ಗುರುವಾರ , ಮೇ 26, 2022
30 °C

ಆರೋಗ್ಯದ ಆಧಾರಸ್ತಂಭಗಳು

ಡಾ. ಜಿ. ಎಲ್‌. ಕೃಷ್ಣ Updated:

ಅಕ್ಷರ ಗಾತ್ರ : | |

Prajavani

ಆ ರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಸ್ವಾಸ್ಥ್ಯವರ್ಧನೆಗೆ ಉಪಾಯಗಳೇನು? - ಈ ಬಗ್ಗೆ ಆಯುರ್ವೇದಶಾಸ್ತ್ರಕಾರರಾದ ಮಹರ್ಷಿಗಳು ಬಹಳ ಉಪಯುಕ್ತವಾದ ಸಲಹೆಗಳನ್ನಿತ್ತಿದ್ದಾರೆ.
ಈ ಸಲಹೆಗಳು ಆ ಋಷಿಗಳ ದೀರ್ಘಕಾಲದ ಪರೀಕ್ಷಣ-ನಿರೀಕ್ಷಣಗಳ ಫಲಗಳಾಗಿರುವುದರಿಂದ ಈ ಕಾಲದಲ್ಲೂ ಉಪಾದೇಯವಾಗಿವೆ.

ದೊಡ್ಡಬಗೆಯಲ್ಲಿ ಮಾನವಜೀವನಕ್ಕೆ ಒದಗಿಬರುವ ಹಲವು ಸಂಗತಿಗಳು ಸುಲಭವಾಗಿ ದೊರೆಯುವಂತಹವುಗಳು. ಹೆಚ್ಚಿನ ಖರ್ಚಿಲ್ಲದೆ, ಹೆಚ್ಚಿನ ಆಯಾಸವೂ ಇಲ್ಲದೆ, ಲಭಿಸುವ ಈ ವಸ್ತುಗಳು ಪ್ರಕೃತಿಗಿರುವ ಜೀವಕಾರುಣ್ಯದ ದ್ಯೋತಕಗಳಾಗಿವೆ. ಪ್ರಕೃತಿಕಾರುಣ್ಯದ ಯುಕ್ತವಾದ ಬಳಕೆಯೇ ನಮ್ಮ ಯೋಗಕ್ಷೇಮಗಳಿಗೆ ನಿಜವಾದ ಸಾಧನ.

ಶರೀರಸ್ವಾಸ್ಥ್ಯಕ್ಕೆ ಆಧಾರಸ್ತಂಭಗಳಾಗಿ ನಮ್ಮ ಮಹರ್ಷಿಗಳು ಎಣಿಸಿರುವುದು ಅಂತಹ ಸುಲಭವಾಗಿರುವ ಮೂರು ಸಂಗತಿಗಳನ್ನು. ಯುಕ್ತವಾದ ಆಹಾರ, ರಾತ್ರಿವೇಳೆಯ ನೆಮ್ಮದಿಯ ನಿದ್ರೆ ಮತ್ತು ಅಧ್ಯಾತ್ಮಾಭಿಮುಖವಾಗಿರುವ ಸಾತ್ತ್ವಿಕಜೀವನ - ಇವುಗಳೇ ಆ ಮೂರು ಸ್ತಂಭಗಳು. ಹೆಚ್ಚಿನ ಶರೀರಾಯಸವಿಲ್ಲದ ಈಗಿನ ಜೀವನಕ್ರಮವನ್ನು ಪರಿಗಣಿಸಿ ಆಯುರ್ವೇದದ ಮನೀಷಿಯೊಬ್ಬರು ಈ ಪಟ್ಟಿಗೆ ವ್ಯಾಯಾಮ ಎಂಬ ನಾಲ್ಕನೆಯ ಸ್ತಂಭವೊಂದನ್ನು ಜೋಡಿಸಿದ್ದಾರೆ.

ಆಹಾರ: ಬಹುಕಾಲದ ಬಳಕೆಯಿಂದ ಶರೀರದ ಬಲಪುಷ್ಟಿಗಳಿಗೆ ಪೂರಕವೆಂದು ಸಿದ್ಧವಾದ ಆಹಾರಪದಾರ್ಥಗಳನ್ನೇ ಬಳಸುವುದು ಉತ್ತಮ. ವಿದೇಶಗಳಲ್ಲಿ ಜನಪ್ರಿಯವಾಗಿವೆಯೆಂಬುದರ ಕಾರಣದಿಂದಲೋ ಅಲ್ಪಕಾಲದ ಪರೀಕ್ಷಣಗಳಿಂದಳೋ ಅಥವಾ ಅಬ್ಬರದ ಪ್ರಚಾರದಿಂದಲೋ ಯಾವುದೇ ಆಹಾರಪದಾರ್ಥಕ್ಕೆ ಉಪಾದೇಯತ್ವ ಬರಲಾರದು. ಉಪ್ಪಿಟ್ಟು-ಅವಲಕ್ಕಿಗಳ ಜಾಗವನ್ನು ಬ್ರೆಡ್-ಸ್ಕೋನ್‌ಗಳು ಭರಿಸಲಾರವು. ನಮ್ಮ ಸಾಂಪ್ರದಾಯಿಕ ಆಹಾರಗಳ ಬಳಕೆ ಸ್ವಾಸ್ಥ್ಯರಕ್ಷಣೆಗೆ ತೀರಾ ಆವಶ್ಯಕ. ಅಂತಹ ಆಹಾರಗಳನ್ನಾದರೂ ತಾಜಾಪದಾರ್ಥಗಳಿಂದ ತಯಾರಿಸಿ ಬಿಸಿಯಾಗಿರುವಗಲೇ ಸಮಾಧಾನಚಿತ್ತದಿಂದ ಮಿತಪ್ರಮಾಣದಲ್ಲಿ ತಿನ್ನುವುದು ಒಳ್ಳೆಯದು. ಅಕ್ಕಿ-ಬೇಳೆಯಂತಹ ಧಾನ್ಯಗಳು, ಮೂಲಂಗಿ-ಪಡವಲದಂತಹ ತರಕಾರಿಗಳು, ಒಳ್ಳೆಯ ಮಾಂಸ ಮತ್ತು ಮಿತಪ್ರಮಾಣದ ಸಾಂಬಾರುಪದಾರ್ಥಗಳು ಥಾಲಿಯಲ್ಲಿ ಸೇರಿರಬೇಕು. ಉಪ್ಪನ್ನು ಆದಷ್ಟು ಮಿತವಾಗಿ ಬಳಸಬೇಕು. ಊಟದ ಜೊತೆಯಲ್ಲಿ ಸ್ವಲ್ಪ ಹಸುವಿನ ತುಪ್ಪ ಹಾಗೂ ಊಟದ ಕೊನೆಯಲ್ಲಿ ಮಜ್ಜಿಗೆ ಮತ್ತು ಹಣ್ಣುಗಳ ಸೇವನೆ ರೂಢಿಯಾಗಬೇಕು. ಕಾದಾರಿದ ನೀರಿನ ಬಳಕೆ ಉತ್ತಮ.

ನಿದ್ರೆ: ರಾತ್ರಿಯ ತಂಪಾದ ನಿದ್ರೆಯ ಸುಖವನ್ನು ಕೊಂಡಾಡದ ಮಹಾಕವಿಯಿಲ್ಲ. ತಮ್ಮ ನಾಟಕವೊಂದರಲ್ಲಿ ಕುವೆಂಪುರವರು ನಿದ್ರೆಯನ್ನು ಹೀಗೆ ಸ್ತುತಿಸಿದ್ದಾರೆ:

ಎಂತು ಮಲಗಿಹನು! ನಿದ್ದೆಯವನನು
ಶಾಂತಿಸಾಗರದೊಳದ್ದಿಹಳು. ಎಲೆ ನಿದ್ದೆ, ಎನಿತು ಮೃದು
ಮಧುರಳೌ ನೀನು. ಸಮತೆಯೀಯುವೆ ಜಗದ
ಜೀವಿಗಳಿಗೆಲ್ಲ. ನಿನ್ನ ಗಾಢಾಲಿಂಗನದೊಳೆಲ್ಲರೂ ಒಂದೆ.
ಜಗದೆನಿತು ಬಳಲಿಕೆಯ, ಕೋಟಲೆಯ ನುಂಗುತಿಹೆ ನೀನು!

‘ಜಗದ ಬಳಲಿಕೆಯ, ಕೋಟಲೆಯ ನುಂಗುತಿಹ’ ನಿದ್ದೆಯ ವಿಷಯದಲ್ಲೂ ಒಂದು ಎಚ್ಚರಿಕೆ ಅಗತ್ಯ. ಹೊರಗಿನ ಗಡಿಯಾರದ ರೀತಿಯಲ್ಲೇ ಶರೀರದ ಒಳಗೂ ಬಯೊಲಾಜಿಕಲ್ ಕ್ಲಾಕ್ ಎಂಬ ಗಡಿಯಾರವುಂಟು. ಈ ಬಯೊಲಾಜಿಕಲ್ ಕ್ಲಾಕ್ ಸೂರ್ಯನ ಬೆಳಕಿಗೆ ಸ್ಪಂದಿಸುತ್ತ ಕಾರ್ಯನಿರ್ವಹಿಸುತ್ತಿರುತ್ತದೆ. ಹಗಲಿನಲ್ಲಿ ಕೆಲಸ, ರಾತ್ರಿಯಲ್ಲಿ ನಿದ್ರೆ - ಇದು ಪ್ರಕೃತಿನಿಯಮ. ದೀರ್ಘಕಾಲ ಈ ನಿಯಮ ಏರುಪೇರಾದಾಗ ಬಯೊಲಾಜಿಕಲ್ ಕ್ಲಾಕ್ ತನ್ನ ಲಯವನ್ನು ಕಳೆದುಕೊಂಡು ಅನೇಕ ರೋಗಗಳಿಗೆ ಆಸ್ಪದವಾಗುತ್ತದೆ. ಹಾಗಾಗಿ ಚಿಕ್ಕಮಕ್ಕಳು ಹಾಗೂ ವಯೋವೃದ್ಧರನ್ನುಳಿದು ಸಾಮಾನ್ಯವಾಗಿ ಆರೋಗ್ಯವಂತರೆಲ್ಲರಿಗೂ ಹಗಲುನಿದ್ರೆ ಅಷ್ಟೇನೂ ಒಳ್ಳೆಯದಲ್ಲ.

ವ್ಯಾಯಾಮ: ಪ್ರತಿದಿನವೂ ಮುಕ್ಕಾಲುಗಂಟೆಯಷ್ಟು ಕಾಲವನ್ನಾದರೂ ವ್ಯಾಯಾಮಕ್ಕೆ ಮೀಸಲಿಡಬೇಕು. ಗಾಳಿಬೆಳಕು ಸಮೃದ್ಧವಾಗಿರುವ ಉದ್ಯಾನಗಳಲ್ಲಿ ಓಡುವುದು ಅಥವಾ ವೇಗವಾಗಿ ನಡೆಯುವುದು ಶರೀರದ ಎಲ್ಲಾ ಪ್ರಾಕೃತಕ್ರಿಯೆಗಳಿಗೆ ಸಹಕಾರಿ. ಜೀರ್ಣಕ್ರಿಯೆಯನ್ನು ಸರಿಯಾಗಿಸುವುದರಿಂದ ಹಿಡಿದು ಮನಸ್ಸಿಗೆ ಉಲ್ಲಾಸವನ್ನೀಯುವ ತನಕ ವ್ಯಾಯಾಮದ ಸತ್ಪ್ರಭಾವದ ವ್ಯಾಪ್ತಿಯಿದೆ. ತೀರಾ ಈಚಿನ ಸಂಶೋಧನೆಯೊಂದು ವಾಯುವಿಹಾರ ಸೃಜನಶೀಲತೆಯನ್ನೂ ಹೆಚ್ಚಿಸುತ್ತದೆಯೆಂಬ ಸತ್ಯವನ್ನು ಕಾಣಿಸಿದೆ!

ಸಾತ್ತ್ವಿಕ ಜೀವನ: ಮಾನಸಿಕ ಸ್ವಾಸ್ಥ್ಯಕ್ಕೆ ಅತ್ಯಗತ್ಯವಾದದ್ದು ಸಾತ್ತ್ವಿಕ ಜೀವನ. ಸುಖ ಯಾರಿಗೆ ಬೇಡ? ಕೂಡಿದ ಮಟ್ಟಿಗೂ ಸಾತ್ತ್ವಿಕಸುಖಗಳನ್ನೇ ಆಶ್ರಯಿಸುವುದು ತನುಮನಗಳೆರಡಕ್ಕೂ ಒಳ್ಳೆಯದು. ಸ್ವಕರ್ಮದಲ್ಲಿ ತಲ್ಲೀನತೆ, ಸಂಗೀತ-ಸಾಹಿತ್ಯಾದಿ ಕಲೋಪಾಸನೆ, ಸಜ್ಜನ ಸಹವಾಸ - ಇವುಗಳು ಸಾತ್ತ್ವಿಕ ಜೀವನದ ಮುಖ್ಯಾಂಶಗಳು. ಜಪ-ಧ್ಯಾನಾದಿಗಳ ಮೂಲಕ ಸಾಧಿಸುವ ಅಧ್ಯಾತ್ಮಚಿಂತನೆಯನ್ನಂತೂ ಆರ್ಷಸಂಹಿತೆಗಳೇ ಅಲ್ಲದೇ ಈ ಹೊತ್ತಿನ ವೈದ್ಯಕೀಯ ಸಂಶೋಧನೆಗಳೂ ಕೊಂಡಾಡುತ್ತವೆ. ಇಂತಹ ಸಾತ್ತ್ವಿಕ ಜೀವನವನ್ನು ಆಯುರ್ವೇದ ಸದ್ವೃತ್ತ, ಬ್ರಹ್ಮಚರ್ಯ ಎಂದೆಲ್ಲಾ ಪ್ರಶಂಸಿಸಿದೆ.

ಕೆಲವು ಬಗೆಯ ಸುಖಗಳು ಪರಿಣಾಮದಲ್ಲಿ ದುಃಖವನ್ನೇ ತರುವುದರಿಂದ ಅವು ಮಾತ್ರ ವರ್ಜ್ಯ. ಜಿಹ್ವಾಲೋಲುಪತೆ, ಅತಿಯಾದ ಲೈಂಗಿಕಕಾಮನೆಗಳು ದೇಹಮನಸ್ಸುಗಳ ಮೇಲೆ ಬೇಡದ ಒತ್ತಡವನ್ನು ಹೇರಿ ಆರೋಗ್ಯಕ್ಕೆ ಮಾರಕವಾಗುತ್ತವೆ. ಅಂತೆಯೇ ಮಾದಕದ್ರವ್ಯ ಸೇವನೆಯಂತಹ ದುಶ್ಚಟಗಳು ಸುಖಾಭಾಸವನ್ನು ಕಾಣಿಸಿ ನರಕದ ಕೂಪಕ್ಕೇ ತಳ್ಳಿಬಿಡುತ್ತವೆ. ಅಂತಹ ರಾಜಸ-ತಾಮಸ ಪ್ರವೃತ್ತಿಗಳು ಮಾತ್ರ ವರ್ಜ್ಯ.

ಅಂತೂ, ಆಹಾರ, ನಿದ್ರೆ, ವ್ಯಾಯಾಮ, ಮತ್ತು ಸಾತ್ತ್ವಿಕತೆಗಳು ನಮ್ಮ ಆರೋಗ್ಯದ ಆಧಾರಸ್ತಂಭಗಳೆಂಬುದನ್ನರಿತೆವು. ಈ ವಿಷಯದಲ್ಲಿ ಆಯುರ್ವೇದದ ಶ್ಲೋಕವೊಂದನ್ನು ನೆನಪಿಡಬಹುದು:

ಆಹಾರ-ನಿದ್ರಾ-ವ್ಯಾಯಾಮ-ಬ್ರಹ್ಮಚರ್ಯೈಃ ಸುಯೋಜಿತೈಃ |
ಶರೀರಂ ಧಾರ್ಯತೇ ನಿತ್ಯಮ್ ಆಗಾರಮಿವ ಧಾರಣೈಃ ||

(ಲೇಖಕರು ಆಯುರ್ವೇದ ವೈದ್ಯ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು