ. ‘ಮಕ್ಕಳ’ ಪಾತ್ರದಲ್ಲಿ ದೊಡ್ಡವರು, ಮಕ್ಕಳು ‘ಶಿಕ್ಷಕ’ರಾಗುವುದು ‘ಅಪ್ಪ /ಅಮ್ಮ’ ಆಗುವುದು – ಇಂತಹ ಆಟಗಳಲ್ಲಿ ಉತ್ಸಾಹದಿಂದ ಭಾಗವಹಿಸುವುದು ಉಪಯುಕ್ತ. ಇಂತಹ ‘ನಾಟಕದ ಆಟ’ ಒಂದು ‘ರೋಲ್ ಪ್ಲೇ’ - ಪಾತ್ರಗಳ ಆಟವಾಗಿ ಮತ್ತೊಬ್ಬರ ಮನಸ್ಸನ್ನು ನಮಗೆ ಅರ್ಥ ಮಾಡಿಸುವುದರಲ್ಲಿ ಸಫಲವಾಗಲು ಸಾಧ್ಯವಿದೆ. ಇದರ ಪರಿಣಾಮ ಮಕ್ಕಳು-ಅಪ್ಪ-ಅಮ್ಮಂದಿರ ನಡುವೆ ಸಂಘರ್ಷ ಕಡಿಮೆಯಾಗಿ, ಕುಟುಂಬದಲ್ಲಿ ಜಗಳಗಳು ಕಡಿಮೆಯಾಗುವುದು.

ಸಾಮಾಜಿಕವಾಗಿ ಕೂಡ ಆಟದ ಗುಂಪುಗಳನ್ನು ಕಟ್ಟಲು ಸಾಧ್ಯವಿದೆ. ವಾರಕ್ಕೆ 2-3 ಗಂಟೆಗಳ ಅವಧಿಯನ್ನು ಸುಮಾರು 5ರಿಂದ 9 ಜನರ ಗುಂಪು ಈ ಚಟುವಟಿಕೆಗಾಗಿ ಇಟ್ಟುಕೊಳ್ಳಲು ಸಾಧ್ಯವಿದೆ. ಆಟ ದೈಹಿಕ ಚಟುವಟಿಕೆಯಾದಷ್ಟೂ, ಹೊರಾಂಗಣ ಆಟವಾದಷ್ಟೂ ಆರೋಗ್ಯಕ್ಕೆ ಲಾಭಗಳು ಹೆಚ್ಚು. ಆಟ ಎಂದ ಮೇಲೆ ಸೋಲು-ಗೆಲುವು ಇರಲೇಬೇಕಾದರೂ ಇಲ್ಲಿ ಆಡುವವರ ಗುರಿ ‘ಆಟದ ಪ್ರಕ್ರಿಯೆ’ಯಷ್ಟೇ ಆಗಬೇಕಷ್ಟೆ. ಪಿಕ್‍ನಿಕ್‍ಗೆಂದು ಹೋದಾಗ, ಸಮುದ್ರದ ದಂಡೆಗೆ ಹೋದಾಗ ಚೆಂಡಾಡುವುದು, ಮರಳಿನಲ್ಲಿ ಗೂಡು ಕಟ್ಟುವುದು – ಇಂಥವನ್ನು ನಮ್ಮ ‘ಹಿರಿತನ’ ಮರೆತು ನಾವು ಆನಂದಿಸುತ್ತೇವೆ. ಇಂಥದ್ದೇ ಪ್ರವೃತ್ತಿಯನ್ನು ವಾರದಲ್ಲಿ ಒಮ್ಮೆಯಾದರೂ ಆಟದ ಮೂಲಕ ನಾವು ರೂಢಿಸಿಕೊಳ್ಳಲು ಸಾಧ್ಯವಿದೆ.

ಕಳೆದ 30 ವರ್ಷಗಳಲ್ಲಿ ನಾವು ಆಟವಾಡುವುದನ್ನು ವಿವಿಧ ರೂಪಗಳಲ್ಲಿ ಮುಂದುವರಿಸಿದ್ದೇವೆ. ಆದರೆ ಆ ಆಟದಲ್ಲಿ ‘ಆಡುವ ಅಂಶ’ವೇ ಕಡಿಮೆಯಾಗಿಬಿಟ್ಟಿದೆ. ಆಟದ ಹುರುಪು-ತಮಾಷೆ - ‘Playful quality’ ಎಂಬ ಗುಣಮಟ್ಟ ಇಳಿದಿದೆ. ಮಕ್ಕಳು ‘ಆಟವಾಡಲಿ’ ಎನ್ನುವಾಗಲೂ ನಮ್ಮ ಗುರಿ ಅದು ಯಾವುದೋ ಒಂದು ಮಹತ್ವಾಕಾಂಕ್ಷೆಗೆ! ‘ವೀಡಿಯೋ ಗೇಂ’ಗಳನ್ನು ಆಡುವ ಸಮಯ ಹೆಚ್ಚಿರಬಹುದು, ವ್ಯಸನವಾಗಿ ಜೂಜಾಡಬಹುದು. ಆದರೆ ಆರೋಗ್ಯವನ್ನು ವರ್ಧಿಸುವ, ತತ್‍ಕ್ಷಣಕ್ಕೆ ಆ ಲಾಭವನ್ನು ಸ್ಪಷ್ಟವಾಗಿಸದ ಆಟಕ್ಕಾಗಿ ಸಮಯ ನೀಡುವುದು ಕಡಿಮೆಯೇ.

ಆಟವೆಂಬುದು ಮನಸ್ಸಿನ ಒತ್ತಡಗಳಿಗೆ ಒಂದು ಕಿಟಕಿಯಾಗಬಲ್ಲದು. ಮನದೊಳಗೆ-ಮಿದುಳಿನೊಳಗೆ ಗಾಳಿ-ಬೆಳಕುಗಳನ್ನು ತರಲು, ಕಲ್ಮಶಗಳನ್ನು ಹೊರಹಾಕಲು ಈ ‘ಕಿಟಕಿ’ ಸಹಾಯ ಮಾಡುತ್ತದೆ. ಆಟವಾಡುವವರ ಆಯುಷ್ಯವೂ ಹೀಗಾಗಿ ದೀರ್ಘವಾಗಲು ಸಾಧ್ಯವಿದೆ. ನೆನಪಿಡಿ: ಆಟವೆಂದರೆ ಆರೋಗ್ಯ. ಆಟದ ವಿರುದ್ಧ ಪದವೆಂದರೆ ಪಾಠವಲ್ಲ, ಖಿನ್ನತೆ! ಆರೋಗ್ಯಕ್ಕಾಗಿ ಆಟವಾಡಿ; ನಿಮ್ಮೊಳಗಿನ ‘ಮಗು’ವನ್ನು ಆಟವಾಡಲು ಹೊರಗೆ ಬಿಡಿ! v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT